ಕರಮುಕ್ತ ಆದಾಯಕ್ಕೆ ಪ್ರಶಸ್ತವಾದ ಹೂಡಿಕೆ ಇಪಿಎಫ್ 

Team Udayavani, Feb 25, 2019, 12:30 AM IST

ಗುರುವಾರದಂದು ನೌಕರರ ಭವಿಷ್ಯ ನಿಧಿ ಸಂಸ್ಥೆಯು ಈ ವರ್ಷದ ಬಡ್ಡಿ ದರವನ್ನು ಪ್ರಕಟಿಸಿತು. ಕಳೆದೆರಡು ವರ್ಷಗಳಿಂದ ಇಳಿಕೆಯ ಹಾದಿಯಲ್ಲಿದ್ದ ಇ.ಪಿ.ಎಫ್. (ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡ್‌) ಬಡ್ಡಿ ದರವನ್ನು 2018-19 ಸಾಲಿಗೆ ಅನ್ವಯಿಸುವಂತೆ ಈ ಬಾರಿ ತುಸು ಏರಿಸಿದ್ದು ಇವತ್ತಿನ ವಿಶೇಷ. ಕಳೆದ ವರ್ಷ (2017-18) ಶೇ.8.55 ಇದ್ದ ಬಡ್ಡಿ ದರ ಈ ವರ್ಷ (2018-19) ಶೇ.8.65 ಏರಿಸಿದ್ದು ದೇಶದ 6 ಕೋಟಿ ಇ.ಪಿ.ಎಫ್. ಚಂದಾದಾರರಿಗೆ ತುಸು ಸಂತಸ ನೀಡಿದೆ. ಅಲ್ಲದೆ. ಇ.ಪಿ.ಎಫ್. ಬಡ್ಡಿ ದರವು ಯಾವತ್ತಿಗೂ ಸಂಪೂರ್ಣ ವಾದ ಕರಮುಕ್ತ ಆದಾಯ ಎನ್ನುವುದನ್ನು ಗಮನದಲ್ಲಿ ಇಟ್ಟು ಕೊಳ್ಳಬೇಕು.

ಕೇಂದ್ರದ ಕಾರ್ಮಿಕ ಸಚಿವರಾದ ಸಂತೋಷ್‌ ಗಂಗ್ವಾರ್‌ ನೇತೃತ್ವದ ಸೆಂಟಲ್‌ ಬೋರ್ಡ್‌ ಆಫ್ ಟ್ರಸ್ಟೀಸ್‌ (ಸಿ.ಬಿ.ಟಿ.) ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಇದೀಗ ಅದನ್ನು ವಿತ್ತ ಮಂತ್ರಾಲಯಕ್ಕೆ ರವಾನಿಸಿದೆ. ಇನ್ನು ವಿತ್ತ ಮಂತ್ರಾಲಯದ ಒಪ್ಪಿಗೆ ಸಿಕ್ಕ ಕೂಡಲೇ ಇದು ಜಾರಿಗೆ ಬರುತ್ತದೆ. ಆದ ಕಾರಣ ಸದ್ಯಕ್ಕೆ ಇದೇ ಕಾನೂನು ಅಲ್ಲದಿದ್ದರೂ ಈ ಚುನಾವಣಾ ಕಾಲಘಟ್ಟದಲ್ಲಿ ವಿತ್ತ ಮಂತ್ರಾಯದ ಒಪ್ಪಿಗೆ ಕೇವಲ ಔಪಚಾರಿಕವಾಗಿದ್ದು ಇದೇ ಬಡ್ಡಿ ದರ ಕಾನೂನಾಗಿ ಬರುವುದರಲ್ಲಿ ಯಾವ ಸಂಶಯವೂ ಉಳಿದಿಲ್ಲ.  ಓರ್ವ ಸಾಮಾನ್ಯ ಉದ್ಯೋಗಿಯ ಎದುರಿಗೆ ಇರುವ ನಿಗದಿತ ಪ್ರತಿಫ‌ಲದ ಉಳಿತಾಯ ಯೋಜನೆಗಳಲ್ಲಿ ಇ.ಪಿ.ಎಫ್. ಯಾವತ್ತಿಗೂ ನಂ.1 ಸ್ಥಾನದಲ್ಲಿ ಇದೆ. ಬ್ಯಾಂಕು ಮತ್ತು ಪೋಸ್ಟಾಫೀಸುಗಳಲ್ಲಿ ಲಭ್ಯವಿರುವ ಬೇರಾವ ಸಣ್ಣ ಉಳಿತಾಯ ಯೊಜನೆಯೂ ಈ ಮಟ್ಟದ ಪ್ರತಿಫ‌ಲ ನೀಡುವುದಿಲ್ಲ. ನೌಕರೇತರರ ಕಣ್ಣೀರು ಒರೆಸಲು ಇದರದ್ದೇ ಚೋಟಾ ಭಾಯ್‌ ಆದ ಪಿ.ಪಿ.ಎಫ್. (ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌) 2018-19 ಸಾಲಿನಲ್ಲಿ ಶೇ.7.6-ಶೇ.8.0 ಮಟ್ಟದಲ್ಲಿ ಬಡ್ಡಿ ನೀಡಿದ್ದು ವಾರ್ಷಿಕ ಸರಾಸರಿ ಲೆಕ್ಕದಲ್ಲಿ ನೀಡಿದ ಬಡ್ಡಿದರ ಶೇ.7.8 ಮಾತ್ರ! (ಈ ಪಿ.ಪಿ.ಎಫ್. ಎನ್ನುವ ಚೋಟಾ ಭಾಯ್‌ ಯಾವತ್ತಿಗೂ ಕೂಡಾ ತನ್ನ ದೊಡ್ಡಣ್ಣ ಇ.ಪಿ.ಎಫ್. ನೀಡಿದ ಬಡ್ಡಿದರವನ್ನು ನೀಡಿಲ್ಲ). ಇನ್ನುಳಿದ ಅಂಚೆಯ ಯೋಜನೆಗಳ ಮೇಲಿನ ದರ ಇನ್ನೂ ಕಡಿಮೆ ಯಾ ಗಿತ್ತು. ಕೆಳಗಿನ ಪಟ್ಟಿಯಲ್ಲಿ ಜನವರಿ-ಮಾರ್ಚ್‌ ಅವಧಿಯಲ್ಲಿ ಪೋಸ್ಟಾಫೀಸು ನೀಡುವ ಬಡ್ಡಿ ದರವನ್ನು ನೀಡಲಾಗಿದೆ. ಪ್ರತಿ ಮೂರು ತಿಂಗಳುಗಳಿಗೊಮ್ಮೆ ಪರಿಷ್ಕರಣಗೊಳ್ಳುವ ಈ ದರಗಳು ಮೊದಲು ಇನ್ನೂ ಕಡಿಮೆಯಿತ್ತು. 

Employees Provident Fund Act, 1952 ಕಾನೂನಿನ ಪ್ರಕಾರ ಸರಕಾರವು ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡ್‌ (EPF) ಎಂಬ ನಿಧಿಯನ್ನು ನೌಕರವರ್ಗದ ಭವಿಷ್ಯ ಕಲ್ಯಾಣಕ್ಕಾಗಿ ಸ್ಥಾಪಿಸಿತು. ಇದು ಸರಕಾರಿ ಹಾಗೂ ಖಾಸಗಿ ಕ್ಷೇತ್ರದ ನೌಕರರು – ಈರ್ವರಿಗೂ ಸಮಾನವಾಗಿ ಅನ್ವಯಿಸುವ ಸೌಲಭ್ಯ. ನೌಕರರು ಸಾಮಾನ್ಯವಾಗಿ ತಮ್ಮ ಪಿಎಫ್ ಎನ್ನುವುದು ಇದನ್ನೇ. 20ಕ್ಕೂ ಹೆಚ್ಚು ಉದ್ಯೋಗಿಗಳು ಇರುವ ಒಂದು ಸಂಸ್ಥೆಯಲ್ಲಿ ಈ ರೀತಿ ಇ.ಪಿ.ಎಫ್. ಕಡಿತ ಮಾಡುವುದು ಕಡ್ಡಾಯ. ಅದರಿಂದ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇ.ಪಿ.ಎಫ್. ನಿಧಿ ಅನುಷ್ಠಾನ ಕಡ್ಡಾಯವಲ್ಲ. ಅಲ್ಲದೆ, ಮಾಸಿಕ ಸಂಬಳ ರೂ. 15,000 (ಬೇಸಿಕ್‌+ಡಿ.ಎ.) ಗಿಂತ ಜಾಸ್ತಿ ಇರುವ ಉದ್ಯೋಗಿಗಳ ಮೇಲೆ ಕೂಡಾ ಈ ಸ್ಕೀಮು ಕಡ್ಡಾಯವಲ್ಲ. ಈ ಮಿತಿಯ ಒಳಗೆ ವೇತನ ಪಡೆಯುವ ವರ್ಗಕ್ಕೆ ಮಾತ್ರ ಈ ಸ್ಕೀಮು ಕಡ್ಡಾಯ. ಆದರೂ ಬಹುತೇಕ ಉತ್ತಮ ಕಂಪೆನಿಗಳು ತಮ್ಮ ಎಲ್ಲಾ
 ಉದ್ಯೋಗಿಗಳಿಗೂ (ಅಂದರೆ, ರೂ. 15,000 ಮೀರಿದ ವರ್ಗಕ್ಕೂ ಸಹಿತ) ಪಿ.ಎಫ್. ಕಡಿತವನ್ನು ಐಚ್ಛಿಕವಾಗಿಯಾದರೂ ಉದ್ಯೋಗಿಗಳ ಹಿತದೃಷ್ಟಿಯಿಂದ ಮಾಡುತ್ತಿವೆ. ಏಕೆಂದರೆ, ಪ್ರಾವಿಡೆಂಟ್‌ ಫ‌ಂಡ್‌ ಎಂಬುದು ಭವಿಷ್ಯಕ್ಕಾಗಿ ಮಾಡುವಂತಹ ಒಂದು ಉತ್ತಮವಾದ ಉಳಿತಾಯ ಯೋಜನೆ. ನಿಗದಿತ, ಕರಮುಕ್ತ ಆದಾಯಕ್ಕೆ ಇ.ಪಿ.ಎಫ್.ನಷ್ಟು ಪ್ರಶಸ್ತವಾದ ಹೂಡಿಕೆ ಇನ್ನೊಂದಿಲ್ಲ.

ದೇಣಿಗೆ: ವೇತನದ (ಬೇಸಿಕ್‌ ಮತ್ತು ಡಿಎ) ಶೇ.12 ಉದ್ಯೋಗಿಯ ಸಂಬಳದಿಂದ ಕಡಿದು ಈ ನಿಧಿಗೆ ಎಕೌಂಟ್‌ “ಎ’ ಅಡಿಯಲ್ಲಿ ಜಮೆ ಮಾಡಲಾಗುತ್ತದೆ. ಅದಲ್ಲದೆ ಉದ್ಯೋಗದಾತನ ವತಿಯಿಂದಲೂ ಕೂಡಾ ಪ್ರತ್ಯೇಕವಾಗಿ ಇನ್ನೊಂದು ಶೇ.12 ಕಡಿತಗೊಳಿಸಿ ಎಕೌಂಟ್‌ “ಬಿ’ ಅಡಿಯಲ್ಲಿ ಉದ್ಯೋಗಿಯ ಪಿಎಫ್ ಖಾತೆಗೆ ಸೇರಿಸಲಾಗುತ್ತದೆ. ಹಾಗಾಗಿ ಒಟ್ಟು ಜಮೆ ಶೇ.24. ಸ್ಥೂಲವಾಗಿ ನಾವು ಶೇ.24 ಎಂದು ಹೇಳುತ್ತೇವಾದರೂ ಅಸಲಿಗೆ ನಮ್ಮ ಪಿ.ಎಫ್. ಖಾತೆಗೆ ಈ ಶೇ.24 ಸಂಪೂರ್ಣವಾಗಿ ಜಮೆಯಾ ಗು ವುದಿಲ್ಲ. ಉದ್ಯೋಗದಾತರ ಶೇ.12ನಲ್ಲಿ ಎರಡು ಭಾಗಗಳಿವೆ. ಮೊತ್ತಮೊದಲನೆಯದಾಗಿ ಸಂಬಳದ ಶೇ.8.33 (ಗರಿಷ್ಠ ಸಂಬಳ ಮಿತಿ ರೂ. 15,000 ಅಂದರೆ ರೂ. 1250) ಪಿಎಫ್ ಅಡಿಯಲ್ಲಿಯೇ ಬರುವ ಒಂದು ಪೆನ್ಶನ್‌ ಉಪಖಾತೆಗೆ ಹೋಗುತ್ತದೆ. ಎಂಪ್ಲಾಯೀ ಪೆನ್ಶನ್‌ ಸ್ಕೀಮ್‌ ಅಥವ “ಇಪಿಎಸ್‌’ ಎನ್ನುವ ಈ ಸ್ಕೀಮು ನಿವೃತ್ತಿಯ ಬಳಿಕ ಸಿಗುವ ಪೆನ್ಶನ್‌ಗಾಗಿ ಮೀಸಲಾಗಿದೆ. ಹಾಗಾಗಿ. ಈ ಪೆನ್ಶನ್‌ ದೇಣಿಗೆ ಯಾದ ಶೇ.8.33 ಕಳೆದು ಅಥವ ಗರಿಷ್ಠ ರೂ. 1250 ಕಳೆದು ಉಳಿದ ಮೊತ್ತ ಮಾತ್ರವೇ ಒಬ್ಟಾತನ ಇಪಿಎಫ್ನಲ್ಲಿ ಜಮೆ ಯಾಗುತ್ತದೆ. 

VPFಎಂದರೇನು?: ಮೇಲೆ ಹೇಳಿದಂತೆ ಶೇ.12 ನೌಕರನ ವತಿಯಿಂದ (ಎಕೌಂಟ್‌ ಎ) ಹಾಗೂ ಎಂಪ್ಲಾಯರ್‌ ವತಿಯಿಂದ ಶೇ.12 (ಎಕೌಂಟ್‌ ಬಿ) ಇಪಿಎಫ್ ಖಾತೆಯಲ್ಲಿ ಕಟ್ಟಲ್ಪಡುತ್ತದಷ್ಟೆ? ಒಬ್ಬ ನೌಕರನಿಗೆ ಸ್ವ-ಇಚ್ಚೆಯಿಂದ ತನ್ನ ಸಂಬಳದ (ಬೇಸಿಕ್‌+ಡಿ.ಎ) ಶೇ.100ದಷ್ಟನ್ನು ತನ್ನ ಪಿಎಫ್ ಖಾತೆಯ ಇನ್ನೊಂದು ಎಕೌಂಟ್‌ “ಸಿ’ ಯಲ್ಲಿ ಐಚ್ಚಿಕ ಅಥವ ವಾಲೆಂಟರಿಯಾಗಿ ಹಾಕುವ ಸೌಲಭ್ಯವನ್ನು ಸರಕಾರ ಕಲ್ಪಿಸಿಕೊಟ್ಟಿದೆ. ಪ್ರಾವಿಡೆಂಟ್‌ ಫ‌ಂಡಿನ ಈ ಭಾಗವನ್ನು Voluntary Provident Fund  ಎಂದು ಕರೆಯುತ್ತಾರೆ. ಇದು ಒಬ್ಬನ ಪ್ರಾವಿಡೆಂಟ್‌ ಫ‌ಂಡ್‌ ಖಾತೆಯದೇ ಒಂದು ಅಂಗವಾಗಿದೆ ಹಾಗೂ ಇದಕ್ಕೆ ಎ ಮತ್ತು ಬಿ ಎಕೌಂಟಿನಷ್ಟೇ ಬಡ್ಡಿದರ, ಕರ ವಿನಾಯತಿ ಇತ್ಯಾದಿಗಳು ಅನ್ವಯ ಆಗುತ್ತದೆ. ಆದರೆ, ವಾಲಂಟರಿ ಜಮೆಯ ಮೇಲೆ ಎಂಪ್ಲಾಯರುಗಳ ಸರಿಸಮ ಜಮೆ ಇರುವುದಿಲ್ಲ. 

ನಿಮಗೆ ಈ ರೀತಿ ಸ್ವ-ಇಚ್ಚೆಯಿಂದ ಎಕೌಂಟ್‌ “ಸಿ’ ಯಲ್ಲಿ ವಿಪಿಎಫ್ ಜಮೆ ಮಾಡುವುದು ಉತ್ತಮ. ಕರಮುಕ್ತವಾದ ಉತ್ತಮ ಬಡ್ಡಿದರ ನಿಮ್ಮನ್ನು ಕಾಯುತ್ತಿದೆ. ಹಾಗೆ ಮಾಡಬೇಕೆಂದಿದ್ದರೆ ಪ್ರತೀ ವಿತ್ತ ವರ್ಷ (ಎಪ್ರಿಲ್‌-ಮಾರ್ಚ್‌)ದ ಆರಂಭದಲ್ಲಿ ನಿಮ್ಮ ಕಂಪೆನಿಗೆ ತಿಳಿಸತಕ್ಕದ್ದು. ನಿಮ್ಮ ನಿರ್ಧಾರವನ್ನು ವರ್ಷದ ನಡುವೆ ಬದಲಿಸುವಂತಿಲ್ಲ. ಹೊಸ ವರ್ಷಕ್ಕೆ ಪುನಃ ಬದಲಾಯಿಸಬಹುದು.

ಕರ ವಿನಾಯತಿ: ಇದಕ್ಕೆ ಹಾಕಿದ ಎಲ್ಲಾ ದುಡ್ಡಿಗೂ (ವಿಪಿಎಫ್ ಸಹಿತ) ಸೆಕ್ಷನ್‌ 80ಸಿ ಅನ್ವಯ ಕರ ವಿನಾಯತಿ ದೊರಕುತ್ತದೆ. ಇದರಲ್ಲಿ ಉತ್ಪನ್ನವಾಗ ವಾರ್ಷಿಕ ಬಡ್ಡಿಯೂ ಕರರಹಿತ ಹಾಗೂ ಇದರಿಂದ ವಾಪಾಸು ಪಡಕೊಳ್ಳುವ ಸಮಯದಲ್ಲಿ ಕೂಡಾ ಪೂರ್ಣ ಮೊತ್ತ ಕರ ರಹಿತ. ಹೀಗೆ ಮೂರೂ ಹಂತಗಳಲ್ಲಿ ಕರ ವಿನಾಯತಿ ಇರುವ ಇಂತಹ ಸ್ಕೀಂಗಳಿಗೆ Exempt & Exempt & Exempt (CCC)ಎನ್ನುತ್ತಾರೆ. 

ಆದರೆ, ಖಾತೆ ಆರಂಭಿಸಿ 5 ವರ್ಷಗಳ ನಿರಂತರ ಸೇವೆಯ ಒಳಗಾಗಿ ಪಿಎಫ್ ದುಡ್ಡು ವಾಪಾಸು ತೆಗೆದುಕೊಂಡಲ್ಲಿ ಆ ಮೊತ್ತದ ಉದ್ಯೋಗದಾತರ ದೇಣಿಗೆ ಹಾಗೂ ಬಡ್ಡಿಯ ಅಂಶವು ಸಂಪೂರ್ಣವಾಗಿ ಆ ವರ್ಷದ ಆದಾಯಕ್ಕೆ ಸೇರಿಸಲ್ಪಟ್ಟು ತೆರಿಗೆಗೆ ಒಳಪಡುತ್ತದೆ. ನೌಕರನ ದೇಣಿಗೆಯ ಮೇಲೆ ಹಿಂದೆ ಕರ ವಿನಾಯಿತಿ ಪಡೆದಿದ್ದರೆ ಈವಾಗ ಅದನ್ನೂ ಕೂಡಾ ಆದಾಯವೆಂದು ಪರಿಗಣಿಸಿ ಅದರ ಮೆಲೆ ಕರ ಕಟ್ಟತಕ್ಕದ್ದು. ಅಲ್ಲದೆ ಹಿಂಪಡೆದ ಒಟ್ಟು ಮೊತ್ತ ರೂ. 50,000 ದಾಟಿದರೆ ಶೇ.10 ಟಿಡಿಎಸ್‌ (ಪ್ಯಾನ್‌ ಕಾರ್ಡ್‌ ಇಲ್ಲದಿದ್ದರೆ ಶೇ. 30) ಕಡಿತ ಕೂಡಾ ಇರುತ್ತದೆ (ಪಾರ್ಮ್ 15ಜಿ/ಎಚ್‌ ನೀಡಿದರೆ ಟಿಡಿಎಸ್‌ ಮಾಫ್). ಈ 5 ವರ್ಷದ ನಿರ್ಬಂಧಕ್ಕೆ ಕೂಡಾ ಕೆಲ ರಿಯಾಯಿತಿಗಳಿವೆ. ಒಂದು ವೇಳೆ ಅನಾರೋಗ್ಯದ ನಿಮಿತ್ತ, ಕಂಪೆನಿಯೇ ಬಂದ್‌ ಆದ ಕಾರಣಕ್ಕೆ ಅಥವಾ ನೌಕರನ ಕೈ ಮೀರಿದ ಬೇರಾವುದೇ ಕಾರಣಕ್ಕಾಗಿ ಕೆಲಸ ಕಳೆದುಕೊಂಡವರಿಗೆ 5 ವರ್ಷದ ನಿರಂತರ ಸೇವೆ ಇಲ್ಲದಿದ್ದರೂ ಆದಾಯ ತೆರಿಗೆ ಇರುವುದಿಲ್ಲ. 

ಅಲ್ಲದೆ, ನಿವೃತ್ತಿ ಅಥವಾ ರಾಜೀನಾಮೆಯ ಬಳಿಕವೂ ಖಾತೆಯನ್ನು ಊರ್ಜಿತದಲ್ಲಿ ಇಟ್ಟಿದ್ದರೆ ಅಂತಹ ಅವಧಿಯಲ್ಲಿ ನೀಡುವ ಬಡ್ಡಿಗೆ ಕರ ವಿನಾಯಿತಿ ಇರುವುದಿಲ್ಲ. ಉದ್ಯೋಗದಲ್ಲಿ ಇಲ್ಲದ ವ್ಯಕ್ತಿಯ ಖಾತೆಗೆ ಬೀಳುವ ಬಡ್ಡಿಯ ಮೇಲೆ ಆದಾಯ ತೆರಿಗೆ ಕಟ್ಟತಕ್ಕದ್ದು ಎಂದು ಆದಾಯ ತೆರಿಗೆ ಟ್ರಿಬ್ಯೂನಲ್‌ ತೀರ್ಪು ಇದೆ.
 
ನಾಮಿನೇಶನ್‌: ಬೇರೆಲ್ಲಾ ವಿತ್ತೀಯ ಸೊತ್ತುಗಳಿಗೆ ಇರುವಂತೆ ಇಲ್ಲೂ ನಾಮಿನೇಷನ್‌ ನಮೂದಿಸಿರುವುದು ಅತ್ಯಗತ್ಯ. ಖಾತೆದಾರನ ಮರಣದ ನಂತರ ಅತಿಸುಲಭವಾಗಿ ದುಡ್ಡು ನಾಮಿನಿಯ ಕೈಗೆ ಹಸ್ತಾಂತರಿಸಲ್ಪಡುತ್ತದೆ. ದಯವಿಟ್ಟು ನಿಮ್ಮ ಕಂಪೆನಿಯಲ್ಲಿ ಈ ಬಗ್ಗೆ ವಿಚಾರಿಸಿ ನಿಮ್ಮ ಖಾತೆಗೆ ನಾಮಿನೇಶನ್‌ ನಮೂದಿಸದೇ ಇದ್ದಲ್ಲಿ ಈ ಕೂಡಲೇ ಫಾರ್ಮ್ 2 ತುಂಬಿ ಆ ಕಾರ್ಯ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಮರಣಾನಂತರ ನಾಮಿನೇಶನ್‌ ಇಲ್ಲದ ಖಾತೆಯಿಂದ ದುಡ್ಡು ಪಡೆಯಬೇಕಾದರೆ ಕುಟುಂಬದವರಿಗೆ ಇನ್ನಿಲ್ಲದ ಕಾನೂನೀ ಕೆಲಸ ಮಾಡಬೇಕಾಗಿ ಬರಬಹುದು. 

UAN: ಎಲ್ಲಾ ಇಪಿಎಫ್ ಖಾತೆಗಳಿಗೆ ಈವಾಗ Universal Account Number  ಅಥವಾ UAN ನೀಡಲಾಗಿದೆ. ನಿಮ್ಮ ಸಂಸ್ಥೆ ನಿಮಗೆ ಇದನ್ನು ಮಾಡಿಸಿಕೊಡುತ್ತದೆ. ಈ ಯುಎ ನಂಬರ್‌ ನಿಮ್ಮ ಶಾಶ್ವತ ಖಾತೆಯ ನಂಬರ್‌ ಆಗಿದ್ದು ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್‌ ಮೂಲಕ ಮಾಡಲು ಇದು ಸಹಾಯಕ. 

ಆನ್‌ಲೈನ್‌ ವ್ಯವಹಾರ: ಇತ್ತೀಚೆಗೆ ಎಪಿಎಫ್ಒ ತನ್ನ ಜಾಲತಾಣ ವನ್ನು ಹೂಡಿಕೆದಾರರಿಗಾಗಿ ತೆರೆದಿದ್ದು ಅದರಲ್ಲಿ ಬ್ಯಾಲನ್ಸ್‌ ವಿಚಾರಣೆ ಅಲ್ಲದೆ ಖಾತಾ ವರ್ಗಾವಣೆ, ಹಿಂಪಡೆತ ಇತ್ಯಾದಿಗಳಿಗೆ ಆನ್‌ಲೈನ್‌ ಅರ್ಜಿ ಗುಜರಾಯಿಸಬಹುದು. ಇದರಲ್ಲಿರುವ ಇ-ಪಾಸುºಕ್‌ ಸೌಲಭ್ಯದಿಂದ ನೀವು ನಿಮ್ಮ ಖಾತೆಯ ಪಾಸ್‌ಬುಕ್ಕನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. 

https://unifiedportal&mem.epfindia.gov.in/memberinterface ತಾಣಕ್ಕೆ ಹೋಗಿ ನಿಮ್ಮ UANನಂಬರ್‌ ಬಳಸಿಕೊಂಡು ರಿಜಿಸ್ಟರ್‌ ಮಾಡಿಕೊಳ್ಳಿ. ಆ ಬಳಿಕ ಮೊಬೈಲ್‌ ಸಂದೇಶದ ಮೂಲಕ ದೊರಕಿದ ಪಿನ್‌ ನಂಬರ್‌ ಮೂಲಕ ಲಾಗ್‌ಇನ್‌ ಆಗಬಹುದು. ಅಲ್ಲಿ ಸೈಟಿನಲ್ಲಿರುವ ಇ-ಪಾಸ್‌ಬುಕ್‌ ಅಯ್ಕೆಯ ಮೂಲಕ ನಿಮ್ಮ ಪಾಸ್‌ಬುಕ್ಕನ್ನು ಡೌನ್‌ಲೋಡ್‌ ಮಾಡ ಬ ಹುದು. ನಿಧಿ ವರ್ಗಾವಣೆ ಮತ್ತು ವಾಪಸಾತಿಗೆ ಅರ್ಜಿಯನ್ನೂ ಗುಜರಾಯಿಸಬಹುದು. ಅಷ್ಟೇ ಅಲ್ಲದೆ ಇಲ್ಲಿ ಉಮಂಗ್‌ ಎನ್ನುವ ಮೊಬೈಲ್‌ ಆ್ಯಪ್‌ ಕೂಡಾ ಡೌನೊಡ್‌ ಮಾಡಬಹುದು. 

ಇದು ಹೊಸ ಸೌಲಭ್ಯವಾದ ಕಾರಣ ಇದಿನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯವೆಸಗುತ್ತಿಲ್ಲ. ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ. ನಿಮ್ಮ ಕಂಪೆನಿ ಇ-ಚಲನ್‌ ಮೂಲಕ ಪಿಎಫ್ ಕಂತು ಪಾವತಿ ಮಾಡಿದ್ದರೆ ಮಾತ್ರ ಇದರಲ್ಲಿ ವಿವರ ಕಾಣಿಸಬಹುದು. ಅದಲ್ಲದೆ ಈ ಸೌಲಭ್ಯ ಟ್ರಸ್ಟ್‌ ನಿರ್ವಹಣೆಯಲ್ಲಿ ನಡೆಯುವ ಫ‌ಂಡುಗಳಿಗೆ ಇನ್ನೂ ತೆರೆದಿಲ್ಲ. ಕ್ರಮೇಣ ಎಲ್ಲವನ್ನೂ ವಿದ್ಯುನ್ಮಾನ ವೇದಿಕೆಯಲ್ಲಿ ತೆರೆದಿಡುವ ಯೋಜನೆ ಇದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ