ನಮೋ ಶಿವಕುಮಾರಸ್ವಾಮಿ, ಶರಣಂ ಗಚ್ಛಾಮಿ!


Team Udayavani, Jan 24, 2019, 12:30 AM IST

b-13.jpg

ಮಠಗಳೆಂದರೆ ಬೆಳಗಿನ ಜಾವಕ್ಕೇ ಶುರುವಾಗುತ್ತದೆ ನಗಾರಿ, ಡೋಲುಗಳ ಅಬ್ಬರ! ಅತಿರೇಕದ ಆಡಂಬರ ಪೂಜೆಗಳು, ಆಟಾಟೋಪಗಳು, ದೇವರನ್ನು ಮೈಮೇಲೆ ಆಹ್ವಾನಿಸಿಕೊಳ್ಳುವ ಶಿಷ್ಯ ಕೋಟಿಯ ನೂರೆಂಟು ಅವತಾರಗಳು, ನೂರಾರು ಗಂಟೆ ಜಾಗಟೆಗಳ ಕಿವಿಗಡಚಿಕ್ಕುವ ಆರ್ಭಟ, ಲಕ್ಷಾಂತರ ರೂಪಾಯಿ ದುಂದು ಮಾಡುವ ಅಲಂಕಾರಗಳು, ಅಡ್ಡಪಲ್ಲಕ್ಕಿ ಉತ್ಸವಗಳು… ಆದರೆ ಸಿದ್ಧಗಂಗಾ ಮಠ ಇದೆಲ್ಲಕ್ಕೂ ಹೊರತಾಗಿತ್ತು.

ಸಿದ್ಧಗಂಗೆಯ ಐಸಿರಿ, “ತಾನಾಗಬಲ್ಲನಿಲ್ಲಿ ನರನು ನಾರಾಯಣನಿಲ್ಲಿ’ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ನರಹರಿ, ಸಿದ್ಧಗಂಗೆಯ ಸಾಧನೆಯ ಉತ್ತುಂಗದ ಗಿರಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿದ್ದಾರೆ. ಶಾಂತಿ ನೆಮ್ಮದಿ ಬಯಸಿದವನಿಗೆ ದಿವ್ಯ ದರ್ಶನ, ನರಳುತ್ತಾ ಬಂದವನಿಗೆ ಮಾನವೀಯ ಸೇವೆಯ ದಿಗªರ್ಶನ, ಹಸಿದವನಿಗೆ ಅನ್ನ, ಅನಾಥನಿಗೆ ಪ್ರೀತಿಯ ಸಿಂಚನ, ಅರಿವಿನ ಜೋಳಿಗೆ ಹಿಡಿದು ಬಂದವನಿಗೆ ಜ್ಞಾನ- ಸಿದ್ಧಗಂಗಾ ಸ್ವಾಮೀಜಿಯ  ಬಹುಮುಖೀ ದಾಸೋಹದ ವೈಖರಿಯೇ ಅನನ್ಯ!

ಒಬ್ಬ ವ್ಯಕ್ತಿ ಹೀಗೊಂದು ಬೃಹತ್‌ ಶಕ್ತಿಯಾಗಿ ಬೆಳೆಯಲು ಹೇಗೆ ಸಾಧ್ಯ ಎಂಬುದನ್ನು ಯೋಚಿಸಿದರೆ ಅಚ್ಚರಿ ಅನಿಸುತ್ತದೆ. ವೀರಪುರವೆಂಬ ಚಿಕ್ಕ ಗ್ರಾಮದ ಒಬ್ಬ ಸಾಮಾನ್ಯ ಹುಡುಗ, ಡಾ.ಶ್ರೀ ಶಿವಕುಮಾರಸ್ವಾಮೀಜಿಯಾಗಿ ಜನಮಾನಸದಲ್ಲಿ ಶ್ರದ್ಧಾ ಭಕ್ತಿಯನ್ನು ಮೂಡಿಸಿದ ಬಗೆ ಶತಮಾನದ ಒಂದು ದಿವ್ಯ ವಿರಾಟ್‌ ವಿಶ್ವರೂಪದರ್ಶನವೇ ಸರಿ! ಈ ಸಾಧನೆಯ ಹಿಂದಿನ ಹೆಜ್ಜೆಗಳನ್ನು ಗಮನಿಸುತ್ತಾ ಹೋದರೆ ಈ ಕೆಳಕಂಡ ಅಂಶಗಳು ಸ್ಪಷ್ಟವಾಗುತ್ತವೆ.

ಸ್ವಾಮೀಜಿಯವರಲ್ಲಿ ಪರಿಶುದ್ಧವಾದ ಮನಸ್ಸಿತ್ತು. ನೊಂದವರಿಗೆ, ಶೋಷಿತರಿಗೆ ಸ್ಪಂದಿಸುವ ಅಂತಃಕರಣವಿತ್ತು. ದಯೆಯೇ ಧರ್ಮದ ಮೂಲವಯ್ಯ ಎಂಬಂತೆ ಸ್ವಾಮೀಜಿ ದಯೆ ಮತ್ತು ಮಾನವ ಪ್ರೇಮದ ಸಾಕಾರಮೂರ್ತಿಗಳಾಗಿದ್ದರು.   ನಮ್ಮಲ್ಲಿ ಎಲ್ಲಾ ಧರ್ಮಗಳೂ ಮಾನವೀಯತೆಯನ್ನು ಸಾರುತ್ತವೆ ಎಂದು ಹೇಳುತ್ತಲೇ ಧರ್ಮದೊಂದಿಗೆ ಜಾತಿಗಳನ್ನು ತಳುಕು ಹಾಕುವವರಿದ್ದಾರೆ. ಭೌತಿಕ ಸವಲತ್ತುಗಳಿಗಾಗಿ ಧರ್ಮವನ್ನೇ ಒಡೆಯುವವರೂ ಇದ್ದಾರೆ. ಜಾತಿಗೊಬ್ಬರು ಸ್ವಾಮೀಜಿ, ಪಂಥಕ್ಕೊಂದು ಮಠ ಎಂದು ಧರ್ಮ ಮಾನವೀಯತೆಯನ್ನು ಪ್ರತಿಪಾದಿಸುವ, ಅದನ್ನು ಗಟ್ಟಿಗೊಳಿಸುವ, ಅದನ್ನು ಕಾಪಿಡುವ ಒಂದು ಶ್ರೇಷ್ಠ ಮಾರ್ಗ ಎನ್ನುವುದನ್ನು ನಮ್ಮ ಎಷ್ಟೋ ಜನ ಸ್ವಾಮೀಜಿಗಳೇ ಮರೆತುಬಿಟ್ಟರು. ಧರ್ಮ, ಧರ್ಮಗಳ ನಡುವಿನ ಸಂಘರ್ಷಗಳಿಗೆ ತುಪ್ಪ ಸುರಿಯುತ್ತಾ ಹೋದರು. ಧರ್ಮವನ್ನೇ ಜಾತಿಗಳ ಮಟ್ಟಕ್ಕಿಳಿಸಿ ಅದರಲ್ಲಿ ವಿಕೃತಿ ತುಂಬುತ್ತಾ ಹೋದರು. ಆದರೆ ಡಾ. ಶಿವಕುಮಾರ ಸ್ವಾಮೀಜಿ ಧರ್ಮವನ್ನು ಅದರ ಶುದ್ಧ ರೂಪದಲ್ಲೇ ಉಳಿಸಿದರು, ಅದರಲ್ಲಿನ ವಿಕೃತಿಯನ್ನು ತೊಡೆದರು, ಮಾನವ ಧರ್ಮವನ್ನೇ ಒಂದು ಸಂಸ್ಕೃತಿ ಎಂದು ಕಟ್ಟಿಕೊಟ್ಟರು. ಅದಕ್ಕಾಗಿ ಅವರು ಶ್ರೇಷ್ಠರೆನಿಸಿಕೊಂಡರು.

ಇತ್ತೀಚಿನ ಹಲವು ಸ್ವಾಮಿಗಳು ಜಾತಿಯ ಪ್ರತಿಪಾದಕ ರಾಗುತ್ತಿದ್ದಾರೆ. ಹಾಗೆಯೇ ಶ್ರೇಷ್ಠತೆಯ ವ್ಯಸನ ಅವರನ್ನು ಕಾಡಲಾರಂಭಿಸುತ್ತದೆ. ಹಾಗಾಗಿ ಅವರು ಕ್ರಮೇಣ ಜನರಿಂದ ದೂರವಾಗತೊಡಗುತ್ತಾರೆ. ಮತ್ತೆ ಕೆಲವರು ಧ್ಯಾನ, ಮೌನ, ಆ ವ್ರತಾಚರಣೆ, ಈ ಕಟ್ಟಲೆ ಎಂದೆಲ್ಲಾ ತಿಂಗಳಾನುಗಟ್ಟಲೆ ಜನರ ಸಂಪರ್ಕವಿಲ್ಲದ ಬೇರೆ ಲೋಕದಲ್ಲಿರುತ್ತಾರೆ. ಆದರೆ ಸಿದ್ಧಗಂಗೆಯ ಪೂಜ್ಯರು ಧ್ಯಾನ, ತಪಸ್ಸು ಎಂದು ತಿಂಗಳಾನುಗಟ್ಟಲೆ ಜನರನ್ನು ತೊರೆದುಹೋದವರಲ್ಲ. ಅವರು ಅನವರತ ತಮ್ಮನ್ನು ನಂಬಿದ ಭಕ್ತ ಸಮೂಹ ಹಾಗೂ ವಿದ್ಯಾರ್ಥಿಗಳ ಮಧ್ಯದಲ್ಲೇ ಇದ್ದವರು. ಅವರ ನೋವು, ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದವರು. ಅವರಿಗೆ ತ್ರಿವಿಧ ದಾಸೋಹವೇ ಶ್ರೇಷ್ಠ ತಪಸ್ಸಾಗಿತ್ತು, ಸಿದ್ಧಗಂಗೆಯೇ ಅವರ ತಪೋಭೂಮಿಯಾಗಿತ್ತು. ಅದೇ ಅವರ ಕರ್ಮಭೂಮಿಯಾಗಿತ್ತು. ಕಾಯಕವೇ ಅವರ ನಿತ್ಯ ಧ್ಯಾನವಾಗಿತ್ತು. ಹಾಗಾಗಿ ಸಿದ್ಧಗಂಗಾ ಶ್ರೀಗಳು ಸದಾ ಎಲ್ಲರ ಅಂತರಂಗದಲ್ಲಿ, ಬಹಿರಂಗದಲ್ಲಿ ದಕ್ಕುವ , ಸುಲಭವಾಗಿ ಸಿಗುವ ಸರಳ ಸ್ವಾಮೀಜಿಯೆನಿಸಿದ್ದರು. 

ಸಿದ್ಧಗಂಗಾ ಸ್ವಾಮೀಜಿ ಹಾಕಿಕೊಟ್ಟ ದಾಸೋಹದ ಶ್ರೇಷ್ಠ ಮಾರ್ಗ ಇಂದು ಹಲವು ಕಡೆ ಚಾಲ್ತಿಯಲ್ಲಿದೆ. ಅನ್ನ, ಆಶ್ರಯ ಕೊಡುವ ಮಠಗಳು, ಸ್ವಾಮಿಗಳು, ಧರ್ಮ ಸಂಸ್ಥೆಗಳು ಸಾಕಷ್ಟು ಬೆಳೆದಿವೆ. ತಲೆಯ ಮೇಲಿನ ಸೂರಿನ ಒಂದು ಆಶ್ರಯ, ಒಂದು ತಟ್ಟೆಯ ಅನ್ನ ಖಂಡಿತಾ ಒಂದು ಅನ್ನ ದಾಸೋಹದ ಸಾರ್ಥಕ ಮಾರ್ಗವೇ. ಆದರೆ ಸ್ವಾಮೀಜಿಯ ಮಡಿಲಿನಾಶ್ರಯ, ಅವರೇ ತಂದ ರಾಗಿ, ಅವರೇ ಒಡೆದ ಸೌದೆ, ಅವರೇ ಮಾಡಿದ ಅಡುಗೆ, ಆ ಬೊಬ್ಬೆ ಬಂದ ಕೈನಲ್ಲಿನ ಕೈತುತ್ತು ಇದೆಯಲ್ಲ, ಅದು ಅಮೃತ ಸಮಾನವಾದದ್ದು, ನಿಜಶರಣರ ದಾಸೋಹದ ಅಗ್ರಪಂಕ್ತಿಯದು. ಅದು ಕೇವಲ ಆಶ್ರಯವಲ್ಲ, ನಿರ್ವಾಜ್ಯ ಪ್ರೇಮದ, ಮಮತೆಯ ಅನನ್ಯತೆಯದು, ಅಕ್ಕರೆಯದು, ಅನಾಥಪ್ರಜ್ಞೆಯನ್ನು ಎಂದೂ ಕಾಡಿಸದ ಮಾತೃ ಮಮತೆಯನ್ನು ಎಂದೂ ಮರೆಸದ ವಾತ್ಸಲ್ಯದ ತುತ್ತದು. ಈ ಶ್ರೇಷ್ಠ ದಾಸೋಹವನ್ನು ಬಹುಶಃ ಸಿದ್ಧಗಂಗಾ ಸ್ವಾಮೀಜಿಯಷ್ಟು ಸಮರ್ಥವಾಗಿ ಬೇರಾರೂ ನಡೆಸಿರುವುದು ನನ್ನ ಗಮನಕ್ಕೆ ಬಂದಿಲ್ಲ.

ಇಂದು ಶಿಕ್ಷಣವೆನ್ನುವುದು ವ್ಯಾಪಾರದ ಒಂದು ಅಗ್ಗದ ಸರಕಾಗಿ ಹೋಗಿದೆ. ಇಂದಿನ ಪೀಳಿಗೆಯವರಿಗೆ ಸಿದ್ಧಗಂಗಾ ಸ್ವಾಮೀಜಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯ ಮಹತ್ವ ಗೊತ್ತಿಲ್ಲದಿರಬಹುದು. ಆದರೆ ಸ್ವಾಮೀಜಿ ಸರ್ಕಾರಕ್ಕೆ ಪರ್ಯಾಯವಾಗಿ ಪ್ರೌಢಶಿಕ್ಷಣದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದವರು. ಶಾಲೆಗಳ ಸೌಕರ್ಯವಿಲ್ಲದ ಹಲವು ಕಡೆ ಶಾಲೆಗಳನ್ನು ತೆರೆದವರು. ಮಠದಲ್ಲೇ ಜಾತಿ, ಮತ ನೋಡದೆ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ಕೊಟ್ಟವರು. ಇಂದಿಗೂ ಸಿದ್ಧಗಂಗಾ ಸಂಸ್ಥೆಯ ಹಲವು ಶಾಲಾ ಕಾಲೇಜುಗಳು ಜನಮುಖೀಯಾಗಿಯೇ ನಡೆಯುತ್ತಿವೆ. ಯಾವುದೇ ಕಾಲೇಜೂ ಇತರೆ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಡೊನೇಶನ್‌ ದಂಧೆಗೆ ಇಳಿದಿಲ್ಲ. ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲೂ ಸಾಧ್ಯವಿಲ್ಲದಷ್ಟು ಬಡತನ ಎಂದಾಗ ಶುಲ್ಕವನ್ನೇ ಮಠ ಮಾಫಿ ಮಾಡಿದೆ. ಅಥವಾ ಶಾಲೆ ಕಾಲೇಜಿನ ಸಿಬ್ಬಂದಿಯೇ ವಿದ್ಯಾರ್ಥಿಗಳ ಕಡೆಯ ಶುಲ್ಕವನ್ನು ಪಾವತಿಸಿದ್ದಾರೆ. ಇದು ಸಿದ್ಧಗಂಗಾ ಶ್ರೀಗಳಿಂದ ಬಂದ ಸಂಸ್ಕಾರ, ಅವರು ರೂಪಿಸಿದ ಶ್ರೇಷ್ಠ ಶಿಕ್ಷಕ ವರ್ಗ ಈ ದೇಶದ ಅಮೂಲ್ಯ ಸಂಪತ್ತು ಎಂಬುದನ್ನು ಮರೆಯಬಾರದು. ಹಾಗೇ ಈ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾಮೀಜಿಯವರ ನೇರ ಹಸ್ತಕ್ಷೇಪವಿಲ್ಲದೆ ಪರಿಣತರು, ಶಿಕ್ಷಣ ತಜ್ಞರು ಮೇಲ್ವಿಚಾರಣೆ ಮಾಡುವ ಒಂದು ವಿಕೇಂದ್ರೀಕರಣ ವ್ಯವಸ್ಥೆ ಇದೆ ಎನ್ನುವುದೂ ಅತ್ಯಂತ ಹೆಗ್ಗಳಿಕೆಯ ಸಂಗತಿ.

ನಮ್ಮಲ್ಲಿ ವಿದ್ಯಾವಂತರೇ ಮೂಢನಂಬಿಕೆಗಳನ್ನು ಆಚರಿಸುವುದು ಹೆಚ್ಚು. ಅದರಲ್ಲೂ ಅವರೇ ಸ್ವಾಮಿಗಳಾದರೆ ಮುಗಿದೇ ಹೋಯಿತು. ಕವಡೆ, ಗಿಣಿಶಾಸ್ತ್ರ ಕೈಲಿ ಹಿಡಿದು ಭಕ್ತಾದಿಗಳಿಗೆ ನಾಮ ಹಾಕಲು ಸಿದ್ಧರಾಗಿ ಕುಳಿತುಬಿಡುತ್ತಾರೆ. ಆದರೆ ಸಿದ್ಧಗಂಗಾ ಮಠ ಇದಕ್ಕೆ ಅಪವಾದವೆಂಬಂತೆ ವಿವೇಕದ ಬೆಳಕಿನಲ್ಲಿ ಬೆಳಗಿದ ಮಠ. ಸಿದ್ಧಗಂಗಾ ಶ್ರೀಗಳು ಕೇವಲ ವಿದ್ಯಾವಂತರಾಗಿರಲಿಲ್ಲ, ವಿಚಾರವಂತರು, ವಿವೇಕಿಗಳೂ, ವೈಚಾರಿಕ ಚಿಂತಕರೂ ಆಗಿದ್ದರು. ಹಾಗಾಗಿ ಶ್ರೀ ಮಠದಲ್ಲಿ ಶೂನ್ಯದಿಂದ ವಾಚು, ಉಂಗುರ ಸೃಷ್ಟಿಸುವ ಪವಾಡಗಳಿರಲಿಲ್ಲ. ಅಲ್ಲಿದ್ದದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಹಗಲು ರಾತ್ರಿ ಅನ್ನ ಸೃಷ್ಟಿಯಾಗುತ್ತಿದ್ದ ಪವಾಡ, ಬದುಕಲು ದಾರಿಯೇ ಮುಚ್ಚಿದವನಿಗೆ ತಟ್ಟನೆ ಸ್ವಾಮೀಜಿಯವರ ದಿವ್ಯ ಕರುಣೆ ಮಾರ್ಗ ತೋರುತ್ತಿದ್ದ ಚಮತ್ಕಾರ, ಕಾಯಕದ ಶ್ರಮ ಸಂಸ್ಕೃತಿಯ ಬೆವರು, ರಕ್ತ ಹೆಪ್ಪುಗಟ್ಟಿ ಒಡೆಯದ ವಜ್ರವಾದ ಪವಾಡ! ಇಷ್ಟೆಲ್ಲಾ ಪ್ರಭಾವಶಾಲಿಗಳೂ, ಭಕ್ತರ ಅಂತರಂಗ ಗೆದ್ದವರೂ ಆದ ಸಿದ್ಧಗಂಗೆ ಸ್ವಾಮೀಜಿ ಎಂದೂ ಟಿವಿಯಲ್ಲಿ ಜ್ಯೋತಿಷ್ಯ ಹೇಳಲು ಹೋಗಲಿಲ್ಲ, ರಾಜಕೀಯದವರಿಗೆ ಕವಡೆ ಶಾಸ್ತ್ರ ಹೇಳಲಿಲ್ಲ. ಲೌಕಿಕವಾದ ರಾಜಕೀಯವಾದ ಯಾವುದೇ ಭವಿಷ್ಯ ನುಡಿಯುವ ಅವಿವೇಕ ಮಾಡಲಿಲ್ಲ. ಇಡೀ ಮಠವನ್ನು ಕೇವಲ ಪರಮಾತ್ಮನ ಮೇಲಿನ ನಂಬಿಕೆಯಲ್ಲಿ ನೆಲೆನಿಲ್ಲಿಸಿದರು, ಅಲ್ಲಿ ಮೂಢನಂಬಿಕೆಗೆ ಜಾಗವೇ ಇಲ್ಲದಂತೆ ನೋಡಿಕೊಂಡರು. ಇದು ಸಿದ್ಧಗಂಗಾ ಮಠ ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಅತಿ ದೊಡ್ಡ ಕೊಡುಗೆ.

ಮಠಗಳೆಂದರೆ ಬೆಳಗಿನ ಜಾವಕ್ಕೇ ಶುರುವಾಗುತ್ತದೆ ನಗಾರಿ, ಡೋಲುಗಳ ಅಬ್ಬರ! ಜೊತೆಗೇ ಸ್ವಾಮಿಗಳ ಡೌಲು ಬೇರೆ! ಅತಿರೇಕದ ಆಡಂಬರ ಪೂಜೆಗಳು, ಆಟಾಟೋಪಗಳು, ದೇವರನ್ನು ಮೈಮೇಲೆ ಆಹ್ವಾನಿಸಿಕೊಳ್ಳುವ ಶಿಷ್ಯ ಕೋಟಿಯ ನೂರೆಂಟು ಅವತಾರಗಳು, ನೂರಾರು ಗಂಟೆ ಜಾಗಟೆಗಳ ಕಿವಿಗಡಚಿಕ್ಕುವ ಆರ್ಭಟ, ಲಕ್ಷಾಂತರ ರೂಪಾಯಿ ದುಂದು ಮಾಡುವ ಅಲಂಕಾರಗಳು, ಅಡ್ಡಪಲ್ಲಕ್ಕಿ ಉತ್ಸವಗಳು. ಆದರೆ ಸಿದ್ಧಗಂಗಾ ಮಠ ಇದೆಲ್ಲಕ್ಕೂ ಹೊರತಾಗಿತ್ತು.ಅಲ್ಲಿ ಜಾಗಟೆ ತಮಟೆ ಸದ್ದಿರಲಿಲ್ಲ, ಅಲಂಕಾರದ ಅಬ್ಬರವಿರಲಿಲ್ಲ, ಜಾತ್ರೆ ಸಮಯ ಬಿಟ್ಟರೆ ಮಿಕ್ಕೆಲ್ಲ ಸಮಯದಲ್ಲಿ ಅದು ಪ್ರಶಾಂತ ಶಾಂತಿನಿಕೇತನದ ಮಾದರಿಯಾಗಿತ್ತು. “ಇಳೆಗೆ ಮೊಳಕೆವೊಗೆವಂದು ತಮಟೆಗಳಿಲ್ಲ, ಫ‌ಲಮಾಗುವಂದು ತುತ್ತೂರಿಯಿಲ್ಲ, ಬೆಳಕೀವ ಸೂರ್ಯ ಚಂದ್ರರ ಸದ್ದಿಲ್ಲ, ಹೊಲೆ ನಿನ್ನ ತುಟಿಗಳನು ಮಂಕುತಿಮ್ಮ’ ಎಂಬ ಡಿವಿಜಿಯವರ ವಾಣಿಯನ್ನು ಸಾಕ್ಷಾತ್‌ ಆಚರಣೆಗೆ ತಂದು ಅದನ್ನು ಪುನರುಚ್ಚರಿಸುವ ಅಧಿಕಾರ ಹೊಂದಿದ್ದರೆ ಅದು ಕೇವಲ ಸಿದ್ಧಗಂಗಾ ಶ್ರೀಗಳು ಮಾತ್ರ. 

ಇಂದಿನ ಕೆಲವು ಸ್ವಾಮೀಜಿಗಳು ಪೀಠ ಹತ್ತಿದ ತಕ್ಷಣವೇ ವೈಭೋಗದ ಬೆನ್ನು ಹತ್ತುತ್ತಾರೆ. ಐಷಾರಾಮೀ ಬದುಕಿಗೆ ತಮ್ಮನ್ನು ಒಪ್ಪಿಸಿಕೊಂಡುಬಿಡುತ್ತಾರೆ.  ಅವರಿಗೆ ತಮ್ಮ ಪೂರ್ವಾಶ್ರಮದ ಕಷ್ಟ ಕಾರ್ಪಣ್ಯದ ದಿನಗಳು ಮರೆತೇ ಹೋಗುತ್ತವೆ. ಸಹಜವಾಗೇ ಈಗ ಅಂತಹ ಸ್ಥಿತಿಯಲ್ಲಿರುವವರೂ ಮುಂದೆ ಮರೆತು ಹೋಗುತ್ತಾರೆ. ಅಂತಹ ಎಚ್ಚರದ ಸ್ಥಿತಿಯನ್ನು ಕಾಯ್ದುಕೊಳ್ಳಬೇಕಾದುದು ಸ್ವಾಮೀಜಿಯಾದವರಿಗೆ ಅತ್ಯಂತ ಮುಖ್ಯವಾದುದು. ಅದಕ್ಕಾಗಿ ಅವರು ತಮ್ಮೆದುರಿರುವ ಮೃಷ್ಟಾನ್ನವನ್ನೂ ತ್ಯಾಗ ಮಾಡ ಬೇಕಾಗುತ್ತದೆ. ವೈಭೋಗ, ಐಷಾರಾಮಿ ಬದುಕಿನಿಂದ ದೂರವೇ ನಿಂತು ಸಮಚಿತ್ತರಾಗಿರಬೇಕಾಗುತ್ತದೆ. ಕಾಮ, ಕ್ರೋಧದ ಕ್ಷೊàಭೆಗಳಿಗೆ ಲಂಗು-ಲಗಾಮು ಹಾಕಿಕೊಳ್ಳಬೇಕಾಗುತ್ತದೆ. ಪ್ರತಿಕ್ಷಣ ಅಗ್ನಿಪರೀಕ್ಷೆ, ಸತ್ವ ಪರೀಕ್ಷೆಗೆ ತಮ್ಮನ್ನು ತಾವು ಒಡ್ಡಿಕೊಂಡು ಪರಿಪಕ್ವರಾಗಬೇಕಾಗುತ್ತದೆ. ಹೀಗೆ ಯಾವುದೇ ಕ್ಷೊàಭೆಗೊಳಗಾಗದೆ ಅತ್ಯಂತ ಸಂಯಮಯುತ, ಸಂಸ್ಕಾರಯುತ, ನಿರ್ವಿವಾದ, ಸರಳ, ಸುಂದರ, ಶಾಂತ ಬದುಕನ್ನು ನಡೆಸಿದವರು ಡಾ. ಶಿವಕುಮಾರ ಸ್ವಾಮೀಜಿ. ಅವರು ಹುಟ್ಟಿದ ಪುಣ್ಯಭೂಮಿಯಲ್ಲಿ ನಾವು ಹುಟ್ಟಿದ್ದೇವೆ, ಅವರ ಕಾಲದಲ್ಲೇ ನಾವೂ ಬದುಕಿದ್ದೆವು ಎಂಬುದೇ ಒಂದು ಧನ್ಯತೆಯ ಸಂಗತಿ.

ಹೀಗೆ ಡಾ. ಶಿವಕುಮಾರಸ್ವಾಮೀಜಿ ಸಂತರ ಪರಂಪರೆಗೇ ಒಂದು ದಿವ್ಯ ರತ್ನ. ಪ್ರಕೃತಿ, ಪರಿಸರ, ಭೂತಾಯಿ, ಪ್ರಾಣಿ ಪಕ್ಷಿಗಳೊಂದಿಗೆ ಅವರ ಅನುಸಂಧಾನ ಅವರನ್ನು ನಿಜ ಮಣ್ಣಿನ ಮಗನನ್ನಾಗಿಸಿದೆ. 12ನೇ ಶತಮಾನದ ಬಸವಾದಿ ಶರಣರ ಜಾತ್ಯತೀತ ಪ್ರಜ್ಞೆ,  ಸ್ತ್ರೀ ಸಮಾನತೆ, ಪರಿಸರ ಕಾಳಜಿ, ವೈಚಾರಿಕ ವಿಚಾರವಂತಿಕೆ, ದಾಸೋಹ ಮಾನವೀಯ ಮೌಲ್ಯ ಮೊದಲಾದ ಉದಾತ್ತ ಕ್ರಾಂತಿಕಾರಿ ಮೌಲ್ಯಗಳನ್ನು ಅನುಷ್ಠಾನಕ್ಕೆ ತಂದು ಶಿವಕುಮಾರಸ್ವಾಮೀಜಿ ಸಿದ್ಧಗಂಗಾಮಠವನ್ನು ಆಧ್ಯಾತ್ಮಿಕ ಹಾಗೂ  ಕ್ರಾಂತಿಯ ಕರ್ಮಭೂಮಿಯನ್ನಾಗಿಸಿದ್ದಾರೆ. ಅವರು ಕೇವಲ ಭಾರತ ರತ್ನವಲ್ಲ, ವಿಶ್ವ ರತ್ನ. ಮನುಕುಲದ ಮುುಕುಟಮಣಿ, ಅವರು ಕಲಶಪ್ರಾಯರು, ಶಿಖರಸೂರ್ಯರು, ಜಗದ ಗುರುಗಳು, ಯುಗದ ಗುರುಗಳು. ನಮೋ ಶಿವಕುಮಾರಸ್ವಾಮಿ, ಶರಣಂ ಗಚ್ಛಾಮಿ!

ತುರುವೇಕೆರೆ ಪ್ರಸಾದ್‌

ಟಾಪ್ ನ್ಯೂಸ್

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.