ದಿಗಂಬರತೆಯ ಭವ್ಯತೆ ಸಾರುವ ಜೈನ ಮುನಿಗಳು


Team Udayavani, Feb 1, 2018, 3:04 AM IST

01-4.jpg

ತ್ಯಾಗ ಮತ್ತು ತಪಸ್ಸಿನ ಪ್ರತಿರೂಪವಾಗಿರುವ ಮುನಿಗಳ ಬಗ್ಗೆ, ಜೈನಧರ್ಮೀಯರಷ್ಟೇ ಅಲ್ಲ, ಎಲ್ಲ ಧರ್ಮೀಯರೂ ತಿಳಿದು ಕೊಂಡಲ್ಲಿ ಪರಸ್ಪರ ಸಹನೆ, ಪ್ರೀತಿ ವಿಶ್ವಾಸದೊಂದಿಗೆ ಶಾಂತಿ ಸಾಮರಸ್ಯದ ಜೀವನ ಸಾಧ್ಯವಾಗಬಹುದು.

ಪ್ರಪಂಚದ ಅದ್ಭುತವೆನಿಸಿದ ಶ್ರವಣಬೆಳಗೊಳದ ಐತಿಹಾಸಿಕ ಬಾಹುಬಲಿ ಮಹಾಮಸ್ತಕಾಭಿಷೇಕ ಫೆ. 17 ರಿಂದ 26ರ ವರೆಗೆ ನಡೆಯಲಿದೆ. ವಿಂಧ್ಯಗಿರಿಯ ನೆತ್ತಿಯ ಮೇಲೆ ನಿಂತ ಬಾಹುಬಲಿ ಮುಗುಳ್ನಗುತ್ತಲೇ ಮುಂಬರುವ ಮಜ್ಜನಕ್ಕೆ ತಯಾರಾಗುತ್ತಿದ್ದರೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತದಿಂದ ಶ್ರಾವಕ ಶ್ರಾವಿಕೆಯರು ಈ ಮಹೋತ್ಸವಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ವಿಮಾನ, ರೈಲು, ಬಸ್‌ ಟಿಕೆಟ್‌ಗಳನ್ನು ಕಾದಿರಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿರುತ್ತಾರೆ. ಆದರೆ ಯಾವುದೇ ರೀತಿಯ ವಾಹನಗಳಿಲ್ಲದೆ ಬರಿಗಾಲಿನಲ್ಲಿ ಸಾವಿರಾರು ಮೈಲು ಕ್ರಮಿಸಿ ಶ್ರವಣಬೆಳಗೊಳದತ್ತ ಧಾವಿಸುತ್ತಿರುವ ಜೈನ ಮುನಿಗಳು ಅಲ್ಲಲ್ಲಿ ವಿಹಾರ ಮಾಡುತ್ತಿರುವ ದೃಶ್ಯ ಈಗ ಕಂಡುಬರುತ್ತಿದೆ. ನರಸಿಂಹರಾಜಪುರ, ಹೊಂಬುಜ (ಹುಂಚ), ನಲ್ಲೂರು, ಕಾರ್ಕಳ, ಮೂಡಬಿದಿರೆ, ವೇಣೂರು, ಧರ್ಮಸ್ಥಳಕ್ಕಾಗಿ ಮುಂದೆ ಸಕಲೇಶಪುರ, ಹಾಸನ ಮುಂತಾದ ತೀರ್ಥ ಕ್ಷೇತ್ರಗಳ ದರ್ಶನ ಮಾಡುತ್ತಾ, ಅಲ್ಲಲ್ಲಿ ಮಂಗಲ ಪ್ರವಚನಗಳನ್ನು ನೀಡುತ್ತಾ ಶ್ರವಣಬೆಳಗೊಳದತ್ತ ಸಾಗುತ್ತಿರುವ ಮುನಿ ಸಂಘಗಳಿಗೆ ಅವರ ವಿಹಾರಕ್ಕೆ ಅನುಕೂಲವಾಗುವಂತೆ ಆಯಾ ಊರಿನ ಶ್ರಾವಕ, ಶ್ರಾವಿಕೆಯರು ಶ್ರಮಿಸುತ್ತಿದ್ದಾರೆ.

ಮುನಿದೀಕ್ಷೆ
ಸನ್ಯಾಸ ಸ್ವೀಕರಿಸಿ ಮುನಿ ಆದ ಬಳಿಕ ಆತ ಯಾವುದೇ ರೀತಿಯ ಪರಿಗ್ರಹಗಳನ್ನು ಇಟ್ಟುಕೊಳ್ಳುವಂತಿಲ್ಲ. ದಿಕ್ಕುಗಳೇ ಅಂಬರವಾಗಿರುವ ಈ ದಿಗಂಬರ ಸಾಧುಗಳ ಶುದ್ಧಿಗಾಗಿ ಜಲವಿರುವ ಕಮಂಡಲ ಮತ್ತು ಸೂಕ್ಷ್ಮ ಜೀವಿಗಳ ರಕ್ಷಣೆಗಾಗಿ ನವಿಲ ಗರಿಯ ಪಿಂಛಿ, ಅಧ್ಯಯನಕ್ಕಾಗಿ ಕೆಲವು ಶಾಸ್ತ್ರ ಗ್ರಂಥಗಳ ನ್ನಷ್ಟೆ ಇಟ್ಟುಕೊಳ್ಳುತ್ತಾರೆ. ಪಂಚೇಂದ್ರಿಯಗಳನ್ನು ನಿರೋಧ ಮಾಡಿ ಸಂಯಮ ಧಾರಣೆ ಮಾಡುವ ಮುನಿಗಳಿಗೆ ಕ್ಷೌರಿಕನ ಅಗತ್ಯವಿಲ್ಲ. ಯಾಕೆಂದರೆ ಅವರು ಕೂದಲು ಉದ್ದ ಬಿಟ್ಟಲ್ಲಿ ಹೇನು ಇತ್ಯಾದಿ ಜೀವಿಗಳು ಸೇರಿಕೊಳ್ಳುವ ಹಿಂಸೆ ಆಗುವ ಕಾರಣ ಕೈಗಳಿಂದಲೇ ತಮ್ಮ ಕೂದಲನ್ನು ಕಿತ್ತು ಕೇಶಲೋಚನ ಮಾಡಿಕೊಳ್ಳುವರು. ಸ್ನಾನ ಇಲ್ಲದೆ ಇರುವುದರಿಂದ ಎಣ್ಣೆ, ಸಾಬೂನುಗಳ ಆವಶ್ಯಕತೆ ಇವರಿಗಿಲ್ಲ. ಭೂ-ಶಯನ ಮಾಡುವು ದರಿಂದ ಹಾಸಿಗೆ, ಹೊದಿಕೆ, ಮಂಚಗಳ ಆವಶ್ಯಕತೆಯೂ ಇಲ್ಲ. ನಿಂತುಕೊಂಡು ತಮ್ಮ ಕರಪಾತ್ರೆಯಲ್ಲೇ ಭೋಜನ ಸ್ವೀಕರಿಸುವು ದರಿಂದ ತಟ್ಟೆ, ಲೋಟ, ಚಮಚಗಳ ಹಂಗಿಲ್ಲ. ಉಪ್ಪು, ನೀರು ಉಪಯೋಗಿಸಿ ಬೆರಳುಗಳಿಂದಲೇ ಹಲ್ಲುಜ್ಜಿಕೊಳ್ಳುತ್ತಾರೆ. ಆದು ದರಿಂದ ಬ್ರಶ್‌, ಪೇಸ್ಟ್‌ಗಳ ಅಗತ್ಯವೂ ಇಲ್ಲ. ದಿಗಂಬರರಾಗಿರು ವುದರಿಂದ ವಸ್ತ್ರಗಳ ಆವಶ್ಯಕತೆ ಮೊದಲೇ ಇಲ್ಲ. ಹಾಗಾಗಿ ದರ್ಜಿಯೂ ಬೇಕಿಲ್ಲ. ಒಂದೇ ಹೊತ್ತು ಶ್ರಾವಕರು ಕರೆದಲ್ಲಿ ಹೋಗಿ, ಶುದ್ಧ ಸಾತ್ವಿಕ ಭೋಜನ ಸ್ವೀಕರಿಸುವುದರಿಂದ ದಿನಕ್ಕೆ 3 ಸಲ ಆಹಾರಕ್ಕಾಗಿ, ನೀರಿಗಾಗಿ ಅಲೆದಾಡುವ ಕಷ್ಟವಿಲ್ಲ. ಅವರು ಸದಾ ಕಾಲ್ನಡಿಗೆಯಿಂದಲೇ ವಿಹಾರ ಮಾಡುವುದರಿಂದ ವಾಹನದ ಪರಿವೆಯೂ ಇಲ್ಲ. ಅಲೋಪತಿ ಮದ್ದು, ಇಂಜೆಕ್ಷನ್‌ ತೆಗೆದುಕೊಳ್ಳುವುದಿಲ್ಲವಾದುದರಿಂದ ವೈದ್ಯರೂ ಬೇಕಾಗಿಲ್ಲ. 

ಈ ಎಲ್ಲಾ ಇಲ್ಲಗಳಿಂದಾಗಿ ಹಣದ ಆವಶ್ಯಕತೆ ಇಲ್ಲವಾದುದರಿಂದ, ಆಹಾರದ ಹೊರತಾಗಿ, ಬೇರೆ ಯಾವುದಕ್ಕೂ ಜನರ ಮುಂದೆ ಕೈಯೊಡ್ಡುವ ಪ್ರಮೇಯವಿಲ್ಲ. ಒಟ್ಟಿನಲ್ಲಿ ಮುನಿಗಳು ಆಹಾರ ಒಂದನ್ನು ಬಿಟ್ಟು, ಸಮಾಜದ ಹಂಗು ತೊರೆದು, ತಮ್ಮ ಆತ್ಮಕಲ್ಯಾಣದಲ್ಲೇ ತೊಡಗಿರುವ ಸ್ವತಂತ್ರ ಜೀವಿಗಳು ಎಂದರೆ ತಪ್ಪಿಲ್ಲ. ತಮಗರಿವಿಲ್ಲದಂತೆ ಆದ ತಪ್ಪುಗಳಿಗಾಗಿ ಅವರು ಪ್ರತಿದಿನವೂ ಪ್ರಾಯಶ್ಚಿತ್ತ ರೂಪದಲ್ಲಿ ಸಾಮಾಯಿಕ ಮತ್ತು ಪ್ರತಿಕ್ರಮಣಗಳನ್ನು ದಿನಕ್ಕೆ ಮೂರು ಸಲ ಮಾಡುತ್ತಾರೆ.

ಪಂಚಾಣುವ್ರತ
ಯಾವ ಜೀವಿಗೂ ತೊಂದರೆಯಾಗದ ರೀತಿಯಲ್ಲಿ ಹಗಲು ಹೊತ್ತು ಮಾತ್ರ ನಡೆಯುವ ಮುನಿಗಳ ಚರ್ಯೆಗೆ ಈರ್ಯಾ ಸಮಿತಿ ಎನ್ನುವರು. ಅದೇ ರೀತಿ ಹಿತಮಿತವಾಗಿ ಮಧುರ ಮತ್ತು ನಿಶ್ಚಿತ ಮಾತುಗಳನ್ನಾಡುವುದೇ ಭಾಷಾ ಸಮಿತಿ. ಇತರರು ಕೊಡುವ ಆಹಾರ ಶುದ್ಧವಾಗಿರುವಂತೆ ಎಚ್ಚರಿಕೆಯಿಂದ ಗಮನಿಸುವುದು ಏಷಣ ಸಮಿತಿ. ಮಲ-ಮೂತ್ರ ವಿಸರ್ಜಿಸುವಲ್ಲಿ ಬೇಡದ ವಸ್ತುಗಳನ್ನು ಎಸೆಯುವಲ್ಲಿಯೂ ಎಚ್ಚರಿಕೆ ವಹಿಸುವುದು ಉತ್ಸರ್ಗ ಸಮಿತಿ.

ಜೈನ ಧರ್ಮದಲ್ಲಿ ಪಂಚಾಣುವ್ರತಗಳಿಗೆ ಪ್ರಮುಖ ಸ್ಥಾನವಿದೆ. ಗ್ರಹಸ್ಥರಿಗೆ ಅದು ಅಣು(ಸಣ್ಣ) ರೂಪದಲ್ಲಿದ್ದರೆ, ಮುನಿಗಳಿಗೆ ಅದು ಮಹಾವ್ರತ. ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ- ಈ ಪಂಚ ಮಹಾವ್ರತಗಳ ಬಗ್ಗೆ ಮುನಿಗಳು ಸದಾ ಎಚ್ಚರಿಕೆಯಿಂದ ಇರುತ್ತಾರೆ. ಎಂದೂ ಅಸತ್ಯ ವಚನವನ್ನಾಡುವುದಿಲ್ಲ. ನಿಲ್ಲುವಲ್ಲಿ, ಕುಳಿತುಕೊಳ್ಳುವಲ್ಲಿ, ನಡೆ ದಾಡುವಲ್ಲಿ ಯಾವುದೇ ರೀತಿಯ ಹಿಂಸೆ ಆಗದಂತೆ ಸೂಕ್ಷ್ಮವಾಗಿ ಗಮನ ಹರಿಸುತ್ತಾರೆ. ಅದಕ್ಕಾಗಿ ಯಾವುದೇ ವ್ಯಾಪಾರ, ಕೃಷಿ ಇತ್ಯಾದಿ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ತಮ್ಮದಲ್ಲದ ಯಾವುದೇ ವಸ್ತುವನ್ನು ತೆಗೆದುಕೊಳ್ಳುವುದಿಲ್ಲ. ಅತಿ ಕಡಿಮೆ ಪರಿಗ್ರಹಿಗಳೂ, ಜೀವನ ಪರ್ಯಂತ ಬ್ರಹ್ಮಚರ್ಯ ಧಾರಣೆ ಮಾಡುವವರೂ ಆದ ಮುನಿಗಳು ಮಾಡುವ ಪಂಚ ಮಹಾವ್ರತಗಳನ್ನು ವಿಶ್ಲೇಷಿಸುತ್ತಾ ಹೋದಲ್ಲಿ ಅದೇ ಒಂದು ದೊಡ್ಡ ಲೇಖನವಾಗಬಹುದು.

ಮುನಿಗಳು 22 ಪರೀಷಹ (ಕಷ್ಟ)ಗಳನ್ನು ಅಂದರೆ ಹಸಿವು, ತೃಷೆ, ಶೀತ, ಉಷ್ಣ, ಮೊದಲಾದವುಗಳನ್ನು ಸಹನೆಯಿಂದ, ಶಾಂತ ಭಾವದಿಂದ ಸಹಿಸಿಕೊಳ್ಳಬೇಕಾಗುತ್ತದೆ. ದಂಶಮಶಕ ಪರೀಷಹ ಅಂದರೆ ಸೊಳ್ಳೆ, ನೊಣಗಳು ಕಚ್ಚುವುದು, ಅಚೇಲ ಪರೀಷಹ: ಕ್ಷುಲ್ಲಕ, ಐಲಕಾವಸ್ಥೆಯಲ್ಲಿರುವ ವ್ರತಿಗಳು, ವಸ್ತ್ರ ಹಳೆಯದಾದರೂ, ಹರಿದು ಹೋದರೂ ಆ ಬಗ್ಗೆ ಚಿಂತಿಸುವುದಿಲ್ಲ. 

ಅರತಿ ಪರೀಷಹ: ಪರಿಗ್ರಹರಹಿತರಾದ ಮುನಿಗಳು ಸದಾ ವಿಹಾರದಲ್ಲಿರುವುದು, ಸ್ತ್ರೀ ಪರೀಷಹವನ್ನು ಜಯಿಸಲು ಸಂಯಮಧಾರಿಗಳಾಗುವರು, ಚರ್ಯಾ ಪರೀಷಹ: ನಡೆಯು ವಾಗ ಒದಗಬಹುದಾದ ಕಷ್ಟಗಳನ್ನು ಸಹಿಸುವುದು, ನಿಷದ್ಯಾ ಪರೀಷಹ-ಸ್ಥಿರ ಆಸನದಲ್ಲಿ ಕುಳಿತು ಧ್ಯಾನಸ್ಥರಾಗುವುದು, ಶಯ್ನಾ ಪರೀಷಹ: ಯಾವುದೇ ಜಾಗದಲ್ಲಿ ಮಲಗುವುದು, ಆಕ್ರೋಶ ಪರೀಷಹ: ಕೆಟ್ಟ ಮಾತುಗಳನ್ನು ಬಳಸಿದರೆ ಕೋಪ ಗೊಳ್ಳದಿರುವುದು, ವಧ ಪರೀಷಹ: ತನ್ನ ಶರೀರಕ್ಕೆ ಯಾರಾದರೂ ಹಿಂಸೆ ಮಾಡಿದರೆ ತಿರುಗಿ ಅವರಿಗೆ ಹಿಂಸೆ ಮಾಡದಿ ರುವುದು, ಸಾಧುಗಳಲ್ಲಿ ಹಣ ಇತ್ಯಾದಿ ಸಂಪತ್ತು ಇಲ್ಲದೆ ಇರುವುದರಿಂದ ಅಗತ್ಯ ವಸ್ತುಗಳನ್ನು ಬೇಡಿಯೇ ಪಡೆಯ ಬೇಕಾಗುತ್ತದೆ -ಇದೇ ಯಾಚನಾ ಪರೀಷಹ. ಭಿಕ್ಷೆಗೆ ಹೋದಾಗ ಭಿಕ್ಷೆ ಸಿಗಲಿ, ಸಿಗದಿರಲಿ ಆ ಬಗ್ಗೆ ಚಿಂತಿಸದಿರುವುದು -ಅಲಾಭ ಪರೀಷಹ. ರೋಗಜನ್ಯ ದುಃಖವನ್ನು ಸಮತಾಭಾವದಿಂದ ಸಹಿಸಿಕೊಳ್ಳುವುದು -ರೋಗ ಪರೀಷಹವಾಗಿದೆ. ತೃಣಸ್ಪರ್ಶ ಪರೀಷಹ-ಕಾಲಿಗೆ ಮೆಟ್ಟು, ಮೈಗೆ ಅರಿವೆ ಇಲ್ಲ ದಿರುವುದರಿಂದ ಹುಲ್ಲಿನ ಮೇಲೆ ನಡೆಯುವಾಗ, ಮಲಗುವಾಗ ತೃಣಸ್ಪರ್ಶವನ್ನು ಸಹಿಸಿಕೊಳ್ಳುತ್ತಾರೆ. ಮಲ ಪರೀಷಹ ಬೇಸಿಗೆಯಲ್ಲಿ ಬೆವರು, ಮಳೆಗಾಲದಲ್ಲಿ ಕೆಸರು ಮೆತ್ತುವ ಮೈಯ ಬಗ್ಗೆ ಅನಾಸಕ್ತರಾಗಿರುವುದು, ಸತ್ಕಾರ-ಪುರಸ್ಕಾರಾ ಪೇಕ್ಷೆಗಳನ್ನು ಗೆಲ್ಲುವುದೂ ಒಂದು ಪರೀಷಹ ಜಯವೇ. 

ಪ್ರಜ್ಞಾ ಪರೀಷಹ: ಪ್ರಜ್ಞಾಪೂರ್ವಕವಾಗಿ ಕರ್ಮಗಳನ್ನು ಮಾಡುವುದು, ಅಜ್ಞಾನ ಪರೀಷಹ: ಇಹಲೋಕ ಪರಲೋಕದ ಬಗ್ಗೆ ಸಂಶಯ ತಾಳದಿರುವುದು. ಅಸಮ್ಮತವಾದ ವಿಚಾರಗಳನ್ನು ಸಾಧಕ ಮುನಿಯು ಎಂದಿಗೂ ಮಾಡಬಾರದು ಇದೇ ಅದರ್ಶನ ಪರೀಷಹ. ಹೀಗೆ 22 ಪರೀಷಹ (ಕಷ್ಟ)ಗಳನ್ನು ಶಾಂತಚಿತ್ತರಾಗಿ ಸಹಿಸಿಕೊಳ್ಳಬೇಕು ಎಂಬ ಶಾಸ್ತ್ರ ನಿಯಮವನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಪೆತ್ತ ಪರೀಷಹ ಜಯಮೆ ತಪಂ| ತಪಕೆ ಬೇರೆ ಕೋಡೆರಡೊಳವೆ ಎಂಬ ಜನ್ನನ ಮಾತಿನಂತೆ ಈ ಪರೀಷಹಗಳನ್ನು ಸಹನೆಯಿಂದ ಸಹಿಸುವುದೇ ಮುನಿಗಳ ತಪಸ್ಸು.

ಮುನಿಗಳು ಯಾರು? 
ಮುನಿಗಳು ಎಂದರೆ ಯಾರು? ಅವರು ಹೇಗಿರಬೇಕು? ಎಂಬ ಬಗ್ಗೆ ಮೂಲಾಚಾರವೆಂಬ ಬƒಹತ್‌ ಗ್ರಂಥದಲ್ಲಿ ಉಲ್ಲೇಖ ವಿದೆ. 12 ಅಧ್ಯಾಯಗಳಲ್ಲಿ 1010 ಪುಟಗಳಲ್ಲಿ ಸವಿವರ ಮಾಹಿತಿ ನೀಡಲಾಗಿದೆ. ಅದು ಸುಲಭದಲ್ಲಿ ಅರ್ಥವಾಗುವ ವಿಚಾರವೂ ಅಲ್ಲ. ಈಗ ಇಲ್ಲಿ ಬರೆದಿರುವ ವಿಚಾರಗಳು ಸರೋ ವರದಿಂದ ಒಂದು ಬೊಗಸೆ ನೀರನ್ನು ಎತ್ತಿ ತೋರಿಸಿದಂತೆ. 

ಉತ್ತರ ಭಾರತದಿಂದ ದಕ್ಷಿಣಕ್ಕೆ ಬರುವ ಮುನಿಗಳಿಗೆ ದಾರಿಯಲ್ಲಿ ಆಹಾರದ ವ್ಯವಸ್ಥೆಗಾಗಿ ಕೆಲವೊಂದು ಭಕ್ತಾದಿಗಳು ತಮ್ಮ ವಾಹನಗಳಲ್ಲಿ ಆಹಾರಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡು ಬರುವುದೂ ಇದೆ. ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಗಂಡ, ಹೆಂಡತಿ ಇಬ್ಬರು ಮಾತ್ರ ಇರುವಲ್ಲಿ, ಇಬ್ಬರೂ ಕೆಲಸಕ್ಕೆ ಹೋಗುವಲ್ಲಿ ಮುನಿಗಳನ್ನು ಮನೆಗೆ ಆಹ್ವಾನಿಸಿ ವಿಧಿವತ್ತಾಗಿ ಆಹಾರ ಕೊಡಲು ಅಸಾಧ್ಯವಾಗುತ್ತದೆ. ಕೆಲವು ಮುನಿಗಳು ರಾತ್ರಿ ಭೋಜನ ಮಾಡುವ, ಕಂದ ಮೂಲಗಳನ್ನು ಸೇವಿಸುವ, ಹೊಟೇಲ್‌ ಇತ್ಯಾದಿಗಳಲ್ಲಿ ಊಟ ಮಾಡುವವರಿಂದಲೂ ಆಹಾರ ಸ್ವೀಕರಿಸುವುದಿಲ್ಲ. ಅಂತಹ ಊರುಗಳಲ್ಲಿ ಆಹಾರ ದಾನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತದೆ. ಹಾಗೆಂದು ಮುನಿಗಳೂ ತಮ್ಮ ವ್ರತವನ್ನು ಬಿಟ್ಟುಕೊಡಲು ತಯಾರಿಲ್ಲದ ಕಾರಣ ಬದಲಿ ವ್ಯವಸ್ಥೆ ಅನಿವಾರ್ಯವಾಗುತ್ತದೆ. 

ಆಹಾರ ನಿಯಮ
ಆಚಾರ್ಯ ಸನ್ಮತಿ ಸಾಗರರೆಂಬ ಮುನಿ ಮಹಾರಾಜರೊ ಬ್ಬರು ಸುಮಾರು ಹತ್ತು, ಹನ್ನೆರಡು ವರ್ಷಗಳ ಕಾಲ ಕಬ್ಬಿನ ಹಾಲು, ಮಜ್ಜಿಗೆಯಷ್ಟನ್ನೇ ದಿನಕ್ಕೊಂದು ಸಲ ಸೇವಿಸುತ್ತಿದ್ದರು. ಕೊನೆಗೆ ಕಬ್ಬಿನರಸವನ್ನು ಬಿಟ್ಟು, ಬರಿ ಮಜ್ಜಿಗೆ ನೀರನ್ನಷ್ಟೇ ಸೇವಿಸುತ್ತಾ, ತಮ್ಮ ದೆ„ನಂದಿನ ಕಾರ್ಯಗಳಾದ ದರ್ಶನ, ಧ್ಯಾನ, ಪ್ರವಚನ, ವಿಹಾರ ಇತ್ಯಾದಿಗಳಲ್ಲಿ ಭಾಗವಹಿಸುತ್ತಿದ್ದರು. ಇಂತಹ ಅನೇಕ ಕಠಿಣ, ತಪಸ್ವಿಗಳನ್ನು ಜೈನ ಮುನಿಗಳಲ್ಲಿ ಕಾಣಬಹುದು.

ದೇಹವೇ ರಥ
ಮುನಿಗಳ ಪಾಲಿಗೆ ಈ ದೇಹ ಒಂದು ರಥವಿದ್ದಂತೆ. ಒಳಗಿನ ಆತ್ಮನೇ ದೇವರು. ಎಷ್ಟು ಸಮಯದವರೆಗೆ ಈ ದೇಹವೆಂಬ ರಥದಿಂದ ಧರ್ಮಕಾರ್ಯಗಳನ್ನು ನಡೆಸಲು, ಜಪ-ತಪ, ಧ್ಯಾನಾದಿಗಳನ್ನು ಮಾಡಲು ಸಾಧ್ಯವಾಗುತ್ತದೋ ಅಲ್ಲಿಯವರೆಗೆ ಈ ದೇಹಕ್ಕೆ ಪೋಷಣೆ. ದೇಹ ಶಿಥಿಲವಾಗಿ ಧರ್ಮ ಕಾರ್ಯಕ್ಕೆ ಅನನುಕೂಲವಾದಾಗ ಶಾಂತ ಮನಸ್ಸಿನಿಂದ ಪ್ರಜ್ಞಾ ಪೂರ್ವಕವಾಗಿ ತನ್ನಲ್ಲಿ ಮತ್ತು ಇತರರಲ್ಲಿ ದ್ವೇಷ, ದುಃಖ, ಕೋಪ, ಉದ್ವೇಗದ ಭಾವನೆಗಳನ್ನಿಟ್ಟುಕೊಳ್ಳದೆ ಎಲ್ಲರ ಕ್ಷಮೆ ಯನ್ನು ಯಾಚಿಸಿ ತಮ್ಮ ಆಚಾರ್ಯರ ಸಮಕ್ಷಮದಲ್ಲಿ ಮರಣವೇ ಮಹಾನವಮಿ ಎನ್ನುತ್ತಾ ಸಲ್ಲೇಖನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಅದಕ್ಕಾಗಿ ಆಹಾರವನ್ನು ಕಡಿಮೆ ಮಾಡುತ್ತಾ ಬಂದು ತಮ್ಮ ಶರೀರವನ್ನು ಕೃಶಗೊಳಿಸುತ್ತಾ ದೇವರ ಧ್ಯಾನದಲ್ಲಿ ನಿರತರಾಗಿ ಪ್ರಾಣತ್ಯಾಗ ಮಾಡುತ್ತಾರೆ. 

ಕ್ರಾಂತಿಕಾರಿ ಮುನಿಶ್ರೀ 108 ತರುಣಸಾಗರರಲ್ಲಿ ಶ್ರಾವಕರೊ ಬ್ಬರು ಜೈನ ಸಾಧು ಬಗ್ಗೆ ಪ್ರಶ್ನೆ ಹಾಕಿದಾಗ, ಅವರು ಮುನಿ ಧರ್ಮದ ಬಗ್ಗೆ ಹೀಗೆ ಹೇಳುತ್ತಾರೆ- “”ಜೈನ್‌ ಸಾಧು ಕ್ಯಾ ಹೈ, ಕಿಸೇ ಕಹತೇ ಹೈ? ಜಿಸ್‌ ಕೇ ಪೈರೋ ಮೇ ಜೂತಾ ನಹೀ, ಸಿರ್‌ ಮೇ ಛಾತಾ ನಹೀ, ಜಿಸ್‌ಕೇ ತನ್‌ ಪರ್‌ ಕಪ್‌ಡಾ ನಹೀ, ವಚನ್‌ ಮೇ ಲಫ್‌ಡಾ ನಹೀ, ಉಸೇ ಕಹತೇ ಹೇ ಜೈನ್‌ ಸಾಧು…||
ಜಿನ್‌ಕಾ ಕೋಯಿ ಘರ್‌ ನಹೀ, ಕಿಸೀ ಬಾತ್‌ ಕಾ ಡರ್‌ ನಹೀ, ಜಿಸ್‌ಕೇ ಸಾಥ್‌ ಬೀಬೀ ನಹೀ, ಅಮೀರಿ ಗರೀಬಿ ನಹೀ
ಜೋ ಕಚ್ಚೇ ಪಾನೀ ಕೊ ಛೂತಾ ನಹೀ, ಬಿಸ್ತರ್‌ ಪರ್‌ ಸೋತಾ ನಹೀ, ಹೋಟೆಲ್‌ ಮೇ ಖಾತಾ ನಹೀ ಪರೀಷ್‌ ಉಪಸರ್ಗ್‌ ಆಯೇ ತೋ ರೋತಾ ನಹೀ, ಜಿಸೇ ದರ್ಜಿಕಾ ಜರೂರತ್‌ ನಹೀ, ಜಿಸೇ ಧೋಬಿ ಕೀ ಭೀ ಜರೂರತ್‌ ನಹೀ, ಫಿರ್‌ ಭೀ ಸಬ್‌ಕಾ ಧೋತಾ ಹೆ„, ಉಸೇ ಕಹತೇ ಹೈ ಜೈನ್‌ ಸಾಧು.”

ಆಚಾರ್ಯ ಸಮಂತಭದ್ರರು ಮುನಿಗಳ ದಿಗಂಬರತೆಯ ಬಗ್ಗೆ ಬಹಳ ಸುಂದರವಾಗಿ ವಿಶ್ಲೇಷಿಸಿದ್ದಾರೆ. ಹಾಗೆ ನೋಡಿದರೆ ಪಶು, ಪ್ರಾಣಿ, ಪಕ್ಷಿಗಳೂ ನಗ್ನವಾಗಿರುತ್ತವೆ. ಆದರೆ ಮುನಿಗಳ ನಗ್ನತೆ ಆ ತೆರನಾದುದಲ್ಲ. ಜೈನ ಸಾಧುಗಳು ಒಳಗೆ ದಿಗಂಬರ ರಾಗದೆ ಹೊರಗೆ ದಿಗಂಬರರಾಗಲು ಸಾಧ್ಯವಿಲ್ಲ. ಎಲ್ಲ ಮನೋವಿ ಕಾರಗಳನ್ನು ಗೆದ್ದು ಮನಸ್ಸು ಪರಿಶುದ್ಧವಾದಾಗ ಮಾತ್ರ ನಗ್ನತೆ ಸಾಧ್ಯವಾಗುತ್ತದೆ. ಹೇಗೆ ಶುದ್ಧವಾದ ಮನಸ್ಸು ಹೊಂದಿದ ಮಗು ಬಟ್ಟೆಯನ್ನು ಬಯಸುವುದಿಲ್ಲವೋ ಹಾಗೆಯೇ ಕಲ್ಮಶರಹಿತರಾದ ಶುದ್ಧ ಮನಸ್ಸಿನ ಮುನಿಗಳಿಗೆ ಮಾತ್ರ ನಿರ್ವಿಕಾರ ಭಾವದಿಂದ ದಿಗಂಬರರಾಗಿ ಇರಲು ಸಾಧ್ಯವಾಗುತ್ತದೆ. 

ಇದೇ ವಿಚಾರವನ್ನು ವಿಶ್ಲೇಷಿಸುತ್ತಾ ಮುನಿಶ್ರೀ ಪ್ರಮಾಣ ಸಾಗರರೂ ಹೇಳುತ್ತಾರೆ. ಮುನಿಗಳ ನಗ್ನತೆ ಒಂದು ಉನ್ನತವಾದ ಆದರ್ಶ ಸ್ಥಿತಿ, ಸ್ವಾಭಾವಿಕ ಹಾಗೂ ಪ್ರಾಕೃತಿಕ ರೂಪವಾಗಿದ್ದು, ನಿರ್ವಿಕಾರದ ಮುದ್ರೆಯಾಗಿದೆ. ದಿಕ್ಕುಗಳನ್ನೇ ಬಟ್ಟೆಯಂತೆ ಧರಿಸಿದ ದಿಗಂಬರ ಮುನಿ ಯಾವುದೇ ಮನೋವಿಕಾರತೆ ಇಲ್ಲದಿರುವುದರಿಂದ ನಿಸ್ಸಂಕೋಚದಿಂದ ಸಹಜವಾಗಿ ಎಲ್ಲರ ಮಧ್ಯೆ ಇರುತ್ತಾನೆ. ಆತ್ಮಕಲ್ಯಾಣ ಸಾಧಿಸ ಬಯಸುವ ಸಾಧಕನಿಗೆ ಇದು ಅತ್ಯಂತ ಅಗತ್ಯವಾಗಿದೆ. 

ಮಹಾತ್ಮಾ ಗಾಂಧೀಜಿಯವರ ಮಾತಿನಂತೆ ದಿಗಂಬರತ್ವ ಎಂಬುದು ಯುಗ ಯುಗಾಂತರದಲ್ಲಿ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ಎತ್ತಿ ತೋರಿದೆ ಹಾಗೂ ಅವುಗಳನ್ನು ರಕ್ಷಿಸ ಬೇಕಾಗಿದೆ. ಒಟ್ಟಿನಲ್ಲಿ ತ್ಯಾಗ ಮತ್ತು ತಪಸ್ಸಿನ ಪ್ರತಿರೂಪವಾಗಿರುವ ಮುನಿಗಳ ಬಗ್ಗೆ, ಜೈನಧರ್ಮೀಯರಷ್ಟೇ ಅಲ್ಲ, ಎಲ್ಲ ಧರ್ಮೀಯರೂ ತಿಳಿದುಕೊಂಡಲ್ಲಿ ಪರಸ್ಪರ ಸಹನೆ, ಪ್ರೀತಿ ವಿಶ್ವಾಸ ದೊಂದಿಗೆ ಶಾಂತಿ ಸಾಮರಸ್ಯದ ಜೀವನ ಸಾಧ್ಯವಾಗಬಹುದು.

ಹೇಮಾವತಿ ವೀ. ಹೆಗ್ಗಡೆಯವರು ಧರ್ಮಸ್ಥಳ

ಟಾಪ್ ನ್ಯೂಸ್

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.