ತೇಲಿ ಬಂದ ಹಾಯಿದೋಣಿಯ ಜೊತೆಯಾಗಿ


Team Udayavani, Jun 22, 2018, 6:55 AM IST

hayee-doni.jpg

ಒಂದು ಬಿರು ಮಳೆಯ ಸಂಜೆಯ ಕ್ಷಣದಲ್ಲಿ ಹೇಗಾದರೂ ಮಾಡಿ ಬೆಂಗಳೂರಿನ ಸಿಟಿ ಬಸ್ಸೊಂದರೊಳಗೆ ಸೇರಿಕೊಂಡು ಬಿಡಬೇಕು. ಓರೆ ಕೋರೆಯ ರಸ್ತೆಗಳ ಮೇಲೆ ಹಿರಿ-ಕಿರಿಯರೆಂಬ ಪಕ್ಷಪಾತವಿಲ್ಲದೇ ಅತ್ಯಂತ ಸ್ವೋಪಜ್ಞತೆಯಿಂದ ಚಲಿಸುತ್ತಾ, ನಿಲ್ದಾಣವಲ್ಲದ ನಿಲ್ದಾಣಗಳಿಂದಲೂ ಅದರೆಡೆಗೆ ಓಡಿ ಬರುವವರ ಮುಂದೆ ಅಹಂಕಾರ ತೋರದೇ ನಿಲ್ಲುತ್ತಾ, ಅವರನ್ನೆಲ್ಲಾ ಒಳ ಸೆಳೆದುಕೊಂಡು ಉಪಕರಿಸುತ್ತಾ ಸಾಗುವ ಅದು ಮುಂದಕ್ಕೆ ಚಲಿಸಿದಂತೆಲ್ಲಾ ಅಪ್ಪಟ ಮಾನವೀಯ ಘಳಿಗೆಗಳ ವೇದಿಕೆ ಯಾಗಿ ರೂಪುಗೊಳ್ಳುವುದನ್ನು ನೋಡುವುದೇ ಒಂದು ಸೊಗಸು. ಉಳಿದ ಋತುಗಳೆಲ್ಲ ನಮ್ಮಲ್ಲಿ ಜಾಗೃತಗೊಳಿಸುವಂತಹ ಪೂರ್ವಸಿದ್ಧತೆಯ ಭಾವಗಳನ್ನು ನಿರಾಕರಿಸುತ್ತಲೇ ಅತ್ಯಂತ ಸ್ವಾಭಾವಿಕ ಪ್ರತಿಕ್ರಿಯೆಯನ್ನು ಪ್ರೇರೇಪಿಸುವ ಮಳೆಯೆಂಬ ಮಾಧುರ್ಯದ ಜೊತೆಗೆ ಅಷ್ಟೇ ಸಹಜವಾಗಿ ಆಪ್ತವಾಗುವುದು ಮಳೆಗಾಲದ ಸಂಜೆಯ ಆ ಸಿಟಿ ಬಸ್ಸಿನ ಸಂಚಾರ!

ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ಇಳಿದುಬಂದದ್ದೇ ಬಂತು. ಮಳೆಯ ಮಾಯೆ ಇಲ್ಲೊಂದು ದೈವಚಿತ್ತದ ದೃಶ್ಯವನ್ನು ಸೃಷ್ಟಿಸಿದೆ. ತೆಳ್ಳಗೆ ಒಂದು ಕಡೆ ಹರಿದು ಹೋಗಿರುವ ಪುಟ್ಟ ಕೊಡೆಯೊಂದನ್ನು ಹಿಡಿದು ತನ್ನನ್ನೂ ತನ್ನ ಭುಜದ ಮೇಲೆ ನಿಲ್ಲಲು ಸತಾಯಿಸುತ್ತಿರುವ ಅಗ್ಗದ ವ್ಯಾನಿಟಿ ಬ್ಯಾಗನ್ನೂ ರಕ್ಷಿಸಿಕೊಳ್ಳಲು ಹೆಣಗುತ್ತಿರುವ ಆ ಗಾರ್ಮೆಂಟ್‌ ಕೆಲಸದ ಯುವತಿ, ಊಟದ ಡಬ್ಬಿ ಸುತ್ತಿಟ್ಟುಕೊಂಡು ತಂದಿದ್ದ ಪ್ಲಾಸ್ಟಿಕ್‌ ಕವರ್‌ನ್ನು ಈಗ ತಲೆಯ ಮೇಲಿನ ಟೋಪಿಯಾಗಿ ಪರಿವರ್ತಿಸಿಕೊಂಡಿರುವ ಆ ನಡು ವಯಸ್ಕ ಕಾರ್ಮಿಕ, ತೊಯ್ದು ಕೆಟ್ಟುಹೋಗಿಬಿಟ್ಟರೆ ನಾಳಿನ ಊಟಕ್ಕೆ ಗತಿಯೇನೆಂಬ ಆತಂಕದಿಂದಲೇ ಡ್ರಿಲ್ಲಿಂಗ್‌ ಮೆಷೀನ್‌ನ ಟೂಲ್‌ ಕಿಟ್‌ನ್ನು ಅಕ್ಕಿ ಚೀಲದೊಳಗೆ ತುರುಕಿ ತಬ್ಬಿ ಹಿಡಿದು ನಿಲ್ಲಲು ಹೆಣಗುತ್ತಿರುವ ಬಡಗಿ, ತನ್ನ ಗಿರವಿ ಅಂಗಡಿ ಮುಚ್ಚಿ ಬಂದು ಜೇಬಿನಲ್ಲಿನ ಹಣದ ಬಗ್ಗೆಯೇ ಅಲೋಚಿಸಿಕೊಂಡು ನಿಂತ ಆ ಮಾರ್ವಾಡಿ, ಇಲ್ಲೊಬ್ಬಳು ತುಟಿಯ ಮೇಲೆ ಹಚ್ಚಿಕೊಂಡಿದ್ದ ಲಿಪ್‌ಸ್ಟಿಕ್‌ ಕರಗಿಸಿಕೊಂಡು ನಿಂತ ಅಮ್ಮ, ಮಳೆಯ ನೀರಿಗೆ ತೋಯ್ದ ಅವಳ ಸೆರಗು ಹಿಡಿದು ನಡುಗುತ್ತಿರುವ ಅವಳ ಮಗು, ಹಿಂದಿನ ಬಾಗಿಲಲ್ಲಿ ಹತ್ತಿ ನೆಂದು ತೊಪ್ಪೆಯಾಗಿ ಬೆಪ್ಪು ತಕ್ಕಡಿಯಂತೆ ದೂರದಲ್ಲಿ ನಿಂತ ಅದರ ಅಪ್ಪ ಎಲ್ಲರೂ ಸಿಟಿ ಬಸ್ಸೆಂಬ ಈ ಗೃಹೀತ ಭಾವದಲ್ಲಿ ಒಂದು ಕ್ಷಣ ಬೆಚ್ಚಗೆ ಅವಿತುಕೊಂಡಿದ್ದಾರೆ. ಅವಸರದ ಉಬ್ಬಸದಿಂದ ಒಳಕ್ಕೆ ನುಗ್ಗುವಾಗ ಆ ಯುವತಿಯ ಕೊಡೆಯ ಮೂತಿ ಅಲ್ಲೊಬ್ಬ ಮುದುಕನ ಸ್ವಾಟೆ ತಿವಿದಿದೆ. ಸ್ಸಾರಿ ಎಂಬ ಪದಕ್ಕೆ ಈಗ ಸಪೂರ ತೇಜಸ್ಸು. ಆ ಬಡಗಿಯ ಟೂಲ್‌ ಕಿಟ್‌ನ ಭಾರ ಮತ್ತೂಬ್ಬನ ಕಾಲ ಮೇಲೆ. ನೋವಿಗೆ ಮುನಿಸುಗೊಂಡರೂ ಹೊರಗಿನ ಎಗ್ಗಿಲ್ಲದ ಆರ್ಭಟದ ಮಳೆಯ ಮುಂದೆ ಜಗಳದ ಮಾತನಾಡುವ ಮನಸ್ಸಾಗುವುದಿಲ್ಲ. ಎಲ್ಲರಿಗೂ ಕ್ಷಮಿಸುವ ಆತುರ.

ಇಡೀ ಬಸ್ಸಿನಲ್ಲಿ ಒಂದರ ಮೇಲೊಂದು ವಾಲಿಕೊಂಡು ಒಂದಕ್ಕೊಂದರ ಸಂಕಟಗಳನ್ನು ಸಮಾಧಾನಿಸುವಂತೆ ನಿಂತಿರುವ ಎಲ್ಲ ದೇಹಗಳ ಮೇಲೆಯೂ ಈಗ ಒದ್ದೆಯೆಂಬುದೇ ಸಮಾನ ತತ್ವ. ಒದ್ದೆಯಾಗದ ಮೊದಲೇ ಬೆಚ್ಚಗೆ ಸೀಟು ಹಿಡಿದು ನಿದ್ದೆಗೆ ಜಾರಿದಂತೆ ನಟಿಸುತ್ತಿರುವವರು “ಅಲ್ಪ’ ಸಂಖ್ಯಾತರು. ಅವರ ತಲೆಗಳ ಮೇಲೆ ಅವರಿಗರಿವಿಲ್ಲದೇ ತಮ್ಮ ಬೆವರ ಕೋಶಗಳು ಉತ್ಪಾದಿಸಿದ ವಿಶಿಷ್ಟ ಕಂಪಿನ ಮಳೆಹನಿಯ ತರ್ಪಣ ನೀಡುತ್ತಾ ಅವ್ಯಕ್ತವಾಗಿ ಅಸಹನೆಯನ್ನು ನೀಗಿಕೊಳ್ಳುತ್ತಿರುವವರು ನಿಂತ ನೊಂದವರು. ಗ್ಯಾಸು ಬಾಗಿಲುಗಳು ಉಸ್ಸೂ ಎಂದು ಬಡಿದು
ಕೊಂಡು ಮುಚ್ಚಿಕೊಳ್ಳಲು ಹವಣಿಸುತ್ತಿವೆ. ಹಾಗಾಗುವ ಮುನ್ನವೇ ಓಡಿ ಬಂದು ಒಳಸೇರಿಕೊಳ್ಳುವ ಆತುರ ತೋರುತ್ತಿರುವ ನೆಂದ  ಆಸಾಮಿಗಳನ್ನು ಬರಸೆಳೆದುಕೊಳ್ಳಲು ಬಸ್ಸಿನೊಳಗಿಂದಲೇ ನೆಂದ ಹಸ್ತಗಳು ಹೊರಚಾಚುತ್ತಿವೆ. ಓಡಿ ಒಳಬಂದ ಆ ಇಬ್ಬರು ಯುವಕರು ನುಗ್ಗಾಟದ ನಡುವೆಯೇ ತಮ್ಮ ಕ್ರಾಪುಗಳನ್ನು ತೀಡುತ್ತಾ ನೆಂದು ಹೋದ ತಮ್ಮದೇ ಕಾಲೇಜು ಪುಸ್ತಕಗಳನ್ನು ನೋಡಿಕೊಂಡು ಮುಸಿ ನಗುತ್ತಿದ್ದಾರೆ. ಅವರು ಇಲ್ಲಿ ಬೇಯ್ದು ಬೆಚ್ಚಗಾಗಿ ಈ ಸುಯೋಗದ ಭಾಗವಾಗಿ ನಿಧಾನ  ಪಾಂತರಗೊಳ್ಳುವುದನ್ನು ನೋಡುವುದೇ ಇನ್ನೊಂದು ಸೊಗಸು.

ಟಪ್ಪಟಪನೇ ಬಸ್ಸಿನ ಮೇಲೆ ಬೀಳುತ್ತಿರುವ ಜೋರು ಮಳೆಯ ಹನಿಗಳು ಕಿಟಕಿಗಳೆಲ್ಲವನ್ನೂ ಬಂದು ಮಾಡಿಕೊಂಡು ಒಳಗಿರುವ ಪ್ರತಿಯೊಂದು ಜೀವಕ್ಕೂ ಪದಗಳು ಸೋಕದ ಸುರಕ್ಷತೆಯ ಭಾವವನ್ನು ಪ್ರಾಪ್ತ ಮಾಡಿವೆ. ಉಸಿರ ಬಿಸಿಗಳು ಕಿಟಕಿ ಗ್ಲಾಸುಗಳ ಮೇಲೆ ಕುಳಿತು ಅವನ್ನು ಕೊಂಚ ಮಬ್ಟಾಗಿಸಿವೆ. ಮುಂದೆ ಬಸ್ಸೊಂದು ಕೆಟ್ಟು ನಿಂತಿದೆಯಂತೆ. ಅದಕ್ಕೇ ನಮ್ಮ ಬಸ್ಸು ಚಲಿಸುತ್ತಲೇ ಇಲ್ಲ ಎಂಬ ಸತ್ಯ ಗುಲ್ಲಾದ ಮೇಲಂತೂ ಹೊರಗೆ ಬೀಳುತ್ತಿರುವ ಮಳೆಯ ಆರ್ಭಟಕ್ಕೆ ಇನ್ನಷ್ಟು ಮೆರಗು ನೋಡಿ. ಇನ್ನೂ ಎಷ್ಟು ಹೊತ್ತೋ! ಅಲ್ಲಿ ಯಾರಿಗೂ ತಿಳಿದಿಲ್ಲ. ನಿಂತಾದರೂ
ಸರಿಯೇ ನಿಧಾನವಾಗಿಯಾದರೂ ಮನೆಯ ಕಡೆ ತೆರಳುತ್ತಿದ್ದೇವಲ್ಲಾ ಎಂಬ ಸೊಬಗಿನ ಸಮಾಧಾನವಷ್ಟೇ ಅಲ್ಲಿರುವವ ರೆಲ್ಲರಿಗೂ ಆಪ್ತ ಆಸರೆ. ಇನ್ನು ನನ್ನಿಂದಾಗದು ಎಂದು ಇಗ್ನಿಶನ್‌ ಆಫ್ ಮಾಡಿದ ಚಾಲಕನ ಇಂಧನ ಉಳಿತಾಯದ ಕ್ಷಮತೆ ಒಂದೇ ಕ್ಷಣದಲ್ಲಿ ಅಲ್ಲಿರುವ ಪ್ರಯಾಣಿಕರೆಲ್ಲರ ಹೃದಯಗಳ ಅಗ್ರೆಷನ್‌ನ್ನು ಆನ್‌ ಮಾಡಿಬಿಟ್ಟಿವೆ. ಸಾಮಾಜಿಕ ಸಂಕೋಚಗಳಾಗಿ ಹುದುಗಿಯೇ ಹೋಗಿದ್ದ ಆಪ್ತ ಆತಂಕಗಳ ಅನುಭೂತಿ ಗಳು ಒಂದೇ ಗುಕ್ಕಿನಲ್ಲಿ ಮುನ್ನೆಲೆಗೆ ಬಂದಿವೆ.

“ಲೇ, ನೀನು ಕೊಡೋ ಒಂದು ಸಾವಿರ ಬಾಡಿಗೇಗೆ ಮನೆ ಸೋರ್ತದೆ, ರಿಪೇರಿ ಮಾಡು ಅಂತ ತಲೆ ತಿಂತೀಯಾ? ಆಗಲ್ಲಾಂದ್ರೆ ಬಿಟ್ಹೋಗು,. ಇಲ್ಲಾಂದ್ರೆ ಅಲ್ಲಿ ಸೋರಲ್ಲಾ ಅಂತಿದ್ಯಲ್ಲಾ ಅಡ್ಗೆ ಮನೇಲಿ ಸುಮ್ನೆ ಮಲಕ್ಕೋ’ ಆಫೀಸಿನ ಗಡಿಬಿಡಿಗಳನ್ನೆಲ್ಲಾ ಮುಗಿಸಿಕೊಂಡ ಮೇಲೆ ಅತ್ತ ಮನೆಗೂ ತಲುಪದ ಇತ್ತ ಕಛೇರಿಯಲ್ಲೂ ಇರದ ಇಂತಹ ತ್ರಿಶಂಕು ಸ್ವರ್ಗ ಕ್ಷಣಕ್ಕೆ ಮಾತ್ರ ಇಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯದ ಶಕ್ತಿಯೆಂದು ಫೋನು ಮಾಡಿ ಗರಿಷ್ಠ ಕಂಠದಲ್ಲಿ ಕೂಗುತ್ತಿರುವ ಬಾಡಿಗೆ ಮನೆಯ ಓನರ್‌ ಇವನು.

ದೂರದಲ್ಲೆಲ್ಲೋ ದೀನನಾಗಿ ಬಾಗಿಲಿನಲ್ಲಿ ನಿಂತ ಬಾಡಿಗೆದಾರನ ಕಾಣದ ಅಸಹಾಯಕ ಮುಖಚಿತ್ರ ಈಗ ನಮ್ಮ ಮನದ ಮೇಲೆ. ಅವನಿಗೆ ಮೆಲ್ಲನೆ ಮಾತನಾಡಲು ಹೇಳುವ ಆಲೋಚನೆ ಯಾರಿಗೂ ಇದ್ದಂತಿಲ್ಲ. ಇವನೊಬ್ಬ ಬಾಡಿಗೆದಾರನಿರಬಹುದು. “ಹಾಕ್ತೀನಿ ತಗೋಳ್ಳಿ ಸಾರ್‌, ನಾಳೀಕೆ ನಿಮ್ಮಕೌಂಟಿಗೆ’ ಎಂದು ಹೇಳಿ ಆ ಗೊಂದಲದಲ್ಲಿ ನಿಂತೇ ತನ್ನ ಮೊಬೈಲಿನ ವಾಟ್ಸಾಪ್‌ ಗ್ರೂಪಿನಲ್ಲೊಂದು ಎಮೋಜಿಯ ಕಮೆಂಟು  ಜಡಾಯಿಸಿದ್ದಾನೆ.

“ಇಲ್ಲಿ ನೋಡಿದ್ರೆ ಹಿಂಗೆ. ಊರಾಗೆ ಮಳೇನೇ ಇಲ್ವಂತೆ. ಬೇಸಾಯ ನೋಡಿಕೊಳ್ಳೋಕೂ ಆಗ್ತಿಲ್ಲ. ಏನು ಬದುಕೋದು’ ಎಂದು ಇನ್ನೊಂದು ಕಡೆ ಸಣ್ಣದಾಗಿ ಸುರುವಾಗುವ ಆತ್ಮ ಸಂಕಟ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿಯ ಕೊರಳುಬ್ಬಿಸಿಬಿಟ್ಟಿದೆ. ಅವನು ಜೋರಾಗಿ “ಈ ಬೆಂಗ್ಳೂರ್‌ ಮೇಲೆ ಯಾರಾದ್ರೂ ಬಾಂಬ್‌ ಹಾಕಿ ಬಿಡಬಾರ್ದಾ. ಇದೇ ಟ್ರಾಫಿಕ್ಕು, ಇದೇ ಸಾಲದ ಬದುಕು ಸಾಕಾಗೋಗಿದೆ’ ಅಂದುಬಿಟ್ಟಿದ್ದಾನೆ. ಅಲ್ಲೆಲ್ಲಿಂದಲೋ ಅಪರಿಚಿತ ವ್ಯಕ್ತಿಯೊಬ್ಬ “ನಿಜ ಹೇಳ್ಬಿಟ್ಟೆ ಬಿಡು. ಇದ್ದೇನ್ಮಾಡ್ಬೇಕು? ಮುಗಿಸಿಕೊಂಡು ಅತ್ಲಾಗೆ ಹೋಗಿಬಿಡಬಹುದು’ ಎಂದು ಅಷ್ಟೇ ಗಟ್ಟಿಯಾಗಿ
ದನಿಗೂಡಿಸಿದ್ದಾನೆ. ಅವರ ಅಪ್ಪಟ ಜೀವಂತಿಕೆಯ ಆ ಹತಾಶೆಗಳಿಗೆ ಇಡೀ ಬಸ್ಸು ಏಕೋಪಾದಿಯ ಮೌನ ರೋಮಾಂಚದ ಬಿಸಿಯನ್ನು ಅನುಭವಿಸಿದೆ. ಅಲ್ಲಿ ತಟ್ಟನೇ ಉದ್ಭವಿಸಿದ ಸಂಕಟದ ಸ್ನಿಗ್ಧ ಸೌಂದರ್ಯವೊಂದು ನೆರೆದ ಎಲ್ಲಾ ಅಪರಿಚಿತರುಗಳನ್ನು ಅರೆಗಳಿಗೆಯ ಆಪ್ತರನ್ನಾಗಿಸಿ ಮನಸೂರೆಗೊಳಿಸಿದೆ.

ಅಲ್ಲೊಬ್ಬ, ಇಲ್ಲೊಬ್ಬ – ಸಮಾಜ ಸೃಷ್ಟಿಸಿದ ಜಾತಿಗಳು- ಧರ್ಮಗಳೆಲ್ಲದರ ಜನವೂ ಅಲ್ಲಿ ಸೇರಿರಬಹುದು. ಬೆಳ್ಳಗಿನ, ತೆಳ್ಳಗಿನ, ಕಪ್ಪಗಿನ, ಕೆಂಪಗಿನ ವ್ಯಕ್ತಿಗಳೆಲ್ಲರೂ ಆ ವೇದಿಕೆಯ ಮೇಲೆ ಒಟ್ಟಾಗಿದ್ದಾರೆ. ಎಲ್ಲರ ದಾರಿಗಳು, ತಿರುವುಗಳು ಎಲ್ಲವೂ ಬೇರೆಯಾದರೂ “ಬತ್ತಿ ಹೋಗಲಿ ಗಂಗೆಯೊಂದುಸಲ ಬಿರಿದು’ ಎಂಬಂತೆ ಒಕ್ಕೊರಲಿನಿಂದ ಒಮ್ಮೆಗೇ ಸಂಧಿಸಿದ ಜೀವಂತ ಎಳೆಗಳಾಗಿ ಅವರೆಲ್ಲರೂ ಕಾಣುತ್ತಿದ್ದಾರೆ. ಆ ಬಸ್ಸಿನ ವೇಗ ಹಾಗೂ ಅವರು ಜೀವಿಸುತ್ತಿರುವ ಬದುಕಿನ ಗತಿಗಳ ನಡುವೆ ವಿಶಿಷ್ಟವಾದೊಂದು ಸಮನ್ವಯವೊಂದು ಉದಯವಾಗುತ್ತಲೇ ಅವರ ದುಡಿಮೆಯ ಆತಂಕಗಳ ಜೊತೆಗೇ ಸಾಲವನ್ನು, ಕಲಹವನ್ನು, ನಿದ್ರೆ-ಎಚ್ಚರಗಳನ್ನು ಮೀರಿದ ಆಪ್ತ ಅನುಭೂತಿಯೊಂದು ಅಲ್ಲಿ ಆ ಕ್ಷಣಕ್ಕೆ ಪ್ರಾಪ್ತವಾಗುತ್ತಿದೆ.

ಜಗದಲ್ಲಿ ಸಂತುಷ್ಟವೆನಿಸಿಕೊಂಡದ್ದೆಲ್ಲವೂ ಒಂದೇ, ಸಂಕಟಗಳು ಮಾತ್ರ ಬೇರೆಯೆಂಬ ಒಟ್ಟು ಅರ್ಥ ಬಿಂಬಿಸುವ ಖ್ಯಾತ ಹೇಳಿಕೆಯೊಂದು ಅರೆ ಕ್ಷಣ ಅನರ್ಥಗೊಂಡಿದ್ದರೆ ಸಂಕಟಕ್ಕಷ್ಟೇ ನಮ್ಮ ನಡುವೆ ಸಮಾನತೆಗಳನ್ನು, ಮಾನವೀಯ ತುಡಿತಗಳನ್ನು ಉಳಿಸಬಲ್ಲ ಕ್ಷಮತೆಯೆಂದು ಕ್ಷಣಕಾಲ ಅಲ್ಲಿ ಸಾಬೀತಾಗಿದೆ. ಸ್ವಲ್ಪ ಹೊತ್ತು. ಹೊಸ ಸ್ಟಾಪು. ಕಡಲೊಳಗೆ ಇಳಿದು ಹೊರಟೇ ಹೋದವರ ಭಾವ ಕೋಶಕ್ಕೆ ಹೇಳದೇ ಸಣ್ಣದೊಂದು ಹುರುಪು ತುಂಬಿ ಕಳಿಸಿ ಮುಂದಕ್ಕೆ ಚಲಿಸುತ್ತಿರುವ ಅದೇ ಬಸ್ಸು ಮತ್ತೆ ಓಡುತ್ತಿರುವುದು ಟಾರು ಕಿತ್ತುಹೋಗಿ ದೊಡ್ಡ ಗುಂಡಿಗಳಾಗಿರುವ ಅದೇ ರಸ್ತೆಗಳ ಮೇಲೆ. ತನ್ನದೇ ಗಾಲಿಗಳಿಗಂಟಿಗೊಂಡ ರಸ್ತೆಯುದ್ದಕ್ಕೂ ಚಿಮ್ಮುತ್ತಿರುವುದು ಒತ್ತಡ ತಾಳಲಾರದ ನೀರಿನ
ಉಗ್ಗೆಗಳು. ಮಾತನಾಡುತ್ತಿದ್ದವರು ಇಳಿದು ಹೋದ ಮೇಲೆ ತಮ್ಮ ಸ್ಟಾಪು ಕಾಯುತ್ತಾ ಸುಮ್ಮನೇ ನಿಂತ ಉಳಿದವರ ಮನಸ್ಸುಗಳಲ್ಲಿ ಮುಂದುವರೆದಿರುವುದು ಮತ್ತೆ ಮಳೆ ಹೊಯ್ದಾಗ ದಕ್ಕಿದ ಸುಖ-ದುಃಖಗಳ, ತೀರದ ಬಯಕೆಗಳ ಭಯಗಳು!

ಖುಷಿಯೆಂದರೆ ಕೆಲಹೊತ್ತಿನ ಮುನ್ನ ಅವೆಲ್ಲವೂ ವಿಭಿನ್ನ ಆತಂಕಗಳ ನೆಪದಲ್ಲಿ ಎಲ್ಲರನ್ನೂ ಅರೆಕ್ಷಣ ಒಟ್ಟು ಮಾಡಿದ ಆಪ್ತ ಆನಂದಗಳು! ಇಲ್ಲೇ, ಪಕ್ಕದಲ್ಲಿಯೇ ಕುಂಟುತ್ತಾ ಸಾಗುತ್ತಿದೆ ಏಸಿ ಕಾರು. ಅದರೊಳಗೆ ಬಿಡದೇ ಸುರಿದ ಮಳೆಯ ಆರ್ಭಟಕ್ಕೆ ಅನವರತ ಹತಾಶನಾಗಿ, ಒಂಟಿಯಾಗಿ, ಅನ್ಯಮನಸ್ಕನಾಗಿ ಕುಳಿತಿದ್ದಾನೆ ಅದರ ಮಾಲೀಕ. ಕೊಳೆಯ ತೊಳೆವವರು ಇಲ್ಲ ಬಾ, ಬೇರೆ ಶಕ್ತಿಗಳು ಹೊಲ್ಲ ಬಾ, ಸತ್ತ ಜನರನ್ನು ಎತ್ತ ಬಾ ಎಂಬ ಬೇಂದ್ರೆ ಪದ್ಯ ಇಲ್ಲೆಲ್ಲಾ ಸೋಕಿ ಮರೆಯಾಗುತ್ತಿದೆ.

*ಫ‌ಣಿಕುಮಾರ್‌ ಟಿ.ಎಸ್‌.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.