ಕಾಸ್ಮೋಪಾಲಿಟನ್‌ ಮತ್ತು ದೇಸಿತನಗಳ ಅಪರೂಪದ ಮಿಶ್ರಣ: ಕನೌಟ್ ಪ್ಲೇಸ್‌


Team Udayavani, Aug 4, 2019, 5:00 AM IST

x-55

ಚೌಕಾಶಿಯು ಭಾರತೀಯ ಗ್ರಾಹಕರಿಗೆ ಹೊಸದೇನೂ ಅಲ್ಲ. ಅದರಲ್ಲೂ ಚೌಕಾಶಿಯಿಲ್ಲದ ಖರೀದಿಯು ವ್ಯಾಪಾರವೇ ಅಲ್ಲ ಎಂಬಷ್ಟು.

ಅದೊಂದು ದೊಡ್ಡ ಬಜಾರು. ಎಲ್ಲೆಂದರಲ್ಲಿ ನಾನಾ ಬಗೆಯ ಬಟ್ಟೆಗಳು ಕಾಣುತ್ತಿವೆಯಾದರೂ ಅದು ಬಟ್ಟೆಗಳದ್ದಷ್ಟೇ ಬಜಾರಲ್ಲ. ಆದರೆ, ಬಟ್ಟೆಗಳು ಕೊಂಚ ಹೆಚ್ಚೇ ಎಂಬಷ್ಟಿರುವುದು ಸತ್ಯ. ಇಲ್ಲಿ ವ್ಯಾಪಾರಿ, ‘ಐನೂರು ರೂಪಾಯಿ ಸಾಬ್‌’ ಅನ್ನುತ್ತಾನೆ. ಗ್ರಾಹಕನೋ ‘ಸತ್ತರ್‌ ಸೇ ಏಕ್‌ ಪೈಸಾ ಜ್ಯಾದಾ ನಹೀಂ ದೂಂಗಾ’ (ಎಪ್ಪತ್ತು ರೂಪಾಯಿಗಿಂತ ಒಂದು ಪೈಸಾ ಹೆಚ್ಚು ಕೊಡಲ್ಲ), ಅಂತಾನೆ. ಎಲ್ಲಿಯ ಐನೂರು, ಎಲ್ಲಿಯ ಎಪ್ಪತ್ತು ! ಶರಂಪರ ಚೌಕಾಶಿಯು ಇಂಥಾದ್ದೊಂದು ವಿಚಿತ್ರ ಮೌಲ್ಯಧಾರಣೆಯೊಂದಿಗೆ ಇಲ್ಲಿ ಶುರುವಾಗಿರುತ್ತದೆ. ಇನ್ನು ಹೊಸಬರಿಗಂತೂ ಇದೆಂಥ ಬಗೆಯ ಚೌಕಾಶಿಯಪ್ಪಾ ಎಂದು ಅಚ್ಚರಿಯಾಗುವುದು ಸಹಜ. ಆದರೆ, ಜಗತ್ತಿನ ಪ್ರಖ್ಯಾತ ಬ್ರ್ಯಾಂಡುಗಳ ಅಗ್ಗದ ನಕಲಿಗಳನ್ನು ಹೊಂದಿರುವ ಈ ಬಜಾರ್‌ಗೆ ಇದು ನಿತ್ಯದ ನೋಟ. ಇದು ಚೌಕಾಶಿವೀರರ ಅಖಾಡಾ.

ಬಜಾರುಗಳು ದಿಲ್ಲಿಗೆ ಹೊಸದೇನಲ್ಲ. ಅಂದ ಹಾಗೆ ಇದು ದಿಲ್ಲಿಯಲ್ಲಿರುವ ಪಾಲಿಕಾ ಬಜಾರಿನ ಒಂದು ನೋಟ. ಹೇಳಹೊರಟರೆ ಈ ಬಜಾರಿನದ್ದೇ ಒಂದು ದೊಡ್ಡ ಕತೆಯಾಗಿಬಿಡಬಹುದು. ಆದರೆ, ಪಾಲಿಕಾ ಬಜಾರ್‌ ದಿಲ್ಲಿಯ ಬಹು ಜನಪ್ರಿಯ ಸ್ಥಳಗಳಲ್ಲೊಂದಾದ ಕನೌಟ್ ಪ್ಲೇಸ್‌ನ ಒಂದು ಭಾಗವಷ್ಟೇ. ಇಂದು ಸಿ. ಪಿ. ಎಂದೇ ಜನರ ಬಾಯಿಯಲ್ಲಿ ನಲಿದಾಡುವ ಕನೌಟ್ ಪ್ಲೇಸ್‌ನೊಳಗಿರುವ ಬಹಳಷ್ಟು ಸ್ವಾರಸ್ಯಗಳಲ್ಲಿ ಇದೂ ಒಂದು.

ಕನೌಟ್ ಪ್ಲೇಸ್‌ ಸ್ಟೋರಿ

ನಕಾಶೆಯಲ್ಲೂ, ನೋಟದಲ್ಲೂ ದಿಲ್ಲಿಯ ಸಿ. ಪಿ. ವಿಶಿಷ್ಟವಾಗಿ ಕಾಣುವುದು ತನ್ನ ವೃತ್ತಾಕಾರದ ವಿನ್ಯಾಸದಿಂದ. ಈ ವಿನ್ಯಾಸದಿಂದ ಹುಟ್ಟಿರುವ ಒಳ ಮತ್ತು ಹೊರವೃತ್ತಗಳು ಕ್ರಮವಾಗಿ ಇನ್ನರ್‌ ಸರ್ಕಲ್ ಮತ್ತು ಔಟರ್‌ ಸರ್ಕಲ್ಗಳೆಂದೇ ಹೇಳಲ್ಪಡುತ್ತವೆ. ಇನ್ನು ಸುಸಜ್ಜಿತವಾಗಿ ನಿರ್ಮಿತವಾಗಿರುವ ರಸ್ತೆಗಳು ವೃತ್ತದ ಕೇಂದ್ರದಿಂದ ಶಹರದ ಎಲ್ಲಾ ಕಡೆಗೂ ಹಬ್ಬಿಕೊಂಡಂತಿವೆ. ಅಸಲಿಗೆ ಪ್ರಶಸ್ತ ಸ್ಥಳವೊಂದನ್ನು ದೇಶದ ಹೊಸ ರಾಜಧಾನಿಯ ವಾಣಿಜ್ಯೋದ್ಯಮ ಕೇಂದ್ರವನ್ನಾಗಿ ನಿರ್ಮಿಸುವ ಪ್ರಯತ್ನದಲ್ಲಿ ವಿನ್ಯಾಸಗೊಂಡಿದ್ದೇ ಕನೌಟ್ ಪ್ಲೇಸ್‌. 1929ರಲ್ಲಿ ಆರಂಭವಾಗಿ 1933ರಲ್ಲಿ ಸಿದ್ಧವಾದ ಈ ದೈತ್ಯ ವಾಣಿಜ್ಯಕೇಂದ್ರವನ್ನು ಡ್ಯೂಕ್‌ ಆಫ್ ಕನೌಟ್ ಆಂಡ್‌ ಸ್ಟ್ರೇಟರ್ನ್ ಆಗಿದ್ದವರೂ, ರಾಣಿ ವಿಕ್ಟೋರಿಯಾ ಮತ್ತು ಪ್ರಿನ್ಸ್‌ ಆಲ್ಬರ್ಟರ ಪುತ್ರರೂ ಆಗಿದ್ದ ಆರ್ಥರ್‌ ಗೌರವಾರ್ಥ ‘ಕನೌಟ್ ಪ್ಲೇಸ್‌’ ಎಂದು ನಾಮಕರಣ ಮಾಡಲಾಗಿತ್ತು. ಮುಂದೆ ಕನೌಟ್ ಪ್ಲೇಸ್‌ ಅನ್ನು ‘ರಾಜೀವ್‌ ಚೌಕ್‌’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲಾದರೂ ‘ಸಿ.ಪಿ.’ ಹೆಸರು ಇಂದಿಗೂ ಜೀವಂತವಾಗಿದೆ.

ಆರಂಭಿಕ ಹಂತದಲ್ಲಿ ಚಿಕ್ಕ ಅಂಗಡಿಗಳಿಂದ ಜೀವತಳೆದಿದ್ದ ಸಿ.ಪಿ. ಯು ಕ್ರಮೇಣ ಚಿತ್ರಮಂದಿರ, ಹೊಟೇಲುಗಳನ್ನೂ ಹೊಂದಿ ಸಮೃದ್ಧವಾಗಿ ಬೆಳೆದಿತ್ತು. ಆಸುಪಾಸಿನಲ್ಲೇ ಇರುವ 1931 ರಲ್ಲಿ ಆರಂಭವಾಗಿದ್ದ ದಿ ಇಂಪೀರಿಯಲ್ ದಿಲ್ಲಿಯ ಮೊದಲ ಐಷಾರಾಮಿ ಹೊಟೇಲಾಗಿದ್ದಷ್ಟೇ ಅಲ್ಲದೆ ಆ ಕಾಲದ ಸುಪ್ರಸಿದ್ಧ ರಾಜಕೀಯ ನಾಯಕರ ಚಟುವಟಿಕೆಯ ತಾಣವಾಗಿತ್ತಂತೆ. ಇಂದು ಸೆಂಟ್ರಲ್ ಪಾರ್ಕಿನಲ್ಲಿ ಗಗನವನ್ನು ಚುಂಬಿಸುವಷ್ಟು ಎತ್ತರದಲ್ಲಿ, ಹೆಮ್ಮೆಯಿಂದ ಹಾರಾಡುತ್ತಿರುವ ಭಾರತದ ತ್ರಿವರ್ಣಧ್ವಜವು ಇಲ್ಲಿಯ ಎಪ್ಪತ್ತು ಚಿಲ್ಲರೆ ವರ್ಷಗಳ ಶ್ರೀಮಂತ ಇತಿಹಾಸಕ್ಕೆ ಕಲಶಪ್ರಾಯವೆಂಬಂತಿದೆ.

ಕನೌಟ್ ಎಂಬ ಕರಿಶ್ಮಾ

ಮಟ್ಟಸವಾಗಿ ಕೈವಾರದಲ್ಲಿ ವೃತ್ತ ಕೊರೆದಂತಿರುವ ಕನೌಟ್ ಪ್ಲೇಸ್‌, ಕಾಸ್ಮೋಪಾಲಿಟನ್‌ ಜಗತ್ತನ್ನೇ ತನ್ನ ಒಡಲಿನಲ್ಲಿಟ್ಟುಕೊಂಡಿರುವಂಥ ಆಕರ್ಷಕ ಜಾಗ. ಸರಕಾರಿ ಕಚೇರಿಗಳು, ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪೆನಿಗಳ ಕಚೇರಿಗಳು, ಪ್ರತಿಷ್ಠಿತ ಬ್ರಾಂಡ್‌ಗಳ ಮಳಿಗೆಗಳು, ಶುದ್ಧ ದೇಸಿ ಆಹಾರದಿಂದ ಹಿಡಿದು ಬಹುತೇಕ ಎಲ್ಲಾ ಬಗೆಯ ಆಹಾರ ವೈವಿಧ್ಯಗಳನ್ನು ಹೊಂದಿರುವ ಹೊಟೇಲು-ಕ್ಯಾಂಟೀನುಗಳು, ಟೀ ಸ್ಟಾಲುಗಳು, ಕೈಗಾಡಿಗಳು, ಚಿತ್ರಮಂದಿರಗಳು… ಹೀಗೆ ಎಲ್ಲಾ ಬಗೆಯ ವ್ಯಾಪಾರಿ ಅಂಶಗಳನ್ನು ಹೊಂದಿರುವ ಸಿ.ಪಿ. ಅನುದಿನವೂ ಜನಜಂಗುಳಿಯಿಂದ ಗಿಜಿಗುಡುತ್ತಿರುವುದು ಇಲ್ಲಿಯ ನಿತ್ಯದ ದೃಶ್ಯ. ಕೊಂಚ ಅತ್ತಿತ್ತ ಹೊರಳಿದರೆ ಭಕ್ತಿಗೆ ಪೂಜಾಸ್ಥಳಗಳು, ವಿಲಾಸಕ್ಕೆ ಐಷಾರಾಮಿ ಹೊಟೇಲುಗಳು. ಒಂದಷ್ಟು ದೂರ ಸಾಗಿದರೆ ಹಳೇದಿಲ್ಲಿ. ಇನ್ನು ಮೈಚೆಲ್ಲಲು ಉದ್ಯಾನ, ನಡೆದಾಡಲು ಕಾಲ್ನಡಿಗೆಯ ದಾರಿಗಳು ಮತ್ತು ಶಾಪಿಂಗಿಗೆ ಬಜಾರುಗಳನ್ನು ತನ್ನೊಳಗೇ ಹೊಂದಿರುವ ಸಿ.ಪಿ. ಅದೆಷ್ಟೋ ಮಂದಿಗಳ ವಾರಾಂತ್ಯದ ನೆಚ್ಚಿನ ತಾಣವೂ ಹೌದು.

ಇನ್ನು ಬಾಲಿವುಡ್‌ ಸೇರಿದಂತೆ ದಿಲ್ಲಿಯಲ್ಲಿ ಚಿತ್ರೀಕರಣಗೊಳ್ಳುವ ಬಹುತೇಕ ಎಲ್ಲಾ ಚಿತ್ರಗಳಲ್ಲೂ ಕೆಲ ಫ್ರೇಮುಗಳು ಈ ತಾಣಕ್ಕೆಂದೇ ಮೀಸಲು. ವೃತ್ತಾಕಾರದ ವಾಸ್ತುಶಿಲ್ಪ, ಉದ್ದಕ್ಕೂ ಇರುವ ಶ್ವೇತವರ್ಣದ ಕಂಬಗಳು ಈ ಶಾಟ್‌ಗಳ ಟ್ರೇಡ್‌ಮಾರ್ಕ್‌ಗಳು. ಒಂದೆಡೆ ಇಡೀ ಕನೌಟ್ ಪ್ಲೇಸ್‌ ಈ ಮಟ್ಟಿಗೆ ಚಟುವಟಿಕೆಯಲ್ಲಿದ್ದರೆ, ಇನ್ನೊಂದೆಡೆ ನೆಲದಡಿಯ ರಾಜೀವ್‌ ಚೌಕ್‌ ಮೆಟ್ರೋಸ್ಟೇಷನ್‌ ಕೂಡ ತನ್ನದೇ ಗುಂಗಿನಲ್ಲಿ ವ್ಯಸ್ತವಾಗಿರುತ್ತದೆ. ಹಲವು ಮೆಟ್ರೋಸ್ಟೇಷನ್ನುಗಳು ಸಂಧಿಸುವ ಕೇಂದ್ರದಂತಿರುವ ಈ ನಿಲ್ದಾಣವು ದಿಲ್ಲಿಯ ದೊಡ್ಡ ಮತ್ತು ಜನನಿಬಿಡ ಮೆಟ್ರೋಸ್ಟೇಷನ್ನುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವಂಥಾದ್ದು.

ಝಣಝಣ ಕಾಂಚಾಣ

ದಿಲ್ಲಿಯು ಬೆಳೆದಿರುವ ನೂರುಪಟ್ಟು ವೇಗದಲ್ಲಿ ಇಂದು ಸಿ.ಪಿ. ರೂಪಾಂತರಗೊಂಡಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ! ಇಂದು ಈ ಪ್ರದೇಶವು ಭಾರತದಲ್ಲಷ್ಟೇ ಅಲ್ಲದೆ ಇಡೀ ಜಗತ್ತಿನಲ್ಲಿರುವ ಅತೀ ದುಬಾರಿ ವಾಣಿಜ್ಯಕೇಂದ್ರಗಳ ಪಟ್ಟಿಯನ್ನು ಸೇರಿಕೊಂಡಿದೆ. ಈ ಮೂಲಕ ಲಂಡನ್‌, ನ್ಯೂಯಾರ್ಕ್‌ ಮತ್ತು ಬೀಜಿಂಗ್‌ನಂಥ ದುಬಾರಿ ಶಹರಗಳ ಪಟ್ಟಿಗೆ ದಿಲ್ಲಿಯ ಈ ತಾಣವೂ ಕೂಡ ಸೇರಿಕೊಂಡಂತಾಗಿದೆ. ಇನ್ನು ಈ ಟಾಪ್‌-10 ಪಟ್ಟಿಯಲ್ಲಿರುವ ಹತ್ತು ಮಹಾ ವಾಣಿಜ್ಯಕೇಂದ್ರಗಳಲ್ಲಿ ಆರು ಏಷ್ಯಾದಲ್ಲೇ ಇರುವುದು ಗಮನಾರ್ಹ ಅಂಶ. ಜಾಗತಿಕ ಮಟ್ಟಿನ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ನಡೆಸಿದ ಈ ಸರ್ವೆಯ ಪ್ರಕಾರ ಮುಂಬೈಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ ಮತ್ತು ನಾರಿಮನ್‌ ಪಾಯಿಂಟ್ ಸೆಂಟ್ರಲ್ ಬ್ಯುಸಿನೆಸ್‌ ಡಿಸ್ಟ್ರಿಕ್ಟ್ಗಳು ಈ ಪಟ್ಟಿಯಲ್ಲಿ ಕ್ರಮವಾಗಿ ಇಪ್ಪತ್ತೇಳನೇ ಮತ್ತು ನಲವತ್ತನೇ ಸ್ಥಾನವನ್ನು ಪಡೆದುಕೊಂಡಿವೆ.

ದಿಲ್ಲಿಯೆಂಬ ಶಹರದೊಳಗಿರುವ ಕಾಸ್ಮೋಪಾಲಿಟನ್‌ ಮತ್ತು ದೇಸಿತನಗಳ ಅಪರೂಪದ ಮಿಶ್ರಣವೇ ಕನೌಟ್ ಪ್ಲೇಸ್‌. ಗಗನಚುಂಬಿ ಕಟ್ಟಡಗಳನ್ನು ಹೊಂದಿರುವ, ಬಿಡುವಿಲ್ಲದ ಚಟುವಟಿಕೆಗಳ ತಾಣ. ಮಲಗುವುದನ್ನೇ ಮರೆತಿರುವ ಮಹಾನಗರಿ. ಕಾಲಕ್ಕೆ ತಕ್ಕಂತೆ ಸಿ.ಪಿ. ಯನ್ನು ನವೀಕರಿಸುವ ಪ್ರಯತ್ನಗಳು ಆಯಾ ಸರ್ಕಾರಗಳಿಂದ ನಡೆಯುತ್ತಲೇ ಬಂದಿವೆ. ಆದರೆ, ಇಂದಿಗೂ ಅಪರೂಪದ ವೈವಿಧ್ಯಗಳಿಂದಲೇ ಎಲ್ಲರನ್ನೂ ಸೆಳೆಯುತ್ತಲಿರುವ ಈ ಸ್ಥಳವು ದಿಲ್ಲಿಯ ಸ್ವಾರಸ್ಯಕರ ತಾಣಗಳಲ್ಲೊಂದು.

ಪ್ರಸಾದ್ ನಾಯ್ಕ್

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.