ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 3,561 ಕೋವಿಡ್ ಪ್ರಕರಣ ಪತ್ತೆ, ಒಟ್ಟು 53 ಸಾವಿರಕ್ಕೆ ಏರಿಕೆ
15,266 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಇದರಲ್ಲಿ 111 ವಿದೇಶಿ ಪ್ರಜೆಗಳು ಸೇರಿದ್ದಾರೆ.
Team Udayavani, May 7, 2020, 8:03 PM IST
Representative Image
ನವದೆಹಲಿ:ಕಳೆದ 24 ಗಂಟೆಯಲ್ಲಿ 3,561 ಕೋವಿಡ್ 19 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದ್ದು, 89 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಗುರುವಾರ ಕೋವಿಡ್ 19 ಸೋಂಕಿತರ ಸಂಖ್ಯೆ 52,000ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಕಳೆದ 24ಗಂಟೆಯಲ್ಲಿ ಅಂದರೆ ಗುರುವಾರದ ಬೆಳಗ್ಗೆವರೆಗೆ ಭಾರತದಲ್ಲಿ ದಾಖಲೆಯ 3,561 ಹೊಸ ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶದ ಪ್ರಕಾರ, ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 52,952ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,783ಕ್ಕೆ ತಲುಪಿದೆ ಎಂದು ಹೇಳಿದೆ.
ಈವರೆಗೆ 15,266 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಇದರಲ್ಲಿ 111 ವಿದೇಶಿ ಪ್ರಜೆಗಳು ಸೇರಿದ್ದಾರೆ. ಬುಧವಾರದವರೆಗೆ ಕೋವಿಡ್ ಪ್ರಕರಣ 49,391ಕ್ಕೆ ಏರಿತ್ತು, ಸಾವಿನ ಸಂಖ್ಯೆ 1,694ಕ್ಕೆ ಏರಿಕೆಯಾಗಿತ್ತು.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣ ವರದಿಯಾಗಿದ್ದು, ಈವರೆಗೆ 16,758 ಪ್ರಕರಣ ಪತ್ತೆಯಾಗಿದೆ. ಒಟ್ಟು 651 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ 6,625 ಪ್ರಕರಣ ಪತ್ತೆಯಾಗಿದ್ದು, 396 ಮಂದಿ ಸಾವನ್ನಪ್ಪಿದ್ದರು. ದಿಲ್ಲಿಯಲ್ಲಿ 5,532 ಪ್ರಕರಣ ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ 4,829 ಪ್ರಕರಣ ವರದಿಯಾಗಿದೆ.