ಲೋಕ ಕಲ್ಯಾಣಕ್ಕಾಗಿ ಜೈನ ಮಹಿಳೆಯ 13 ತಿಂಗಳು ಉಪವಾಸ ವ್ರತ ಸಂಪನ್ನ
Team Udayavani, Apr 27, 2020, 3:37 PM IST
ನಾಲತವಾಡ: ಲೋಕ ಕಲ್ಯಾಣಕ್ಕಾಗಿ 13 ತಿಂಗಳು ಉಪವಾಸ ವ್ರತ ಆಚರಿಸಿದ ಜೈನ ಮಹಿಳೆ ಸಂಗೀತಾ ದಿನೇಶ ಓಸ್ವಾಲ್ ರವಿವಾರ ಉಪವಾಸ ವ್ರತ ಸಂಪನ್ನಗೊಳಿಸಿದರು. ಲೋಕಕಲ್ಯಾಣಕ್ಕಾಗಿ 13 ತಿಂಗಳಿನಿಂದ ಉಪವಾಸ ವ್ರತ ಕೈಗೊಂಡಿದ್ದ ಸಂಗೀತಾ ಓಸ್ವಾಲ್, ಎರಡು ದಿನಕ್ಕೊಮ್ಮೆ ಅಲ್ಪ ಉಪವಾಸ ಸೇವಿಸುತ್ತಿದ್ದರು. ಸಂಪ್ರದಾಯದಂತೆ ಆಂಧ್ರಪ್ರದೇಶದ ಆದೂನಿ ಗ್ರಾಮದಲ್ಲಿ ಕುಟುಂಬ ಮತ್ತು ಸಮಾಜದವರೊಂದಿಗೆ ಸೇರಿ ಉಪವಾಸ ವ್ರತ ಸಂಪನ್ನಗೊಳಿಸಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಇದು ಆಗದ್ದರಿಂದ ಇಂದು ನಾಲತವಾಡದ ಮನೆಯಲ್ಲೇ ಕುಟುಂಬದವರ ಸಮ್ಮುಖದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಉಪವಾಸ ವ್ರತ ಸಂಪನ್ನಗೊಳಿಸಿದರು. ಈ ವೇಳೆ ಅಭಿಪ್ರಾಯ ಹಂಚಿಕೊಂಡ ಸಂಗೀತಾ ಓಸ್ವಾಲ್, ಲೋಕದಲ್ಲಿ ದುಷ್ಟ ಶಕ್ತಿ ನಿರ್ನಾಮವಾಗಿ ಲೋಕಕಲ್ಯಾಣವಾಗಬೇಕು ಎಂಬ ಉದ್ದೇಶದಿಂದ ಉಪವಾಸ ವ್ರತ ಆಚರಿಸಿದ್ದಾಗಿ ಹೇಳಿದರು. ಸಂಗೀತಾ ಓಸ್ವಾಲ್ ಅವರ ನಿವಾಸಕ್ಕೆ ಮಾಜಿ ಶಾಸಕ ಸಿ.ಎಸ್.ನಾಡಗೌಡ ಹಾಗೂ ಬಿಜೆಪಿ ಮುಖಂಡ ಎಂ.ಎಸ್.ಪಾಟೀಲ ಭೇಟಿ ನೀಡಿ, ಲೋಕಕಲ್ಯಾಣಕ್ಕಾಗಿ ಉಪವಾಸ ವ್ರತ ಆಚರಿಸಿದ ಸಂಗೀತಾ ಓಸ್ವಾಲ್ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸಿದರು.