ಚಮಕ್ ಆಡಿಯೋಗೆ ಅರ್ಜುನ್ ರೆಡ್ಡಿ ಹೀರೋ ಗೆಸ್ಟ್
Team Udayavani, Dec 3, 2017, 10:43 AM IST
ಗಣೇಶ್ ಅಭಿನಯದ “ಚಮಕ್’ ಚಿತ್ರದ ಟೀಸರ್ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಈಗ ಚಿತ್ರದ ಆಡಿಯೋ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಚಿತ್ರದ ಆಡಿಯೋ ಬಿಡುಗಡೆ ಡಿಸೆಂಬರ್ 4 ರಂದು ನಡೆಯುತ್ತಿದೆ. ಆಡಿಯೋ ಬಿಡುಗಡೆಗೆ ತೆಲುಗಿನಲ್ಲಿ ಇತ್ತೀಚೆಗೆ ಭಾರೀ ಸುದ್ದಿಯಾದ ನಟರೊಬ್ಬರು ಅತಿಥಿಯಾಗಿ ಬರುತ್ತಿದ್ದಾರೆ. ಅದು ವಿಜಯ್ ದೇವರಕೊಂಡ.
ಈ ಹೆಸರನ್ನು ಇತ್ತೀಚೆಗೆ ನೀವು ಸ್ವಲ್ಪ ಹೆಚ್ಚೇ ಕೇಳಿರುತ್ತೀರಿ. ಅದಕ್ಕೆ ಕಾರಣ “ಅರ್ಜುನ್ ರೆಡ್ಡಿ’ ಚಿತ್ರ. ಭರ್ಜರಿ ಯಶಸ್ವಿ ಕಂಡ ತೆಲುಗಿನ “ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ನಾಯಕರಾಗಿ ನಟಿಸಿದವರು ವಿಜಯ್ ದೇವರಕೊಂಡ. ಈಗ ವಿಜಯ್ “ಚಮಕ್’ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬರುತ್ತಿದ್ದಾರೆ.
ಈ ಮೂಲಕ ಮೊದಲ ಬಾರಿಗೆ ವಿಜಯ್ ಕನ್ನಡ ಚಿತ್ರವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದಂತೆ ಪದ್ಮಶ್ರೀ ಪುರಸ್ಕೃತ ಜನಪದ ಹಾಡುಗಾರ್ತಿ ಸುಕ್ರಿ ಬೊಮ್ಮ ಗೌಡ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಿತ್ರದ ಆಡಿಯೋ ರಿಲೀಸ್ಗೆ ವಿಜಯ್ ದೇವರಕೊಂಡ ಬರುತ್ತಿರುವುದರಿಂದ ಸಹಜವಾಗಿಯೇ ಚಿತ್ರತಂಡ ಖುಷಿಯಾಗಿದೆ.
ಸುನಿ ನಿರ್ದೇಶನದ “ಚಮಕ್’ ಚಿತ್ರದಲ್ಲಿ ಗಣೇಶ್, ರಶ್ಮಿಕಾ ಮಂದಣ್ಣ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವನ್ನು ಚಂದ್ರಶೇಖರ್ ನಿರ್ಮಿಸಿದ್ದಾರೆ. ಚಿತ್ರ ಡಿಸೆಂಬರ 29 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಗಣೇಶ್ ಅವರ “ಮುಂಗಾರು ಮಳೆ’ ಚಿತ್ರ ಕೂಡಾ ಡಿಸೆಂಬರ್ 29 ರಂದು ಬಿಡುಗಡೆಯಾಗಿತ್ತು.