ಬೈಕ್ ಅಪಘಾತ : ನಟ ಸಂಚಾರಿ ವಿಜಯ್ ಗಂಭೀರ ಗಾಯ
Team Udayavani, Jun 13, 2021, 3:51 PM IST
ಬೆಂಗಳೂರು : ಸ್ನೇಹಿತರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಟ ಸಂಚಾರಿ ವಿಜಯ್ ಅವರು ಅಪಘಾತಕ್ಕೀಡಾಗಿದ್ದು, ತಲೆ ಹಾಗೂ ತೊಡೆ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.
ನಿನ್ನೆ ( ಜೂನ್ 12) ರಾತ್ರಿ ಈ ಅಪಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಕರೆ ತಂದಾಗಲೆ ಅವರ ಸ್ಥಿತಿ ಗಂಭೀರವಾಗಿತ್ತು, ಸ್ಕ್ಯಾನ ಮಾಡಿದಾಗ ಮೆದುಳಿನ ಬಲಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಅವರಿಗೆ ಮೆದುಳಿನ ಆಪರೇಷನ್ ಮಾಡಲಾಗಿದೆ. ಹಾಗೂ ತೊಡೆ ಮೂಳೆಯ ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮುಂದಿನ 48 ಗಂಟೆಗಳು ಅತ್ಯಂತ ಮುಖ್ಯ ಎಂದು ನ್ಯೂರೋ ಸರ್ಜನ್ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.