ಮಣಿನಾಲ್ಕೂರು: ಪುತ್ರನಿಂದ ತಾಯಿಗೆ ಹಲ್ಲೆ; ಆಸ್ಪತ್ರೆಗೆ ದಾಖಲು
Team Udayavani, Jul 21, 2022, 9:05 PM IST
ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಕೋಡಿಯಲ್ಲಿ ಪುತ್ರನೋರ್ವ ಕ್ಷುಲಕ ಕಾರಣಕ್ಕೆ ತಾಯಿಗೆ ಅಡುಗೆ ಪಾತ್ರೆಯಿಂದ ಹೊಡೆದು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಜು. 19ರಂದು ನಡೆದಿದ್ದು, ಗಾಯಗೊಂಡಿರುವ ವೃದ್ಧೆ ತಾಯಿ ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಡಿ ನಿವಾಸಿ ಜಾನಕಿ ಅವರು ಗಾಯಗೊಂಡಿರುವ ಮಹಿಳೆಯಾಗಿದ್ದು, ಆಕೆಗೆ ಪುತ್ರ ಮೋನಪ್ಪ ಹಲ್ಲೆ ನಡೆಸಿದ ಆರೋಪಿ. ಕೂಲಿ ಕೆಲಸ ಮಾಡಿಕೊಂಡಿರುವ ಮೋನಪ್ಪ ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದು, ಕಳೆದ ಕೆಲವು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದ.
ಜು. 19ರ ಸಂಜೆ 7ರ ಸುಮಾರಿಗೆ ಆರೋಪಿಯು ತಾಯಿಯನ್ನು ಅವಾಚ್ಯ ಶಬ್ದದಿಂದ ಬೈದು ಗೋಡೆಗೆ ತಲೆಯನ್ನು ಹೊಡೆದಿದ್ದಾನೆ. ಪಾತ್ರೆಯನ್ನು ತಂದು ಆಕೆಯ ತಲೆ, ಮುಖಕ್ಕೆ ಹೊಡೆದು ರಕ್ತ ಬರುವಂತೆ ಗಾಯಗೊಳಿಸಿದ್ದಾರೆ. ಈ ವೇಳೆ ಆಕೆಯ ಪುತ್ರಿ ಹಾಗೂ ಸೊಸೆ ಬೊಬ್ಬೆ ಹೊಡೆದಿದ್ದು, ಮನೆಯ ಪಕ್ಕದಲ್ಲಿರುವ ಮತ್ತೋರ್ವ ಪುತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.