ಜೀವನ ಮಟ್ಟದ ರೋಚಕ ಇತಿ ವೃತ್ತಾಂತ


Team Udayavani, Nov 21, 2019, 5:27 AM IST

gg-25

ಬೆಲೆ ಏರಿಕೆ, ಜೀವನ ಮಟ್ಟ, ಕನಿಷ್ಠ ಸಂಬಳ/ಕೂಲಿ ತಲಾ ಆದಾಯ ಇವೆಲ್ಲಾ ಒಂದನ್ನೊಂದು ಹೊಸೆದು ನಿಂತ ಬಳ್ಳಿಗಳಂತೆ. ಹಲವಾರು ಬಾರಿ ಇವುಗಳ ಪರಸ್ಪರ ಹಾವು ಏಣಿ ಆಟದ ಕರಾಮತ್ತು ಅನಾವರಣಗೊಳ್ಳುತ್ತದೆ. ಆದರೆ ಇಲ್ಲಿ ಘಟಿಸುವುದು ಬೆಳೆ-ಬೆಲೆ, ಖರ್ಚು ಆದಾಯ ಇವೆಲ್ಲವುಗಳ ಸಾಮೂಹಿಕ ಆರೋಹಣ ಪ್ರಕ್ರಿಯೆ, ರೂಪಾಯಿ ಮೌಲ್ಯದ ಅವರೋಹಣದ ಕತೆ. ಒಂದು ಕಾಲದ ಬೆಳ್ಳಿ ನಾಣ್ಯ, ಅಗಲದ ನೂರರ ಹತ್ತರ ನೋಟು, ಎಂಟಾಣೆ, ನಾಲ್ಕಾಣೆ, ಎರಡಾಣೆ, ಒಂದಾಣೆ, ಮುಕ್ಕಾಲು, ಒಟ್ಟೆ ಮುಕ್ಕಾಲು, ಪೈ ಇವೆಲ್ಲಾ ಹಳೆ ಪೆಟ್ಟಿಗೆ ಅಥವಾ ನಾಣ್ಯ ಸಂಗ್ರಾಹಕರ ಕೈ ಸೇರಿವೆ. 5 ರೂಪಾಯಿ, 2 ರೂಪಾಯಿ, 1 ರೂಪಾಯಿ ನೋಟುಗಳೂ ಈಗ ಬಹುತೇಕ ಕಣ್ಮರೆ. ಒಂದು ಕಾಲದ ಸಾವಿರ, ಐನೂರರ ನೋಟುಗಳು, ನಾಲ್ಕಾಣೆ ಹಾಗೂ ಅವುಗಳ “ಕಿರಿಯ ಸಹೋದರ – ಸಹೋದರಿಯರೆಲ್ಲಾ’ ಈಗ ಪಳೆಯುಳಿಕೆಗಳು.

ಹೀಗೆ ಸುಮಾರು ಅರ್ಧ ಶತಮಾನಕ್ಕಿಂತಲೂ ಮಿಕ್ಕಿದ ಭಾರತದ ಟಂಕಸಾಲೆ, ಸರಕಾರಿ ಖಜಾನೆ, ರಿಸರ್ವ್‌ ಬ್ಯಾಂಕ್‌, ಜನರ ಕೈಯಲ್ಲಿನ ಹಣ ಚಲಾವಣೆಯ ಗಾತ್ರ, ಜೀವನಾವಶ್ಯಕ ಬೆಲೆಗಳ “ಗಾಳಿಪಟ’ ಇವೆಲ್ಲವುಗಳ ಅನುಭವ ಕಥನವೇ ರೋಚಕ. 1960ರ ವೇಳೆಗೆ ಅಕ್ಕಿಮುಡಿಯೊಂದಕ್ಕೆ 30 ರೂ. ಎಂದರೆ “ಅಬ್ಟಾ – ಎಂಥ ರೇಟು’ ಎನ್ನಲಾಗುತ್ತಿತ್ತು. ಒಂದು ಮುಡಿ ಎಂದರೆ 3 ಕಳಸಿಗೆ, 1 ಕಳಸಿಗೆ ಎಂದರೆ 14 ಸೇರು. ಹೀಗೆ ಸರಿ ಸುಮಾರು 42 ಸೇರು ಅರ್ಥಾತ್‌ 38 ಕಿಲೋ ಅಕ್ಕಿಗೆ 30 ರೂಪಾಯಿ ಎಂದರೆ ಪ್ರಚಲಿತ 50 ರೂಪಾಯಿ ಗಡಿದಾಟಿದ ಅಕ್ಕಿ ತನ್ನತನದ ಹಿರಿಮೆಗೆ ಬೀಗದೆ ಇದ್ದೀತೇ? 1970ರಲ್ಲಿ ಒಂದು ಪವನು ಬಂಗಾರಕ್ಕೆ ರೂಪಾಯಿ 100 ಆಯಿತು ಎಂಬುದು ಅಂದಿನ ದಿನ ಪತ್ರಿಕೆಯ ಮುಖಪುಟದ ಸುದ್ದಿ! ವಿವಾಹ ಯೋಗ್ಯ ಕನ್ಯೆಯರ ಪಿತೃಗಳ ಮಂಡೆ ಬೆಚ್ಚದ ಸಂಗತಿ “ಆ ಬಂಗಾರದ ದಿನಗಳು’ ಪ್ರಚಲಿತ 30 ಸಾವಿರದ ಗಡಿದಾಟಿದ ಬಂಗಾರದ ಪವನು ನೋಡಿ ಕಿಸಕ್ಕನೆ ನಕ್ಕರೆ ಆಶ್ಚರ್ಯವಿಲ್ಲ.

ಸಿಟಿಬಸ್ಸಿಗೆ ಕನಿಷ್ಠ 10 ಪೈಸೆ, ಮಂಗಳೂರು – ಉಡುಪಿ ರೂ. 5 ಟಿಕೆಟ್‌ ದರ, ಪೆಟ್ರೋಲ್‌ ಲೀಟರ್‌ ರೂಪಾಯಿ 5, ಜಾಗಕ್ಕೆ ಹಳ್ಳಿ ಧಾರಣೆ ಎಕರೆಗೆ 2000 ರೂ., ಪೇಟೆಯಲ್ಲಿ 30ರಿಂದ 80 ಸಾವಿರ! ಇವೆಲ್ಲಾ ಸುರುಳಿ ಬಿಚ್ಚಿಕೊಳ್ಳುವ 1970ರ ಕಥಾನಕಗಳು. ಹೀಗೆ ಅವುಗಳ ಬಗೆಗಿನ ಹಳೆಯ ಲೆಕ್ಕಪತ್ರಗಳು, ಡೈರಿಗಳೆಡೆಗೆ ಕಣ್ಣು ಹಾಯಿಸಿದಾಗ ಇವೆಲ್ಲಾ ನಂಬಲು ಅರ್ಹವೆ ಎಂಬ ಕಿರು ಹಾಸ್ಯದೊಂದಿಗೆ ಅವೆಲ್ಲಾ ಕಣ್ಣು ಮಿಟುಕಿಸುತ್ತವೆ. ಇನ್ನು ನಮ್ಮ ಮಕ್ಕಳಿಗೆ ಈ ಎಲ್ಲಾ ವಿವರಗಳ ಒಂದಿಷ್ಟು “ಝಲಕ್‌’ ಹೇಳಿದರೋ “ಏನೊ ಅಪ್ಪಾ, ನೀವು ಯಾವ ಕಾಲದ ಕುಬೇರನ ಕತೆ ಹೇಳುತ್ತಿದ್ದೀರಿ?’ ಎಂಬ ಅಪನಂಬಿಕೆಯ ಸೊಲ್ಲು.

ಕಾಲಚಕ್ರದ ಪರಿಭ್ರಮಣೆಯೆನ್ನುವುದು, ರಾಷ್ಟ್ರ ಜೀವನ ಎನ್ನುವುದು ಎಂದೂ ನಿಲ್ಲದ ಹರಿಯುವ ನದಿಯಂತೆ. ಹೀಗೆ 1947ರ ಆಗಸ್ಟ್‌ 14ರ ಮಧ್ಯರಾತ್ರಿ ಈ ನಮ್ಮ ನೆಲ, ಜಲ, ಗಾಳಿ ವಿದೇಶಿ ಆಳ್ವಿಕೆಯಿಂದ ಮುಕ್ತವಾದ ಗಳಿಗೆಯಿಂದ ಇಂದಿನವರೆಗಿನ ಆರ್ಥಿಕ ಚರಿತ್ರೆಯೂ ಅತ್ಯಂತ ಕುತೂಹಲದ ಖನಿ. 1949 ನವಂಬರ 26ರಂದು ಈ ನಮ್ಮ ರಾಷ್ಟ್ರಕ್ಕೆ ನೂತನ ಸಂವಿಧಾನ ಅರ್ಪಣೆಗೊಂಡಿತು. ಬೆಲೆ ಹಾಗೂ ಹಣಕಾಸಿನ ನಾಗಾಲೋಟದ ಕಿರು ಇತಿಹಾಸದ ಓರೆನೋಟ, ಒಕ್ಕಣೆ ಆ ಹೊತ್ತಲ್ಲಿ ಹುಟ್ಟುವ ದಿನದ “ಮಾಸಿಕ ವೇತನ’ಗಳ ಪಟ್ಟಿ ಹಾಗೂ ಇಂದಿನ ವಸ್ತುಸ್ಥಿತಿಯ “ನಂಬಲು ಅಸಾಧ್ಯ’ ಎನಿಸುವ ತುಲನೆಗಾಗಿ. 1950 ಜನವರಿ 26ರಂದು ಕಣ್ಣು ತೆರೆದ ನಮ್ಮ ಮೂಲಭೂತ ದಾಖಲೆ ಎನಿಸಿದ “ಭಾರತದ ರಾಜ್ಯಾಂಗ ಘಟನೆ’ಯೇ ಕೆಲವೊಂದು ಉನ್ನತ ಹುದ್ದೆಗಳ ಮಾಸಿಕ ಸಂಬಳ ಅಲ್ಲ; “ಗೌರವ ಧನ’ದ ಬಗೆಗೆ ಒಕ್ಕಣೆ ನೀಡಿದೆ. ಏಕೆಂದರೆ ಯಾವುದೇ ಮುಂದಿನ ಸರಕಾರ ಅಂತಹ ಎತ್ತರದ “ಆಸನಿ’ಗಳ ತಿಂಗಳ ವರಮಾನವನ್ನು ಕಡಿತಗೊಳಿಸುವ ಅಧಿಕಾರವನ್ನು ಮೊಟಕುಗೊಳಿಸಿ, ಅವರು ನಿರ್ಭಯದಿಂದ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಈ ಸೂತ್ರ ಸಂವಿಧಾನದಲ್ಲೇ ಹೆಣೆಯ ಲಾಗಿತ್ತು.

ಭಾರತ ಸಂವಿಧಾನದ 355 ವಿಧಿಗಳ ಬೃಹತ್‌ ಎನಿಸುವ ಒಕ್ಕಣೆಯ ಬಳಿಕವೂ ತೃಪ್ತಿಗೊಳ್ಳದ ಸಂವಿಧಾನಕರ್ತರು ಮುಂದೆ 9 ಅನುಸೂಚಿಗಳನ್ನೂ (Schedules) ಸೇರಿಸಿಬಿಟ್ಟರು. ಅಷ್ಟು ಮಾತ್ರವಲ್ಲದೆ, ಸಂವಿಧಾನ ಎನ್ನುವುದು “ನಿಂತ ನೀರಿನಂತಿರಬಾರದು, ಚಲಿಸುವ ಸಲಿಲದಂತಿರಲಿ’ ಎಂಬ ಆಶಯದೊಂದಿಗೆ ಬದಲಾಗುವ ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸರಕ್ಕೆ ಪೂರಕವಾಗಿ ಜನಮನದ ಆಶಯ ಬಿಂಬಿಸಲಿ ಎಂದು ಬಯಸಿ 368ನೇ ವಿಧಿಯ ಮೂಲಕ “ತಿದ್ದುಪಡಿಯ’ ಕೀಲಿಕೈ ಕೂಡ ಇಟ್ಟುಬಿಟ್ಟರು. ಈ ಎಲ್ಲ ಪ್ರಸ್ತಾವನೆಯೊಂದಿಗೆ 2ನೇ ಶೆಡ್ನೂಲ್‌ ಕಡೆಗೆ ಕಣ್ಣು ಹಾಯಿಸಿದಾಗ ಕಿರುನಗೆಯೊಂದಿಗೆ ಬೆರಳುಗಳು ನೇರ ಮೂಗಿನೆಡೆಗೆ ಸಾಗದಿರದು. ಅಂದು ಭಾರತದ ರಾಷ್ಟ್ರಾಧ್ಯಕ್ಷರ ಮಾಸಿಕ ಸಂಬಳ, ಅಲ್ಲ ಗೌರವ ವೇತನ ರೂ. 10,000! ರಾಜ್ಯದ ರಾಜ್ಯಪಾಲರ ತಿಂಗಳ ಗೌರವಧನ ರೂ. 5,500! ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರ ಸಂಬಳ ರೂ. 5,000! ಈ ಕೋರ್ಟಿಗೆ ಇತರ ನ್ಯಾಯಾಧೀಶರ ತಿಂಗಳ ಸಂಬಳ ರೂ. 4000! ಇತರ ನ್ಯಾಯಾಧೀಶರ ಸಂಬಳ ರೂ. 3,500; ಮಹಾ ಲೆಕ್ಕಪರಿಶೋಧಕರ ಸಂಬಳ ರೂ. 4,000, ಹೀಗೆ ಸಾಗಿದೆ ನಮ್ಮ ರಾಷ್ಟ್ರೀಯ ಮೂಲದ ದಾಖಲೆ ಸಂವಿಧಾನದ ಮೂಲ ಒಕ್ಕಣೆ. ಹೌದು; ಇದೇ ತಿಂಗಳ ಗೌರವಧನವನ್ನು ಆ ದಿನಗಳ “ಬಂಗಾರ’ದ ರೇಟಿನ ಸುವರ್ಣ ತಕ್ಕಡಿ’ಯಲ್ಲಿರಿಸಿ ನೋಡುವುದಾದರೆ ರಾಷ್ಟ್ರಾಧ್ಯಕ್ಷರಿಗೆ ತಿಂಗಳಿಗೆ ನೂರು ಹೊನ್ನಿನ ಪವನು, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳಿಗೆ 50 ಪವನಿನ “ಸರ’… ಹೀಗೆ ಸಾಗುತ್ತದೆ. ವಸ್ತು ರೂಪದ ತಾರ್ಕಿಕ ಸರಮಾಲೆ.

ಇವೆಲ್ಲದರ ಸಿಂಹಾವಲೋಕನ ನಡೆಸುತ್ತಿರುವಾಗಲೇ ಅತ್ಯಂತ ನವಿರಾಗಿ ಹಿರಿಯ ತಲೆಮಾರಿನ “ವಿಶ್ರಾಂತಿಗಳು’ ತಮ್ಮದೇ ಬದುಕಿನ ಪುಟ ತೆರೆಯಲಾರಂಭಿಸಬಹುದು.’ ಆ ಕಾಲ ಒಂದಿತ್ತು, ದಿವ್ಯ ತಾನಾಗಿತ್ತು, ಅದು ಬಾಲ್ಯವಾಗಿತ್ತು ಎಂಬ ಕುವೆಂಪುರವರ ನಲ್ಲವನವನ್ನು ಇನ್ನೊಂದು ಭಾವದಿಂದ ಗುಣಿಸುತ್ತಾ “ನಾನು ಸರ್ವಿಸ್‌ ಸೇರುವಾಗ… ‘ ಎಂದು ಹಿಸ್ಟರಿ ಬಿಚ್ಚಲೂಬಹುದು. ಅವರವರ ಸ್ವಗತದ ಪುಟಗಳೆಡೆಗೆ ಸದಾ ಬಿಝಿ ಆಗುತ್ತಲೇ ಇರುವ ಮಕ್ಕಳು ಮೊಮ್ಮಕ್ಕಳಿಗೆ ದೃಷ್ಟಿ ಹಾಯಿಸಲೂ ಪುರುಸೊತ್ತಿಲ್ಲ.

ಹೌದು, ಬದುಕು ಎಂದರೆ ಹೀಗೆಯೇ ಚಲನಶೀಲ, ಅದೇ ರೀತಿ ಆರ್ಥಿಕ ವಲಯವೂ ಕೂಡಾ. ಜೀವನ ಎಂಬುದು ಎಂದೂ ಸರಳ ರೇಖೆಯಲ್ಲ. ರಾಷ್ಟ್ರ ಜೀವನ ಎನ್ನುವುದು ಹಾಗೆಯೇ, ವಿಶ್ವ ಕುಟುಂಬದ ಬದುಕಿನ ಹಂದರ, ಅಂತಾರಾಷ್ಟ್ರ ವಿತ್ತ ಆರೋಹಣ, ಅವರೋಹಣ ಸ್ಥಿತಿಗತಿ ಇವೆಲ್ಲದರ “ಸಹಧರ್ಮಿ’ಗಳಾಗಿ ನಾವೂ ಹೆಜ್ಜೆ ಹಾಕುತ್ತಲೇ ಇರುತ್ತೇವೆ. ಒಟ್ಟಿನಲ್ಲಿ, ನಮ್ಮೆಲ್ಲರ ಮಾನವ ಸಂಪನ್ಮೂಲ, ರಾಷ್ಟ್ರೀಯ, ಪ್ರಾಕೃತಿಕ, ಸಂಪನ್ಮೂಲಗಳ ಸದ್ಬಳಕೆ ಪರಿಸರ ಸಮತೋಲನ – ಇವೆಲ್ಲಾ ಭಾಷಣ, ಘೋಷಣೆಯ ಸರಕು ಆಗಬಾರದು. ನಿಯಂತ್ರಣ ರೇಖೆಯಾಚೆಗೆ, “ಬೇಲಿ ಹಾರುವ ಬೆಲೆ’ಯಿಂದ ಆರ್ಥಿಕ ದುರ್ಬಲರ ಬದುಕು ದುರ್ಭರವಾಗಬಾರದು.

ಈ ನಿಟ್ಟಿನಲ್ಲಿ ಪ್ರಗತಿಯ ಚಕ್ರ ಭವಿಷ್ಯದ ಪಥಗಾಮಿಯಾಗಲಿ ಎಂಬುದೇ ಶುಭದೊಸಗೆ. ಕನಿಷ್ಠ ದಿನಗೂಲಿಯ ಪ್ರಸ್ತಾವ ರಾಷ್ಟ್ರಮಟ್ಟದಲ್ಲಿ ರೂ. 178ರಿಂದ ರೂ. 375ಕ್ಕೆ ಜಿಗಿಯುವ ಈ ಸಾಧ್ಯತೆಯ ನೆಲೆಯಲ್ಲಿ ಇದೊಂದು ಕುತೂಹಲದ ವಿಶ್ಲೇಷಣೆ. ಇನ್ನು ಮಾಸಿಕ ವೇತನ, ತುಟ್ಟಿಭತ್ತೆ, ಬೆಲೆ ಏರಿಕೆಯ ಮರೀಚಿಕೆಯ ವೀರಗಾಥೆಯೇ ಬೇರೆ ಸಂಪುಟ.

ಡಾ| ಪಿ. ಅನಂತಕೃಷ್ಣ ಭಟ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.