ಕಬೀರ್ ದುಹಾನ್ ಸಿಂಗ್ಗೆ “ಪೈಲ್ವಾನ್’ ಸುದೀಪ ಹೇಳಿದ್ದೇನು?
Team Udayavani, Nov 14, 2018, 5:07 PM IST
ಚಿತ್ರದ ಪೋಸ್ಟರ್ ಹಾಗೂ ಟೀಸರ್ ಮೂಲಕವೇ ಅಭಿಮಾನಿಗಳ ಮನ ಗೆದ್ದ ಆರಡಿ ಕಟೌಟ್ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ “ಪೈಲ್ವಾನ್’ ಚಿತ್ರ ಈಗಾಗಲೇ ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದೀಗ ಸುದೀಪ್ ತಮ್ಮ ಫಿಟ್ನೆಸ್ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಹೆಮ್ಮೆಯಿಂದ ಟ್ವೀಟ್ವೊಂದನ್ನು ಮಾಡಿದ್ದಾರೆ.
ಕಿಚ್ಚ ಸುದೀಪ ತಾವು “ಪೈಲ್ವಾನ್’ ತರಬೇತಿ ಶುರುವಿನಲ್ಲಿ ಮಾಡುತ್ತಿದ್ದ ವರ್ಕೌಟ್ ವಿಡೀಯೋ ಕೂಡ ಶೇರ್ ಮಾಡಿ, “ಪೈಲ್ವಾನ್’ಗಾಗಿ ಕಸರತ್ತು ಶುರುಮಾಡಿದಾಗ ನಾನು 89 ಕೆ.ಜಿ ತೂಕ ಇದ್ದೆ, ಮೈ ಸುತ್ತಳತೆ 36 ಇತ್ತು, ಅದೇ ಈಗ ಚಿತ್ರಕ್ಕೆ ತಯಾರಾದ ಮೇಲೆ 73 ಕೆ.ಜಿ ತೂಕಕ್ಕೆ ಇಳಿದಿದ್ದು ಹಗುರಾಗಿದ್ದೀನಿ, “ಪೈಲ್ವಾನ್’ ಚಿತ್ರತಂಡಕ್ಕೂ ಹಾಗೂ ನನಗೆ ಇದಕ್ಕೆ ಸ್ಫೂರ್ತಿಯಾದ ಕಬೀರ್ ದುಹಾನ್ ಸಿಂಗ್ಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಇನ್ನು ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ಬಿರುಸಿನಿಂದ ಸಾಗುತ್ತಿದ್ದು, ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸುದೀಪ ಎದುರಿಗೆ ನಾಯಕಿಯಾಗಿ ಮುಂಬೈ ಮೂಲದ ಆಕಾಂಕ್ಷಾ ಸಿಂಗ್ ತೆರೆ ಹಂಚಿಕೊಳ್ಳುತ್ತಿದ್ದು, ಕಬೀರ್ ದುಹಾನ್ ಸಿಂಗ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಲ್ಲದೇ ಆರ್.ಆರ್.ಆರ್. ಮೋಷನ್ ಪಿಕ್ಚರ್ ಬ್ಯಾನರ್ನಡಿ ಸ್ವಪ್ನ ಕೃಷ್ಣ ಮತ್ತು ಕೃಷ್ಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ನಿರ್ದೇಶನದ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನು ಕೃಷ್ಣ ರಚಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದರೆ, ಕರುಣಾಕರನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸಾಧುಕೋಕಿಲ, ಚಿಕ್ಕಣ್ಣ ಸೇರಿದಂತೆ ಅನೇಕರ ತಾರಾಬಳಗವಿದೆ.