ಮಾಯಾ ಬಜಾರ್ 2016ಗೆ ಚಾಲನೆ
Team Udayavani, Jan 24, 2018, 8:00 PM IST
ಪುನೀತ್ ನಿರ್ಮಾಣದ ಎರಡನೆಯ ಚಿತ್ರವಾದ “ಮಾಯಾ ಬಜಾರ್ 2016′ ಬುಧವಾರ ಕಂಠೀರವ ಸ್ಟುಡಿಯೋದಲ್ಲಿ ಪ್ರಾರಂಭವಾಗಿದೆ. ಮುಹೂರ್ತ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಶಿವರಾಜಕುಮಾರ್, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ. ಈ ಚಿತ್ರವನ್ನು ರಾಧಾಕೃಷ್ಣ ಎನ್ನುವವರು ಕಥೆ ಬರೆದು ನಿರ್ದೇಶಿಸಿದರೆ, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ. ಗೋವಿಂದು ಜೊತೆಯಾಗಿ ಪಿ.ಆರ್.ಕೆ. ಬ್ಯಾನರ್ನಡಿ ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಅಚ್ಯುತ್ ಕುಮಾರ್, ಚೈತ್ರ ರಾವ್, ಪ್ರಕಾಶ್ ರೈ, ಸಾಧು ಕೋಕಿಲ, ಸುಧಾರಾಣಿ ಮುಂತಾದವರು ನಟಿಸುತ್ತಿದ್ದಾರೆ. ಪೌರಾಣಿಕ “ಮಾಯಾ ಬಜಾರ್’ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. “ಇದು 2016ರಲ್ಲಿ ನಡೆಯುವ ಕಥೆಯಾದ್ದರಿಂದ ಚಿತ್ರಕ್ಕೆ “ಮಾಯಾ ಬಜಾರ್ 2016′ ಎಂಬ ಹೆಸರನ್ನು ಇಟ್ಟಿದ್ದೇವೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ.
ಇಲ್ಲಿ ನಾಯಕ-ನಾಯಕಿ ಎನ್ನುವುದಕ್ಕಿಂತ ಕೆಲವು ಪಾತ್ರಗಳ ಸುತ್ತ ಸುತ್ತುತ್ತದೆ. ಇದುವರೆಗೂ ಯಾರು ಯಾವ ಪಾತ್ರವನ್ನು ಮಾಡಿದ್ದಾರೋ, ಅದಕ್ಕೆ ತದ್ವಿರುದ್ಧವಾಗಿ ಈ ಚಿತ್ರದಲ್ಲಿನ ಅವರ ಪಾತ್ರಗಳು ಇರುತ್ತವೆ. ಹೆಸರಿಗೆ ತಕ್ಕಂತೆ ಚಿತ್ರವು ಎಲ್ಲರ ಮನರಂಜಿಸಲಿದೆ’ ಎನ್ನುತ್ತಾರೆ ನಿರ್ದೇಶಕ ರಾಧಾಕೃಷ್ಣ. “ಮಾಯಾ ಬಜಾರ್ 2016′ ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮಾಡಿದರೆ, ಮಿಥುನ್ ಮುಕುಂದನ್ ಸಂಗೀತ ಸಂಯೋಜಿಸುತ್ತಿದ್ದಾರೆ.