Puneeth Rajkumar: ಅಪ್ಪು ಎಂಬ ಅಯಸ್ಕಾಂತ..


Team Udayavani, Mar 17, 2024, 11:21 AM IST

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

ಕೆಲವೊಂದು ವ್ಯಕ್ತಿತ್ವಗಳು ಎಷ್ಟು ಬರೆದರೂ ಪದಗಳಾಚೆಯೇ ಉಳಿಯುತ್ತವೆ. ಎಷ್ಟು ನೆನೆದರೂ ಹೃದಯ ಖಾಲಿಯಾಗುವುದೇ ಇಲ್ಲ. ಕೋಟ್ಯಂತರ ಜನಸಂಖ್ಯೆಯಿರುವ ಈ ಜಗತ್ತಿನಲ್ಲಿ ಇಡೀ ಒಂದು ರಾಜ್ಯವೇ ಮರುಗುವಂತೆ ಮಾಡುವಷ್ಟು ಪ್ರೀತಿಯುಳಿಸಿ ಹೋದ ವ್ಯಕ್ತಿಗಳು ಬಹಳ ಕಡಿಮೆ. ಎಲ್ಲರ ಅಂತ್ಯಸಂಸ್ಕಾರಕ್ಕೂ ಲಕ್ಷಾಂತರ ಮಂದಿ ಸೇರುವುದಿಲ್ಲ. ಈ ಜಗತ್ತನ್ನು ತೊರೆದು ಹೋಗುವ ಎಲ್ಲರಿಗೂ ಅಂಥದಲ್ಲೊಂದು ವಿದಾಯ ಸಿಗುವುದಿಲ್ಲ. ರಾಜ್ಯದ ಯಾವ ತುದಿಯಿಂದ ಇನ್ಯಾವುದೇ ತುದಿಗಾದರೂ ಪಯಣಿಸಿರಿ: “ಮರೆಯಾದ ಪರಮಾತ್ಮ’, “ಜೊತೆಗಿರದ ಜೀವ ಎಂದೆಂದೂ ಜೀವಂತ’, “ಕಾಣದಂತೆ ಮಾಯವಾದನು’, “ಮತ್ತೆ ಹುಟ್ಟಿ ಬನ್ನಿ’ ಎಂಬವುಗಳ ಪೈಕಿ ಯಾವುದೋ ಒಂದು ಮಧುರ ಸಾಲಿನ ಸಮೇತ, ಯಾವುದೋ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಪುನೀತ್‌ ರಾಜ್‌ಕುಮಾರ್‌ರ ಕೆಲವಾದರೂ ಫ್ಲೆಕ್ಸ್ ಗಳನ್ನು ನೋಡದೇ ಈ ರಾಜ್ಯವನ್ನು ದಾಟುವುದು ಸಾಧ್ಯವೇ ಇಲ್ಲ. ಹಳ್ಳಿಯಿಂದ ಬೆಂಗಳೂರಿನ ಗಲ್ಲಿಗಳತನಕ ಎಲ್ಲೆಲ್ಲಿಯೂ ಅವರದೇ ನೆನಪು. ಕರೆ. ಮತ್ತೆ ಹುಟ್ಟಿ ಬನ್ನಿ ಎಂಬ ಮೊರೆ. ಯಾಕೆ ಇಷ್ಟೊಂದು ಪ್ರೀತಿ? ಇದೆಂಥಾ ಭಾವುಕತೆ? ಅಪ್ಪು ನಮ್ಮಿಂದ ಮರೆಯಾಗಿ ಮೂರು ವರ್ಷಗಳೇ ಕಳೆದುಹೋಯಿತಲ್ಲ.. ಆದರೂ ಅದೇನಿಂಥಾ ಶೋಕಾಚರಣೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೊರಟ ಸಮಸ್ತ ದಾರಿಗಳೂ ಹೋಗಿ ನಿಲ್ಲುವುದು ಪುನೀತ್‌ರ ನಿಷ್ಕಲ್ಮಷ ನಗು ಮೊಗದ ಎದುರಿಗೆ. ‌

ಹಲವು ಬಗೆಯಲ್ಲಿ ಕಾಡುವ ಜೀವ : ತಿಂಗಳಿಗೆಎರಡು ಮೂರು ಬಾರಿಯಾದರೂ ಯಾವುದೋ ಚಾನೆಲ್ಲೊಂದರಲ್ಲಿ ಪ್ರತ್ಯಕ್ಷವಾಗಿಯೇ ಆಗುತ್ತಾರೆ ಪುನೀತ್‌. ಅಪ್ಪು ಆಗಿ, ಅಭಿಯಾಗಿ, ಆಕಾಶ್‌ ಆಗಿ, ಜಾಕಿಯಾಗಿ, ಪರಮಾತ್ಮನಾಗಿ ನಟಿಸಿದ ಯಾವ ಸಿನಿಮಾದಲ್ಲೂ ಅವರನ್ನು ಪುನೀತ್‌ ಎಂದು ನೋಡಿದ್ದೇ ಕಡಿಮೆ. ಪೃಥ್ವಿ ಎಂಬ ನಿಷ್ಠಾವಂತ ಅಧಿಕಾರಿಯಾಗಿ, ಆಕಾಶ್‌ ಎಂಬ ಸಹೃದಯೀ ಗೆಳೆಯನಾಗಿ, ಅಭಿಯೆಂಬ ಆ್ಯಂಗ್ರಿ ಯಂಗ್‌ಮ್ಯಾನ್‌ ಆಗಿ, ಜಾನಕೀರಾಮನೆಂಬ ಸಕಲ ಕಲಾ ವಲ್ಲಭನಾಗಿ ಅವರು ನಮ್ಮೆದೆಗೆ ಇಳಿದಿದ್ದೇ ಜಾಸ್ತಿ.

ಪಾತ್ರವನ್ನು ಅವರು ಅಕ್ಷರಶಃ ಜೀವಿಸಿದ್ದರು. “ಮಿಲನ’ದ ಆಕಾಶ್‌ನಂಥ, ಎಲ್ಲ ಸಮಯದಲ್ಲೂ ಜೊತೆ ನಿಲ್ಲುವ ಗೆಳೆಯನೊಬ್ಬ ನಮ್ಮ ವಠಾರದಲ್ಲೋ ಅಥವಾ ಪಕ್ಕದ ಮನೆಯಲ್ಲೋ ಇರಬೇಕಿತ್ತೆಂದು ಅದೆಷ್ಟು ಜನರಿಗನ್ನಿಸಿಲ್ಲ? “ಅಭಿ’ಯಂತೆ ಸಿಡುಕುತ್ತಲೇ ಪ್ರೀತಿಸುವ ಮಗನೊಬ್ಬ ತಮಗಿರಬೇಕಿತ್ತೆಂದು ಅದೆಷ್ಟು ಅಮ್ಮಂದಿರು ಬಯಸಿಲ್ಲ? “ಕಾಣದಂತೆ ಮಾಯವಾದನು’ ಎಂದು ಹಾಡುವ ತುಂಟ ಪುನೀತ್‌, “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಎಂದು ಮಕ್ಕಳಿಗೂ, ದೊಡ್ಡವರಿಗೂ ಜೋಗುಳ ಹಾಡುವ ಪುನೀತ್‌, ‘ಶೆರ್ಲಿ ಮೇಡಂಗೆ ಕೊಡಲು ಬೆಟ್ಟದ ಹೂ ತರುವೆ’ ಎನ್ನುವ ಮುಗ್ಧ ಪುನೀತ್‌.. ಅದೆಷ್ಟೆಲ್ಲ ರೀತಿಯಲ್ಲಿ, ರೂಪದಲ್ಲಿ ನಮ್ಮನ್ನು ತಾಕಿ ಹೋದರೋ.. ಹಾಗಾದರೆ ಅಷ್ಟಕ್ಕೇ ಪುನೀತ್‌ ಇಷ್ಟೊಂದು ಇಷ್ಟವಾದರೇ? ಕರುನಾಡಿನ ಜನತೆಯ ಉಸಿರೆನ್ನುವಂತೆ ಉಳಿದು ಹೋದರೆ? ಅಂದುಕೊಂಡಾಗಲೇ ತೆರೆಯುತ್ತವೆ ಮತ್ತಷ್ಟು ಪುಟಗಳು. ಅಪ್ಪ ಡಾ. ರಾಜ್‌ ಕುಮಾರ್‌ ಅವರ ಮಾದರಿಯಲ್ಲೇ ಮುಂದುವರೆದು ನೇತ್ರದಾನವನ್ನು ಪ್ರೋತ್ಸಾಹಿಸಿದರು. ಕೆಎಂಎಫ್ ನಂದಿನಿಗೆ ರಾಯಭಾರಿಯಾಗಿ ಉಚಿತವಾಗಿ ಜಾಹೀರಾತು ನೀಡಿದರು. ಅದೆಷ್ಟೋ ಅನಾಥ ಮಕ್ಕಳನ್ನು ಪೋಷಿಸಿದರು. ಪರಿಸರದ ಮೇಲಿನ ಕಾಳಜಿಯಿಂದ “ಗಂಧದ ಗುಡಿ’ ಎನ್ನುವ ಸಾಕ್ಷ್ಯಚಿತ್ರದಲ್ಲಿ ನಟಿಸಿದರು.

ಗೋಡೆ ಕಟ್ಟಿಕೊಳ್ಳದ ಹೃದಯವಂತ : ಇದ್ದುಬಿಡಬಹುದಿತ್ತು ಪುನೀತ್‌ ಇದ್ಯಾವುದನ್ನೂ ಮಾಡದೇ. ತಾನು, ತನ್ನ ಕುಟುಂಬ, ತನ್ನ ಬ್ಯಾಂಕ್‌ ಬ್ಯಾಲೆನ್ಸ್, ತನ್ನ ಬ್ಯುಸಿನೆಸ್‌ ಎಂದಷ್ಟೇ ಗೋಡೆ ಕಟ್ಟಿಕೊಂಡು. ಯಾರು ಪ್ರಶ್ನಿಸುತ್ತಿದ್ದರು? ತಮ್ಮ ಹಾಗೂ ಹೊರ ಜಗತ್ತಿನ ನಡುವೆ ವಿಶಾಲ ಕಾಂಪೌಂಡು ಕಟ್ಟಿಕೊಂಡು ಎಲ್ಲರಿಂದ ದೂರಾಗಿ, ಭವ್ಯ ಬಂಗಲೆಯೊಳಗೇ ಉಳಿದು ಬಿಡಬಹುದಿತ್ತು. ಯಾರ ದೂರು, ಟೀಕೆಗಳಿಗೂ ನಿಲುಕದಷ್ಟು ಎತ್ತರದ ಸ್ಥಾನವೊಂದು ಅವರಿಗೆ ಹುಟ್ಟುತ್ತಲೇ ಸಿಕ್ಕಿತ್ತು. ಸ್ಟಾರ್‌ ಪಟ್ಟ, ಅಭಿಮಾನಿಗಳ ಹಿಂಡೂ ಜೊತೆಗಿತ್ತು. ಅಂಥಾದ್ದೊಂದು ದೊಡ್ಡಸ್ತಿಕೆಯ ಗೇಟನ್ನು ತಳ್ಳಿಕೊಂಡೇ ಹೊರಬಂದರು ಪುನೀತ್‌. ಹೊಸಬರಿಗೆಂದೇ ಪಿ.ಆರ್‌. ಕೆ. ಪ್ರೊಡಕ್ಷನ್‌ ಎಂಬ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ಹೊಸ ನಟ, ನಿರ್ದೇಶಕ, ಕಲಾವಿದರಿಗೆ ಮಣೆ ಹಾಕಿದರು. ಪಿ.ಆರ್‌.ಕೆ. ಆಡಿಯೋ ಕಟ್ಟಿದರು. ಹೊಸಬರ ವಿಭಿನ್ನ ಸಿನಿಮಾಗಳು ಸಮಸ್ತ ಕರ್ನಾಟಕಕ್ಕೆ ತಲುಪಲು ಕಾರಣವಾದರು.

ಸರಳತೆ ಎಂಬ ಶಕ್ತಿ… : ಪುನೀತ್‌ರೊಂದಿಗೆ ಕೆಲಸ ಮಾಡಿದವರನ್ನು ಮಾತಾಡಿಸಿ ನೋಡಿ: ಪುನೀತ್‌ ಎಂಬ ವಿನಯವಂತ ಶ್ರೀಮಂತನ ವ್ಯಕ್ತಿತ್ವದ ಚಂದದ ಪುಟಗಳು ತೆರೆಯುತ್ತ ಹೋಗುತ್ತವೆ. ವಕೌìಟ್‌, ವ್ಯಾಯಾಮ, ಜಿಮ್‌ ಎಂದು ಪ್ರತಿದಿನ ಮೈ ಬೆವರಿಳಿಸುವ ಹಠ ಸಾಧಕ. ದಪ್ಪವಾದ ಬಲಿಷ್ಠ ದೇಹವನ್ನೂ ಚಕಚಕನೆ ಬಳುಕಿಸಿ ನರ್ತಿಸಬಲ್ಲ ನರ್ತಕ ಅವರಾಗಿದ್ದರು. ಕೆಲಸಕ್ಕೆ ನಿಂತಾಗ ಆತ ನಟ ಮಾತ್ರ. ರಾಜ್‌ಕುಮಾರ್‌ ಎಂಬ ದೊಡ್ಡಮನೆಯ ಹೆಸರನ್ನು ಹೊರಗೆಲ್ಲೋ ಪಾರ್ಕಿಂಗ್‌ ಮಾಡಿರುವ ಕಾರಿನಲ್ಲೇ ಬಿಟ್ಟು, ಹೊಚ್ಚ ಹೊಸಬನಂತೆ ಎಲ್ಲರೊಟ್ಟಿಗೆ ಬೆರೆಯುತ್ತಿದ್ದರು ಎನ್ನುವುದನ್ನು ಅವರೊಟ್ಟಿಗೆ ಕೆಲಸ ಮಾಡಿದ ಎಲ್ಲರೂ ಭಾವುಕವಾಗಿ ನೆನೆಯುತ್ತಾರೆ.

ತನ್ನೆಲ್ಲ ಗರ್ವಗಳ ಮೀರಿ ಆ ಪಾತ್ರಕ್ಕೆ, ಆ ಸಿನಿಮಾಗೆ ಏನು ಬೇಕು ಎಂದು ಯೋಚಿಸುವ ತನ್ಮಯತೆ ಅವರಲ್ಲಿತ್ತು. ಪೂರ್ವಾಗ್ರಹಗಳನ್ನಿಟ್ಟುಕೊಂಡು, ಸಿನಿಮಾದಾಚೆಯ ಯಾವುದೋ ಹಳೆಯ ಕಥೆಗಳ ನೆನೆದು, ಪುನೀತ್‌ ನಮಗೆ ಕಾಲ್‌ಶೀಟ್‌ ಕೊಡಲಾರರು ಎಂದು ಒಳಗೊಳಗೆ ಅಂಜುತ್ತಲೇ ಬಳಿ ಬಂದ ನಿರ್ಮಾಪಕರ ಎದೆಯ ಭಯವನ್ನು “ಒಳ್ಳೆಯ ಕಥೆ ತನ್ನಿ. ಸಿನಿಮಾ ಮಾಡೋಣ’ ಎಂದು ಮುಗುಳ್ನಕ್ಕು ತಿಳಿಗೊಳಿಸಿದ್ದರು ಪುನೀತ್‌. ಅವರಾ ಡಿದ ಆ ಎರಡು ನುಡಿಯಲ್ಲಿ ಆಡದ ಎಷ್ಟೊಂದು ಮಾತು ಗಳಿದ್ದವಲ್ಲ! ಕೇವಲ ನಟನೆಯಷ್ಟೇ ನನ್ನದೆಂದು ಶೂಟಿಂಗ್‌ ಮುಗಿಸಿ ಎದ್ದು ಹೋದವರೂ ಅವರಲ್ಲ. ಸಿನಿಮಾಗಳ ಹಂಚಿಕೆ ಹಾಗೂ ಮತ್ತಿತರ ಮಾತುಕತೆಗೂ ನೆರವಾಗಿದ್ದನ್ನು ಅದೆಷ್ಟೋ ನಿರ್ಮಾಪಕರು ಇಂದಿಗೂ ನೆನೆಯುತ್ತಾರೆ. ಇವೆಲ್ಲ ಲೆಕ್ಕಕ್ಕೆ, ಮಾತಿಗೆ, ದಾಖಲೆಗೆ ಸಿಗುವ ಅವರ ಕೆಲಸಗಳು.

ಇದೆಲ್ಲದರಾಚೆಗೆ ಯಾರಿಗೂ ತಿಳಿಯದಂತೆ, ಸದ್ದೇ ಆಗದಂತೆ ಅದೆಷ್ಟು ಕೆಲಸಗಳನ್ನು ಮಾಡಿ ಮೌನವಾಗಿ ಎದ್ದು ಬಂದಿದ್ದರೋ ಬಲ್ಲವರ್ಯಾರು? ಎಂದೂ ಯಾವ ರಾಜಕೀಯಕ್ಕೂ ಇಳಿಯದೇ ವಿವಾದಗಳಿಂದ, ಕೆಸರೆರಚಾಟಗಳಿಂದ ದೂರವೇ ಇದ್ದರು. ಬಾಯಿಗಿಂತ ಹೆಚ್ಚಿಗೆ ಕೆಲಸ ಸದ್ದು ಮಾಡಬೇಕೆಂದು ನಂಬಿದ್ದರು. ಈ ಎಲ್ಲವೂ ನಿಶ್ಯಬ್ಧವಾಗಿಯೇ ನಡೆದುಕೊಂಡು ಬಂತು.

ಪರಮಾತ್ಮ ಮಾಯವಾದ! ಹೀಗಿದ್ದಾಗಲೇ ಆ ದಿನ ಬಂತು. ಅಕ್ಟೋಬರ್‌ 29, 2021. ಆ ದಿನದ ಮಧ್ಯಾಹ್ನ ಕರಾಳ ಬಿಸಿಲಾಗಿ ಕರುನಾಡಿಗೆ ಬಡಿಯಿತು. ಚೆನ್ನಾಗಿಯೇ ಇದ್ದ ಪುನೀತ್‌ ಹಠಾತ್ತನೆ ಕುಸಿದರು. ಕೆಲವು ನಿಮಿಷಗಳಷ್ಟೇ… ಅವರು ಮತ್ತೆ ಮೇಲೇಳಲೇ ಇಲ್ಲ. ಬೆಟ್ಟದ ಹೂವು ಬಾಡಿತ್ತು. ಬಾನ ದಾರಿಯಲ್ಲಿ ಸೂರ್ಯ ಶಾಶ್ವತವಾಗಿ ಜಾರಿಹೋಗಿದ್ದ. ಪರಮಾತ್ಮ ಕಾಣದಂತೆ ಮಾಯವಾಗಿದ್ದ. ಈ ಅನಿರೀಕ್ಷಿತ ಸುದ್ದಿ ಕೇಳಿ ಇಡೀ ಕರುನಾಡೇ ತತ್ತರಿಸಿ ಹೋಯಿತು. ಕಣ್ಣೀರಿಟ್ಟಿತು. ‘ಇದೆಲ್ಲವೂ ಸುಳ್ಳು’ ಎಂಬ ಸುದ್ದಿಯೊಂದು ಬರುತ್ತದೆ, ಖುದ್ದು ಪುನೀತ್‌ ಅವರೇ ಎದ್ದು ಬಂದು- “ನಾನಿಲ್ಲೇ ಇದ್ದೇನಲ್ಲ’ ಎಂದು ಮತ್ತದೇ ನಿಶ್ಕಲ್ಮಷ ಮುಗುಳ್ನಗು ಬೀರುತ್ತಾರೆ ಎಂದು ಕಾದರು. ಆದರೆ, ಅಂಥಾ ಯಾವ ಸುದ್ದಿಯೂ ಸಾವಿರಾರು ಜನ ನೆರೆದಿದ್ದ ಬೆಂಗಳೂರಿನ ವಸಂತನಗರದ ಆ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿನಿಂದ ಬರಲೇ ಇಲ್ಲ. ಲೋಹಿತ್‌ ಎಂಬ ಸಮಾಜಮುಖೀ ನಟನೊಬ್ಬನನ್ನು ಚಿಕ್ಕ ವಯಸ್ಸಿಗೇ ಬರಮಾಡಿಕೊಂಡ ಸ್ವರ್ಗ “ಪುನೀತ’ವಾಗಿತ್ತು. ಇಲ್ಲಿ, ಕನ್ನಡ ನಾಡು ನಿಂತನಿಂತಲ್ಲೇ ಕಣ್ಣೀರಾಗಿ ಕರಗಿತ್ತು.

ಎಲ್ಲೋ ಕೇಳಿದ ಮಾತು: ಕಲಾವಿದ ಸತ್ತರೂ ಕಲೆಗೆ ಸಾವಿಲ್ಲವಂತೆ. ಅಬ್ಬರ, ಆಡಂಬರ, ದ್ವೇಷಗಳಿಲ್ಲದ ಹಾದಿಯೊಂದರಲ್ಲಿ ನಿರುಮ್ಮಳರಾಗಿ ನಡೆದು ಹೋಗಿದ್ದಾರೆ ಪುನೀತ್‌. 46 ವರ್ಷಗಳ ಚಿಕ್ಕ ಬದುಕಿನಲ್ಲೇ ದೊಡ್ಡ ಹೆಸರನ್ನು, ಪ್ರೀತಿಯನ್ನು ಉಳಿಸಿ ಹೋಗಿದ್ದಾರೆ. ದುಡ್ಡು, ಶ್ರೀಮಂತಿಕೆ, ದೊಡ್ಡಸ್ತಿಕೆಗಳೆಲ್ಲದರಾಚೆಗೂ ಉಳಿಯುವುದು ಪ್ರೀತಿ, ಮನುಷ್ಯತ್ವ ಹಾಗೂ ಹೃದಯವಂತಿಕೆ ಎಂದು ಸಾರಿ ಹೋಗಿದ್ದಾರೆ. ಹಾಗಾಗಿಯೇ ಅಗಲಿದ ಮೂರು ವರ್ಷಗಳ ಬಳಿಕವೂ ಕನ್ನಡಿಗರ ಹೃದಯದ ಬೆಳ್ಳಿತೆರೆಯಲ್ಲಿ ಅವರ ಚಿತ್ರವೇ ಇನ್ನೂ ಓಡುತ್ತಿರುವುದು. ಸೋಲು, ಮಧ್ಯಂತರ, ಕ್ಲೈಮ್ಯಾಕ್ಸುಗಳೇ ಇಲ್ಲದ ಆ ಸಿನಿಮಾ ನಿಲ್ಲುವುದಿಲ್ಲ. ಆ ಚಿತ್ರವನ್ನು ಎದೆಯಲ್ಲಿಟ್ಟುಕೊಂಡೇ ಅವರು ನಡೆದ ಪ್ರೀತಿಯ, ಸ್ನೇಹದ, ಸೌಹಾರ್ದತೆ-ಸಹಾಯಗಳ ದಾರಿಯನ್ನು ಅನುಸರಿಸೋಣ. ಆಗ, ದೇವಲೋಕದಲ್ಲೆಲ್ಲೋ ಕುಳಿತ ಪರಮಾತ್ಮನ ಮುಖದಲ್ಲಿ ಮತ್ತದೇ ನಿಶ್ಕಲ್ಮಷ ಮುಗುಳ್ನಗೆ ಮೂಡಬಹುದು.

ಆ ನಿಷ್ಕಲ್ಮಷ ನಗು… ಅಪ್ಪುವಿನ ನಗುವಿನಲ್ಲಿ ಎಂಥದೋ ಮೋಡಿಯಿದೆ. ಆಕರ್ಷಣೆಯಿದೆ. ನಿಷ್ಕಲ್ಮಶ ಭಾವವಿದೆ. ಆ ನಗುವಿನಲ್ಲಿ ಕಪಟವಿಲ್ಲ, ನಾಟಕವಿಲ್ಲ, ಯಾರನ್ನೋ ಓಲೈಸುವ ಸ್ವಾರ್ಥವಿಲ್ಲ. ಮಗುವಿನ ನಗೆಯನ್ನು ಹೋಲುವಂಥ ಅಪ್ಪುವಿನ ನಗು ನಮ್ಮೆಲ್ಲರಲ್ಲೂ ಒಂದು ಆತ್ಮೀಯತೆ ಬೆಳೆಸಿದ್ದು ಸುಳ್ಳಲ್ಲ. ಹಿರಿಯರು, ಕಿರಿಯರು ಎನ್ನದೆ ಎಲ್ಲರನ್ನೂ ಸಮಾನ ಪ್ರೀತಿಯಿಂದ ಚೆನ್ನಾಗಿ ಮಾತನಾಡಿಸುವ, ತಬ್ಬಿಕೊಂಡು ಬೀಳ್ಕೊಡುವ, ಗೌರವಿಸುವ, ಯಾರ ಬಗ್ಗೆಯೂ ಕೆಟ್ಟ ಮಾತು ಆಡದೆ, ಯಾರ ಮನ ನೋಯಿಸದೆ, ಯಾವ ಅಪವಾದಗಳಿಗೂ ಸಿಲುಕಿಕೊಳ್ಳದೆ ಬದುಕಿದ ಅಪ್ಪು, ಎಲ್ಲ ಅರ್ಥದಲ್ಲೂ ಚಿನ್ನದಂಥ ಮನುಷ್ಯ.

-ವಿನಾಯಕ ಅರಳಸುರಳಿ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.