ಕನಕಗೆ ತೆಲುಗು ನಟಿ ಸುಧಾ
Team Udayavani, Aug 22, 2017, 10:37 AM IST
ಕನ್ನಡಕ್ಕೆ ಪರಭಾಷೆ ನಟ-ನಟಿಯರು ಆಗಮಿಸುವುದು ಹೊಸದೇನಲ್ಲ. ಆಗಾಗ ಬಂದು ಹೋಗಿ ಮಾಡುತ್ತಲೇ ಇರುತ್ತಾರೆ. ಈಗ “ದುನಿಯಾ’ ವಿಜಯ್ ಅಭಿನಯದ “ಕನಕ’ ಚಿತ್ರಕ್ಕೆ ತೆಲುಗು ನಟಿ ಸುಧಾ ಅವರು ಆಗಮಿಸಿದ್ದಾರೆ. ವಿಶೇಷವೆಂದರೆ, ಅವರಿಲ್ಲಿ ದುನಿಯಾ ವಿಜಯ್ ಅವರ ತಾಯಿಯಾಗಿ ನಟಿಸುತ್ತಿದ್ದಾರೆ. ನಟಿ ಸುಧಾ ಅವರು ತೆಲುಗಿನಲ್ಲಿ ಬಹು ಬೇಡಿಕೆಯ ಪೋಷಕ ನಟಿ.
ಚಿರಂಜೀವಿ ಸೇರಿದಂತೆ ಮಹೇಶ್ಬಾಬು ಹಾಗೂ ಇತರೆ ನಟರ ಬಹುತೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ “ಕನಕ’ ಚಿತ್ರತಂಡ ಹೆಮ್ಮಿಗೇಪುರದಲ್ಲಿ ಬೀಡುಬಿಟ್ಟಿದೆ. ಅಲ್ಲೊಂದು ವಿಶೇಷ ಸೆಟ್ ಹಾಕಿ ಚಿತ್ರೀಕರಿಸುತ್ತಿದ್ದಾರೆ ನಿರ್ದೇಶಕ ಕಮ್ ನಿರ್ಮಾಪಕ ಆರ್.ಚಂದ್ರು. ಚಿತ್ರಕ್ಕೆ ಸತ್ಯಹೆಗಡೆ ಕ್ಯಾಮೆರಾ ಹಿಡಿದಿದ್ದಾರೆ. ನವೀನ್ ಸಜ್ಜು ಸಂಗೀತ ನೀಡಿದ್ದಾರೆ.
ಹರೀಶ್ ಅವರ ಸಂಕಲನ, ಥ್ರಿಲ್ಲರ್ ಮಂಜು, ರವಿವರ್ಮ, ಡಿಫರೆಂಟ್ ಡ್ಯಾನಿ, ವಿನೋದ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಮುರಳಿ, ಹರ್ಷ, ಇಮ್ರಾನ್ ಅವರ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಮಾನ್ವಿತಾ ಹರೀಶ್, ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್, ಶ್ರೀನಿವಾಸಮೂರ್ತಿ, ಅಚ್ಯುತರಾವ್, ಪದ್ಮಜಾರಾವ್, ಸುಧಾಬೆಳವಾಡಿ, ಯುಗ ಚಂದ್ರು ಸೇರಿದಂತೆ ಅನೇಕರು ಇದ್ದಾರೆ.