ಇಂದು ಅಮ್ಮಂದಿರ ದಿನ: ನನ್ನಮ್ಮನ ಮನಸ್ಸಿನಂಥ ಎಲ್ಲರೂ ಇಷ್ಟವೇ!

ನನ್ನಮ್ಮ ಅಂದ್ರೆ ನಂಗಿಷ್ಟ ಅನ್ನೋದರಲ್ಲಿ ಏನು ವಿಶೇಷ !

Team Udayavani, May 12, 2019, 6:00 AM IST

ನಮ್ಮ ಅಮ್ಮ ಅಂದ್ರೆ ನಮಗಿಷ್ಟ. ಅದರಲ್ಲೇನು ವಿಶೇಷ? ಬೇರೆಯವರ ಅಮ್ಮನೂ ಇಷ್ಟ ಆಗಬೇಕು. ಅಂದರೆ, ಎಲ್ಲರಲ್ಲಿಯೂ ಇರಬಹುದಾದ ವಾತ್ಸಲ್ಯದ ಭಾವ ನಮ್ಮನ್ನು ತಟ್ಟಬೇಕು. ಪುಟ್ಟಗೌರಿಯನ್ನೂ “ತಾಯೀ’ ಎಂದು ಕರೆಯುತ್ತೇವೆ. “ಏನಮ್ಮಾ?’ ಎಂದು ಯಾರನ್ನಾದರೂ ವಿಚಾರಿಸುವ ಧ್ವನಿಯಲ್ಲೊಂದು ಆದ್ರìತೆ ಇರುತ್ತದೆ. ಅಂದ ಹಾಗೆ, ಹೆಣ್ಣು ಮಕ್ಕಳು ಮಾತ್ರ ತಾಯಂದಿರಲ್ಲ , ಗಂಡಸರೊಳಗೂ ತಾಯ್ತನದ ಭಾವವಿರುತ್ತದೆ.

ಮದಿವಿ ಫಿಕ್ಸಾತು ನಂದು”
“”ನಿಂದಾ?”
“”ಹೂ (ಕಣ್ಣೀರು ಇನ್ನೇನು ತುಳುಕಬೇಕು ಹಾಗಿತ್ತು) ಕಣೆ”
“”ಈ ಈಷ್ಟ್ ಜಲ್ದಿ?”
“”ಯಾ ಜಲ್ದಿ? ನನಿಗಾರ ಡಿಗ್ರಿ ಸೇರಕಣ ಮಟ ಬಿಟ್ಟಾರೆ… ನಮ್ಮಕ್ಕುನ್ನ ಹತ್ತನೇ ಕ್ಲಾಸು ಮುಗುದ ಗಳಿಗೆ ಮದಿವಿ ಮಾಡಿದ್ರು ಗತ್ತಾ?”
“”ಓದತನಿ ಅನ್ನಬೇಕಾಗಿತ್ತು ಶಿವಿ?”
“”ಮದಿವಿ ಮಾಡಿಕ್ಯಂದು ಓದಿಕ್ಯ ಅಂತು ನಮ್ಮಪ್ಪ…”
“”ನಿನ ಗಂಡ ಓದುಸಲ್ಲ ಅಂದ್ರೆ?”
“”ಸುಮ್ಮನಿರೇ! ಎಷ್ಟ್ ಮಾತು ಕೇಳ್ತಿ. ಹೋಗತ್ತಗ. ನೀನು ಮದಿವಿಗೂ ಬರಬ್ಯಾಡ. ಯದಕ್ಕೂ ಬ್ಯಾಡ. ಯಾವಳೂ ಬ್ಯಾಡ” ಎನ್ನುತ್ತ ಅವಳು ಕಣ್ಣೊರೆಸಿಕೊಳ್ಳುತ್ತ ಹೋಗಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಅವಳು ನನ್ನ ಪದವಿ ಕ್ಲಾಸಿನ ಸಹಪಾಠಿ. ಬಹಳ ಓದಬೇಕು, ಕೆಲಸಕ್ಕೆ ಹೋಗಬೇಕು ಅಂತ ಆಸೆ ಇಟ್ಟುಕೊಂಡವಳು. ಅವಳ ನೋಟ್ಸುಗಳು ಬಹಳ ಅಚ್ಚುಕಟ್ಟಾಗಿ ಚಂದವಾಗಿ ಒಪ್ಪವಾಗಿ ಯಾವಾಗಲೂ ಕಂಪ್ಲೀಟ್‌ ಇರುತ್ತಿದ್ದವು. ಆದರೆ, ಅವಳ ಅಪ್ಪನಿಗೆ ಇವಳಿಗೆ ಒಂದು ಮದುವೆ ಮಾಡಿಬಿಡುವ ಮಾಡುವ ಅವಸರ.

ನಾವು ಕಂಡಾಗಲೆಲ್ಲ ನಮ್ಮನ್ನೂ ಸೇರಿಸಿ ಬೈಯುತ್ತಿದ್ದರು. “”ಆಕಿನವು ನೋಟ್ಸು ಯಾರರೆ ತಗಂದು ಹೋಗರೆವಾ. ಜಲ್ದಿ ಒಂದು ಮದಿವಿ ಮಾಡ್ತವಿ ಆಕಿಗೆ. ಇಲ್ಲುದ್‌ ವಿಚಾರ ಕಾನೂನು ಕಟೆ ಆಕಿ ತಲೀಗೆ ತುಂಬಸಬ್ಯಾಡ್ರಿ. ನಮವ್ವ (ಶಿವಿಯ ಅಜ್ಜಿ) ಆಕಿ ಮದಿವಿ ನೋಡಾಕಂತನೆ ಜೀವ ಹಿಡಕಂದತಿ. ಈಕಿ ಮದಿವಿ ನೋಡಿ ಹೋಕ್ಕನೆಪ್ಪಾ ಅಂತತಿ” ಎಂದು ಶಿವಿಯ ಅಪ್ಪ ಪಾಠ ಒಪ್ಪಿಸುತ್ತಿದ್ದರು. ಅವಳಿಗೆ ಮದುವೆ ಅವಾಯx… ಮಾಡುವ ದಾರಿ ಹುಡುಕಿಕೊಟ್ಟರೆ ಜೋಕೆ ಎನ್ನುವ ಹಾಗೆ…

ಹಾಗೆ ನೋಡಿದರೆ ಶಿವಿಯ ಅಜ್ಜಿ ಒಮ್ಮೆ ಊಟಕ್ಕೆ ಕೂತರೆ ಭರ್ಜರಿ ಬ್ಯಾಟಿಂಗ್‌ ಮಾಡುತ್ತಿತ್ತು. ಎರಡು ಮ್ಯಾಲ ಅರ್ಧ ಹೋಳಿಗಿ. ರೊಟ್ಟಿ ಆದರ ಮೂರು, ಮು¨ªೆ ಆದರೆ ಎರಡು ಮ್ಯಾಲಷ್ಟು ಅನ್ನ. ಎಲ್ಲ ಸರಾಗವಾಗಿ ಹೋಗುತ್ತಿತ್ತು. ಶಿವಿ ಮದಿವಿ ನೋಡಿ ಸಾಯ್ತಿàನಿ ಅಂತ ಬ್ಲ್ಯಾಕ್‌ವೆುàಲ್‌ ಮಾಡುತ್ತಿತ್ತೋ ಅಥವಾ ಪ್ರಾಮಿಸ್‌ ಮಾಡಿತ್ತೋ ಅರ್ಥವಾಗದ ಸ್ಥಿತಿ ಅದು. ಶಿವಿ ಬೇಜಾರು ಮಾಡಿಕೊಂಡಾಗ ಅವಳ ಮನಸ್ಸು ಹಗುರ ಮಾಡಲು ಆದಷ್ಟೂ ಪ್ರಯತ್ನ ಪಡುತ್ತಿದ್ದೆವು.

“”ನಿಮ್ಮಪ್ಪ ಒಂದೇ ಮದಿವಿ ಮಾಡ್ತತಂತಾ? ಆಮ್ಯಾಲ ನಿಮ್ಮಜ್ಜಿ ಗ್ಯಾರಂಟಿ ಹೋಗತತಾ?” ಅಂತ ಕೇಳಿದರೆ ಶಿವಿ ಪಾಪ ನಕ್ಕು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದಳೇ ಹೊರತು ಏನೂ ಮಾತನಾಡುತ್ತಿರಲಿಲ್ಲ.
ಅಂತೂ ಡಿಗ್ರಿ ಮುಗಿಸುವ ಮೊದಲೆ ಅವಳ ಮದುವೆ ಆಯಿತು. ವರ್ಷ ತುಂಬುವ ಮೊದಲೆ ಅವಳು ಹೆರಿಗೆಗೆಂದು ಮನೆಗೂ ಬಂದಳು. ತನ್ನ ರೂಮಿನಲ್ಲಿದ್ದ ಹಳೆಯ ಪುಸ್ತಕಗಳನ್ನು ನೋಡಿದಾಗ ಆಸೆ ಚಿಗುರುತ್ತಿತ್ತು. ಆದರೆ ಏನು ಮಾಡುವುದು? ಹುಟ್ಟಲಿರುವ ಮಗುವಿನ ಬಗ್ಗೆ ಕಾಳಜಿ ವಹಿಸಬೇಕು. ಅವಳಜ್ಜಿ ಇನ್ನೂ ಗಟ್ಟಿಮುಟ್ಟಾಗಿ ಇದ್ದರು. ಬಾಣಂತನದ ಉಸ್ತುವಾರಿ ಅವರದ್ದೇ.

ಶಿವಿಗೆ ಮಕ್ಕಳನ್ನು ಆಡಿಸಿ ಗೊತ್ತಿತ್ತು. ಆದರೆ, ಹುಟ್ಟಿದ ಮಕ್ಕಳನ್ನು ಸಂಭಾಳಿಸಿ ಗೊತ್ತಿರಲಿಲ್ಲ. ಡೆಲಿವರಿ ಹತ್ತಿರ ಬಂದಾಗ ನಾರ್ಮಲ್‌ ಆಗಲಿ ಎಂದು ಎಲ್ಲರೂ ಬೇಡಿಕೊಂಡರೆ ಶಿವಿ ಎಲ್ಲೋ ಕಳೆದುಹೋಗಿದ್ದಳು.
ಸಿಸೇರಿಯನ್‌ ಆಯಿತು. ಆಗಿನಿಂದಲೇ ಎಲ್ಲರೂ ಅವಳನ್ನು ಬೈಯ್ಯಲು ಶುರುವಿಟ್ಟುಕೊಂಡರು.
“”ಸ್ವಲ್ಪ ಟ್ರೈ ಮಾಡಿದ್ದರ ನಾರ್ಮಲ್‌ ಆಗ್ತಿತ್ತು. ಈಕಿ ಮುಕ್ಕರಿಯದ ಬಿಟ್ಟು ಸುಮ್ಮನ್‌ ಕುತಗಂದು. ದಿನ ತುಂಬಿದ ಮ್ಯಾಲ ಡಾಕ್ಟರು ಆಪರೇಶನ್ನೇ ಮಾಡಬಕು ಅಂದ್ರು” ಎಂದು ಅವಳನ್ನು ದೂಷಿಸುವಂತೆ ಮಾತನಾಡುತ್ತಿದ್ದರು. ಅಲ್ಲಿಂದ ಶುರುವಾಯ್ತು.

ಶಿವಿಯ ಮೇಲೆ ಹಾಗೂ ಅವಳಂತೆ ಹಲವಾರು ತಾಯಂದಿರ ಮೇಲೆ ಹೊರಿಸುವ ಅಪರಾಧಿ ಪ್ರಜ್ಞೆಯೊಂದು ನಿರಂತರ ಮಾನಸಿಕ ಕ್ಷೊಭೆ. ಆ ಮಗುವಿನ, ಅದರ ನಂತರ ಜನಿಸಿದ ಇನ್ನೊಂದು ಮಗುವಿನ ಓದು, ವಿದ್ಯೆ, ಆಗುವವರೆಗೂ ಶಿವಿ ಒಂಥರಾ ಡಲ್‌ ಹೊಡೆಯುತ್ತಿದ್ದಳು. ಆಮೇಲೆ ಅದೇ ಅಭ್ಯಾಸ ಆಗಿ ಹೋಯಿತು. ಈಗ ಮಕ್ಕಳಿಬ್ಬರೂ ತಮ್ಮ ಪಾಡಿಗೆ ತಾವಿದ್ದಾರೆ. ಶಿವಿ ಮಾತ್ರ ಅಮ್ಮನಿಂದ ಅಜ್ಜಿಯ ಪಟ್ಟಕ್ಕೆ ಹೋಗಲು ಒಂಥರಾ ನೀರಸ ಮನಸ್ಸಿನಿಂದ ಸರದಿ ಕಾಯುತ್ತಿದ್ದಾಳೆ.

ಎಲ್ಲರೂ ಸಿಕ್ಕಾಗ ಆಗಾಗ ಓದುಬರಹ ಕೆಲಸ- ಹೀಗೆ ಮಾತುಗಳನ್ನು ಆಡಿದರೂ ಶಿವಿ ಮಾತ್ರ ಬಾಯಿ ಬಿಚ್ಚುವುದೇ ಇಲ್ಲ. ಅವಳ ಡಿಗ್ರಿಯ ನೋಟ್ಸುಗಳನ್ನು ಹಾಗೇ ಕಾಪಾಡಿಕೊಂಡಿದ್ದಾಳೆ ಅಂತ ಅವಳ ಮನೆ ಕೆಲಸಕ್ಕೆ ಹೋಗುತ್ತಿದ್ದ ಹೆಂಗಸು ಹೇಳುತ್ತಿದ್ದಳು.
ಅವಳ ಗಂಡ ಶಿವಿಯನ್ನು ಓದಿಸಬೇಕು ಎಂದುಕೊಂಡರೂ ಮನೆಯವರ ವಿರೋಧ ಕಟ್ಟಿಕೊಳ್ಳ ಲಾರದೆ, “”ನೀನೇ ಅಡ್ಜಸ್ಟ್ ಮಾಡಿ ಕ್ಯಳವಾ. ಸುಮ್ಮನ ತಲಿ ತಿನ್ನಬ್ಯಾಡ” ಎಂದನಂತೆ. ಅಲ್ಲಿಗೆ ಆ ಕಥೆ ಮುಗಿದುಹೋಯಿತು.
ಅಮ್ಮನ ಆಸೆ
ಅಮ್ಮ ಆಗುವ ಆಸೆ ಬಹುತೇಕ ಹೆಣ್ಣು ಮಕ್ಕಳಿಗೆ ಇದೆ. ಆದರೆ, ಕೆಲವರಿಗೆ ತಮ್ಮ ಅಸ್ತಿತ್ವವನ್ನು ಬದುಕುವ ಅಸೆಯೂ ಇದೆ. ಅಂದರೆ ತನ್ನದೊಂದು ಚಿಕ್ಕ ಕನಸು. ಓದುವುದೋ, ಕೆಲಸಕ್ಕೆ ಸೇರುವುದೋ, ಆರ್ಥಿಕ ಸಬಲತೆ ಹೊಂದುವುದೋ ಅಥವಾ ಬೇರೆ ಜಾಗಗಳಿಗೆ ಪ್ರಯಾಣ ಮಾಡುವುದೋ ಇನ್ನೂ ಏನೇನೋ…

ಈ ಎಲ್ಲಾ ಕನಸುಗಳಿಗೆ ತಾಯ್ತನ ಎನ್ನುವ ಛಾಪು ಮಿತಿಯನ್ನು ಹಾಕಿಬಿಟ್ಟರೆ ಅದರ ಮೇಲೆ ಒಂದು ರೀತಿಯ ಅಸಹನೆ ಹುಟ್ಟದೆ ಇರದು. ಹೆರುವ ಶಕ್ತಿ ಇರುವ ಹೆಣ್ಣಿಗೆ ಸ್ವತಂತ್ರ ನಿರ್ಧಾರ ಮಾಡುವ ಶಕ್ತಿ ಕೆಲವೊಮ್ಮೆ ಇರುವುದಿಲ್ಲ. ಇದು ಬಹುತೇಕ ಸತ್ಯ.
ಈಗೇನು ಅಡುಗೆ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಕೆಲಸವೇ ಇಲ್ಲ ಎನ್ನುವ ಗಂಡಸರೂ ತಾವು ತಮ್ಮ ಅಜ್ಜ-ಪಿಜ್ಜನಂತೆ ನಡೆದು ದಾರಿ ಸವೆಸಬೇಕಿಲ್ಲ, ಬದಲಿಗೆ ತಮಗೂ ಅನುಕೂಲಗಳಾಗಿದ್ದರೂ ಅಜ್ಜನಷ್ಟು ಕೆಲಸವನ್ನೂ ತಾವು ಮಾಡಲಾಗುತ್ತಿಲ್ಲ ಎನ್ನುವ ಸರಳ ಸತ್ಯವನ್ನು ಕಾಣದೆ ಹೋಗುತ್ತಾರೆ. ಅವನಂತೆ ಹೊಲ/ಮನೆ/ತೋಟ ನೋಡಬೇಕಿಲ್ಲ, ಕೋರ್ಟು-ವ್ಯಾಜ್ಯ ಅಂತ ಅಲೆದಾಡಬೇಕಿಲ್ಲ.
ಮನೆಯಲ್ಲಿ ಹೆಂಡತಿಗೆ ಸಹಾಯ ಮಾಡ್ತೀನಿ ಎನ್ನುವ ವಾಕ್ಯದ ದೋಷ ಕಾಣುವುದು ಕಷ್ಟಸಾಧ್ಯ. ಯಾಕೆಂದರೆ ಪೀಳಿಗೆಗಳು ಬದಲಾಗಿ ಹೆಣ್ಣು ಮಕ್ಕಳು ಹೆಚ್ಚು ಅಂಕಗಳನ್ನು ಗಳಿಸಿ ಕನಸು ಕಂಡು ದುಡಿಮೆಗೆ ನಿಂತರೂ ಮದುವೆ ಆದ ಕೆಲವು ವರ್ಷಕ್ಕೆ ಅದೆಲ್ಲಿಗೆ ಮಾಯವಾಗುತ್ತಾರೆ, ತಾಯ್ತನ ಯಾಕಿಷ್ಟು ದುಸ್ತರ ಆಗಿದೆ ಎಂದು ಚರ್ಚೆ ಮಾಡಬೇಕಿದೆ.

ಆರ್ಥಿಕವಾಗಿ ದೇಶವನ್ನು ಮುನ್ನಡೆಸಬೇಕಾದರೆ ಹೆಣ್ಣು ಮಕ್ಕಳ ಪೂರ್ಣ ಶಕ್ತಿಯ ವಿನಿಯೋಗ ಆಗಬೇಕು. ಅದಕ್ಕಾಗಿ ಗಂಡಸರೂ ಹೆಚ್ಚಿನ ಮಟ್ಟಿಗೆ ತಾಯಂದಿರಾಗಬೇಕು.
ಯಾಕೆಂದರೆ, ಪ್ರತೀ ಹೆಣ್ಣಿನಲ್ಲಿ ಛಲವುಳ್ಳ ಗಂಡು ಇರುವಂತೆ, ಪ್ರತೀ ಗಂಡಿನಲ್ಲಿ ಒಬ್ಬ ತಾಯಿ ಇದ್ದಾಳೆ. ಅವಳು ಸಮಾಜದ ಒತ್ತಡವನ್ನು ಮೀರಿ ಕಾಣಿಸಿಕೊಳ್ಳಬೇಕಿದೆ. ಅಪ್ಪ ಅಮ್ಮನಾಗಬೇಕಿದೆ.

ಪ್ರೀತಿ ನಾಗರಾಜ


ಈ ವಿಭಾಗದಿಂದ ಇನ್ನಷ್ಟು

  • ಜಯಂತ್‌ ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆಯಲ್ಲಿನ ಲೇಖನಗಳನ್ನು ದಿನಕ್ಕೊಂದು ಓದುತ್ತಿದ್ದೆ. ಸಮಯವಿರಲಿಲ್ಲ ಅಂತಲ್ಲ, ಎರಡು-ಮೂರು ದಿನಕ್ಕೆ ಮುಗಿದು ಬಿಟ್ಟರೆ...

  • ಆತ ಬಿ.ಎಸ್‌ಸಿ ಮಾಡುತ್ತಿದ್ದರೂ ಹೆಚ್ಚಾಗಿ ಇರುತ್ತಿದ್ದುದು ಅಡಿಕೆ ವಕಾರಿಯಲ್ಲಿ. ಅದು ಕುಟುಂಬದ ದಂಧೆ. ಅಲ್ಲದೆ, ಆತನಿಗೆ ಪ್ರೀತಿಯ ಕೆಲಸ ಅದು. ಅಡಿಕೆ ಕತ್ತರಿಸಿ...

  • ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ....

  • ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ "ಲೆಜೆಂಡ್‌' ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು...

  • ಜಾಗತೀಕರಣ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಹಾಗೆ ಜನಮಾನಸವೂ ತನ್ನ ಅಸ್ಮಿತೆಗಳನ್ನು ಕಾಪಿಟ್ಟುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳತೊಡಗಿತು....

ಹೊಸ ಸೇರ್ಪಡೆ