ಪಾಕಿಸ್ಥಾನದಲ್ಲಿ ಟೆಸ್ಟ್ ಪಂದ್ಯ ಆಡಲಿರುವ ಶ್ರೀಲಂಕಾ
ಡಿಸೆಂಬರ್ನಲ್ಲಿ 2 ಪಂದ್ಯಗಳ ಸರಣಿ
Team Udayavani, Oct 27, 2019, 5:04 AM IST
ಕೊಲಂಬೊ: ಇತ್ತೀಚೆಗಷ್ಟೇ ಪಾಕಿಸ್ಥಾನದಲ್ಲಿ ಏಕದಿನ ಹಾಗೂ ಟಿ20 ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿ ಬಂದ ಶ್ರೀಲಂಕಾ ಈಗ ಇನ್ನೊಂದು ಹೆಜ್ಜೆಯನ್ನು ಮುಂದಿರಿಸಿದೆ. ಡಿಸೆಂಬರ್ನಲ್ಲಿ ಮತ್ತೆ ಪಾಕಿಸ್ಥಾನಕ್ಕೆ ತೆರಳಿ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಸರಣಿ ಬಗ್ಗೆ ಸಕಾರಾತ್ಮಕ ಹೇಳಿಕೆ ನೀಡಿದ್ದು, ತಮ್ಮ ಆಟಗಾರರು ಮತ್ತೆ ಪಾಕಿಸ್ಥಾನಕ್ಕೆ ತೆರಳಲು ಸಜ್ಜಾಗಿದ್ದಾರೆ ಎಂದು ಹೇಳಿದೆ.
ಕಳೆದ ಪ್ರವಾಸದ ವೇಳೆ ಪಾಕಿಸ್ಥಾನದಲ್ಲಿ ಆಯೋಜಿಸಲಾದ ಭದ್ರತಾ ವ್ಯವಸ್ಥೆ ಬಗ್ಗೆ ಆಟಗಾರರು ಮತ್ತು ಲಂಕಾ ಕ್ರಿಕೆಟ್ ಮಂಡಳಿಗಳೆರಡೂ ತೃಪ್ತಿ ವ್ಯಕ್ತಪಡಿಸಿವೆ. ಈ ಸರಣಿ ನಡೆದದ್ದೇ ಆದರೆ 2009ರ ಬಳಿಕ ಪಾಕಿಸ್ಥಾನದಲ್ಲಿ ಮೊದಲ ಸಲ ಟೆಸ್ಟ್ ಪಂದ್ಯ ಆಯೋಜನೆಗೊಳ್ಳಲಿದೆ.
2 ಪಂದ್ಯಗಳ ಈ ಟೆಸ್ಟ್ ಸರಣಿಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ತಾತ್ಕಾಲಿಕ ದಿನಾಂಕವನ್ನೂ ನಿಗದಿಗೊಳಿಸಿದೆ. ಡಿ. 11ರಿಂದ ರಾವಲ್ಪಿಂಡಿಯಲ್ಲಿ ಮೊದಲ ಟೆಸ್ಟ್, ಡಿ. 19ರಿಂದ ಕರಾಚಿಯಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಲಂಕಾ ಕ್ರಿಕೆಟ್ ಮಂಡಳಿ ಜತೆ ಚರ್ಚಿಸಿದ ಬಳಿಕ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲು ಪಿಸಿಬಿ ನಿರ್ಧರಿಸಿದೆ.