9 ವರ್ಷ ಬಳಿಕ ಅಮೆರಿಕ ಫುಟ್ಬಾಲ್ ದಿಗ್ಗಜ ಜೈಲಿನಿಂದ ಬಿಡುಗಡೆ
Team Udayavani, Jul 22, 2017, 10:35 AM IST
ಲಾಸ್ ಏಂಜಲೀಸ್: ಕಳ್ಳತನದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅಮೆರಿಕದ ಫುಟ್ಬಾಲ್ ದಿಗ್ಗಜ ಒ.ಜೆ.ಸಿಂಪ್ಸನ್ ಅಂತೂ ಬಂಧಮುಕ್ತಗೊಳ್ಳುವುದಕ್ಕೆ ವೇದಿಕೆ ಸಿದ್ಧವಾಗಿದೆ. 9 ವರ್ಷಗಳ ಕಾಲ ಜೈಲಿನಲ್ಲಿದ್ದ 70 ವರ್ಷದ ಸಿಂಪ್ಸನ್ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದ್ದಾರೆ.
ಇದರಿಂದ ಸ್ವತಃ ಸಿಂಪ್ಸನ್ ಸಂಭ್ರಮಗೊಂಡಿದ್ದಾರೆ. 1995ರಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನ ಹತ್ಯೆ ಪ್ರಕರಣದಲ್ಲಿ ಸಿಂಪ್ಸನ್ ಆರೋಪಿಯಾಗಿದ್ದರು. ಇದು ದೇಶಾದ್ಯಂತ ಚರ್ಚೆಗೊಳಗಾಗಿತ್ತು. ಶತಮಾನದ ವಿಚಾರಣೆ ಎಂದೇ ಕರೆಸಿಕೊಂಡಿದ್ದ ಈ ಪ್ರಕರಣದಲ್ಲಿ ಸಿಂಪ್ಸನ್ ಶಿಕ್ಷೆಯಿಂದ ಪಾರಾಗಿದ್ದರು. ಆದರೆ ಶಸ್ತ್ರಾಸ್ತ್ರ ಬಳಸಿ ಲೂಟಿ ಹೊಡೆದ ಪ್ರಕರಣದಲ್ಲಿ 2008ರಲ್ಲಿ ಜೈಲು ಪಾಲಾದರು. ಇಬ್ಬರು ಕ್ರೀಡಾ ಪರಿಕರ ಮಾರಾಟಗಾರರನ್ನು ದೋಚಿದ ಪ್ರಕರಣಕ್ಕೆ ಅವರು ಶಿಕ್ಷೆ ಅನುಭವಿಸಿದ್ದಾರೆ. ಆದರೆ ತಾನು ತನ್ನ ಕ್ರೀಡಾ ಪರಿಕರ ಹಿಂಪಡೆಯಲು ಹೋಗಿದ್ದೆ ಅಷ್ಟೇ, ಅದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಯಿತು ಎಂದು ಸಿಂಪ್ಸನ್ ನ್ಯಾಯಾಲಯದಲ್ಲಿ ವಾದಿಸಿದ್ದರು.