ವಿಡಿಯೋ ಗೇಮ್ಸ್ಗಳಿಂದ ನಾಯಿಗಳ ಉತ್ಸಾಹ ವೃದ್ಧಿ!
Team Udayavani, Apr 1, 2018, 4:21 AM IST
ಹೆಚ್ಚು ವಿಡಿಯೋ ಗೇಮ್ಗಳನ್ನು ಆಡುವುದರಿಂದ ಮಕ್ಕಳು ಹಾಳಾಗುತ್ತಾರೆ ಎಂಬುದು ಪ್ರತಿ ಮಗುವಿನ ಹೆತ್ತವರ ಆತಂಕ. ಆದರೆ, ದೂರದ ವಿಯೆನ್ನಾ ವಿಶ್ವವಿದ್ಯಾಲಯದ ವೆಟರ್ನರಿ ಮೆಡಿಸಿನ್ ವಿಭಾಗದ ವಿಜ್ಞಾನಿಗಳು ವಿಡಿಯೋ ಗೇಮ್ಗಳು ಜೀವಿಗಳಲ್ಲಿ ಉತ್ಸಾಹ, ಚುರುಕುತನ ತರುತ್ತವೆ ಎಂದು ಹೇಳಿದ್ದಾರೆ.
ವಿಜ್ಞಾನಿಗಳೇ ಹೀಗೆ ಹೇಳಿದ್ದಾರೆಂದು ಮಕ್ಕಳು ಖುಷಿಪಡಬೇಕಿಲ್ಲ. ಏಕೆಂದರೆ, ಅವರು ಹೇಳಿರುವುದು ಮುದಿ ನಾಯಿಗಳ ಬಗ್ಗೆ! ಇತ್ತೀಚೆಗೆ, ತಾವು ನಡೆಸಿರುವ ಪ್ರಯೋಗದಲ್ಲಿ ಇದು ಸಾಬೀತಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
“ಸಾಮಾನ್ಯವಾಗಿ, ಸಾಕು ನಾಯಿಗಳು ಮುದಿತನದಿಂದ ಮಂಕಾಗುತ್ತವೆ. ಇಂಥ ಮುಪ್ಪಿನಲ್ಲಿ ಕೆಲವು ಕಾಯಿಲೆಗಳಿಗೂ ತುತ್ತಾಗುತ್ತವೆ. ಅಂಥ ನಾಯಿಗಳಿಗೆ ಔಷಧೋಪಚಾರ, ನಿಯಮಿತ ವ್ಯಾಯಾಮ ಮಾಡಿಸಿದರೆ ಸಾಲದು. ಅವುಗಳ ಮನಸ್ಸಿನಲ್ಲಿ ಚೈತನ್ಯದ ಹೊಸ ಹುಮ್ಮಸ್ಸು ಬಂದಲ್ಲಿ ಮಾತ್ರ ಅವು ತಮ್ಮ ಕಾಯಿಲೆಯಿಂದ ಬೇಗನೇ ಗುಣಹೊಂದುತ್ತವೆ. ಇದಕ್ಕಾಗಿ ಅವಕ್ಕೆ ವಿಡಿಯೋ ಗೇಮ್ಸ್ ಆಡಿಸಬೇಕು ಎಂದಿದ್ದಾರೆ ಸಂಶೋಧಕರಲ್ಲೊಬ್ಬರಾದ ಲೀಸಾ ವಾಲಿಸ್.