ಟ್ರಂಪ್ ಮಾತಿಗೆ ಉತ್ತರ ಕೊರಿಯಾ ತಿರುಗೇಟು
Team Udayavani, Nov 6, 2017, 6:15 AM IST
ಸಿಯೋಲ್: ಪರಮಾಣು ಕ್ಷಿಪಣಿಗಳ ವಿಚಾರದಲ್ಲಿ ಉತ್ತರಕೊರಿಯಾ ಹಾಗೂ ಅಮೆರಿಕ ನಡುವಿನ ಕಿತ್ತಾಟ ಮುಂದುವರಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಷ್ಯಾ ರಾಷ್ಟ್ರಗಳ ಪ್ರವಾಸ ಆರಂಭಿಸುತ್ತಿದ್ದಂತೆ ಅತ್ತ ಉತ್ತರ ಕೊರಿಯಾ ಅವರಿಗೆ ಎಚ್ಚರಿಕೆಯೊಂದನ್ನು ನೀಡಿದೆ. “ಒಂದೊಮ್ಮೆ ಪ್ಯಾಂಗ್ಯಾಂಗ್ ಪರಮಾಣು ವಿಚಾರದಲ್ಲಿ ಬೇಜವಾಬ್ದಾರಿತನದಿಂದ ಹೇಳಿಕೆಗಳನ್ನು ನೀಡಿದ್ದೇ ಆದರೆ ದಯೆ ಇಲ್ಲದ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ’ ಎಂದಿದೆ.
“ಸ್ವತಃ ಅಮೆರಿಕನ್ನರೇ ಟ್ರಂಪ್ ಅವರು ದಾಳಿ ಆರಂಭಿಸಲೆಂದು ಬಯಸುತ್ತಿದ್ದಾರೆ’ ಎಂದು ಆಡಳಿತಾರೂಢ ಪಕ್ಷದ ಮುಖವಾಣಿ ಪತ್ರಿಕೆಯ ಮುಖ್ಯಸ್ಥ ರಾಡೊಂಗ್ ಸಿನ್ಮನ್ ಹೇಳಿದ್ದಾರೆ. ಅಲ್ಲದೆ, ಟ್ರಂಪ್ ಆಧ್ಯಾತ್ಮಿಕವಾಗಿ ಸ್ಥಿರತೆ ಹೊಂದಿಲ್ಲದ ಕಾರಣ ಅಮೆರಿಕ ಪರಮಾಣು ಆಪತ್ತು ಎದುರಿಸಬೇಕಾಗಿಯೂ ಬರಬಹುದು ಎಂದಿದ್ದಾರೆ.
ಟ್ರಂಪ್ ಭಾನುವಾರ ಟೋಕಿಯೊಗೆ ಆಗಮಿಸಿದ ವೇಳೆ ಉತ್ತರ ಕೊರಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದರು. ಯಾವ ಸರ್ವಾಧಿಕಾರಿಯೂ ಅಮೆರಿಕ ಬಗ್ಗೆ ಕೀಳುಮಟ್ಟದಲ್ಲಿ ಆಡಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದರು.