ಶಿವಣ್ಣ-ಧ್ರುವ ಜೊತೆ ಜೊತೆಯಲಿ
Team Udayavani, Dec 3, 2017, 1:35 PM IST
ಒಂದು ಕ್ಯಾಂಪಸ್, ಇಬ್ಬರು ಸ್ಟಾರ್ಗಳು. ಒಟ್ಟಿಗೆ ಆಗಮನ. ಅಭಿಮಾನಿಗಳ ಖುಷಿ ಹೇಗಿರಬಹುದು ನೀವೇ ಊಹಿಸಿಕೊಳ್ಳಿ. ಅಂತಹ ಒಂದು ಅಭಿಮಾನಿಗಳ ಸಂತೋಷಕ್ಕೆ ಇಂದು ಸಂತೋಷ್ ಚಿತ್ರಮಂದಿರದ ಆವರಣ ಸಾಕ್ಷಿಯಾಯಿತು.
ಒಂದೇ ಕ್ಯಾಂಪಸ್ನಲ್ಲಿರುವ ನರ್ತಕಿಯಲ್ಲಿ ಧ್ರುವ ಸರ್ಜಾ ಅವರ “ಭರ್ಜರಿ’ 75ನೇ ದಿನ ಪೂರೈಸಿದ ಸಂಭ್ರಮ ಒಂದು ಕಡೆಯಾದರೆ, ಪಕ್ಕದಲ್ಲೇ ಇರುವ ಸಂತೋಷ್ ಚಿತ್ರಮಂದಿರದಲ್ಲಿ ಶಿವರಾಜಕುಮಾರ್-ಮುರುಳಿ ಅಭಿನಯದ “ಮಫ್ತಿ’ ಚಿತ್ರಕ್ಕೂ ಅಭಿಮಾನಿಗಳು ನುಗ್ಗಿ ಬರುತ್ತಿದ್ದಾರೆ.
ಈ ಸಂತಸವನ್ನು ಕಣ್ತುಂಬಿಕೊಳ್ಳಲು ಶಿವಣ್ಣ ಹಾಗೂ ಧ್ರುವ ಬಂದಿದ್ದಾರೆ. ಒಂದೇ ಕಾರಿನಲ್ಲಿ ಬಂದ ಅವರಿಬ್ಬರು ಪ್ರಸ್ತುತ “ಮಫ್ತಿ’ ಚಿತ್ರ ವೀಕ್ಷಿಸುತ್ತಿದ್ದು, ಅದು ಮುಗಿದ ನಂತರ ಸಂಜೆ ವೇಳೆಗೆ “ಭರ್ಜರಿ’ಯ 75ನೇ ದಿನದ ಸಂಭ್ರಮದಲ್ಲಿ ಶಿವರಾಜಕುಮಾರ್ ಕೂಡಾ ಭಾಗಿಯಾಗಲಿದ್ದಾರೆ.
75 ದಿನದ ಸಂಭ್ರಮಕ್ಕೆ 75 ಕೆಜಿಯ ಕೇಕ್ ತಯಾರಿಸಿದ್ದು, ಅದನ್ನು ಕತ್ತರಿಸಿ ಚಿತ್ರತಂಡ ಸಂಭ್ರಮಿಸಲಿದೆ. ಇಬ್ಬರು ಸ್ಟಾರ್ಗಳನ್ನು ಒಟ್ಟಿಗೆ ನೋಡಿದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.