ವಿನಯ್ಗೆ ಅನುಷಾ ನಾಯಕಿ
Team Udayavani, Sep 4, 2019, 2:52 PM IST
ನಿರ್ಮಾಪಕ ಪುಷ್ಕರ್, ವಿನಯ್ ರಾಜ್ಕುಮಾರ್ ಅವರಿಗೆ ಸಿನಿಮಾ ನಿರ್ಮಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಬಾಕ್ಸರ್ ಲುಕ್ನಲ್ಲಿ ವಿನಯ್ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರದ ಫೋಟೋಶೂಟ್ ಕೂಡಾ ನಡೆದಿದೆ. ಆದರೆ, ಚಿತ್ರಕ್ಕೆ ನಾಯಕಿಯ ಆಯ್ಕೆ ನಡೆದಿರಲಿಲ್ಲ. ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಅದು ಬೇರಾರು ಅಲ್ಲ, ಅನುಷಾ ರಂಗನಾಥ್.
ಹೌದು, ಈಗಾಗಲೇ ಕನ್ನಡದಲ್ಲಿ ಕೆಲವು ಸಿನಿಮಾ ಮಾಡಿರುವ ಅನುಷಾಗೆ ದೊಡ್ಡ ಮಟ್ಟದ ಬ್ರೇಕ್ ಸಿಕ್ಕಿರಲಿಲ್ಲ. ಈಗ ಅನುಷಾಗೆ ಪುಷ್ಕರ್ ನಿರ್ಮಾಣದ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದ್ದು, ವಿನಯ್ಗೆ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಅನುಷಾ ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳಲಿದ್ದು, ತುಂಬಾ ಪ್ರಬುದ್ಧ ಹಾಗೂ ಸೂಕ್ಷ್ಮವಾಗಿರುವ ಪಾತ್ರವಂತೆ.
ಬಾಕ್ಸರ್ ಆಗುವ ಕನಸು ಹೊಂದಿರುವ ನಾಯಕನಿಗೆ ಸದಾ ಬೆಂಬಲವಾಗಿರುವ ಪಾತ್ರ ಅನುಷಾಗೆ ಸಿಕ್ಕಿರುವುದರಿಂದ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.
ಚಿತ್ರದಲ್ಲಿ ಸಹಜವಾಗಿರುವಂತ ಲವ್ಸ್ಟೋರಿಯೂ ಇದ್ದು, ಕನ್ನಡಕ್ಕೆ ಇದು ಹೊಸಬಗೆಯ ಚಿತ್ರವಾಗಲಿದೆ ಎಂಬ ವಿಶ್ವಾಸ ಅನುಷಾ ಅವರದು. ಅನುಷಾ ಈ ಹಿಂದೆಯೂ ಪುಷ್ಕರ್ ಬ್ಯಾನರ್ಗೆ ಆಡಿಷನ್ ಕೊಟ್ಟಿದ್ದಾರಂತೆ. ಆದರೆ ಈ ಬಾರಿ ವಿನಯ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅಂದಹಾಗೆ, ಅನುಷಾ ಅವರ ತಂಗಿ ಆಶಿಕಾ ಸದ್ಯ ಪುಷ್ಕರ್ ನಿರ್ಮಾಣದ “ಅವತಾರ್ ಪುರುಷ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು, ವಿನಯ್ ರಾಜ್ಕುಮಾರ್ ಅವರ ಸಿನಿಮಾವನ್ನು ಕರಮ್ ಚಾವ್ಲಾ ನಿರ್ದೇಶಿಸುತ್ತಿದ್ದಾರೆ.