2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ
ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ ಮೇ ತಿಂಗಳಿನಲ್ಲಿ ಉದಯ್ ಪುರದಲ್ಲಿ ಚಿಂತನಾ ಶಿಬಿರ ನಡೆದಿತ್ತು.
Team Udayavani, May 25, 2022, 3:51 PM IST
ಕಾಂಗ್ರೆಸ್ ಪಾಳಯಕ್ಕೆ ಹಿರಿಯ ಮುಖಂಡ, ಖ್ಯಾತ ವಕೀಲ ಕಪಿಲ್ ಸಿಬಲ್ ಗುಡ್ ಬೈ ಹೇಳುವ ಮೂಲಕ ಕಾಂಗ್ರೆಸ್ ನಿಂದ ಹೊರನಡೆದವರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾದಂತಾಗಿದೆ. ಹಿರಿಯ ನಾಯಕರು ಪಕ್ಷ ಬಿಡುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸಡ್ಡು ಹೊಡೆಯುವ ವಿಚಾರದಲ್ಲಿ ಕಾಂಗ್ರೆಸ್ ಮತ್ತಷ್ಟು ಹಿನ್ನಡೆ ಅನುಭವಿಸಿದಂತಾಗಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ
ಒಂದೆಡೆ ಕಾಂಗ್ರೆಸ್ ಪಕ್ಷ ತೃತೀಯ ರಂಗದಿಂದಲೂ ದೂರ ಉಳಿದಿದೆ. ಮತ್ತೊಂದೆಡೆ ಪ್ರಮುಖ ಪ್ರಾದೇಶಿಕ ಪಕ್ಷಗಳು ಕೂಡಾ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿವೆ. ಏತನ್ಮಧ್ಯೆ ಪಕ್ಷದ ಘಟಾನುಘಟಿ ಮುಖಂಡರು ರಾಜೀನಾಮೆ ನೀಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗತೊಡಗಿದೆ. ಇದರಿಂದಾಗಿ 2024ರ ಸಾರ್ವತ್ರಿಕ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ದುಬಾರಿಯಾಗಲಿದೆ ಎಂಬ ಚರ್ಚೆ ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.
ಕಳೆದ 5 ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಐವರು ಪ್ರಮುಖ ನಾಯಕರು ಗುಡ್ ಬೈ ಹೇಳಿದ್ದು, ಅವರ ಸಂಕ್ಷಿಪ್ತ ವಿವರ ಇಲ್ಲಿದೆ.
1)ಕಪಿಲ್ ಸಿಬಲ್: ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕಾಗಿ ಮೇ ತಿಂಗಳಿನಲ್ಲಿ ಉದಯ್ ಪುರದಲ್ಲಿ ಚಿಂತನಾ ಶಿಬಿರ ನಡೆದಿತ್ತು. ಆದರೆ ಕಪಿಲ್ ಸಿಬಲ್ ಇದರಲ್ಲಿ ಭಾಗವಹಿಸಿರಲಿಲ್ಲವಾಗಿತ್ತು. ಶಿಬಿರ ನಡೆಯುವ ಮೊದಲು ಕಪಿಲ್ ಸಿಬಲ್ ಸೇರಿದಂತೆ ಜಿ 23 ನಾಯಕರು, ಕಾಂಗ್ರೆಸ್ ಹೈಕಮಾಂಡ್ ನಾಯಕತ್ವವನ್ನು ಬೇರೆಯವರಿಗೆ ಕೊಟ್ಟು ಪಕ್ಷದಲ್ಲಿ ಬದಲಲಾವಣೆ ತರಬೇಕೆಂದು ಕಪಿಲ್ ಸಿಬಲ್ ತಿಳಿಸಿದ್ದರು. ಇದೀಗ ಪಕ್ಷದ ವಿರುದ್ಧ ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದ ಸಿಬಲ್ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮ ನೀಡಿದ್ದರು.
2)ಸುನೀಲ್ ಜಾಖರ್: ಪಂಜಾಬ್ ಮಾಜಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಅವರನ್ನು ಟೀಕಿಸಿದ್ದ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಸುನಿಲ್ ಜಾಖರ್ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಇದರಿಂದ ಅಸಮಧಾನಗೊಂಡ ಜಾಖರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಪಕ್ಷ ತೊರೆದ ನಂತರ ಜಾಖರ್, ಕಾಂಗ್ರೆಸ್ ಹೈಕಮಾಂಡ್ ಸ್ನೇಹಿತರು ಮತ್ತು ಶತ್ರುಗಳನ್ನು ಗುರುತಿಸುವ ಅಗತ್ಯವಿದೆ ಎಂದು ಕಟುವಾಗಿ ಟ್ವೀಟ್ ಮಾಡಿದ್ದರು.
3)ಡಾ.ಅಶ್ವನಿ ಕುಮಾರ್: ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಕೇಂದ್ರದ ಮಾಜಿ ಕಾನೂನು ಸಚಿವ ಡಾ.ಅಶ್ವನಿ ಕುಮಾರ್ ಅವರು ಫೆಬ್ರವರಿ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಕುಮಾರ್ ಅವರು ಸೋನಿಯಾ ಗಾಂಧಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ಈ ನಿರ್ಧಾರ ನನ್ನ ಘನತೆಗೆ ಅನುಗುಣವಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ಭವಿಷ್ಯದಲ್ಲಿ ಕಾಂಗ್ರೆಸ್ ಅವನತಿಗೆ ಹೋಗುವುದು ನಮ್ಮ ಕಣ್ಣ ಮುಂದಿರುವ ಸತ್ಯವಾಗಿದೆ ಎಂದು ಕುಮಾರ್ ಎನ್ ಡಿಟಿವಿ ಜೊತೆ ಮಾತನಾಡುತ್ತ ತಿಳಿಸಿದ್ದರು.
4)ಆರ್ ಪಿಎನ್ ಸಿಂಗ್: ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಮಾಜಿ ಸಚಿವ ಸಿಂಗ್ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ನಾನು 32 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ಆದರೆ ಕಾಂಗ್ರೆಸ್ ಮೊದಲಿನಂತೆ ಇಲ್ಲ ಎಂದು ಟೀಕಿಸಿದ್ದರು. ಕಳೆದ ವರ್ಷ ಉತ್ತರಪ್ರದೇಶದ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಕೂಡಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು.
5)ಹಾರ್ದಿಕ್ ಪಟೇಲ್: ಪಕ್ಷದೊಳಗೆ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ಅವರನ್ನು ಗುರಿಯಾಗಿರಿಸಿಕೊಂಡು, ಪಕ್ಷದ ಉನ್ನತ ಮುಖಂಡರನ್ನು ಭೇಟಿಯಾದ ಸಂದರ್ಭದಲ್ಲಿ ಮೊಬೈಲ್ ಫೋನ್ ಮೂಲಕ ಬೇರೆಡೆ ಗಮನ ಹರಿಸಿರುವುದಾಗಿ ಆರೋಪಿಸಿದ್ದರು. ಗುಜರಾತ್ ಕಾಂಗ್ರೆಸ್ ಮುಖಂಡರಿಗೆ ಪಕ್ಷದ ಸಮಸ್ಯೆಗಿಂತ ಚಿಕನ್ ಸ್ಯಾಂಡ್ ವಿಚ್ ಗಳಲ್ಲೇ ಹೆಚ್ಚು ಆಸಕ್ತಿ ಹೊಂದಿರುವುದಾಗಿ ದೂರಿದ್ದರು.