ಶಾಂತವಾಗಿದ್ದ ಹಿರೇಬಾಗೇವಾಡಿಯಲ್ಲಿ ಮತ್ತೊಂದು ಸೋಂಕು ಪತ್ತೆ: 13ರ ಬಾಲಕಿಗೆ ಸೋಂಕು
Team Udayavani, May 7, 2020, 1:42 PM IST
ಬೆಳಗಾವಿ: ಎರಡು ದಿನಗಳಿಂದ ಶಾಂತವಾಗಿದ್ದ ಕೋವಿಡ್-19 ಮಹಾಮಾರಿಯ ರುದ್ರಾವತಾರ ಬೆಳಗಾವಿಯಲ್ಲಿ ಮತ್ತೆ ಅಪ್ಪಳಿಸಿದ್ದು, ಹಿರೇಬಾಗೇವಾಡಿಯ 13 ವರ್ಷದ ಬಾಲಕಿಗೆ ಗುರುವಾರ ಕೋವಿಡ್-19 ಸೋಂಕು ತಗುಲಿದೆ.
ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಮರ್ಕಜ್ ಗೆ ಹೋಗಿ ಬಂದಿದ್ದ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಮಹಾಮಾರಿ ಪಸರಿಸುತ್ತಿದೆ. ಹಿರೇಬಾಗೇವಾಡಿಯ ಸೋಂಕಿತ ಸಂಖ್ಯೆ ಪಿ-364ರ ಸಂಪರ್ಕದಿಂದ ಬಾಲಕಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಸದ್ಯ ಒಟ್ಟು 74 ಜನರಿಗೆ ಸೋಂಕು ತಗುಲಿದಂತಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ನಡೆದಿದೆ. ಹಿರೇಬಾಗೇವಾಡಿ ಒಂದರಲ್ಲಿಯೇ ಬಾಲಕಿ ಸೇರಿ 37 ಮಂದಿಗೆ ಪಾಸಿಟಿವ್ ಬಂದಂತಾಗಿದೆ.
ರಾಜ್ಯದ ಒಟ್ಟು ಸೋಂಕಿತ ಸಂಖ್ಯೆ 701ಕ್ಕೆ ಮುಟ್ಟಿದೆ. ಅದರಲ್ಲಿ 30 ಜನರು ಸಾವನ್ನಪ್ಪಿದರೆ, 363 ಸೋಂಕಿತರು ಗುಣಮುಖರಾಗಿದ್ದಾರೆ.