ಡಿಸೆಂಬರ್‌ 1ರಿಂದ ಫಾಸ್ಟ್ಯಾಗ್‌ ಗೆ ರೆಡಿಯಾಗಿ

ವಾಹನಗಳ ಕ್ಯೂ ತಪ್ಪಿಸಲು ಕ್ಯಾಶ್‌ಲೆಸ್‌ನತ್ತ ಹೆಜ್ಜೆ

Team Udayavani, Nov 22, 2019, 6:00 AM IST

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ನು ಮುಂದೆ ರಸ್ತೆ ಶುಲ್ಕ ಕಟ್ಟಲು ವಾಹನಗಳು ಸಾಲುಗಟ್ಟಿ ನಿಲ್ಲಬೇಕಿಲ್ಲ. ಡಿ. 1ರಿಂದ ಬಹುತೇಕ ಎಲ್ಲ ಟೋಲ್‌ಗ‌ಳಲ್ಲಿ”ಫಾಸ್ಟ್ಯಾಗ್‌’ ಹೆಸರಿನಲ್ಲಿ ನೂತನ ಇ-ಟೋಲ್‌ ಸಂಗ್ರಹ ವ್ಯವಸ್ಥೆ ಕಡ್ಡಾಯವಾಗಲಿದೆ. ಟೋಲ್‌ಗ‌ಳಲ್ಲಿ ಟ್ರಾಫಿಕ್‌ ಸಮಸ್ಯೆ ಕಂಡು ಬರುತ್ತಿರುವುದನ್ನು ಮನಗಂಡ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ 2014ರಲ್ಲಿ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಫಾಸ್ಟಾಗ್‌ ಟೋಲ್‌ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.

ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫೀಕೇಶನ್‌(ಆರ್‌ಎಫ್ಐಡಿ) ಎನ್ನುವ ತಂತ್ರಜ್ಞಾನದ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಪುಟ್ಟ ಸ್ಟಿಕ್ಕರ್‌ಗಳನ್ನು 4 ಚಕ್ರ ಅಥವಾ ಅದಕ್ಕೂ ಮೀರಿದ ಯಾವುದೇ ವಾಹನಗಳ ಮುಂಭಾಗದ ಗಾಜಿನ ಬಳಿ ಅಳವಡಿಸಲಾಗುತ್ತದೆ. ಟೋಲ್‌ ಪ್ಲಾಜಾದಲ್ಲಿರುವ ಫಾಸ್ಟ್ಯಾಗ್‌ ಲೇನ್‌ ಮೂಲಕ ಹಾದು ಹೋದಾಗ ಸ್ವಯಂಚಾಲಿತವಾಗಿ ಆಗಿ ಸ್ಕ್ಯಾನ್‌ ಆಗುತ್ತದೆ. ಇದೇ ವೇಳೆ ಫಾಸ್ಟಾಗ್‌ ಖಾತೆಯಿಂದ ಶುಲ್ಕ ಸಂದಾಯವಾಗುತ್ತದೆ. ಇದರ ನೋಟಿಫಿಕೇಶನ್‌ ಮೊಬೈಲ್‌ಗ‌ಳಿಗೆ ಎಸ್‌ಎಂಎಸ್‌ ಮೂಲಕ ಬರುತ್ತದೆ. ಈ ವ್ಯವಸ್ಥೆಯಲ್ಲಿ ವಾಹನಗಳು ಸಾಲಲ್ಲಿ ನಿಂತು, ಹಣ ಸಂದಾಯ ಮಾಡಿ, ರಶೀದಿ ಪಡೆಯುವ ಅಗತ್ಯ ಇಲ್ಲ.

ಇನ್ನು ಕಡ್ಡಾಯ
ಫಾಸ್ಟ್ಯಾಗ್‌ ವ್ಯವಸ್ಥೆ ಇದ್ದರೂ ಕ್ಷಿಪ್ರವಾಗಿ ವಾಹನಗಳನ್ನು ಟೋಲ್‌ಗ‌ಳು ಬಿಟ್ಟು ಕೊಡುತ್ತಿಲ್ಲ. ಇದರಿಂದ ಹಣಕೊಟ್ಟು ತೆರಳುವ ವಾಹನಗಳು ಮತ್ತು ಫಾಸ್ಟಾಗ್‌ ಮೂಲಕ ಸಂಚರಿಸುವ ವಾಹನಗಳು ಒಂದೇ ರೀತಿ ಸಮಯವನ್ನು ಟೋಲ್‌ಗ‌ಳಲ್ಲಿ ವ್ಯಯಿಸುವಂತಾಗಿದೆ. ಟ್ಯಾಗ್‌ ಹೊಂದಿದ ವಾಹನಗಳು ನಿಲುಗಡೆ ಇಲ್ಲದೇ ಚಲಿಸಬೇಕು ಎನ್ನುವುದು ಈ ವ್ಯವಸ್ಥೆಯ ಆಶಯ.

ಏನು ಲಾಭ?
ಈ ಫಾಸ್ಟ್ಯಾಗ್‌ ವ್ಯವಸ್ಥೆಯ ಮೂಲ ಉದ್ದೇಶವೇ ಟೋಲ್‌ಗ‌ಳಲ್ಲಿ ಕ್ಯಾಶ್‌ಲೆಸ್‌ ಪೇಮೆಂಟ್‌ ಅನ್ನು ಉತ್ತೇಜಿಸುವುಸುದು.ವಾಹನ ದಟ್ಟಣೆಯನ್ನು ಕಡಿತಗೊಳಿಸುವುದು ಇದರ ಮತ್ತೂಂದು ಉದ್ದೇಶವಾಗಿದೆ. ಸರಕಾರ ಫಾಸ್ಟಾಗ್‌ ವಾಹನಗಳಿಗೆ ಶೇ. 2.5 ರಿಯಾಯಿತಿಯನ್ನು ನೀಡುತ್ತದೆ.

ಹೊಸ ನಿಯಮ ಏನು?
ದೇಶದ ಬಹುತೇಕ ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಫಾಸ್ಟಾಗ್‌ ಲೇನ್‌ಗಳನ್ನು ಅಳವಡಿಸಲಾಗಿದೆ. ಅದರ ಮೂಲಕವೇ ವಾಹನಗಳು ಸಂಚರಿಸಬೇಕಾಗಿದ್ದು, ಟೋಲ್‌ ವೆಚ್ಚವನ್ನು ಫಾಸ್ಟ್ಯಾಗ್‌ ಮೂಲಕ ಪಾವತಿ ಸಬೇಕಾಗುತ್ತದೆ. ಫಾಸ್ಟಾಗ್‌ ವ್ಯವಸ್ಥೆ ಅಳವಡಿಸದೇ ಇದ್ದ ವಾಹನವಾದರೆ ಟೋಲ್‌ ಮೊತ್ತದ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ. ಇದನ್ನು ಕಾನೂನಿನಲ್ಲಿಯೂ ಸೇರಿಸಲಾಗಿದೆ. ಟೋಲ್‌ನ ಒಂದು ಕಡೆ ಮಾತ್ರ ಫಾಸ್ಟ್ಯಾಗ್‌ ಮತ್ತು ಇತರ ಪಾವತಿ ವ್ಯವಸ್ಥೆಗಳನ್ನು ಅಳವಡಿ ಸಲಾಗುತ್ತದೆ. ಇಲ್ಲಿ ಫಾಸ್ಟ್ಯಾಗ್‌ ಇಲ್ಲದ ವಾಹನಗಳು ಸರತಿ ಸಾಲಿನಲ್ಲಿ ಕಾಯಬೇಕಾಗಿ ಬರುತ್ತದೆ. ಉಳಿದ ಎಲ್ಲ ಲೇನ್‌ (ಪಥ)ಗಳಲ್ಲಿ ಫಾಸ್ಟಾಗ್‌ಗಳು ಮಾತ್ರ ಇರಲಿವೆ.

ಈಗಿನ ಸಮಸ್ಯೆ ಏನು?
ಟೋಲ್‌ಪ್ಲಾಜಾಗಳಲ್ಲಿ ಫಾಸ್ಟಾಗ್‌ಗಳಿಗೆ ಮಾತ್ರ ನಿರ್ಮಿಸಲಾದ ಟ್ರ್ಯಾಕ್‌ಗಳು ಇರುತ್ತವೆ. ವಾಹನಗಳು ಈ ಹೈಬ್ರಿಡ್‌ ಟ್ಯಾಕ್‌ನಲ್ಲಿ ಸಂಚರಿಸಿದರೆ ನಾವು ಕ್ಯೂ ನಿಲ್ಲಬೇಕಾಗಿಲ್ಲ. ನೇರವಾಗಿ “ಝಿರೋ ಟ್ರಾಫಿಕ್‌’ ಮೂಲಕ ಟೋಲ್‌ ದಾಟಬಹುದಾಗಿದೆ. ಆದರೆ ದೇಶದ ಬಹುತೇಕ ಟೋಲ್‌ಗ‌ಳಲ್ಲಿ ನಿರ್ಮಿಸಲಾದ ಈ ವ್ಯವಸ್ಥೆಯ  ಟ್ರ್ಯಾಕ್‌ಗಳಲ್ಲಿ ಫಾಸ್ಟ್ಯಾಗ್‌ ಹೊಂದಿದ ಮತ್ತು ಹೊಂದಿಲ್ಲದ ವಾಹನಗಳು ಸಂಚರಿಸುವ ಕಾರಣ ವೇಗವಾಗಿ ಆ ಟ್ರ್ಯಾಕ್‌ನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಕಡ್ಡಾಯ ವಾಗಿ ಈ ವ್ಯವಸ್ಥೆಯನ್ನು ಪರಿಚಯಿಸ ಲಾಗುತ್ತಿದ್ದು, ವಾಹನ ಸವಾರರು ಟ್ಯಾಗ್‌ ಅನ್ನು ಕಡ್ಡಾಯವಾಗಿ ಅಳವಡಿಸಲೆ ಬೇಕಾಗಿದೆ.

ಖರೀದಿ ಹೇಗೆ?
· ಟೋಲ್‌ಪ್ಲಾಜಾಗಳು
· ಐಒಸಿ, ಎಚ್‌ಪಿಸಿಎಲ್‌, ಬಿಪಿಸಿಎಲ್‌ ಪಂಪ್‌ಗ್ಳು
· ಅಮೆಜಾನ್‌ ಡಾಟ್‌ ಇನ್‌ (amezone.in)
· 22 ಅಧಿಕೃತ ಬ್ಯಾಂಕುಗಳು, ಪೇಟಿಎಂ ಆ್ಯಪ್‌
· ಖಾಸಗಿ ಏಜೆನ್ಸಿಗಳು

ಬೇಕಾದ ದಾಖಲೆಗಳು
·  ವಾಹನದ ಆರ್‌ಸಿ ಪುಸ್ತಕ
·  ಮಾಲಕರ ಒಂದು ಪಾಸ್‌ ಪೋರ್ಟ್‌ ಚಿತ್ರ
·  ವಾಹನದ ಕೆವೈಸಿ ದಾಖಲೆ
·  ವಿಳಾಸ ಮತ್ತು ಐಡಿ ಪ್ರೂಫ್ (ಆಧಾರ್‌, ಓಟರ್‌ ಐಡಿ, ಪಾಸ್‌ಪೋರ್ಟ್‌ ಅಥವಾ ಪಾನ್‌)

ಮಿತಿ ಏನು
· ಲಿಮಿಟೆಡ್‌ ಕೆವೈಸಿ ಫಾಸ್ಟಾಗ್‌ನಲ್ಲಿ ಗರಿಷ್ಠ 20 ಸಾವಿರ ರೂಗಳ ವರೆಗೆ ಹಣವನ್ನು ಇಟ್ಟುಕೊಳ್ಳಬಹುದಾಗಿದೆ. ತಿಂಗಳಿಗೆ 20 ಸಾವಿರ ರೂ.ಗಳನ್ನು ರಿಚಾರ್ಜ್‌ ಅಥವ ರಿಲೋಡ್‌ ಮಾಡಿಸಿಕೊಳ್ಳಬಹುದು.
· ಅನ್‌ಲಿಮಿಟೆಡ್‌ ಕೆವೈಸಿ ಫಾಸ್ಟಾಗ್‌ನಲ್ಲಿ ತಿಂಗಳಿಗೆ 1 ಲಕ್ಷ ರೂ. ನ ವರೆಗೆ ಇಟ್ಟುಕೊಳ್ಳಬಹುದಾಗಿದೆ. ತಿಂಗಳ ರಿಚಾರ್ಜ್‌ಗೆ ಮಿತಿ ಇರುವುದಿಲ್ಲ.
· ಒಂದು ಫಾಸ್ಟ್ಯಾಗ್‌ ಒಂದೇ ವಾಹನಕ್ಕೆ ಅಳವಡಿಕೆ‌.

ರೀಚಾರ್ಜ್‌ ಹೇಗೆ?
ಫಾಸ್ಟ್ಯಾಗ್‌ ಎಂಬುದಕ್ಕೆ ನೀವು ರೀಚಾರ್ಜ್‌ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಏಕೆಂದರೆ ಇದು ನೇರವಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವುದರಿಂದ ನಿಮ್ಮ ಖಾತೆಯಿಂದಲೇ ಹಣ ಸಂದಾಯವಾಗುತ್ತದೆ. ನೀವು ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಹಣವನ್ನು ಕಾಯ್ದುಕೊಂಡರೆ ಸಾಕು. ಆದರೆ ನೀವು ನಿಮ್ಮ ಫಾಸ್ಟ್ಯಾಗ್‌ ಅನ್ನು ಎನ್‌ಎಚ್‌ಐನ ವ್ಯಾಲೆಟ್‌ಗೆ ಲಿಂಕ್‌ ಮಾಡಿದ್ದರೆ ನೀವು ಆ ವ್ಯಾಲೆಟ್‌ ಅನ್ನು ಇತರ ಪೇಮೆಂಟ್‌ ವ್ಯವಸ್ಥೆಯ ಮೂಲಕ ರೀಚಾರ್ಜ್‌ ಮಾಡಿಸಿಕೊಳ್ಳಬೇಕು. ಪ್ರತಿಯೊಂದು ವ್ಯವಹಾರ ಹಾಗೂ ಬ್ಯಾಲೆನ್ಸ್‌ ಕಡಿಮೆಯಾದಾಗ ಗ್ರಾಹಕರಿಗೆ ಮೊಬೈಲ್‌ ಎಸ್‌ಎಂಎಸ್‌ ಸಂದೇಶ ರವಾನೆಯಾಗಲಿದೆ.

ಶೇ. 30 ಮಾತ್ರ
ಕರ್ನಾಟಕದಲ್ಲಿ ಈಗ ಕೇವಲ ಶೇ. 30ರಷ್ಟು ವಾಹನಗಳಲ್ಲಿ ಮಾತ್ರ ಫಾಸ್ಟ್ಯಾಗ್‌ ವ್ಯವಸ್ಥೆ ಇದೆ. ಇನ್ನುಳಿದ ಶೇ. 70ರಷ್ಟು ವಾಹನಗಳು ಈ ಫಾಸ್ಟಾಗ್‌ ವ್ಯವಸ್ಥೆಯಿಂದ ದೂರ ಉಳಿದಿದೆ.

ಆರಂಭಿಕ ಶುಲ್ಕ/ವ್ಯಾಲಿಡಿಟಿ ಎಷ್ಟು?
ಫಾಸ್ಟ್ಯಾಗ್‌ ಸ್ಟಿಕ್ಕರ್‌ ಕೊಂಡು ಕೊಳ್ಳುವ ವೇಳೆ 200 ರೂ.ಗಳನ್ನು ಪ್ರವೇಶ ಶುಲ್ಕದ ರೂಪದಲ್ಲಿ ನೀಡ ಬೇಕಾಗುತ್ತದೆ. ಉಳಿದ ಮೊತ್ತ ನಮ್ಮ ವಾಹನವನ್ನು ಅವಲಂಭಿಸಿ ಇರುತ್ತದೆ. ಇದಕ್ಕೆ 5 ವರ್ಷಗಳ ವ್ಯಾಲಿಡಿಟಿಯೂ ಇದೆ.

ಟೋಲ್‌ ಹತ್ತಿರ ಮನೆ ಇದ್ದರೆ…
ಅಧಿಕೃತ ಜಾಲತಾಣ IHMCL ಪ್ರಕಾರ ಟೋಲ್‌ ಪ್ಲಾಜಾದ 10 ಕಿ.ಮೀ. ಒಳಗೆ ನೀವು ವಾಸವಾಗಿದ್ದರೆ ನಿಮಗೆ ಟೋಲ್‌ ರಿಯಾಯಿತಿ ದೊರೆಯಲಿದೆ. ಇದಕ್ಕಾಗಿ ನೀವು ಇಲ್ಲಿನ ಖಾಯಂ ನಿವಾಸಿ ಎಂಬುದನ್ನು ದೃಢೀಕರಿಸುವ ದಾಖಲೆಗಳನ್ನು ಫಾಸ್ಟ್ಯಾ ಟ್ಯಾಕ್‌ ಕೊಂಡುಕೊಳ್ಳುವ ವೇಳೆ ನೀಡಬೇಕು. ನಿಮ್ಮ ವಿಳಾಸ ಪರಿಷ್ಕೃತಗೊಂಡ ಬಳಿಕ ನೀವು ಆ ನಿರ್ದಿಷ್ಟ ಟೋಲ್‌ ಮೂಲಕ ಸಂಚರಿಸಿದರೆ ನಿಮ್ಮ ಖಾತೆಯಿಂದ ಹಣ ಕಡಿತ ಆಗದು.

ಒಟ್ಟು ಟೋಲ್‌ಗ‌ಳು 525
ಫಾಸ್ಟ್ಯಾಗ್‌ ಇರುವ ಟೋಲ್‌ 483
ಫಾಸ್ಟಾಗ್‌ ಅಳವಡಿಸಿರುವ ವಾಹನಗಳು 62 ಲಕ್ಷ
ದೈನಂದಿನ ಫಾಸ್ಟ್ಯಾಗ್‌ ಬಳಕೆ 11 ಲಕ್ಷ
ದೈನಂದಿನ ಫಾಸ್ಟಾಗ್‌ ಆದಾಯ 30 ಕೋ. ರೂ.

-  ಕಾರ್ತಿಕ್‌ ಅಮೈ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ