“ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಮತ್ತೊಂದು ಲಿರಿಕಲ್‌ ವಿಡಿಯೋ ರಿಲೀಸ್‌

ಟಾಕಿಂಗ್‌ಸ್ಟಾರ್‌ ಟೀಸರ್‌ ಆಯ್ತು, ಈಗ ಹಾಡು

Team Udayavani, Sep 10, 2019, 3:04 AM IST

ಸೃಜನ್‌ ಲೋಕೇಶ್‌ ಅಭಿನಯದ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಈಗಾಗಲೇ ಒಂದಷ್ಟು ಸದ್ದು ಮಾಡುತ್ತಿದೆ. ಚಿತ್ರ ಆರಂಭದಿಂದ ಒಂದಿಲ್ಲೊಂದು ಸುದ್ದಿಗೆ ಕಾರಣವಾಗುತ್ತಿದ್ದ ಚಿತ್ರ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್‌ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಅಷ್ಟೇ ಅಲ್ಲ, ಮೊದಲ ಹಾಡು ಕೇಳಿದ ಬಹುತೇಕರು ಮೆಲೋಡಿಗೆ ಫಿದಾ ಆಗಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ವಿಜಯ ಪ್ರಕಾಶ್‌ ಹಾಡಿದ ಹಾಡಿಗೂ ಸಾಕಷ್ಟು ಮೆಚ್ಚುಗೆ ಬಂದಿದ್ದು, ಖುಷಿಯ ಅಲೆಯಲ್ಲಿರುವ ಚಿತ್ರತಂಡ, ಸೋಮವಾರ ಸಂಜೆ ಮತ್ತೊಂದು ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿದೆ. ಹೌದು, “ಟಾಕಿಂಗ್‌ ಸ್ಟಾರ್‌…’ ಎಂದು ಶುರುವಾಗು ಹಾಡು ಹೊರಬಂದಿದ್ದು, ಆ ಹಾಡಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆಯಾದ ಎರಡು ಹಾಡುಗಳಿಗೂ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕ ಹಿನ್ನೆಲೆಯಲ್ಲಿ ಚಿತ್ರತಂಡ ಈಗ ಸೃಜನ್‌ ಲೋಕೇಶ್‌ ಅವರ ಮೇಲೆಯೇ ಒಂದು ಹಾಡು ಮಾಡಿ ಬಿಡುಗಡೆ ಮಾಡಿದೆ.

ಸಂತೋಷ್‌ ವೆಂಕಿ ಹಾಡಿರುವ ಹಾಡಿಗೆ ಸೃಜನ್‌ ಅಭಿಮಾನಿಗಳು ಒಳ್ಳೆಯ ಕಾಮೆಂಟ್‌ ಮಾಡುತ್ತಿದ್ದಾರೆ ಎಂದು ನಿರ್ದೇಶಕ ತೇಜಸ್ವಿ, ಮುಂದಿನ ವಾರ ಇನ್ನೊಂದು ಹಾಡು ಮತ್ತು ಒಂದು ಟ್ರೇಲರ್‌ ಬಿಡುಗಡೆ ಮಾಡಲು ಯೋಚಿಸಿದ್ದಾರೆ. ಕಾಮಿಡಿ, ರೊಮ್ಯಾನ್ಸ್‌ ಹಾಗಯ ಆ್ಯಕ್ಷನ್‌ ಮಿಕ್ಸ್‌ ಮಾಡಿ ಒಂದು ಟ್ರೇಲರ್‌ ಹೊರತರಲು ನಿರ್ಧರಿಸಿರುವ ತೇಜಸ್ವಿ, ಸೆಪ್ಟೆಂಬರ್‌ 20 ರಂದು ಟ್ರೇಲರ್‌ ಬಿಡುಗಡೆ ಮಾಡಲು ತಯಾರು ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಸೃಜನ್‌ ಈ ಚಿತ್ರದಲ್ಲಿ ನಾಯಕ ನಟನಾಗಿ ಮತ್ತು ನಿರ್ಮಾಪಕರಾಗಿಯೂ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಲೋಕೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದೆ. ಹೆಚ್‌.ಸಿ ವೇಣು ಛಾಯಾಗ್ರಹಣ ಮಾಡಿದರೆ, ರಾಕೇಶ್‌. ಸಿ.ಎ ಚಿತ್ರಕ್ಕೆ ಸಂಭಾಷಣೆ ಒದಗಿಸಿದ್ದಾರೆ. ಒಟ್ಟಾರೆ ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂಥ ರೊಮ್ಯಾಂಟಿಕ್‌ ಕಾಮಿಡಿ ಕಥೆ ಹೆಣೆದು ಮಾಡಿರುವ ಚಿತ್ರದಲ್ಲಿ ನವಿರಾದ ಹಾಸ್ಯ ಹೈಲೈಟ್‌. ಚಿತ್ರದಲ್ಲಿ ನಾಯಕ ಸೃಜನ್‌ ಲೋಕೇಶ್‌ಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ