“ಬಂಧಿತ ಐಸಿಸ್ ಉಗ್ರರನ್ನು ಕರೆದುಕೊಂಡು ಹೋಗಿ’
Team Udayavani, Feb 18, 2019, 1:00 AM IST
ವಾಷಿಂಗ್ಟನ್: ಸಿರಿಯಾದಲ್ಲಿ ಬಂಧಿಸಿದ 800 ಕ್ಕೂ ಹೆಚ್ಚು ಐಸಿಸ್ ಉಗ್ರರನ್ನು ನಿಮ್ಮ ದೇಶಗಳಿಗೆ ಕರೆದುಕೊಂಡು ಹೋಗಿ. ಇಲ್ಲವಾದರೆ ಸಿರಿಯಾದಿಂದ ಸೇನೆಯನ್ನು ಹಿಂಪಡೆಯುವಾಗ ಅವರನ್ನು ಬಿಟ್ಟುಬಿಡಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಸಿರಿಯಾದಿಂದ ಅಮೆರಿಕದ 2000 ಯೋಧರನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಆದರೆ ಒಂದು ವೇಳೆ ಉಗ್ರ ಸಂಘಟನೆಗಳು ಚಟುವಟಿಕೆ ಆರಂಭಿಸಿದರೆ ಸಮೀಪದ ಸೇನಾನೆಲೆಯಿಂದ ದಾಳಿ ನಡೆಸುತ್ತೇವೆ ಎಂದೂ ಐಸಿಸ್ ಉಗ್ರರಿಗೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಇತರ ಐರೋಪ್ಯ ದೇಶಗಳಿಗೆ ಈ ಸೂಚನೆ ನೀಡಲಾಗಿದೆ.
ಅವರನ್ನು ನಿಮ್ಮ ದೇಶಗಳಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ. ಇಲ್ಲವಾದರೆ ಅವರನ್ನು ನಾವು ಬಿಡುಗಡೆ ಮಾಡಬೇಕಾಗುತ್ತದೆ. ಹೀಗಾಗಿ ಈ ಉಗ್ರರ ವಿಚಾರಣೆಗೆ ಐರೋಪ್ಯ ದೇಶಗಳು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.