ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೆಲಕಾಲ WhatsApp ಕ್ರ್ಯಾಶ್
Team Udayavani, Nov 3, 2017, 2:42 PM IST
ವಾಷಿಂಗ್ಟನ್: ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಇರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಇಂದು ಮಧ್ಯಾಹ್ನ ವಾಟ್ಸಪ್ ಮೂಲಕ ಸಂದೇಶ ಕಳುಹಿಸಲು ಸಾಧ್ಯವಾಗದಿರುವುದು ಗಮನಕ್ಕೆ ಬಂದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಸುಮಾರು 40 ನಿಮಿಷಗಳ ಕಾಲ ಕ್ರ್ಯಾಶ್ ಆಗಿದ್ದು, ಬಳಿಕ ವಾಟ್ಸಪ್ ಸರ್ವೀಸ್ ಕಾರ್ಯಾರಂಭಿಸಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.
ತಮ್ಮ ವಾಟ್ಸಪ್ ನಿಂದ ಸಂದೇಶ ಹೋಗದಿರುವುದನ್ನು ಕಂಡ ಕೆಲವರು ತಮ್ಮ ಗೆಳೆಯರ ಬಳಿ ಪರೀಕ್ಷಿಸಿದ್ದಾರೆ. ಆದರೆ ಗೆಳೆಯರ ವಾಟ್ಸಪ್ ನಿಂದಲೂ ಸಂದೇಶ ಹೋಗಿಲ್ಲ. ಡೌನ್ ಡಿಟೆಕ್ಟರ್ ಪ್ರಕಾರ, ಯುರೋಪನಾದ್ಯಂತ ಸಮಸ್ಯೆ ತಲೆದೋರಿರುವುದಾಗಿ ಹೇಳಿದೆ.
ಆದರೆ ಭಾರತ, ಸಿಂಗಾಪುರ್, ಮೋಝಾಂಬಿಕ್, ರಷ್ಯಾ, ವಿಯೆಟ್ನಾಮ್, ಇರಾಕ್ ಸೇರಿದಂತೆ ಜಗತ್ತಿನಾದ್ಯಂತ ವಾಟ್ಸಪ್ ಸೇವೆ ಸ್ಥಗಿತಗೊಂಡಿದೆ. ಇದರಿಂದಾಗಿ ಮೊಬೈಲ್ ಗ್ರಾಹಕರು ಸಂದೇಶಕ್ಕಾಗಿ ಫೇಸ್ ಬುಕ್ ಮೆಸೆಂಜರ್ ಮೊರೆ ಹೋಗಿದ್ದಾರೆ.