ಚಂದದ ಮಳ್ಳು ಆಕರ್ಷಣೆಯ ಪಕ್ಷಪಾತ

ಸಂಧಿಕಾಲ

Team Udayavani, May 5, 2019, 6:00 AM IST

ನಾವು ಗೃಹೋಪಯೋಗಿ ವಸ್ತುಗಳ ಮಳಿಗೆಗೆ ಹೋದಾಗ ಸಹಜವಾಗಿಯೇ ನಮ್ಮ ಕಣ್ಣು ಹೆಚ್ಚು ಸೌಂದರ್ಯಯುತ ಅಥವಾ ಕಲಾತ್ಮಕವಾಗಿ ವಿನ್ಯಾಸಿಸಿರುವ ಟಿವಿ, ವಾಶಿಂಗ್‌ ಮೆಷೀನ್‌, ಜ್ಯೂಸರಿನಂತಹ ಪ್ರಾಡಕ್ಟ್ ಕಡೆಗೇ ವಾಲುತ್ತದೆ. ಅದಕ್ಕೆ ಕಾರಣ, ಅಲ್ಲಿ ನಾವು ಚಂದ ಕಾಣುವ ವಸ್ತುವನ್ನು ಕೇವಲ ಚಂದ ಇದೆ ಎಂದಷ್ಟೇ ಗ್ರಹಿಸದೇ (ಪರ್ಸೆಪ್ಶನ್‌) ಅದು ಚೆನ್ನಾಗಿ ಕೆಲಸ ಕೂಡ ಮಾಡುತ್ತದೆ ಅಥವಾ ಅದರ ಕಾರ್ಯಕ್ಷಮತೆ ಮೇಲ್ಮಟ್ಟದ್ದು ಎಂದೂ ಗ್ರಹಿಸುವುದು. ಖರೀದಿಸಿದ ನಂತರ ಮರುದಿನವೇ ಅದು ಒಂದಿಷ್ಟೂ ಕೆಲಸ ಮಾಡದೇ ಹಾಳಾಗಿ ಸುಮ್ಮನೆ ಮನೆಯಲ್ಲಿ ಕುಂತರೂ ಅಡ್ಡಿ ಇಲ್ಲ. ಈ ರೀತಿಯ ಗ್ರಹಿಕೆ ಅಥವಾ ಆಕರ್ಷಣೆಯ ಪಕ್ಷಪಾತ ಒಂದು ಪ್ರಾಡಕ್ಟಿನ ವಿನ್ಯಾಸದಲ್ಲಿ ಬಹಳಷ್ಟು ಪರಿಣಾಮ ಬೀರುತ್ತದೆ. “ನಮ್ಮ ವಾಶಿಂಗ್‌ ಮೆಷೀನ್‌ ಅಥವಾ ಜ್ಯೂಸರ್‌ ತುಂಬಾ ಚೆನ್ನಾಗಿ ಕೆಲಸಮಾಡುತ್ತದೆ, ನಾವು ತೆಗೆದುಕೊಂಡು ಮೂರು ವರುಷವಾಯಿತು’ ಎಂದು ನಮ್ಮ ಹತ್ತಿರದ ಸಂಬಂಧಿಕರು ಅಥವಾ ನಮಗಾಗುವ ಪಕ್ಕದ ಮನೆಯವರು ಹೇಳಿದರೂ ಅದು ನೋಡಲು ಚೆನ್ನಾಗಿಲ್ಲದಿದ್ದರೆ ನಾವು ಖರೀದಿಸುವ ಸಾಧ್ಯತೆ ಕಡಿಮೆಯೇ! ಈ ಖರೀದಿ ಎನ್ನುವುದು ಕೇವಲ ಸೌಂದರ್ಯ ಒಂದನ್ನೇ ಅವಲಂಬಿಸದೇ ಇನ್ನೂ ಅನೇಕ ವೇರಿಯೇಬಲ್‌ ಅಂಶಗಳನ್ನು ಅವಲಂಬಿಸಿದ್ದರೂ ವಸ್ತುವಿನ “ಸೌಂದರ್ಯದ ಆಕರ್ಷಣೆ’ ಒಂದು ಬಹಳ ಮುಖ್ಯವಾದ ಅಂಶ.

ನಾನು ಮೊದಲೇ ಹೇಳಿದಂತೇ ಒಂದು ಪ್ರಾಡಕ್ಟ್ ಕೆಲಸ ಮಾಡಲೀ, ಮಾಡದೇ ಇರಲಿ ಅದರ ವಿನ್ಯಾಸ ಸೌಂದರ್ಯಯುತ ಅಥವಾ ಕಲಾತ್ಮಕವಾಗಿದ್ದರೆ ಆ ಪ್ರಾಡಕ್ಟ್‌ನ್ನು ನೋಡಿದಾಗ ಅದನ್ನು ಬಳಸಬೇಕೆನ್ನುವ ಆಸೆಯು ಕುದುರುವದಷ್ಟೇ ಅಲ್ಲ, ಅದನ್ನು ಹೆಚ್ಚು ಬಳಸುತ್ತೇವೆ ಕೂಡ. ತುಂಬಾ ಚೆನ್ನಾಗಿ ಕೆಲಸ ಮಾಡುವ ಪ್ರಾಡಕ್ಟಿನ ಬಾಹ್ಯ ವಿನ್ಯಾಸ ಸರಿ ಇಲ್ಲದೇ ಇದ್ದರೆ ಬಳಕೆದಾರನ ಮೊದಲ ಸ್ವೀಕೃತಿಯೇ ಕಡಿಮೆಯಾಗಿ ಅದರ ಒಟ್ಟೂ ಉಪಯುಕ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಆಶ್ಚರ್ಯವೇನೆಂದರೆ ಕಾಣಲು ಚೆನ್ನಾಗಿರುವ ಪ್ರಾಡಕ್ಟ್ ಒಮ್ಮೆ ಅಂದುಕೊಂಡಂತೇ ಕೆಲಸ ಮಾಡದಿದ್ದರೂ ಅದನ್ನು ಖರೀದಿಸಿದವ ಅದರ ಮೇಲೊಂದು ಸಹನೆ ತೋರುವುದನ್ನು ಕಾಣಬಹುದು, ಕಾರಣ ಅದರಿಂದಾಗುವ ಧನಾತ್ಮಕ ಅನುಭವ.ಇದನ್ನು ಮುಖ್ಯವಾಗಿ ಗಮನಿಸಬೇಕು.

ಈ ಪಕ್ಷಪಾತ ಗುಣ ಮನುಷ್ಯ ಮತ್ತು ಆತ ಉಪಯೋಗಿಸುವ ವಸ್ತುಗಳ ನಡುವೆ ನಡೆಯುವ ಮೊದಲು ಮನುಷ್ಯ ಮನುಷ್ಯನ ನಡುವೆಯೇ ನಡೆಯಬೇಕಲ್ಲ!

ನಮ್ಮ ಊರಲ್ಲಿ ನಾವು ಚಂದದ ಮಳ್ಳು ಎನ್ನುವ ಗಾಂವಿ ವಾಕ್ಯವನ್ನು ಬಹಳಷ್ಟು ಬಾರಿ ಕೇಳಿದ್ದೇವೆ. ಕನ್ನಡಿಯ ಮುಂದೆ ಶೃಂಗಾರ ಮಾಡಿಕೊಳ್ಳಲು ಕುಳಿತ ಅಕ್ಕ, ಬಸ್ಸು ಬಂದರೂ ತಲೆ ಕೆಡಿಸಿಕೊಳ್ಳದೇ, ಎಷ್ಟು ಹೊತ್ತಾದರೂ ಹೊರಗೆ ಬಾರದೇ ಇದ್ದರೆ ಅಡಿಗೆ ಮನೆಯಲ್ಲಿ ಕುಳಿತ ಅಮ್ಮ- “ಅದಕ್ಕೆ ಚಂದದ ಮಳ್ಳು’ ಎಂದು ಬೈದಿದ್ದನ್ನು ಕೇಳಿದ್ದೇವೆ. ಇದು ಬಸ್ಸು ತಪ್ಪಿಸಿಕೊಂಡರೂ ಶೃಂಗಾರಕ್ಕೆ ಮೊದಲ ಆದ್ಯತೆ ಎನ್ನುವ ಮಗಳ ಆಸಕ್ತಿಯನ್ನು ವ್ಯಕ್ತಪಡಿಸುವ ತಾಯಿಯ ಉಲ್ಲೇಖವಾದರೆ, ಇದೇ ತಾಯಿ ತನ್ನ ಮಗ ಮದುವೆ ಮಾಡಿಕೊಂಡು ಬಂದ ಸೊಸೆಯ ಬಗ್ಗೆಯೂ “ಚಂದದ ಮಳ್ಳು’ ಎಂದು ಪ್ರಯೋಗಮಾಡುವುದನ್ನು ಕೇಳಿರುತ್ತೀರಿ. “ಬಂಗಾರದಂತಹ ಬೇರೆ ಬೇರೆ ಜಾತಕಗಳು ಬಂದಿದ್ದವು. ಚಂದ ಚಂದ ಎಂದು ಮಗ ಇವಳನ್ನ ಮದುವೆಯಾದ. ನೋಡು, ಅವಳು ಅಪೂಟೂ ಸರಿ ಇಲ್ಲ. ಅಡಿಗೆ ಬರುವುದಿಲ್ಲ, ನನ್ನ ಬಿಡು, ಮಗನಿಗೂ ಸರಿಯಾಗಿ ಹೊಂದಿಕೊಂಡು ಹೋಗುತ್ತಿಲ್ಲ’ ಎಂದು. ಇಲ್ಲಿನ ಮಳ್ಳು ಎನ್ನುವ ಪ್ರಯೋಗ ಅತಿ ಒಲವು ಅಥವಾ ಪಕ್ಷಪಾತಕ್ಕೆ ಸಂಬಂಧಿಸಿದ್ದು. (ಊರಲ್ಲಿ ಚಂದದ ಮಳ್ಳಿನ ಬಗ್ಗೆ ಕೆಲವರಲ್ಲಿ ಕೇಳಿದರೆ ಅವರು ಹೀಗೂ ಹೇಳುವುದುಂಟು.ಅದು ಚಂದ ಅಲ್ಲ ಮಾರಾಯಾ ಬರೀ ಮಳ್ಳು !) ಈ ಪಕ್ಷಪಾತವನ್ನು ನಾವು ಎರಡು ದಿಕ್ಕಿನಲ್ಲಿ ಗಮನಿಸಬಹುದು. ಮೊದಲನೆಯದು- ಹುಡುಗ, ಹುಡುಗಿಯ ಚಂದ ನೋಡಿ ಆಕರ್ಷಣೆಗೊಂಡು ಅವಳ ಹೊಂದಿಕೊಂಡು ಹೋಗುವ ಗುಣ, ಆದ್ಯತೆ ಇತ್ಯಾದಿಗಳ ಬಗ್ಗೆ ಕೂಲಂಕಶ ವಿಚಾರಿಸದೇ ಮದುವೆಯಾಗಿದ್ದಿರಬಹುದು. (ಇಲ್ಲಿ ಇನ್ನೊಂದು ಪಕ್ಷವಾದ ಅಮ್ಮ ಮತ್ತು ಮಗನ ಗುಣ, ಆಸಕ್ತಿ ಅಥವಾ ಅವರ ಪೂರ್ವಾಗ್ರಹ ಇತ್ಯಾದಿ ಅಂಶಗಳನ್ನು ಪರಿಗಣಿಸುತ್ತಿಲ್ಲ.) ಎರಡನೆಯದು- ಅವಳ ಚಂದ ನೋಡಿ ಆಕೆ ತನ್ನೆಲ್ಲ ಕೆಲಸ-ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಬಹುದೆಂದು ಗ್ರಹಿಸಿದ್ದಿರಬಹುದು. ಇಲ್ಲೂ ಕೂಡ ಚಂದ ನೋಡಿ ಮದುವೆಯಾಗಿದ್ದರಿಂದ ಅವಳು ತನ್ನ ಸಂಸಾರದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೂ ಆತನಲ್ಲಿ ಅವಳ ಮೇಲೊಂದು ಸಹನೆ ಇರುತ್ತದೆ.

ಇದನ್ನು ಮನುಷ್ಯ ವ್ಯವಹರಿಸುವ ಎಲ್ಲ ಕ್ಷೇತ್ರಗಳಲ್ಲೂ ಕಾಣಬಹುದು. ಆಫೀಸಿನಲ್ಲೂ ರೂಪವಂತರನ್ನು ಬಹಳ ಬುದ್ಧಿವಂತರೆಂದು ಅಂದುಕೊಳ್ಳುತ್ತೇವೆ. ವಾಸ್ತವಿಕವಾಗಿ ಅವನು ಹಾಗೆ ಇರಲಿ, ಇರದೇ ಇರಲಿ. ಕಂಪೆನಿಯಲ್ಲಿ ಸೇರಿಸಿಕೊಳ್ಳುವುದರಿಂದ ಹಿಡಿದು ಭಡ್ತಿ ಇತ್ಯಾದಿಗಳು ಅಥವಾ ಕಡಿಮೆ ಕೆಲಸ ಮಾಡಿ ಹೆಚ್ಚು ಹಣ ತೆಗೆದುಕೊಳ್ಳುವವರೆಗಿನ ಪಕ್ಷಪಾತವನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಮತ್ತೆ ಅವರ ರೂಪ ಕೆಲವು ಬಾರಿ ಅವರು ಮಾಡಿದ ತಪ್ಪನ್ನೂ ಕ್ಷಮಿಸಲು ಸಹಾಯಮಾಡಬಹುದು.

ಬಾಹ್ಯಸೌಂದರ್ಯಕ್ಕೆ ಪೂರಕ ಅಂಶಗಳು ಆಕಾರ, ಬಣ್ಣ ಮತ್ತು ಮೇಲ್ಮೆ„ರಚನೆ (ಟೆಕ್ಸ್‌ಚರ್‌). ಆದರೆ, ನಾನು ಇಲ್ಲಿ ಧ್ವನಿಯನ್ನೂ ಸೇರಿಸುತ್ತಿದ್ದೇನೆ. ಹಿಂದಿಯ ಒಬ್ಬ ಉತ್ತಮ ನಟ ಹೇಳಿದ್ದು ನೆನಪಾಗುತ್ತದೆ. ಒಬ್ಬ ಹೊರದೇಶದ ಬಿಳಿಯ ಕೆಮರಾಮನ್‌ಕೆಮರಾದ ಹಿಂದೆ ನಿಂತುಕೊಂಡರೆ ಸಾಕು ನಮಗೆ ಕಾಲು ನಡುಗಲು ಪ್ರಾರಂಭವಾಗಿ ನಟನೆ ಮಾಡಲು ಕಷ್ಟವಾಗುತ್ತದೆ.ಮೂರು ತಿಂಗಳಿನ ನಂತರ ಲಂಡನ್ನಿನ ಮದುವೆಯೊಂದಕ್ಕೆ ಹೋದಾಗ ಅದೇ ಕೆಮರಾಮನ್‌ ಮದುವೆ ಕ್ಯಾಮರಾಮನ್ನಿನ ಹಿಂದೆ ಕೇಬಲ್ಲನ್ನು ಸುತ್ತಲು ಸಹಕರಿಸುತ್ತಿರಬಹುದು! ನಮಗೆ ಬಿಳಿ ಬಣ್ಣದಲ್ಲಿರುವವರೆಲ್ಲ ಅವರ ಕ್ಷೇತ್ರದಲ್ಲಿ ಎತ್ತರದಲ್ಲಿದ್ದಾರೆ ಎಂದು ಅನಿಸಿಬಿಡುತ್ತದೆ! ಅಂತೆಯೇ ಧ್ವನಿ ಕೂಡ. ಎರಡು ವ್ಯಕ್ತಿಗಳ ಧ್ವನಿಯನ್ನು ರೇಡಿಯೋ ಎಫ್ಎಮ್ಮಿನಲ್ಲಿ ಕೇಳಿದಾಗ ಅವರ ಬಗ್ಗೆ ಒಂದು ಗ್ರಹಿಕೆ ನಿಮ್ಮಲ್ಲಿರುತ್ತದೆ. ನಂತರ ಅದೇ ವ್ಯಕ್ತಿಗಳನ್ನು ಟಿವಿಯಲ್ಲಿ ಗಮನಿಸಿದಾಗ ಹಿಂದಿನ ಗ್ರಹಿಕೆ ಪೂರ್ತಿ ಬದಲಾಗಬಹುದು. ಉದಾಹರಣೆಗೆ ರೇಡಿಯೋದ ಗಡಸು ಧ್ವನಿಯ ಗ್ರಹಿಕೆಯಿಂದ ಹುಟ್ಟಿದ ಕಟ್ಟುಮಸ್ತಾದ ಆಕೃತಿ ಆತನನ್ನು ಟಿವಿಯಲ್ಲಿ ನೋಡಿದಾಗ ಆತ ನಿಜವಾಗಲೂ ಬಹಳ ಕೃಶವಾಗಿದ್ದು ಕಾಣಲೂ ಸುಂದರವಾಗಿರದೇ ಅಭಿಪ್ರಾಯ ಪೂರ್ತಿ ಬದಲಾಗಬಹುದು. ಅಂತೆಯೇ ಮದುವೆಗೆ ಸಂಬಂಧಪಟ್ಟು ಹುಡುಗ-ಹುಡುಗಿಯ ಫೊಟೊಶಾಪ್‌, ಇತ್ಯಾದಿ ಸಾಫ್ಟ್ವೇರ್‌ನಲ್ಲಿ ಟಚಪ್‌ ಮಾಡಿ ಮೊದಲ ಪ್ರಭಾವ ಗಿಟ್ಟಿಸಿದ ಉದಾಹರಣೆಗಳನ್ನೂ ಗಮನಿಸಿರುತ್ತೇವೆ. ಹಾಗೇ ಬರೀ ಫೊಟೊದ ಮೂಲಕವೇ ಸಂಬಂಧ ಕುದುರಿ ಮದುವೆಯ ದಿನವಷ್ಟೇ ಪರಸ್ಪರ ಮುಖ ನೋಡಿಕೊಂಡು ಮದುವೆಯಾದ ಜೋಡಿಗಳು ಇಂದು ಸುಖದಿಂದ ಬದುಕುತ್ತಿರುವುದನ್ನೂ ನಾವು ನೋಡಿದ್ದೇವೆ!

ಈಗ ಮತ್ತೆ ನಾವು ಪ್ರಾಡಕ್ಟಿನ ವಿನ್ಯಾಸದ ಕಡೆ ಹೊರಳ್ಳೋಣ.
ಒಂದು ವಸ್ತು ಅಥವಾ ಪ್ರಾಡಕ್ಟಿನ ಆಕಾರವು ಅದರ ಉದ್ದೇಶಿತ ಕಾರ್ಯವನ್ನು ಅನುಸರಿಸಬೇಕು (ಫ‚ಾರ್ಮ್ ಫ‚ೊಲೋಸ್‌ ಫ‚‌ಂಕ್ಷನ್‌) ಎನ್ನುವುದು ವಿನ್ಯಾಸ ಕ್ಷೇತ್ರದಲ್ಲಿನ ಮುಖ್ಯ ಹಾಗೂ ಸಮ್ಮತವಾದ ವಾದ. ಉದಾಹರಣೆಗೆ, ಸಕ್ಕರೆ ಚಮಚದ ಆಕಾರ ಕನಿಷ್ಟ ಸಕ್ಕರೆಯನ್ನು ತೆಗೆಯುವ ಮತ್ತು ಹಿಡಿದಿಟ್ಟುಕೊಳ್ಳುವ ಕಾರ್ಯಕ್ಷಮತೆಯನ್ನು ತೋರಬೇಕಲ್ಲಾ, ಕೈ ತೊಳೆಯುವ ಬೇಸಿನ್ನಿನ ಆಕಾರ (ನಿಮ್ನ ಮಾದರಿ) ನೀರು ಹೊರಗೆ ಹೋಗದೇ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಗಬೇಕಲ್ಲ. ಊಟ ಮಾಡುವ ಬಟ್ಟಲಿನ ಆಕಾರ ನಿಮ್ನ ಮಾದರಿಯಲ್ಲಿಲ್ಲದೇ ಪೀನ ಮಾದರಿಯಲ್ಲಿದ್ದರೆ ಅನ್ನ ಮತ್ತು ಎರೆದ ಸಾಂಬಾರ ಕೆಳಗೆ ಹರಿದು ಹೋಗಬಹುದಲ್ಲ. ಕಿವಿಯ ಕುಗ್ಗೆ ತೆಗೆಯಲು ದಬ್ಬಣವನ್ನು ಹಾಕಲಾಗುವುದೇ? ಹಾಗಾಗಿ, ಆಕಾರವು ಉದ್ದೇಶಿತ ಕಾರ್ಯಕ್ಕೆ ಸಹಕಾರಿಯಾಗಿರಬೇಕು ಎನ್ನುವುದನ್ನು ಒಪ್ಪಲೇ ಬೇಕು. ಅದರರ್ಥ ಆಕಾರಕ್ಕೆ ಎರಡನೆಯ ದರ್ಜೆ ಎಂದಲ್ಲ. ಒಂದು ಪ್ರಾಡಕ್ಟಿನ ಉದ್ದೇಶಿತ ಕಾರ್ಯವೇನು? ಉದ್ದೇಶಕ್ಕೆ ತಕ್ಕಂತೇ ಅದರ ಕಾರ್ಯಕ್ಷಮತೆ ತೋರುವುದು. ಹಾಗಾದರೆ, ಅದರ ರೂಪ ಅಥವಾ ಸೌಂದರ್ಯದ ಉದ್ದೇಶಿತ ಕಾರ್ಯವೇನು? ಮೊದಲನೆಯದು ಆ ಪ್ರಾಡಕ್ಟಿನ ಉದ್ದೇಶಿತ ಕಾರ್ಯಕ್ಕೆ ಸಹಕಾರಿಯಾಗುವುದು ಮತ್ತು ಎರಡನೆಯದು ಅಷ್ಟೇ ಮುಖ್ಯವಾಗಿ ಅದು ಚಂದ ಅಥವಾ ಸುಂದರವಾಗಿ ಕಾಣುವುದೇ ಅದರ ಕೆಲಸ. ಚೆನ್ನಾಗಿ ಕಾರ್ಯಕ್ಷಮತೆ ಹೊಂದಿದ ಬೇಸಿನ್‌ ಕಾಣಲು ಚೆನ್ನಾಗಿರದಿದ್ದರೆ ಗ್ರಾಹಕರು ಖರೀದಿಸುವುದು ಕಷ್ಟ ಎಂದು ಬೇರೆಯಾಗಿ ಹೇಳಬೇಕಿಲ್ಲ.

ಪಕ್ಷಪಾತದ ವಿಚಾರ ಬಂದಾಗಲೆಲ್ಲಾ ಗ್ರಹಿಕೆ (ಪರ್ಸೆಪ್ಶನ್‌) ಎನ್ನುವ ಶಬ್ದದ ಬಳಕೆ ಸಹಜವೇ. ನಾವು ಏನನ್ನಾದರೂ ನೋಡಿದರೆ ಅದರ ಬಗ್ಗೆ ನಾವು ಒಂದಿಷ್ಟು ವಿಷಯಗಳನ್ನು ಊಹಿಸಿಕೊಳ್ಳುತ್ತೇವೆ. ಊಹಿಸಿಕೊಂಡದ್ದು ನಡೆಯದೇ ಇದ್ದರೆ ನಾವು ಬೇಸರಗೊಳ್ಳುತ್ತೇವೆ (ಮರೀಚಿಕೆ). ವಿನ್ಯಾಸದ ಮೊದಲ ಉದ್ದೇಶ ಗ್ರಾಹಕನ ಗ್ರಹಿಕೆಯ ಮೇಲೆ ಪ್ರಭಾವ ಬೀರುವುದೇ ಆಗಿದೆ. ಉದಾಹರಣೆಗೆ ದೂರದಿಂದ ಕಾರಿನ ಸೀಟನ್ನು ನೋಡಿ ಅದು ಚರ್ಮದ್ದು, ಅದರ ಮೇಲೆ ಕುಂತರೆ ಬೆಚ್ಚಗಿರುತ್ತದೆ ಎಂದು ಗ್ರಹಿಸುತ್ತೀರಿ, ನಂತರ ಅದರ ಮೇಲೆ ಕುಂತಾಗ ಅದು ಬಹಳ ತಣ್ಣಗಿದ್ದು ನೀವು ಗ್ರಹಿಸಿದ ಅನುಭವ ಕೊಡುವುದೇ ಇಲ್ಲ. ತುಂಬಾ ಚಂದವಿರುವ ಜ್ಯೂಸರನ್ನು ಮನೆಗೆ ತಂದ ಮರುದಿನವೇ ಅದರ ಮೋಟರ್‌ ಸುಟ್ಟು ಹೊದರೆ, ಅಥವಾ ಜ್ಯೂಸೇ ಹೊರಬರದಿದ್ದರೆ ನಿಮಗೆ ಬೇಸರವಾಗುವುದು ಖಂಡಿತ. ಆಗಲೇ ಒಂದು ಬ್ರ್ಯಾಂಡ್‌ ತನ್ನ ನಂಬಿಕೆ (ಟ್ರಸ್ಟ್‌) ಕಳೆದುಕೊಳ್ಳುವುದು. ಪ್ರಾಡಕ್ಟ್ ಚಂದ್ರನನ್ನು ಬಿಂಬಿಸುವ ವಿಷದ ಬಟ್ಟಲಲ್ಲಾ. ಅದು ಜೇನುತುಪ್ಪವಾಗಬೇಕು. ಅದು ಏಕಕಾಲದಲ್ಲಿ ಸತ್ಯವೂ, ಸುಂದರವೂ, ಮಂಗಳಕರವೂ ಆಗಿರಬೇಕು (ಸತ್ಯಂ ಶಿವಂ ಸುಂದರಂ). ನಿಜವಾದ ಪ್ರಾಡಕ್ಟಿನಲ್ಲಿ ಗ್ರಹಿಕೆ ಮತ್ತು ವಾಸ್ತವದ ನಡುವಿನ ಅಂತರ ಬಹಳ ಕಡಿಮೆ ಇರುತ್ತದೆ ಅಂದರೆ ಝೀರೊ. ಆಗಲೇ ನಂಬಿಕೆ ನೂರಾಗುವುದು.

ಹಾಗೆಂದ ಮಾತ್ರಕ್ಕೆ ಪಕ್ಷಪಾತವೂ ಸಹಜವೇ! ಆಸ್ಪತ್ರೆಯಲ್ಲಿ ಜೋರಾಗಿ ಅಳುವ ಮಗುವಿನ ಎದುರು ಒಂದು ಸುಂದರವಾದ ನರ್ಸನ್ನು ನಿಲ್ಲಿಸಿ, ಮಗು ಒಮ್ಮೆಲೇ ಅಳು ನಿಲ್ಲಿಸಿ ಬಿಡಬಹುದು!

ಚಿತ್ರ : ಬಾಲಸುಬ್ರಹ್ಮಣ್ಯ ಭಟ್‌
ಸಚ್ಚಿದಾನಂದ ಹೆಗಡೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಕನ್ನಡದ ತರಗತಿಯೊಳಗೆ ಪಾಠಕೇಳುವ ವಿದ್ಯಾರ್ಥಿಗಳ ಹೊರತಾಗಿಯೂ ಸಾಮಾನ್ಯ ವಿದ್ಯಾರ್ಥಿಗಳು ಹಳಗನ್ನಡದ ಪಠ್ಯಗಳನ್ನು ಸ್ವಯಂ ಪರಿಶ್ರಮದಿಂದ ಓದಬೇಕೆಂದಾದರೆ ತಂತ್ರಜ್ಞಾನ...

  • ನಾಡು, ನುಡಿ, ನಾಡವರಿಗೆ ಬಿಕ್ಕಟ್ಟುಗಳು ಬಂದಾಗ ಚಳುವಳಿ ರೂಪುಗೊಳ್ಳುವ ಕಾಲ ನಿಂತು ಹೋಗಿ ಮೂರು ದಶಕಗಳೇ ಆದವು. ಬಿಕ್ಕಟ್ಟುಗಳು ಬಂದಾಗ ಪ್ರತಿಕ್ರಿಯೆ ನೀಡುವ ಸಾಹಿತಿ,...

  • ದಿಲ್ಲಿ ಉದ್ಯಾನಗಳ ನಗರಿ. ತೊಂಬತ್ತು ಎಕರೆಯಷ್ಟಿನ ವಿಶಾಲ ಭೂಮಿ. ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರು. ಏನಿಲ್ಲವೆಂದರೂ ಸುಮಾರು ಇನ್ನೂರು ಬಗೆಯ ಸಸ್ಯ ವೈವಿಧ್ಯಗಳ,...

  • "ಕಾಗದ ಬಂದಿದೆ ಕಾಗದವು' ಎಂದು ಹಾಡುವ ಕಾಲ ಹಿಂದೆ ಉಳಿಯುತ್ತಿದೆ. ಹಸ್ತಾಕ್ಷರದ ಪತ್ರಗಳೇ ಇಲ್ಲವಾಗಿವೆ. ಪತ್ರ ಕೈಗೆತ್ತಿಕೊಂಡಾಗ ಉಂಟಾಗುವ ಭಾವಸ್ಪಂದ ಮರೆಯಾಗುತ್ತಿದೆ....

  • ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ...

ಹೊಸ ಸೇರ್ಪಡೆ