ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ, ಟಾಲಿವುಡ್ ನಲ್ಲಿ ಮಿಂಚಿದ್ದ ಉಡುಪಿಯ ಬಿವಿ ನಿಗೂಢ ಕಥಾನಕ!

ನಾಗೇಂದ್ರ ತ್ರಾಸಿ, Jun 28, 2019, 1:14 PM IST

1954ರಲ್ಲಿಯೇ ಕ್ರಾಂತಿಕಾರಿ “ಕನ್ಯಾದಾನ ” ಕನ್ನಡ ಸಿನಿಮಾವನ್ನು ನಿರ್ದೇಶಿಸಿದ್ದ ಈ ನಿರ್ದೇಶಕ ಜನಪದ ಬ್ರಹ್ಮ ಎಂದೇ ಹೆಸರಾಗಿದ್ದರು. ಬಳಿಕ ಈ ಸಿನಿಮಾವನ್ನು ತೆಲುಗಿಗೂ ರಿಮೇಕ್ ಮಾಡಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತು ಕೆಲವೇ ವರ್ಷವಾಗಿತ್ತು, ಕನ್ನಡ ಸಿನಿಮಾರಂಗ ಹೇಳಿಕೊಳ್ಳುವಂತಹ ಪ್ರಗತಿ ಸಾಧಿಸಿರಲಿಲ್ಲವಾಗಿತ್ತು. ಹೀಗಾಗಿ ಕನ್ಯಾದಾನ ಚಿತ್ರ ಟೂರಿಂಗ್ ಟಾಕೀಸ್ ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಂತೆ! ಸೊಸೆ ಕಪ್ಪು ಎಂಬ ಕಾರಣಕ್ಕೆ ಅತ್ತೆಯಿಂದ ಹಿಂಸೆ ಅನುಭವಿಸುವ ಕಥಾಹಂದರ ಹೊಂದಿತ್ತು ಕನ್ಯಾದಾನ ಸಿನಿಮಾ!

ಫ್ಯಾಂಟಸಿ ಸಿನಿಮಾಗಳ ಈ ಜನಪ್ರಿಯ ನಿರ್ದೇಶಕ  1954ರಲ್ಲಿ ರಾಜಲಕ್ಷ್ಮಿ, 1956ರಲ್ಲಿ ಮುಟ್ಟಿದ್ದೆಲ್ಲಾ ಭಾಗ್ಯ, 1957ರಲ್ಲಿ ಜಯ ವಿಜಯ, 1958ರಲ್ಲಿ ಮನೆ ತುಂಬಿದ ಹೆಣ್ಣು, 1963ರಲ್ಲಿ ವೀರ ಕೇಸರಿ, 1965ರಲ್ಲಿ ವಿಜಯ ಸಿಂಹ..ಹೀಗೆ 1944ರಿಂದ 1953ರವರೆಗೆ ನಾಗ ಕನ್ಯಾ, ಮಾಯಾ ಮೋಹಿನಿ, ಶ್ರೀನಿವಾಸ ಕಲ್ಯಾಣ ಸೇರಿದಂತೆ 18 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇವೆಲ್ಲಾವು ಯಶಸ್ವಿ ಸಿನಿಮಾಗಳೇ ಆಗಿದ್ದವು..ಅಂದ ಹಾಗೆ ಈ ಸಿನಿಮಾಗಳನ್ನು ನಿರ್ದೇಶಿಸಿದ್ದವರು ಬಿ.ವಿಠಲಾಚಾರ್ಯ ಎಂಬ ಅಪ್ಪಟ ಕನ್ನಡಿಗ. ಸ್ಯಾಂಡಲ್ ವುಡ್ ನಿಂದ ತೆಲುಗು ಸಿನಿಮಾರಂಗದಲ್ಲಿ ಮಿಂಚಿದ್ದ ಬಿ.ವಿಠಲಾಚಾರ್ಯ ತೆರೆಮರೆಯಲ್ಲಿ ಉಳಿದುಬಿಟ್ಟಿದ್ದರು ಎಂಬುದನ್ನು ಗಮನಿಸಬೇಕಾಗಿದೆ.

ಖಾಸಗಿ ಬದುಕಿನ ಬಗ್ಗೆ ಗುಟ್ಟುಬಿಟ್ಟುಕೊಡದ ಈ ಪ್ರತಿಭೆಯ ಮೂಲ “ಉಡುಪಿಯ ಉದ್ಯಾವರ”!

ಅದ್ಭುತ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದ ಬಿವಿ ತನ್ನ ಬಗ್ಗೆಯಾಗಲಿ, ತನ್ನ ಕುಟುಂಬದ ಬಗ್ಗೆಯಾಗಲಿ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲವಾಗಿತ್ತಂತೆ. ಪಕ್ಕಾ ವೃತ್ತಿಪರರಾದ ಬಿವಿ ಅವರ ಜೊತೆಗೆ ಕೆಲಸ ಮಾಡುವವರು ತುಂಬಾ ಖುಷಿಯಾಗಿರುತ್ತಿದ್ದರಂತೆ. ಆದರೆ ಅವರ ಕುರಿತಾಗಲಿ, ಹೆಂಡತಿ, ಮಕ್ಕಳ ಕುರಿತು ಯಾವ ವಿಚಾರವನ್ನೂ ತನ್ನ ಆಪ್ತರ ಬಳಿಯೂ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲವಂತೆ! ನನಗೂ ಕೂಡಾ ವಿಠಲನ ಬಗ್ಗೆ ಗೊತ್ತಿರುವುದು ಅರ್ಧ ಸತ್ಯ ಮಾತ್ರ ಎಂಬುದಾಗಿ ಆಪ್ತ ನಿರ್ದೇಶಕ, ಗೆಳೆಯ ಕೆವಿ ಶ್ರೀನಿವಾಸ್ ಒಮ್ಮೆ ಪ್ರತಿಕ್ರಿಯೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

1920ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಾವರದಲ್ಲಿ ಬಿ.ವಿಠಲ ಆಚಾರ್ಯ ಜನಿಸಿದ್ದರು. ಇವರ ತಂದೆ ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದರಂತೆ. ರೋಗಿಗಳಿಗೆ ಉಚಿತವಾಗಿ ಔಷಧ ನೀಡುವ ಮೂಲಕ ಜನಾನುರಾಗಿದ್ದರು. ಚಿಕ್ಕಂದಿನಲ್ಲಿಯೇ ಬಿವಿ ನಾಟಕ, ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿದ್ದರು. ಕೇವಲ 3ನೇ ತರಗತಿವರೆಗೆ ಓದಿದ್ದ ಬಿವಿ 9ನೇ ವರ್ಷಕ್ಕೆ ಮನೆ ಬಿಟ್ಟು ಹೋಗಿದ್ದರು. ಅರಸೀಕೆರೆ ತಲುಪಿದ್ದ ಬಿವಿ ತಮ್ಮ ಸಂಬಂಧಿಯೊಬ್ಬರ ಉಡುಪಿ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡು ತದನಂತರ ಹೋಟೆಲ್ ಮಾಲೀಕರಾಗಿದ್ದರು!

ಏತನ್ಮಧ್ಯೆ ತಮ್ಮ ಕೆಲವು ಗೆಳೆಯರ ಜೊತೆ ಕ್ವಿಟ್ ಇಂಡಿಯಾ ಚಳವಳಿಗೆ ಬಿವಿ ಆಚಾರ್ಯ ಧುಮುಕಿದ್ದರು. ಬ್ರಿಟಿಷ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಬಳಿಕ ಜೈಲಿನಿಂದ ಬಿಡುಗಡೆಗೊಂಡಿದ್ದರು. ಜೈಲುವಾಸದ ನಂತರ ಹೋಟೆಲ್ ವ್ಯವಹಾರವನ್ನು ತನ್ನ ಕಿರಿಯ ಸಹೋದರನಿಗೆ ವಹಿಸಿಕೊಟ್ಟ ಬಿವಿ ತಮ್ಮ ಆಪ್ತ ಗೆಳೆಯ ಡಿ.ಶಂಕರ್ ಸಿಂಗ್ ಹಾಗೂ ಮತ್ತಿತರರ ಜೊತೆಗೂಡಿ ಟೂರಿಂಗ್ ಟಾಕೀಸ್ ಅನ್ನು ಸ್ಥಾಪಿಸಿದ್ದರು!

ಬಿವಿ ಟೂರಿಂಗ್ ಟಾಕೀಸ್ ನ ಎಕ್ಸಿಕ್ಯೂಟಿವ್ ಪಾರ್ಟನರ್ ಆಗಿದ್ದರು. ಆ ಸಂದರ್ಭದಲ್ಲಿ ಪ್ರತಿಯೊಂದು ಸಿನಿಮಾವನ್ನು ವೀಕ್ಷಿಸಿ, ಸಿನಿಮಾ ನಿರ್ಮಾಣದ ಕೌಶಲ್ಯವನ್ನು ಕಲಿತುಕೊಳ್ಳತೊಡಗಿದ್ದರು. 1944ರಲ್ಲಿ ಕೆಆರ್ ಪೇಟೆಯ ಯು.ರಾಮದಾಸ್ ಆಚಾರ್ಯ ಅವರ ಪುತ್ರಿ ಜಯಲಕ್ಷ್ಮಿ ಆಚಾರ್ಯ ಜೊತೆ ಸಪ್ತಪದಿ ತುಳಿದಿದ್ದರು.

ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಬಿವಿ ವಿಠಲಾಚಾರ್ಯ:

ಶಂಕರ್ ಸಿಂಗ್ ಮತ್ತು ಗೆಳೆಯರು ಮೈಸೂರಿಗೆ ಸ್ಥಳಾಂತರಗೊಂಡು ಮಹಾತ್ಮ ಫಿಕ್ಚರ್ಸ್ ಹೆಸರಿನ ಪ್ರೊಡಕ್ಷನ್ ಕಂಪನಿ ಸ್ಥಾಪಿಸಿದ್ದರು. 1950ರಿಂದ ಕನ್ನಡ ಚಿತ್ರರಂಗದಲ್ಲಿ 18 ಸಿನಿಮಾಗಳನ್ನು ನಿರ್ದೇಶಿಸಿದ್ದರು. 1953ರಲ್ಲಿ ಡಿ.ಶಂಕರ್ ಸಿಂಗ್ ಅವರ ಬಳಗದಿಂದ ಹೊರಬಂದು ತಮ್ಮದೇ ಸ್ವಂತ “ವಿಠಲ್” ಪ್ರೊಡಕ್ಷನ್ ಸ್ಥಾಪಿಸಿದ್ದರು. ತಮ್ಮದೇ ನಿರ್ಮಾಣದಲ್ಲಿ ರಾಜ್ಯಲಕ್ಷ್ಮಿ, ಕನ್ಯಾದಾನದಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದರು.!

ವಿಠಲಾಚಾರ್ಯ ಅವರು ಜಂಟಲ್ ಮ್ಯಾನ್ ಎಂದೇ ಕರೆಸಿಕೊಂಡಿದ್ದರು. ಅದಕ್ಕೆ ಕಾರಣ..ಹಣಕಾಸಿನ ವ್ಯವಹಾರವನ್ನು ಖುದ್ದು ಅವರೇ ನೋಡಿಕೊಳ್ಳುತ್ತಿದ್ದರು. ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದವರಿಗೆ, ನಟ, ನಟಿಯರಿಗೆ ಕ್ಲಪ್ತ ಸಮಯದಲ್ಲಿ ಹಣವನ್ನು ನಿರ್ಮಾಪಕರು ಪಾವತಿಸಬೇಕಾಗಿತ್ತಂತೆ!

ಮದ್ರಾಸ್ ಗೆ ಪ್ರಯಾಣ, ತೆಲುಗು ಚಿತ್ರರಂಗದಲ್ಲಿ ಮಿಂಚಿ ಅನಾಮಧೇಯರಾಗಿದ್ದ ಬಿವಿ!

1955ರ ಸುಮಾರಿಗೆ ಬಿ.ವಿಠಲಾಚಾರ್ಯ ಅವರು ಮದ್ರಾಸ್ ಗೆ ತೆರಳಿ ಅಲ್ಲಿಯೇ ಶಾಶ್ವತವಾಗಿ ನೆಲೆನಿಂತು ಬಿಟ್ಟಿದ್ದರು. ಮದ್ರಾಸ್ ಗೆ ಹೋದ ಮೇಲೆ 2,3 ಕನ್ನಡ ಸಿನಿಮಾವನ್ನು ನಿರ್ದೆಶಿಸಿದ್ದರು. ಬಳಿಕ ಅವರು ಸಂಪೂರ್ಣವಾಗಿ ತೆಲುಗು ಮತ್ತು ತಮಿಳು ಸಿನಿಮಾವನ್ನು ನಿರ್ದೇಶಿಸಿದ್ದರು. ಸಮಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಬಿವಿ ಸಿನಿಮಾ ಶೂಟಿಂಗ್ ಸೆಟ್ ಗೆ ಒಂದು ಗಂಟೆ ಮೊದಲೇ ಬಂದು ಕುಳಿತುಕೊಳ್ಳುತ್ತಿದ್ದರಂತೆ!

ಬಿವಿ ಮನೆ ಇದ್ದಿದ್ದು ಚೆನ್ನೈನ ಪುರುಸವಾಕಂನಲ್ಲಿ. ಕೆಲವು ಬಾರಿ ವಿಜಯ ವಾಹಿನಿ ಸ್ಟುಡಿಯೋಗೆ ಕಾರಿನಲ್ಲಿ ಹೋಗುತ್ತಿದ್ದರಂತೆ. ಬಹುತೇಕ ಸಲ ಅವರು ಕಾಲ್ನಡಿಗೆಯಲ್ಲಿಯೇ ಆ ಪ್ರದೇಶಗಳಲ್ಲಿ ಓಡಾಡುತ್ತಿದ್ದರಂತೆ.

ತೆಲುಗಿನಲ್ಲಿ ಖ್ಯಾತ ನಟ ಎನ್ ಟಿ ರಾಮರಾವ್ ನಟಿಸಿದ್ದ 19 ಸಿನಿಮಾಗಳನ್ನು ನಿರ್ದೇಶಿಸಿದ್ದ ಹೆಗ್ಗಳಿಕೆ ಬಿ.ವಿಠಲಾಚಾರ್ಯ ಅವರದ್ದು. ತೆಲುಗಿನಲ್ಲಿ ನಿರ್ದೇಶಿಸಿದ್ದ ಸಿನಿಮಾಗಳೆಲ್ಲವೂ ಬಾಕ್ಸಾಫೀಸ್ ನಲ್ಲಿ ಯಶಸ್ವಿಯಾಗಿ ಭರ್ಜರಿಯಾಗಿ ಸದ್ದು ಮಾಡಿದ್ದವು. ಆದರೆ ವಿಪರ್ಯಾಸವೆಂದರೆ ಬಿವಿ ವಿಠಲಾಚಾರ್ಯ ಎಂಬ ಶಿಸ್ತಿನ ಸಿಪಾಯಿ, ಕನ್ನಡ ಮತ್ತು ತೆಲುಗು, ತಮಿಳಿನಲ್ಲಿ ಅದ್ಭುತ ಸಿನಿಮಾ ನಿರ್ದೇಶಿಸಿದ್ದಕ್ಕೆ ಯಾವುದೇ ಒಂದು ಪ್ರಶಸ್ತಿಯನ್ನೂ ಕೊಡದಿರುವುದು ವಿಪರ್ಯಾಸ!

ಜೀವಿತದ ಕೊನೆಯವರೆಗೂ ತುಂಬಾ ಸಕ್ರಿಯರಾಗಿದ್ದ ಬಿ.ವಿಠಲಾಚಾರ್ಯ 1999ರ ಮೇ 28ರಂದು ವಿಧಿವಶರಾಗಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ