Updated at Tue,25th Apr, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಐಐಎಸ್‌ಸಿ ದಾಳಿಯ ಆರೋಪಿ ಸಿಸಿಬಿ ವಶಕ್ಕೆ

ಬೆಂಗಳೂರು: ಹನ್ನೆರಡು ವರ್ಷಗಳ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ನಡೆದ ದಾಳಿ ಪ್ರಕರಣದ ಆರೋಪಿ ಲಷ್ಕರ್‌-ಎ-ತಯ್ಯಬಾ ಸಂಘಟನೆಯ ಶಂಕಿತ ಉಗ್ರ ಹಬೀಬ್‌ ಮಿಯಾ (37)ನನ್ನು ನಗರದ ಅಪರಾಧ ವಿಭಾಗ ಪೊಲೀಸರು ಶನಿವಾರ ತಡರಾತ್ರಿ ನಗರಕ್ಕೆ ಕರೆತಂದಿದ್ದು, ಹೆಚ್ಚಿನ ವಿಚಾರಣೆಗೆ ಮಾ. 27ರ ವರೆಗೆ ವಶಕ್ಕೆ ಪಡೆದಿದ್ದಾರೆ. ಐಐಎಸ್‌ಸಿ ದಾಳಿಕೋರ ಉಗ್ರ ಸಬಾವುದ್ದಿನ್‌ ಮತ್ತು ಸೈಯದ್‌ ಅನ್ಸಾರಿಯನ್ನು ಗಡಿ ದಾಟಿಸಿ ಬಾಂಗ್ಲಾದೇಶಕ್ಕೆ ನುಸುಳಲು ನೆರವಾಗಿದ್ದ ಜೋಗೇಂದ್ರನಗರದ ಹಬೀಬ್‌ ಮಿಯಾನನ್ನು ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಗುಜರಾತ್‌ನ ಭಯೋತ್ಪಾದನ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ತ್ರಿಪುರಾದ ಅಗರ್ತಲ ಬಳಿ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಾಡಿವಾರಂಟ್‌ ಮೂಲಕ ನಗರಕ್ಕೆ ಕರೆತರಲಾಗಿದೆ. ಮಿಯಾ ಉಗ್ರ ಸಂಘಟನೆಗಳಾದ ಲಷ್ಕರ್‌-ಎ-ತಯ್ಯಬಾ, ಹರ್ಕತ್‌-ಉಲ್‌-ಜಿಹಾದುಲ್‌-ಇಸ್ಲಾಮ್‌ ಸಹಿತ ಇತರ ಉಗ್ರ ಸಂಘಟನೆಗಳ ಜತೆ ನಂಟು ಹೊಂದಿದ್ದ. ಅಲ್ಲದೇ ಭಾರತದಲ್ಲಿ ಸ್ಲೀಪರ್‌ಸೆಲ್‌ ಆಗಿಯೂ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

2005ರ ಡಿ. 28ರಂದು ರಾತ್ರಿ 7 ಗಂಟೆ ಸುಮಾರಿಗೆ ಕಾರೊಂದರಲ್ಲಿ ಸೇನಾ ಸಮವಸ್ತ್ರದಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಭಾರತೀಯ ವಿಜ್ಞಾನ ಸಂಸ್ಥೆ ಆವರಣದ ಜೆ.ಎನ್‌. ಟಾಟಾ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಷಯ ವಿಜ್ಞಾನಿಗಳ ಮೇಲೆ ದಾಳಿ ನಡೆಸಿದ್ದರು. ಗ್ರೇನೆಡ್‌ ದಾಳಿ ನಡೆಸಿ ಬಳಿಕ ಎ.ಕೆ. 47 ಮೂಲಕ  ಗುಂಡಿನ ಮಳೆಗೈದಿದ್ದರು.  ಈ ವೇಳೆ ದಿಲ್ಲಿಯ ಭಾರತೀಯ ವಿಜ್ಞಾನ ಸಂಸ್ಥೆಯ ಗಣಿಶಾಸ್ತ್ರ ವಿಭಾಗದ ಪ್ರೊ| ಮನೀಷ್‌ ಚಂದ್ರ ಪುರಿ ಅವರಿಗೆ ಗುಂಡು ತಗಲಿ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿ  ಸಹಿತ 6 ಮಂದಿ ಗಾಯಗೊಂಡಿದ್ದರು. ಕೃತ್ಯವೆಸಗಿದ ಅನಂತರ ದಾಳಿಕೋರರು ಸೇನಾ ಸಮವಸ್ತ್ರದಲ್ಲೇ ಐಐಎಸ್‌ಸಿ ಕಾಂಪೌಂಡ್‌ ಹಾರಿ ಪರಾರಿಯಾಗಿದ್ದರು. ಈ ದಾಳಿಕೋರರಿಗೆ ಬಂಧಿತ ಹಬೀಬ್‌ ಮಿಯಾ ವಾಹನ, ಸೇನಾ ಸಮವಸ್ತ್ರ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಿ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ಮಾಡಿದ್ದ ಎಂದು ಮೂಲಗಳು ತಿಳಿಸಿವೆ.

ಐಐಎಸ್‌ಸಿ ದಾಳಿ ನಡೆದ ಬಳಿಕ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ಅಧಿಕಾರಗಳು ಶಂಕಿತ ಹಬೀಬ್‌ ಮಿಯಾ ಸಹಿತ ಎಂಟು ಮಂದಿಯ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.ಅದರಲ್ಲಿ ಆರೋಪಿಗಳೆಲ್ಲರೂ ನಾಪ್ತತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಶಂಕಿತ ಉಗ್ರ ಹಬೀಬ್‌ ಮಿಯಾನ ಚಲನವಲನಗಳ ಬಗ್ಗೆ ಹಲವು ತಿಂಗಳುಗಳಿಂದ ನಿಗಾವಹಿಸಲಾಗಿತ್ತು. ಮೊದಲಿಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನೆಲೆಸಿರುವ ಮಾಹಿತಿ ಬಂದಿದ್ದು, ಕೂಡಲೇ ಗುಜರಾತ್‌ನ ಎಟಿಎಸ್‌ಗೆ ಮಾಹಿತಿ ರವಾನಿಸಲಾಗಿತ್ತು. ಬಳಿಕ ತ್ರಿಪುರ ಮೂಲಕ ಬಾಂಗ್ಲಾದೇಶ ಪ್ರವೇಶಿಸಲು ಯತ್ನಿಸುತ್ತಿದ್ದ. ಈ ಮಾಹಿತಿ ಪಡೆದ ಉಗ್ರ ನಿಗ್ರಹ ಪಡೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಮಾ. 27ರ ವರೆಗೆ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ.     
-ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತರು


More News of your Interest

Trending videos

Back to Top