ಹಾಲುಕ್ಕಿತೋ ರಂಗಾ!

Team Udayavani, May 5, 2019, 6:00 AM IST

ಹಾಲು ಎಂಬ ಈ ದ್ರವ ಮನುಷ್ಯ ಜೀವನದೊಂದಿಗೆ ಬೆಸೆದುಕೊಂಡ ಪರಿ ಅನನ್ಯ. ಇದು ಯಾವಾಗ ಉದ್ಭವವಾಯಿತೊ, ಯಾವಾಗ ಜನರ ತನುಮನದಲ್ಲಿ ಸ್ಥಾನ ಪಡೆಯಿತೋ ಗೊತ್ತಿಲ್ಲ. ಅದು ಅನಾದಿ ಕಾಲದಲ್ಲಿಯೇ ಎಂದರೂ ತಪ್ಪಾಗಲಾರದು. ಕ್ಷೀರಸಾಗರ ಮಥನದ ನಂತರವೇ ಪ್ರಾರಂಭವಾಗುತ್ತವಲ್ಲವೇ ಪುರಾಣ ಕಥೆಗಳು. ಜಗತ್ತಿನ ಅತ್ಯುತ್ತಮ ಹಾಗೂ ಅತಿಕೆಟ್ಟ ವಸ್ತುಗಳನ್ನು ತನ್ನ ಒಡಲಲ್ಲಿ ಅರಗಿಸಿಕೊಂಡ ಈ ಕ್ಷೀರಸಾಗರ ಎಂಬುದು ಅದೆಷ್ಟೇ ಕಟ್ಟುಕಥೆಯಂತೆ ಕಂಡರೂ ಹಾಲಿನ ಬಹುಮುಖೀತ್ವಕ್ಕೆ ಒಂದು ಉತ್ತಮ ಉದಾಹರಣೆಯಾಗಬಲ್ಲುದು. ಪ್ರಪಂಚದ ಮೊದಲ ವಿಷವೂ, ಹಾಗೆಯೆ ಮೊದಲ ಅಮೃತದ ಉತ್ಪತ್ತಿಯೂ ಆಗಿದ್ದು ಒಂದೇ ಕ್ಷೀರಸಾಗರದಲ್ಲಿ. ಇದು ಹೇಗೆ ಸಾಧ್ಯವೋ ಆ ಕ್ಷೀರಸಾಗರ ಪುರಾಣಕತೃನಿಗೇ ಗೊತ್ತು. ಹೆಸರು ಕ್ಷೀರಸಾಗರ ಭಟ್ಟ, ಉಸರಿಗೆ ಅಕ್ಕಿಗೂ ಗತಿಯಿಲ್ಲ ಎಂಬ ಒಂದು ಗಾದೆಯಿದೆ.

ಒಟ್ಟಾರೆ ನಾವು ಉಪಯೋಗಿಸುವ ಹಾಲು ಇಂದು ನಿನ್ನೆಯದಲ್ಲ. ಹಾಲು, ಮೊಸರು, ಬೆಣ್ಣೆ ಎಂಬ ವಸ್ತುಗಳು ಯಾವಾಗ ದ್ವಾಪರದ ಶ್ರೀಕೃಷ್ಣನ ಬದುಕಿನ ಅವಿಭಾಜ್ಯ ಅಂಗವಾಯಿತೋ ಆವಾಗಿನಿಂದ ಅದು ಶ್ರೇಷ್ಠವೆಂದು ಗುರುತಿಸಿಕೊಂಡಿತು. ಹಾಲಿನಲ್ಲೇ ಹರಿಯುವ ನಮ್ಮ ಅನೇಕ ಪುರಾಣಕಥೆಗಳು ಎಂಥ ರಸಿಕರಿಗೂ ರೋಚಕವೂ ರುಚಿಕರವೂ ಆಗದೆ ಇರದು. ಮೊದಲು ಕೃಷ್ಣನ ಕಥೆಯಲ್ಲಿ ಬರುವ ಹಾಲಿನ ಪಾತ್ರ ನೆನೆಯೋಣ.

ಈ ಪ್ರಪಂಚದ ಎಲ್ಲಾ ಮಗುವಿನ ಬಾಲ್ಯಚೇಷ್ಟೆಗಳಲ್ಲಿ ನಾವು ಬಾಲಕೃಷ್ಣನನ್ನು ಕಾಣುತ್ತೇವೆ. ಹಾಲು, ಬೆಣ್ಣೆ , ಮೊಸರು, ಕೃಷ್ಣ, ಯಶೋದೆ, ಗೋಪಿಕೆಯರು ಈ ಎಲ್ಲ ಶಬ್ದಗಳೂ ಒಟ್ಟಿಗೇ ಬೆಸೆದುಕೊಂಡು ಒಂದು ಹಾಲಿನ ಚಿತ್ರಣ ಕೊಡುತ್ತದೆ. ಬೆಣ್ಣೆ ಕದ್ದು ಮುಖಕ್ಕೆ ಮೆತ್ತಿಕೊಂಡ ಕೃಷ್ಣನನ್ನು ಯಶೋದೆ ಗದರಿದರೆ, ಆ ಪುಟ್ಟ ಗೋಪ ಹೇಳುವುದೇ ಬೇರೆ. “”ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ- ಗೆಳೆಯರೆಲ್ಲ ನನ್ನ ಮುಖಕೆ ಬೆಣ್ಣೆ ಮೆತ್ತಿದರಮ್ಮಾ” ಎನ್ನುತ್ತ ಮುದ್ದು ಮುಖದಲ್ಲಿ ಹುಸಿಭಯ ನಟಿಸಿ, ತಾಯಿಯಿಂದ ಇನ್ನಷ್ಟು ಮುದ್ದುಮಾಡಿಸಿಕೊಳ್ಳುವ ತುಂಟ ಕೃಷ್ಣ ಸದಾ ಹಾಲು ಕೊಡುವ ಹಸುವಿನ ಜತೆಗಾರ. ಹಾಗಾಗಿ ಮಕ್ಕಳ ಅಮ್ಮಂದಿರಿಗೆಲ್ಲ ಹಾಲು ಕುಡಿವ ಕೃಷ್ಣನ ಕಲ್ಪನೆಯೇ ಅಪ್ಯಾಯಮಾನ.

ಇನ್ನು ಬಾಲಕೃಷ್ಣ ಹದಿಹರೆಯದ ಕಿಶೋರನಾಗುತ್ತಾನೆ. ಆಗ ಸುಶ್ರಾವ್ಯವಾಗಿ ಕೊಳಲೂದುತ್ತಾನೆ. ಕೀಟಲೆ ಮಾಡುತ್ತಾನೆ. ರಾಧೆಯೇ ಆದಿಯಾಗಿ ನಂದಗೋಕುಲದ ಸಕಲ ಗೋಪಿಕೆಯರೂ ಸಂಚರಿಸುವ ಹಾದಿಬೀದಿಯಲ್ಲಿ ಅವರ ಕಾಲಿಗಡ್ಡ ಕಟ್ಟಿ ನಿಲ್ಲುತ್ತಾನೆ. ಈ ಪರಿಯಲ್ಲಿ ಮೋಹಿಸುವ ಕೃಷ್ಣನಿಂದಾಗಿ ಈ ಹೆಂಗಳೆಯರು ಮನೆಗೆಲಸವನ್ನೆಲ್ಲ ಮರೆಯುತ್ತಾರೆ. ಒಲೆಯ ಮೇಲಿಟ್ಟ ಹಾಲು ಉಕ್ಕಿ ಹರಿದು ಅಗ್ನಿಪಾಲಾಗುತ್ತದೆ. “ಕ್ಷೀರ’ವೆಂಬ ಹವಿಸ್ಸನ್ನುಂಡ ಅಗ್ನಿದೇವ ತಣ್ಣಗಾದರೂ ಹಾಲಿಟ್ಟ ಹೆಂಗಳೆಯರಿಗೆ ಪರಿವೆಯೇ ಇಲ್ಲ. ಯಾವುದೋ ಕ್ಷಣದಲ್ಲಿ ಇಹದ ನೆನಪಾಗುತ್ತದೆ. ಆಗ ಹಾಲುಕ್ಕಿತೋ ರಂಗಾ ಹಾದಿಬಿಡೊ… ಎಂದು ಗೋಗರೆಯುತ್ತಾರೆ.

ಇದೇ ರಂಗ ಪ್ರೌಢನಾಗುತ್ತಾನೆ. ಪಾಂಡವರ ಪುಣ್ಯನಿಧಿಯಾಗಿ ಕೌರವನ ಜೊತೆ ಸಂಧಾನಕ್ಕೆಂದು ಹಸ್ತಿನಾವತಿಗೆ ಬಂದಾಗ ಅಲ್ಲೂ ಇದೇ ಹಾಲುಕ್ಕುವ ಹಬ್ಬ. ತನ್ನ ಪರಮಭಕ್ತ ವಿದುರನ ಆತಿಥ್ಯ ಸ್ವೀಕರಿಸಿದ ಕೃಷ್ಣ , ಆತ ಕೊಟ್ಟ ಒಂದು ಲೋಟ ಹಾಲು ಕುಡಿಯುವಾಗ ಕಡೆಬಾಯಿಂದ ಒಂದು ತೊಟ್ಟು ತುಳುಕಿತಂತೆ. ಆ ಒಂದು ತೊಟ್ಟು ಹಾಲು ನೆಲಕ್ಕೆ ಬಿದ್ದು ನದಿಯಾಗಿ ಕ್ಷೀರಸಾಗರದಂತೆ ಹಸ್ತಿನಾವತಿಯ ಬೀದಿಯಲ್ಲೆಲ್ಲ ಹರಿಯುತ್ತಿದ್ದರೆ ಕೌರವ ಅರಮನೆಯ ಪಾಕಶಾಲೆಯ ಮೇಲ್ವಿಚಾರಣೆಯಲ್ಲಿದ್ದನಂತೆ. ಹಾಲು ಹರಿದು ಹಸ್ತಿನಾವತಿಯೆಲ್ಲ ಹಸನಾಯಿತು. ಕೌರವನ ಮನದಲ್ಲಿ ಮಾತ್ರ ಹಾಲಾಹಲವೇ ಮನೆಮಾಡಿತ್ತು. ಇದು ಪುರಾಣ ಕಥೆ.

ಒಲೆಯ ಮೇಲೆ ಹಾಲಿಟ್ಟ ನಂತರ ಅದು ಉಕ್ಕುವ ತನಕ ಕಾಯುವುದೂ ಒಂದು ತಪಸ್ಸು. ಅವಸರದಲ್ಲಿರುವ ಗೃಹಿಣಿಗೆ ಇದು ಶಿಕ್ಷೆ. ನೂತನ ಗೃಹಪ್ರವೇಶದ ದಿನ ಹಾಲುಕ್ಕಿಸುವ ಸಂಪ್ರದಾಯ. ಆ ದಿನ ಮಾತ್ರ ಉಕ್ಕುವ ಹಾಲಿಗೆ ಅಕ್ಕರೆಯ ಮಾತು. ಹಾಲುಕ್ಕಿದರೆ ಆ ಮನೆಯಲ್ಲಿ ಭಾಗ್ಯ ಉಕ್ಕುತ್ತದೆ ಎಂಬ ಗಟ್ಟಿಯಾದ ನಂಬಿಕೆಯಿಂದಾಗಿ ಹಾಲುಕ್ಕಿ, ಒಲೆಯ ಅಡಿಯಲ್ಲಿ ಕೆರೆಕಟ್ಟಿ ಅಡಿಗೆ ಮನೆಯ ಕಿರುಕಟ್ಟೆಯ ಮೇಲೆಲ್ಲ ತೊರೆಯಂತೆ ಹರಿದು ನೆಲದವರೆಗೆ ಕ್ಷೀರಪಾತವಾದರೂ ಯಾವ ಬೇಸರವೂ ಇಲ್ಲದೆ ಸ್ವತ್ಛಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಹಾಲುಕ್ಕಿ ಹರಿದು ನೆಲಕಟ್ಟೆಯೆಲ್ಲ ಹರಡುತ್ತ ಹೊಲಸಾದರೆ, ಮನೆಯಾಕೆಗೆ ನಷ್ಟವಾದ ಹಾಲಿಗಿಂತ ಕಷ್ಟವಾಗುವ ಅದರ ಸತ್ಛತೆಯ ಕಾರ್ಯದ ತಲೆಬಿಸಿ ಎನ್ನುವುದು ಹಾಲಿನ ಬಿಸಿಗಿಂತ ಹೆಚ್ಚಾಗುತ್ತದೆ. ಹಾಗಾಗಿ ಆಕೆ ನೂತನ ಗೃಹಪ್ರವೇಶದ ಒಂದು ದಿನ ಮಾತ್ರ ಈ ಉಕ್ಕೇರುವ ಹಾಲ್‌ಸೊಕ್ಕನ್ನು ಸಹಿಸಿಕೊಳ್ಳುತ್ತಾಳೆ.

ಯಾರೊ ಕೇಳಿದರಂತೆ “ದಿನವೂ ಹಾಲುಕ್ಕಿದರೆ, ದಿನವೂ ಭಾಗ್ಯ ಉಕ್ಕುತ್ತದೆಯಲ್ಲವೆ’ ಎಂದು. ಆ ಆಕೆ ಹೇಳುವುದೇನು ಗೊತ್ತೆ “ಅಂಥ ಭಾಗ್ಯ ನನಗೆ ಬೇಡವೇ ಬೇಡ’.

ಪ್ರತಿದಿನ ಹಾಲು ಉಕ್ಕದಂತೆ ಅಲ್ಲೇ ನಿಂತು ಗ್ಯಾಸಿನ ಗರಿಷ್ಠ ಉರಿಯಲ್ಲಿ ಕಾಯುತ್ತಿದ್ದರೆ ಹಾಲಿನದು ಅದೇ ತುಂಟತನ. ಎಷ್ಟೇ ಉರಿ ದೊಡ್ಡದಾಗಿ ತಳ ಸುಡುತ್ತಿದ್ದರೂ ಗಲ್ಲ ಉಬ್ಬಿಸಿ ಸ್ಥಿರವಾಗಿ ಸ್ಥಿತಪ್ರಜ್ಞನಂತೆ ನಿಂತು, ತನ್ನ ಮೇಲೆ ಕಣ್ಣಿಟ್ಟವಳ ಕಣ್ತಪ್ಪಿಸಿ ಉಕ್ಕಿ ಬರುತ್ತೇನೆಂದು ಅದೂ ಕಾಯುತ್ತದೆ. ಅದಕ್ಕೇ ಹೇಳುವುದು ನಿರೀಕ್ಷೆ ಎನ್ನುವುದು ಸಂತೋಷ, ದುಃಖ ಎರಡರದ್ದೂ ಚಡಪಡಿಕೆಯ ಕ್ಷಣ. ಹಾಲು ಕಾಯಿಸಿ ಬೇಗ ಹೊರಗೆ ಹೋಗುತ್ತೇನೆ. ಎಷ್ಟೊಂದು ಕೆಲಸಗಳಿವೆ ಎಂದೆಲ್ಲ ಯೋಚನೆ ಮಾಡುತ್ತ ಆಕೆ ಕೊಂಚ ಆಚೀಚೆ ಕಣ್ಣು ಹೊರಳಿಸಿದರೆ ಸಾಕು, ಇದೇ ತಕ್ಕ ಸಮಯವೆಂದು ಈ ತುಂಟ ಕ್ಷೀರಸಾಗರ ಭಟ್ಟ ಕ್ಷಣದಲ್ಲಿ ಉಕ್ಕಿ ಅಗ್ನಿ ಪಾಲಾಗುತ್ತಾನೆ.

ಹೀಗಾಗಬಾರದೆಂದು ನಾನಂತೂ, ಅದು ಗಲ್ಲ ಉಬ್ಬಿಸುವ ಹೊತ್ತಿಗೆ, ನೂತನ ಗೃಹಪ್ರವೇಶದ ದಿನದಂತೆ “ಭಾಗ್ಯದ ಲಕ್ಷ್ಮಿ ಬಾರಮ್ಮಾ…’ ಹಾಡಲು ಮೊದಲಿಡುತ್ತೇನೆ. ಎರಡು-ಮೂರು ಚರಣ ಮುಗಿದರೂ ಅದೇ ಸ್ಥಿತಪ್ರಜ್ಞನ ನಿಲುವು. ಮತ್ತೆ ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ ಬರುವ ಭಾಗ್ಯಲಕ್ಷ್ಮಿಯಂತೆ ಮೆಲ್ಲನೆ ಉಕ್ಕಿ ಬರುವಾಗ “ಕಟಕ್‌’ ಎಂದು ಉರಿ ಆರಿಸುತ್ತೇನೆ.

ಕೃಷ್ಣನೊಂದಿಗೆ ರಾಧೆಯೊಡಗೂಡಿ, ಗೋಪಿಕೆಯರೂ ಸೇರಿ ಮೈಮರೆಯುವ ಸುಂದರ ಸಮಯದಲ್ಲೇ ಈ ತುಂಟ ಹಾಲು ಉಕ್ಕಿ ಬರುತ್ತದೆ. ಉಕ್ಕಿದ ಹಾಲು ಬತ್ತಿ ಬತ್ತಿ ಪಾತ್ರೆಯೊಡಲು ಕರಟುವ ಸಮಯದಲ್ಲಿ “ಹಾಲುಕ್ಕಿತೋ ರಂಗಾ- ಹಾದಿ ಬಿಡೊ’ ಎಂಬ ಇಹದ ಉದ್ಗಾರ ಜಾಗೃತವಾಗುತ್ತದೆ. “ಕೆಟ್ಟಮೇಲೆ ಬುದ್ಧಿ ಬಂತು’, “ಉಕ್ಕಿದ ಹಾಲಿಗಾಗಿ ಮರುಗಬೇಡ’ ಎಂಬಿತ್ಯಾದಿ ಗಾದೆಗಳ ಪಡೆಯೇ ಈ ಸಮಯದಲ್ಲಿ ಹುಟ್ಟಿಕೊಳ್ಳುತ್ತದೆ. ಅದಕ್ಕಾಗಿ ಯಾವುದೇ ಸಮಯವೂ ಬದುಕಲ್ಲಿ ಮೈಮರೆಯಬೇಡ. ಮೈಮರೆತು ನಿಜವ ಮರೆಯಲು ಬೇಡ ಎಂಬ ಪ್ರಾಪಂಚಿಕ ನೀತಿಯ ಪ್ರಾತ್ಯಕ್ಷಿಕೆಯನ್ನು ಬ್ರಹ್ಮ ಈ ಹಾಲುಕ್ಕಿಸಿ ನೀಡುತ್ತಿದ್ದಾನೇನೊ ಅನಿಸುತ್ತದೆ.

ಬಾಲ್ಯದಲ್ಲಿ ನನ್ನ ಅಜ್ಜಿ ಹೇಳುವ ಮಾತು ಮತ್ತೆ ನೆನಪಾಗುತ್ತಿ¤ದೆ. ಹಾಲು ಎಂದರೆ ಪತಿವ್ರತೆ. ಸ್ವಲ್ಪ ಮಲಿನವಾದರೂ ಅದು ಕೆಟ್ಟು ಹೋಗುತ್ತದೆ. ಹಾಗಾಗಿ, ಈ ಪತಿವ್ರತೆಯನ್ನು ಜನತದಿಂದ ಕಾಯಬೇಕು. ಹಾಲು ಕಾಯಿಸುವ ಪಾತ್ರೆಯಲ್ಲಿ ಕೊಂಚವೂ ಕೊಳೆಯಿರಬಾರದು. ಹಾಲಿಗೆ ಮಿಶ್ರ ಮಾಡುವ ನೀರೂ ಶುದ್ಧವಾಗಿರಬೇಕು. ಹಾಲಿನ ಪಾತ್ರೆಯ ಹತ್ತಿರ ಮಜ್ಜಿಗೆ, ಮೊಸರು ಅಥವಾ ಇನ್ನಿತರ ಯಾವುದೇ ವ್ಯಂಜನ ಇರಕೂಡದು. ಹಾಲನ್ನು ಪ್ರತ್ಯೇಕವಾಗಿ ದೂರ ಇಟ್ಟಿರಬೇಕು. ಮುಚ್ಚಿರಬೇಕು. ಬಿಸಿ ಹಾಲನ್ನು ಮುಚ್ಚಿದರೆ ಹಾಳಾಗುತ್ತದೆ. ಕೆನೆ ಬರುವುದಿಲ್ಲ. ಹೀಗೆ, ಹಾಲಿಗೆ ಸಂಬಂಧಿಸಿಯೇ ನಮ್ಮಜ್ಜಿ, ಅಮ್ಮ ಎಲ್ಲಾ ಹಾಲ್‌ ಸಂವಿಧಾನವನ್ನು ರಚಿಸಿದ್ದಾರೆ. ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲೂ ತಿದ್ದುಪಡಿ ತರಬಹುದು. ಆದರೆ, ಈ ಅಜ್ಜಿ ವಿರಚಿತ ಸಂವಿಧಾನದಲ್ಲಿ ಅದು ಸಾಧ್ಯವೇ ಇಲ್ಲ.

ಹಾಲಿನಲ್ಲಿ ಹಲವು ಬಗೆ. ಹಸುವಿನ ಹಾಲು, ಆಡಿನ ಹಾಲು, ಹುಲಿಯ ಹಾಲು ಇತ್ಯಾದಿ. ಕೆಲವು ಆಡಿನ ಹಾಲುಪ್ರಿಯರ ಅಂಬೋಣದ ಪ್ರಕಾರ ಆಡಿನ ಹಾಲು ಸೇವಿಸಿದ್ದರಿಂದ ಗಾಂಧೀಜಿಯವರಿಗೆ ಸ್ವಾತಂತ್ರ್ಯ ತಂದುಕೊಡಲು ಸಾಧ್ಯವಾಯಿತು. ಅದೇನೇ ಇರಲಿ, ಹಸುವಿನ ಹಾಲಿಗಿರುವ ಮಹತ್ವವೇ ಬೇರೆ. ಹಾಲು ಎಂದರೆ ಹಸುವಿನ ಹಾಲು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಈಗಂತೂ ಹಸುವಿನ ಚಿತ್ರದ ತೊಟ್ಟೆಯಲ್ಲಿ ತುಂಬಿಕೊಂಡು ಬರುವ “ನಂದಿನಿ’ ಹಾಲು ನಮ್ಮ ದಿನನಿತ್ಯದ ಸೂರ್ಯೋದಯದ ಹಾಡು.

ಹಾಲು ಶುದ್ಧತೆಗೆ ಹಾಗೂ ಸಮತೋಲನಕ್ಕೆ ಉತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ. ಹಾಲಿನಷ್ಟು ಬಿಳಿ, ಹಾಲಿನಂತಹ ಸಂಸಾರ… ಈ ಮುಂತಾದ ನುಡಿಗಟ್ಟುಗಳು ಇದನ್ನು ತೆರೆದಿಡುತ್ತವೆ.

ನನಗಂತೂ ಒಮ್ಮೊಮ್ಮೆ ಈ ಉಕ್ಕಿ ಬರುವ ಹಾಲು ಬದುಕಿನ ತತ್ವ ಸಿದ್ಧಾಂತ ಅರುಹುವ ದಾರ್ಶನಿಕನಂತೆ ಕಾಣುತ್ತದೆ. ಉಕ್ಕುವುದು ಹಾಲಿನ ಗುಣ. ಸೊಕ್ಕುವುದು ಹರೆಯದ ಗುಣ. ಮಿಕ್ಕಿ ಮೀರುವುದು ಮಿದುಳು ಕೈಕೊಟ್ಟ ಕ್ಷಣ. ಹಾಗಾಗಿ, ಉಕ್ಕದೆಯೆ ಸೊಕ್ಕದೆಯೆ ಮಿಕ್ಕಿ ಮೀರದೆಯೆ ಸರ್ವರಿಗೂ ತಕ್ಕಂತೆ ಬದುಕು ನೀ ಮರುಳು ಮನುಜಾ- ಎಂದು ಹಾಡುತ್ತ ಹೋಗುವ ಸಂತರು ಯಾರಾದರೂ ಹುಟ್ಟಿ ಬರಬೇಕು. ಹಾಗೆ ಹುಟ್ಟಿದ ಸಂತರು ಮನೆ ಮನೆ ಹಾದಿಯಲ್ಲಿ ಬರುವ ಮನುಜರ ಮನಕ್ಕೆ ಈ ತತ್ವ ಮುಟ್ಟಿಸಿದರೆ, ಹಾಲುಕ್ಕದ ಹಾಲಿನಂತಹ ಸಮುದಾಯ ರೂಪುಗೊಳ್ಳಬಹುದೇನೊ!

ವಿಜಯಲಕ್ಷ್ಮೀ ಶ್ಯಾನ್‌ಭೋಗ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ?...

  • ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಮುಂತಾದ ಅಷ್ಟಲಕ್ಷ್ಮಿಯರ ಬಗ್ಗೆ ನೀವೆಲ್ಲ ತಿಳಿದಿರಬಹುದು. ಆದರೆ ಮೇಲೆ ಹೇಳಿರುವುದು ತುಂಬಾ ಮುಖ್ಯವಾದ ಎಲ್ಲೆಡೆಯೂ ಅವಗಣಿಸಲ್ಪಟ್ಟ...

  • ಸುಖಾಂತ್ಯ'ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ...

ಹೊಸ ಸೇರ್ಪಡೆ