ಪೂರ್ತಿ ಸಂಬಳದ ಮೇಲೆ ಪೆನ್ಶನ್‌ ಹೆಚ್ಚಳ-ನೈಜ ಚಿತ್ರಣ

Team Udayavani, Jun 3, 2019, 6:15 AM IST

ಸದ್ಯಕ್ಕೆ ಖಾಸಗಿ ವಲಯದಲ್ಲಿ ಜಾರಿಯಲ್ಲಿರುವ ಎಂಪ್ಲಾಯೀಸ್‌ ಪೆನ್ಶನ್‌ ಸ್ಕೀಮ್‌ ಆರಂಭವಾಗಿದ್ದು 1995ರಲ್ಲಿ. ಇದಕ್ಕೂ ಮೊದಲು ಖಾಸಗಿ ವಲಯಕ್ಕೆ ಪೆನ್ಶನ್‌ ಯೋಜನೆ ಇರಲಿಲ್ಲ. ನೌಕರಿಯಲ್ಲಿ ಇರುವಾಗ ಸಾವು ಸಂಭವಿಸಿದಲ್ಲಿ ಮಾತ್ರ ಕುಟುಂಬದವರಿಗೆ ಸಿಗುವ ಫ್ಯಾಮಿಲಿ ಪೆನ್ಶನ್‌ ಯೋಜನೆ ಮಾತ್ರವೇ ಜಾರಿಯಲ್ಲಿತ್ತು.

ಎಪ್ರಿಲ್ 1 ರಂದು ಹೊರಬಿದ್ದ ಸುಪ್ರೀಂ ಕೋರ್ಟಿನ ತೀರ್ಪಿನ ಅನುಸಾರ ಇನ್ನು ಮುಂದೆ ಪೆನ್ಶನ್‌ ಪಾವತಿಯಲ್ಲಿ ಭಾರೀ ಹೆಚ್ಚಳವಾಗಲಿದೆ ಎಂಬ ಸುದ್ದಿ ಕಿಚ್ಚಿನಂತೆ ಹಬ್ಬಿದೆ. ಇಲೆಕ್ಷನ್‌ ಪ್ರಯುಕ್ತ ಚೋಟಾ ಸಾ ಬ್ರೇಕ್‌ ತೆಗೆದುಕೊಂಡ ‘ಕಾಸು ಕುಡಿಕೆ’ ಇದೀಗ ಈ ಬ್ರೇಕಿಂಗ್‌ ನ್ಯೂಸ್‌ ಕೆ ಸಾಥ್‌… ಸುಪ್ರೀಂ ಕೋರ್ಟ್‌ ಪೆನ್ಶನ್‌ ಬಗ್ಗೆ ಹೇಳಿದ್ದೇನು? ಅದರಿಂದ ಆಗುವ ಪರಿಣಾಮ ಏನು? ಮತ್ತು ಸದ್ಯದ ಪರಿಸ್ಥಿತಿ ಏನು ಎಂಬುದರ ಬಗ್ಗೆ ಈ ಕಾಕು.

ಇ.ಪಿ.ಎಸ್‌. 1995: ಸದ್ಯಕ್ಕೆ ಖಾಸಗಿ ವಲಯದಲ್ಲಿ ಜಾರಿಯಲ್ಲಿರುವ ಎಂಪ್ಲಾಯೀಸ್‌ ಪೆನ್ಶನ್‌ ಸ್ಕೀಮ್‌ (ಇ.ಪಿ.ಎಸ್‌.) ಆರಂಭವಾಗಿದ್ದು 1995ರಲ್ಲಿ. ಇದಕ್ಕೂ ಮೊದಲು ಖಾಸಗಿ ವಲಯಕ್ಕೆ ಅನ್ವಯಿಸುವಂತೆ ಪೆನ್ಶನ್‌ ಯೋಜನೆ ಇರಲಿಲ್ಲ. ನೌಕರಿಯಲ್ಲಿ ಇರುವಾಗ ಸಾವು ಸಂಭವಿಸಿದಲ್ಲಿ ಮಾತ್ರ ಕುಟುಂಬದವರಿಗೆ ಸಿಗುವ ಫ್ಯಾಮಿಲಿ ಪೆನ್ಶನ್‌ ಯೋಜನೆ (ಎಫ್.ಪಿ.ಎಸ್‌.) ಮಾತ್ರವೇ ಜಾರಿಯಲ್ಲಿತ್ತು. ನೌಕರರ ಮಾಸಿಕ ದೇಣಿಗೆಯ ದೃಷ್ಟಿಕೋನದಿಂದ ನೋಡಿದರೆ, 1995ರಲ್ಲಿ ಆರಂಭವಾದ ಇ.ಪಿ.ಎಸ್‌. ಯೋಜನೆಯನ್ನು 1952ರಿಂದಲೇ ಜಾರಿಯಲ್ಲಿದ್ದ ಎಂಪ್ಲಾಯೀಸ್‌ ಪ್ರಾವಿಡೆಂಟ್ ಫ‌ಂಡ್‌ (ಇ.ಪಿ.ಎಫ್.) ಯೋಜನೆಯೊಂದಿಗೆ ತಳುಕು ಹಾಕಿದರು. ಆ ಪ್ರಕಾರ ಕಂಪೆನಿಯ ದೇಣಿಗೆಯಾದ ಸಂಬಳದ (ಬೇಸಿಕ್‌+ಡಿಎ) ಶೇ.12 ಕಡಿತ ಸಂಪೂರ್ಣವಾಗಿ ಇ.ಪಿ.ಎಫ್.ಗೆ ಹೋಗುವಂತೆ, ಆದರೆ ಕಂಪೆನಿಯ ಶೇ.12 ಕಡಿತದ ಶೇ. 8.33 ಭಾಗವನ್ನು ಇ.ಪಿ.ಎಸ್‌. ಎಂಬ ಪೆನ್ಶನ್‌ ಸ್ಕೀಮಿಗೆ ಹಾಕಿ ಉಳಿದ ಶೇ.3.67 ಮಾತ್ರವೇ ಇ.ಪಿ.ಎಫ್. ಯೋಜನೆಗೆ ಹೋಗುವಂತೆ ನಿಯಮಾವಳಿ ರೂಪಿಸಲಾಯಿತು. ಈ ರೀತಿ ಇ.ಪಿ.ಎಫ್. ನ ಒಂದು ಭಾಗವಾಗಿ (ದೇಣಿಗೆಯ ದೃಷ್ಟಿಯಿಂದ) ಎಲ್ಲರ ಇ.ಪಿ.ಎಸ್‌. ಖಾತೆ ಸೃಷ್ಟಿಯಾಯಿತು. ಈ ರೀತಿಯ ಏರ್ಪಾಡಿನಲ್ಲಿ ಇ.ಪಿ.ಎಸ್‌.ಗೆ ಸಂದ ದುಡ್ಡು ಇ.ಇ.ಎಫ್.ಗೆ ಖೋತಾ ಆಗುತ್ತದೆ – ಈ ರೀತಿಯಲ್ಲಿ ಅವೆರಡು ಯೋಜನೆಗಳೊಳಗೆ ಹೊಂದಾಣಿಕೆ ಇರುತ್ತದೆ.

1995ರಲ್ಲಿ ಈ ಯೋಜನೆ ಆರಂಭವಾದಾಗ ಈ ಯೋಜನೆಯ ಅನ್ವಯ ದೇಣಿಗೆ ಕಡಿತಕ್ಕೆ ಸಂಬಳದ ಮಿತಿ (ಬೇಸಿಕ್‌+ಡಿಎ) ರೂ. 6,500 ಎಂಬುದಾಗಿ ನಿಗದಿಪಡಿಸಲಾಗಿತ್ತು. ಅಂದರೆ, ಪೆನ್ಶನ್‌ ಫ‌ಂಡಿಗೆ ಹೋಗುವ ಮಾಸಿಕ ದೇಣಿಗೆ ಪ್ರತಿ ತಿಂಗಳು ಅದರ ಶೇ.8.33 ಅಂದರೆ ರೂ. 542 ಮಾತ್ರ. ಬಹುತೇಕ ಎಲ್ಲಾ ಸಂಸ್ಥೆಗಳಲ್ಲೂ ಈ ಮಿತಿಯೊಳಗೆಯೇ ಪೆನ್ಶನ್‌ ದೇಣಿಗೆಯನ್ನು ಕಂಪೆನಿಗಳು ನೀಡುತ್ತಿದ್ದವು. ಬಳಿಕ ಮಾರ್ಚ್‌ 2016 ರಲ್ಲಿ ಕಂಪೆನಿ ಒಪ್ಪಿದರೆ ಮತ್ತು ನೌಕರರು ಒಪ್ಪಿದರೆ ರೂ. 6,500 ಮೀರಿ ಸಂಪೂರ್ಣ ಸಂಬಳದ (ಬೇಸಿಕ್‌+ಡಿಎ) ಮೇಲೆ ಪೆನ್ಶನ್‌ ದೇಣಿಗೆಯನ್ನು ಖಾತೆಗೆ ಜಮೆ ಮಾಡುವ ಅವಕಾಶ ನೀಡಲಾಯಿತು. ಬಹಳಷ್ಟು ಕಂಪೆನಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲಿಲ್ಲವಾದರೂ ಕೆಲವು ಕಂಪೆನಿಗಳು ಉಪಯೋಗಿಸಿಕೊಂಡು ಹೆಚ್ಚುವರಿ ದೇಣಿಗೆಯನ್ನು ನೌಕರರ ಪೆನ್ಶನ್‌ ಖಾತೆಗೆ ಹಾಕುತ್ತಿದ್ದರು. (ಅಂತಹ ಸಂದರ್ಭದಲ್ಲಿ ಪಿ.ಎಫ್. ಖಾತೆಗೆ ಹೋಗುವ ದುಡ್ಡು ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ ಎನ್ನುವುದನ್ನು ಮರೆಯಬಾರದು)

ಆ ಸಂದರ್ಭದಲ್ಲಿ ಪೆನ್ಶನ್‌ ಪಡೆಯುವ ಮೊತ್ತವನ್ನು ಕಟ್ಟಕಡೆಯ ಮಾಸಿಕ ಸಂಬಳದ ಮೇಲೆ ಒಂದು ಫಾರ್ಮುಲಾ ಪ್ರಕಾರ ಲೆಕ್ಕ ಹಾಕಲಾಗುತ್ತಿತ್ತು.

ಪೆನ್ಷನ್‌ ಮೊತ್ತ = (ಕೊನೆಯ ಮಾಸಿಕ ಸಂಬಳ ಗಿ ಸರ್ವಿಸ್‌ ಅವಧಿ ವರ್ಷಗಳು)/70.

ಇಲ್ಲಿ ಕೊನೆಯ ಮಾಸಿಕ ಸಂಬಳ ಎಂದರೆ ಕೊನೆಯ ಹನ್ನೆರಡು ತಿಂಗಳುಗಳ ಬೇಸಿಕ್‌ ಮತ್ತು ಡಿಎ ಸಂಬಳದ ಸರಾಸರಿ ಎಂದು ತಿಳಿಯತಕ್ಕದ್ದು. ದೇಣಿಗೆಯ ಸಂದರ್ಭದಲ್ಲಿ ರೂ. 6,500 ಮಿತಿಯಲ್ಲಿ ದೇಣಿಗೆ ಕೊಟ್ಟವರು ಪೆನ್ಶನ್‌ ಸಂದರ್ಭದಲ್ಲೂ ಕೊನೆಯ ಸಂಬಳವನ್ನು ಅದೇ ರೂ. 6,500 ಎಂದು ಪರಿಗಣಿಸಬೇಕು. ಇಲ್ಲಿ ಗರಿಷ್ಠ ಸೇವಾ ಅವಧಿ 35 ವರ್ಷಕ್ಕೆ ಸೀಮಿತವಾಗುವ ಕಾರಣ ಗರಿಷ್ಠ ಪೆನ್ಶನ್‌ 6500X35/70 = 3250ಕ್ಕೆ ಸೀಮಿತವಾಯಿತು. (ಸಂಪೂರ್ಣ ಸಂಬಳದ ಮೇಲೆ ದೇಣಿಗೆ ನೀಡಿದವರು ಮಾತ್ರ ಸಂಪೂರ್ಣ ಸಂಬಳ ಆಧಾರದಲ್ಲಿ ಪೆನ್ಶನ್‌ ಪಡೆಯಬಲ್ಲರು)

ಸೆಪ್ಟೆಂಬರ್‌ 1, 2014 ರ ಬದಲಾವಣೆ: 2014 ರಲ್ಲಿ ಇ.ಪಿ.ಎಫ್.ಒ. ಸಂಸ್ಥೆಯು ಪೆನ್ಶನ್‌ ಯೋಜನೆಯಲ್ಲಿ ಈ ಕೆಳಗಿನ ಮಹತ್ತರದ ಬದಲಾವಣೆಗಳನ್ನು ತಂದಿತು.

1. ದೇಣಿಗೆಯ ಮಟ್ಟಿಗೆ ಮಾಸಿಕ ಮಿತಿಯಾದ ರೂ. 6,500 ಅನ್ನು ರೂ. 15,000ಕ್ಕೆ ಏರಿಸಿತು. ಅಂದರೆ ಗರಿಷ್ಠ ದೇಣಿಗೆ ರೂ. 542 ರಿಂದ ರೂ. 1,250 ಕ್ಕೆ ಏರಿಕೆಯಾಯಿತು.

2. ಜೊತೆಗೆ ಆ ಮಿತಿಯನ್ನು ಮೀರಿ ದೇಣಿಗೆ ನೀಡುವ ಅವಕಾಶವನ್ನು ತೆಗೆದು ಹಾಕಲಾಯಿತು. ಹಾಗಾಗಿ, ಯಾವನೇ ಒಬ್ಟಾತ ನೌಕರನಿಗೆ ಗರಿಷ್ಠ ಪೆನ್ಶನ್‌ 15,000X35/70 = ರೂ. 7,500ಕ್ಕೆ ಸೀಮಿತವಾಯಿತು.

3. ಕೊನೆಯ ಮಾಸಿಕ ಸಂಬಳವನ್ನು 12 ತಿಂಗಳ ಸಂಬಳದ (ಬೇಸಿಕ್‌+ಡಿಎ) ಬದಲಾಗಿ 60 ತಿಂಗಳುಗಳ ಸಂಬಳದ ಸರಾಸರಿಯಾಗಿ ಪರಿಗಣಿಸಬೇಕೆಂಬ ಹೊಸ ಲೆಕ್ಕಾಚಾರ ನೀಡಲಾಯಿತು.

2016 ರ ಹೈಕೋರ್ಟ್‌ ತೀರ್ಪು: ಈ 2014ರ ಬದಲಾವಣೆ ನೌಕರರ ವೃಂದದಲ್ಲಿ ತೀವ್ರವಾದ ಅಸಮಾಧಾನ ತಂದಿರುವುದರಲ್ಲಿ ಆಶ್ಚರ್ಯವಿಲ್ಲ. ಕೆಲವರು ಕೋರ್ಟಿಗೂ ಹೋದರು. 2016ರಲ್ಲಿ ಕೇರಳದ ಹೈಕೋರ್ಟ್‌ ನೀಡಿದ ಮಹತ್ತರವಾದ ತೀರ್ಪು 2014ರ ಬದಲಾವಣೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಪೆನ್ಶನ್‌ ಲೆಕ್ಕಾಚಾರಗಳು ಆ ಮೊದಲಿನಂತೆಯೇ ಮುಂದುವರಿಯಬೇಕು ಎನ್ನುವ ಆದೇಶ ನೀಡಿತು.

2019 ಎಪ್ರಿಲ್ 1ರ ತೀರ್ಪು: ಆದರೆ ಸರಕಾರವು ಆ ತೀರ್ಪಿನ ಮೇಲೆ ಸುಪ್ರೀಮ್‌ಕೋರ್ಟಿನಲ್ಲಿ ಒಂದು ಸ್ಪೆಷಲ್ ಲೀವ್‌ ಪಿಟಿಶನ್‌ ದಾಖಲಿಸಿತು. ಕೇರಳದ ಹೈಕೋರ್ಟಿನ ತೀರ್ಪನ್ನು ತೆರವುಗೊಳಿಸಿ ತನ್ನ 2014ರ ಇತಿಮಿತಿಗಳುಳ್ಳ ಯೋಜನೆಯನ್ನೇ ಖಾಯಂಗೊಳಿಸಬೇಕೆಂದು ಬೇಡಿಕೊಂಡಿತು. ಆದರೆ, ಏಪ್ರಿಲ್ 1, 2019 ರಂದು ಸುಪ್ರೀಂಕೋರ್ಟ್‌ ಕೇರಳ ಹೈಕೋರ್ಟಿನ ತೀರ್ಪನ್ನೇ ಎತ್ತಿ ಹಿಡಿಯಿತು ಹಾಗೂ ಸರಕಾರಕ್ಕೆ 2014ರ ಇತಿಮಿತಿಗಳನ್ನು ಹೇರದಂತೆ ಆದೇಶ ನೀಡಿತು.

ಈ ಹೊಸ ತೀರ್ಪಿನ ಪ್ರಕಾರ ದೇಣಿಗೆಯ ಮಿತಿ ರೂ. 15,000 ಆದರೂ ನೌಕರರು ಹಾಗೂ ಕಂಪೆನಿ ಒಪ್ಪಿದಲ್ಲಿ ಸಂಪೂರ್ಣ ಸಂಬಳದ (ಬೇಸಿಕ್‌+ಡಿಎ) ಮೇಲೆ ಪೆನ್ಶನ್‌ ದೇಣಿಗೆ ನೀಡುವ ಅವಕಾಶ ಇರುತ್ತದೆ. ಅಲ್ಲದೆ ಕಡೆಯ ಸಂಬಳ ಅಂದರೆ ಆ ಮೊದಲಿನಂತೆ ಕೇವಲ 12 ತಿಂಗಳ ಸರಾಸರಿ ಸಂಬಳವೇ ಆಗಿರುತ್ತದೆ. ಇದು ಸದ್ಯದ ಪರಿಸ್ಥಿತಿ.

ತೀರ್ಪಿನ ಪರಿಣಾಮ: ಇನ್ನು ಮುಂದೆ 1995ರಲ್ಲಿ ಇದ್ದಂತೆ ರೂ. 15,000 ಮಿತಿ ಇಲ್ಲದೆ ಪೆನ್ಶನ್‌ ನಿಧಿಗೆ ದುಡ್ಡು ಹಾಕುವ ಆಯ್ಕೆ ಕಂಪೆನಿಗಳಿಗೆ ಇರುತ್ತದೆ. ಆದರೆ ಇದು ನೌಕರರ ಹಕ್ಕು ಅಲ್ಲ, ಕಂಪೆನಿಗಳ ಆಯ್ಕೆ ಎನ್ನುವುದನ್ನೂ ಮನಗಾಣಬೇಕು. ಈ ಬಗ್ಗೆ ನಿರ್ಧಾರ ಕಂಪೆನಿ ಮತ್ತು ನೌಕರರು ಜಂಟಿಯಾಗಿ ತೆಗೆದುಕೊಳ್ಳುತ್ತಾರೆ. 15,000ದ ಮಿತಿಯಲ್ಲಿಯೇ ದೇಣಿಗೆ ನೀಡುವವರು ಮತ್ತು ಅದೇ ರೀತಿ ಮುಂದುವರಿಯುವವರಿಗೆ ಈ ತೀರ್ಪಿನಿಂದ ಯಾವುದೇ ಲಾಭವಿಲ್ಲ. ಅವರಿಗೆ ಈಗ ಇದ್ದಂತೆಯೇ ಗರಿಷ್ಠ ದೇಣಿಗೆ ರೂ. 542 ಹಾಗೂ ಗರಿಷ್ಠ ಪೆನ್ಶನ್‌ ರೂ. 7,500 ಮುಂದುವರಿಯಲಿದೆ.

ಪೂರ್ಣ ಸಂಬಳದ ಮೇಲೆ ಪೆನ್ಶನ್‌ ದೇಣಿಗೆ ನೀಡಲು ಇಚ್ಚಿಸುವವರು ಹಿಂದಿನಿಂದ ಅನ್ವಯಿಸುವಂತೆ ಹಿಂದಿನ ಬಾಕಿ ದೇಣಿಗೆಯನ್ನು ಈಗ ಕಟ್ಟಬೇಕು. ಹಾಗೆ ಕಟ್ಟಿದರೆ ಮಾತ್ರ ಪೂರ್ಣ ಪೆನ್ಶನ್‌ ಪಡೆಯಲು ಅರ್ಹರಾಗುತ್ತಾರೆ. ಅಂತವರ ಪಿ.ಎಫ್. ಖಾತೆಯಿಂದ ದುಡ್ಡನ್ನು ಬಡ್ಡಿ ಸಹಿತ ಪೆನ್ಶನ್‌ ಖಾತೆಗೆ ಬದಲಾವಣೆ ಮಾಡಬೇಕಾಗುತ್ತದೆ.

ನಿಮ್ಮ ಆಯ್ಕೆ: ಒಂದು ವೇಳೆ ಇಂತಹ ಪೂರ್ಣ ಪ್ರಮಾಣದ ಅಯ್ಕೆ ನಿಮ್ಮ ಎದುರು ಬಂದರೆ, ನೀವು ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ನಿಮ್ಮ ಮುಂದಿರುವ ಪ್ರಶ್ನೆ. ಮೊದಲೇ ಹೇಳಿದಂತೆ ಇದು ಕಂಪೆನಿಯ ವತಿಯಿಂದ ಬರುವ ಆಹ್ವಾನ. ಕಂಪೆನಿಗೆ ಈ ರೀತಿ ಪೂರ್ತಿ ಸಂಬಳದ ಮೇಲೆ ಕಡಿತ ಹಾಕುವ ಮನಸ್ಸು ಇಲ್ಲದಿದ್ದಲ್ಲಿ ನೀವೇನೂ ಮಾಡಲು ಸಾಧ್ಯವಿಲ್ಲ. ಆದರೆ ಕಂಪೆನಿಗೆ ಮನಸ್ಸಿದ್ದಲ್ಲಿ ನಿಮ್ಮ ಮುಂದಿನ ಆಯ್ಕೆ ಹೇಗೆ? ಹೆಚ್ಚುವರಿ ಪೆನ್ಶನ್ನಿಗೆ ಹೋಗುವುದೋ ಅಥವಾ ಈಗಿನಷ್ಟೇ ಪೆನ್ಶನ್‌ ನಲ್ಲಿ ಇದ್ದು ಬಿಡುವುದೋ?

ಮೊತ್ತ ಮೊದಲನೆಯದಾಗಿ ಈ ಪ್ರಶ್ನೆಗೆ ಎಲ್ಲರಿಗೂ ಸಲ್ಲುವ ಸಾರ್ವತ್ರಿಕ ಉತ್ತರವಿಲ್ಲ. ಪ್ರತಿಯೊಬ್ಬರ ವೈಯಕ್ತಿಕ ಸಂದರ್ಭವನ್ನು ನೋಡಿ ಲೆಕ್ಕಾಚಾರ ಹಾಕಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಪೂರ್ತಿ ಸಂಬಳದ ಮೇಲಿನ ಪೆನ್ಶನ್‌ ಆಯ್ಕೆ ಮಾಡಿದರೆ ಹಿಂದಿನ ಬಾಕಿ ದೇಣಿಗೆ ಮತ್ತು ಅದರ ಮೇಲಿನ ಬಡ್ಡಿಯ ಮೊತ್ತವನ್ನು ನಿಮ್ಮ ಪಿ.ಎಫ್. ಖಾತೆಯಿಂದ ಪೆನ್ಶನ್‌ ಖಾತೆಗೆ ವರ್ಗಾಯಿಸಲಾಗುತ್ತದೆ. ಹಾಗಾಗಿ ಪೆನ್ಶನ್‌ನಲ್ಲಿ ಆಗುವ ಏರಿಕೆ ಪುಕ್ಸಟ್ಟೆ ಬರುವುದಿಲ್ಲ. ಅಷ್ಟರ ಮಟ್ಟಿಗೆ ಪಿ.ಎಫ್. ಖಾತೆಯಲ್ಲಿ ಖೋತಾ ಆಗುತ್ತದೆ.

ಮೊದಮೊದಲು ಕಡಿಮೆ ಸಂಬಳವಿದ್ದು ನಿವೃತ್ತಿಯ ಸಮಯಕ್ಕೆ ಜಾಸ್ತಿ ಸಂಬಳ ಇರುವವರಿಗೆ ಪೂರ್ತಿ ಪೆನ್ಶನ್‌ ವ್ಯವಸ್ಥೆ ಜಾಸ್ತಿ ಸೂಕ್ತವಾದೀತು. ಪೆನ್ಶನ್‌ ಕೊನೆಯ ಸಂಬಳದ ಮೇರೆಗೆ ನೀಡುವ ಕಾರಣ ಮತ್ತು ಹಳೆಯ ದೇಣಿಗೆ ಕಡಿಮೆ ಬರುವ ಕಾರಣ ಇಂತವರಿಗೆ ಇದು ಅನುಕೂಲ. ಹಾಗೆಯೇ ಜಾಸ್ತಿ ಸಂಬಳ ವೃದ್ಧಿಯಾಗದೆ ಸರಿ ಸುಮಾರು ಸಮಾನ ಮಟ್ಟದಲ್ಲಿ ಮುಂದುವರಿಯುವವರಿಗೆ ದೇಣಿಗೆ ಜಾಸ್ತಿಯಾಗಿ ಅಂತಿಮ ಪೆನ್ಶನ್‌ ಕಡಿಮೆಯಾದೀತು. ಅಂತವರು ಸೀಮಿತ ಪೆನ್ಶನ್‌ ನಲ್ಲಿಯೇ ಮುಂದುವರಿದು ನಿವೃತ್ತಿಯ ಸಮಯಕ್ಕೆ ಪಿ.ಎಫ್. ದುಡ್ಡು ಪಡೆದು ತಾವೇ ಸ್ವತಃ ಯಾವುದಾರೂ ಆನ್ಯೂಟಿ ಯೋಜನೆಯಲ್ಲಿ ಹಾಕುವುದು ಒಳಿತು. ಯಾವುದಕ್ಕೂ ಪ್ರತಿಯೊಬ್ಬರ ನಿರ್ಧಾರವೂ ಕೊಂಚ ಲೆಕ್ಕಾಚಾರ ಹಾಕಿದ ಬಳಿಕವಷ್ಟೇ ತಿಳಿಯಾದೀತು.

ಬ್ರೇಕಿಂಗ್‌ ನ್ಯೂಸ್‌: ಸ್ಪೆಶಲ್ ಲೀವ್‌ ಪಿಟಿಶನ್‌ ಮುಖಾಂತರ ಸುಪ್ರೀಂ ಕೋರ್ಟ್‌ ತೀರ್ಪು ಪೂರ್ಣ ಸಂಬಳ (ಬೇಸಿಕ್‌+ಡಿಎ) ಪರವಾಗಿ ಬಂದಿದ್ದರೂ ಕೂಡಾ ಅದು ಈ ಕೂಡಲೇ ಜಾರಿಗೆ ಬರುತ್ತಿಲ್ಲ. ಸರಕಾರಿ ಅಂಗವಾದ ಇ.ಪಿ.ಎಫ್.ಒ. ಸಂಸ್ಥೆಯು ಅದನ್ನು ಪುನಃ ಪರಿಶೀಲಿಸುವಂತೆ ಸುಪ್ರೀಂ ಕೋರ್ಟಿನಲ್ಲಿ ರಿವ್ಯೂ ಪಿಟಿಶನ್‌ ದಾಖಲಿಸಿದೆ. ಹಾಗಾಗಿ ಇನ್ನೊಂದು ತೀರ್ಪು ಬರುವವರೆಗೆ ನಾವೆಲ್ಲರೂ ಕಾಯಬೇಕು. ಸದ್ಯಕ್ಕೆ ಗಡಿಬಿಡಿ ಬೇಡ.

– ಜಯದೇವ ಪ್ರಸಾದ ಮೊಳೆಯಾರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ