ಮಗುವಾಗಿದ್ದಾಗಲೇ ನಟಿಸಿ, ದಂತಕಥೆಯಾದ “ ಬ್ರೂಸ್ ಲೀ” ನಿಗೂಢವಾಗಿ ಸಾವನ್ನಪ್ಪಿದ್ದು ಹೇಗೆ?

ನಾಗೇಂದ್ರ ತ್ರಾಸಿ, Aug 24, 2019, 7:26 PM IST

ಮಾರ್ಷಲ್ ಆರ್ಟ್ಸ್ ದಂತ ಕಥೆಯಾಗಿದ್ದ ಹಾಲಿವುಡ್ ನ ಬ್ರೂಸ್ ಲೀ ಬಗ್ಗೆ ಕೇಳಿದ್ದೀರಿ. ಆತನ ಆ್ಯಕ್ಷನ್, ನಟನೆ ಬಗ್ಗೆ ಎರಡು ಮಾತಿಲ್ಲ. ಇನ್ನೇನು ಯಶಸ್ಸಿನ ಮೆಟ್ಟಿಲು ಏರಬೇಕೆಂಬ ಹೊತ್ತಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿಬಿಟ್ಟಿದ್ದ ನಟ ಬ್ರೂಸ್ ಲೀ!..ಅದು ಸಾಯುವ ವಯಸ್ಸೇ…ಬರೇ 32ರ ಹರೆಯದಲ್ಲಿಯೇ ಅಕಾಲಿಕ ಮರಣಕ್ಕೀಡಾಗಿದ್ದ ಲೀ.!ಕುಂಗ್ ಫೋ ಮಾಂತ್ರಿಕ, ಮಾರ್ಷಲ್ ಆರ್ಟ್ಸ್ ದಂತಕಥೆಯಾಗಿದ್ದ ಬ್ರೂಸ್ ಲೀ ಸಾವಿನ ಬಗ್ಗೆ ಹಲವಾರು ಕಥೆಗಳಿವೆ..ನಿಜಕ್ಕೂ ಆತನ ಸಾವಿಗೆ ಕಾರಣ ಏನು..ಹಾಲಿವುಡ್ ನಲ್ಲಿ ದೈತ್ಯ ಪ್ರತಿಭೆಯಾಗಿ ಬೆಳಗಬೇಕಿದ್ದ ಲೀ ಸಾವು ಇಂದಿಗೂ ನಿಗೂಢ!

ಲೀ ಜುನ್ ಫಾನ್ 3ತಿಂಗಳ ಮಗು ಮೊದಲ ಬಾರಿಗೆ ನಟಿಸಿತ್ತು!:

ದಂತಕಥೆ ನಟ, ನಿರ್ದೇಶಕ, ಮಾರ್ಷಲ್ ಆರ್ಟ್ಸ್ ನ ಎಕ್ಸ್ ಫರ್ಟ್ ಬ್ರೂಸ್ ಲೀ ನಿಜನಾಮಧೇಯ ಲೀ ಜುನ್ ಫಾನ್..1940ರ ನವೆಂಬರ್ 27ರಂದು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ್ದ. ತಂದೆ ಹೋಯಿ ಚುಯೆನ್ ಹಾಂಗ್ ಕಾಂಗ್ ನ ಓಪೇರಾ ಹಾಡುಗಾರರಾಗಿದ್ದರು. ತನ್ನ ಪತ್ನಿ ಗ್ರೇಸ್ ಹೋ ಹಾಗೂ ಮೂವರು ಮಕ್ಕಳ ಜತೆ 1939ರಲ್ಲಿ ವಿಶ್ವದ ದೊಡ್ಡಣ್ಣ ಎಂದೇ ಹೆಸರಾಗಿದ್ದ ಅಮೆರಿಕಕ್ಕೆ ವಲಸೆ ಬಂದಿದ್ದರು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಿರುಗಾಟದಲ್ಲಿದ್ದಾಗಲೇ ನಾಲ್ಕನೇ ಮಗು ಲೀ ಜನಿಸಿದ್ದ!

ಲೀ ಜನಿಸಿದ್ದ ಆಸ್ಪತ್ರೆಯ ನರ್ಸ್ ಒಬ್ಬಳಿಂದಾಗಿ ಆತನಿಗೆ ಬ್ರೂಸ್ ಹೆಸರು ಬಂದಿತ್ತು. ಕುತೂಹಲಕಾರಿ ವಿಷಯವೆಂದರೆ ಆತನನ್ನು ಶಾಲೆಗೆ ಸೇರಿಸುವವರೆಗೂ ಮನೆಯವರಾರು ಆತನನ್ನು ಬ್ರೂಸ್ ಲೀ ಎಂದು ಕರೆಯುತ್ತಲೇ ಇರಲಿಲ್ಲವಾಗಿತ್ತಂತೆ!

1941ರಲ್ಲಿ ಬಿಡುಗಡೆಗೊಂಡಿದ್ದ ಗೋಲ್ಡನ್ ಗೇಟ್ ಗರ್ಲ್ ಎಂಬ ಹಾಲಿವುಡ್ ಸಿನಿಮಾದಲ್ಲಿ ಭವಿಷ್ಯದ ದಂತಕಥೆಯಾಗಲಿದ್ದ ಈ “ಲೀ” ಎಂಬ 3 ತಿಂಗಳ ಪುಟ್ಟ ಮಗು ನಟಿಸಿತ್ತು!

ಗೋಲ್ಡನ್ ಗೇಟ್ ಗರ್ಲ್ ಎಂಬ ಹಾಂಗ್ ಕಾಂಗ್ ಡ್ರಾಮಾ ಸಿನಿಮಾ ನಿರ್ಮಾಣಗೊಂಡಿದ್ದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ. 1941ರಲ್ಲಿ ಈ ಸಿನಿಮಾ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾತ್ರ ಬಿಡುಗಡೆಯಾಗಿತ್ತು, ಆದರೆ 1946ರವರೆಗೆ ಏಷ್ಯಾದಲ್ಲಿ ಈ ಸಿನಿಮಾಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲವಾಗಿತ್ತು.

1940ರ ಆರಂಭದಲ್ಲಿ ಬ್ರೂಸ್ ಲೀ ತಂದೆ ಹಾಂಗ್ ಕಾಂಗ್ ಗೆ ವಾಪಸ್ ಆಗಿದ್ದರು. ಏತನ್ಮಧ್ಯೆ ಚಿತ್ರರಂಗದಲ್ಲಿ ಗಮನಸೆಳೆದಿದ್ದ ಲೀ ಬಾಲನಟನಾಗಿಯೇ ಸುಮಾರು 20 ಸಿನಿಮಾಗಳಲ್ಲಿ ನಟಿಸಿಬಿಟ್ಟಿದ್ದ. ನೃತ್ಯದಲ್ಲಿ ಅಪಾರ ಒಲವು ಹೊಂದಿದ್ದ ಲೀ ಅದರಲ್ಲಿ ವಿಶೇಷ ತರಬೇತಿ ಪಡೆದಿದ್ದ. ಹಾಂಗ್ ಕಾಂಗ್ ಚಾ..ಚಾ ಸ್ಪರ್ಧೆಯಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆದಿದ್ದ.!

ಚೀನಿ ಮೂಲದವನು ಎಂಬ ಕಾರಣಕ್ಕೆ ಕೀಟಲೆ ಮಾಡುತ್ತಿದ್ದ ಬ್ರಿಟಿಷ್ ವಿದ್ಯಾರ್ಥಿಗಳ ವಿರುದ್ಧ ತಿರುಗಿಬಿದ್ದಿದ್ದ ಲೀ ಸ್ಟ್ರೀಟ್ ಗ್ಯಾಂಗ್ ಸೇರಿಕೊಂಡಿದ್ದ. 1953ರಲ್ಲಿ ಕುಂಗ್ ಫೂ ಕಲಿಕೆ ಆರಂಭಿಸಿದ್ದ. 1960ರ ಅಂತ್ಯದ ಸುಮಾರಿಗೆ ಲೀ ಅಮೆರಿಕಕ್ಕೆ ತನ್ನ ಕುಟುಂಬದೊಂದಿಗೆ ವಾಪಸ್ ಆಗಿದ್ದ. ಆರಂಭಿಕವಾಗಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಶುರು ಮಾಡಿದ್ದ.

ವಾಷಿಂಗ್ಟನ್ ನ ಎಡಿಸನ್ ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದ ಲೀ ವಾಷಿಂಗ್ಟನ್ ಯೂನಿರ್ವಸಿಟಿಯಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದ. ಬಳಿಕ ವಿಂಗ್ ಚುನ್ ಸ್ಟೈಲ್ ನಲ್ಲಿ ಮಾರ್ಷಲ್ ಆರ್ಟ್ಸ್ ತರಬೇತಿ ಕೊಡುವ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಕುಂಗ್ ಫೂ ತರಬೇತಿ ಕೊಡುತ್ತಿದ್ದ ಸಂದರ್ಭದಲ್ಲಿಯೇ ಪರಿಚಯವಾದ ಲಿಂಡಾ ಎಮೆರೈ ಜತೆ 1964ರಲ್ಲಿ ವಿವಾಹವಾಗಿದ್ದ. ತದನಂತರ ಲೀ ತನ್ನ ಸ್ವಂತ ಮಾರ್ಸಲ್ ಆರ್ಟ್ಸ್ ತರಬೇತಿ ಶಾಲೆ ತೆರೆದುಬಿಟ್ಟಿದ್ದ.

ಲೀ ಮತ್ತು ಲಿಂಡಾ ಕ್ಯಾಲಿಫೋರ್ನಿಯಾಕ್ಕೆ ವಲಸೆ ಹೋದ ಮೇಲೆ ಓಕ್ಲಾಂಡ್ ಮತ್ತು ಲಾಸ್ ಏಂಜಲೀಸ್ ನಲ್ಲೂ ಕುಂಗ್ ಫೂ ತರಬೇತಿ ಶಾಲೆಯ ಕಚೇರಿ ತೆರೆದಿದ್ದರು. ಲೀ ದಂಪತಿಗೆ ಬ್ರಾಂಡನ್ ಹಾಗೂ ಶಾನ್ನೋನ್ ಎಂಬ ಇಬ್ಬರು ಮಕ್ಕಳು ಜನಿಸಿದ್ದರು.

ಆ್ಯಕ್ಷನ್ ಹೀರೋ ಅವತರಿಸಿಬಿಟ್ಟಿದ್ದ!

1966ರಿಂದ 67ರವರೆಗೆ ಎಬಿಸಿ ಅಮೆರಿಕದ ಟೆಲಿವಿಷನ್ ನೆಟ್ ವರ್ಕ್ 26ಕಂತುಗಳಲ್ಲಿ ಪ್ರಸಾರ ಮಾಡಿದ್ದ ಟಿವಿ ಸೀರಿಯಲ್ ದ ಗ್ರೀನ್ ಹಾರ್ನೆಟ್ ನಲ್ಲಿ ನಟಿಸುವ ಮೂಲಕ ಬ್ರೂಸ್ ಲೀ ಖ್ಯಾತರಾಗತೊಡಗಿದ್ದರು. ಗ್ರೀನ್ ಹಾರ್ನೆಟ್ 1930ರಲ್ಲಿ ರೇಡಿಯೋದಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮವನ್ನು ಆಧರಿಸಿ ಸೀರಿಯಲ್ ಅನ್ನು ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಲೀ ತನ್ನ ಅದ್ಭುತ ಕಾಟೋ ಕೈಚಳಕ ತೋರಿಸಿದ್ದ. ಹೀಗೆ ಐರನ್ ಸೈಡ್, ಲಾಂಗ್ ಸ್ಟ್ರೀಟ್ ಟಿವಿ ಶೋಗಳಲ್ಲಿ ಲೀ ಅತಿಥಿ ಕಲಾವಿದರಾಗಿ ಅಭಿನಯಿಸಿದ್ದರು. 1969ರಲ್ಲಿ  ತೆರೆಕಂಡಿದ್ದ ಮಾರ್ಲೋ ಸಿನಿಮಾದಲ್ಲಿ ಲೀ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸದಾ ಪಾದರಸದಂತೆ ಕುಂಗ್ ಫೂ ಸೇರಿದಂತೆ ವಿವಿಧ ದೈಹಿಕ ಚಟುವಟಿಕೆಯಲ್ಲಿ ತೊಡಗಿದ್ದ ಲೀಗೆ ಅದೊಂದು ದಿನ ಬೆನ್ನಿನ ಭಾಗಕ್ಕೆ ಬಲವಾದ ಏಟು ಬಿದ್ದು ಬಿಟ್ಟಿತ್ತು. ಅದು ಗುಣಮುಖವಾಗಲು ಕೆಲವು ಸಮಯ ತೆಗೆದುಕೊಂಡಿತ್ತು.

ನಿಗೂಢ ಸಾವು:

1970ರಲ್ಲಿ ಲೀ ಹಾಂಗ್ ಕಾಂಗ್ ಗೆ ವಾಪಸ್ ಆಗಿದ್ದರು. 1971ರಲ್ಲಿ ಬಿಡುಗಡೆಯಾಗಿದ್ದ ದ ಬಿಗ್ ಬಾಸ್ ಆ್ಯಕ್ಷನ ಸಿನಿಮಾದಲ್ಲಿ ನಟಿಸಿ ಸ್ಟಾರ್ ಪಟ್ಟಕೇರಿದ್ದರು. ಲೀ ಬರೆದು ನಿರ್ದೇಶಿಸಿ ನಟಿಸಿದ್ದ ಸಿನಿಮಾ ದ ವೇ ಆಫ್ ದ ಡ್ರ್ಯಾಗನ್ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು. ಲೀಯ ಬಹುನಿರೀಕ್ಷಿತ ಸಿನಿಮಾ ಎಂಟರ್ ದ ಡ್ರ್ಯಾಗನ್ ಅನ್ನು ಅಮೆರಿಕದಲ್ಲಿ 1973ರ ಆಗಸ್ಟ್ ನಲ್ಲಿ ಬಿಡುಗಡೆಯಾಗಿತ್ತು. ದುರಂತವೆಂದರೆ ಸಿನಿಮಾ ಬಿಡುಗಡೆಗೆ ಒಂದು ತಿಂಗಳು ಇರುವಾಗಲೇ ಲೀ ಸಾವನ್ನಪ್ಪಿಬಿಟ್ಟಿದ್ದರು. ಬ್ರೈನ್ ಹ್ಯಾಮರೇಜ್ ನಿಂದಾಗಿ ಲೀ ಸಾವನ್ನಪ್ಪಿರುವುದಾಗಿ ಅಧಿಕೃತವಾಗಿ ಘೋಷಿಸಲಾಗಿತ್ತು. ಎಂಟರ್ ದ ಡ್ರ್ಯಾಗಲ್ ಬಾಕ್ಸಾಫೀಸ್ ನಲ್ಲಿ ಹಿಟ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಇವೆಲ್ಲದರ ನಡುವೆ ಲೀ ಅವರದ್ದು ಸಹಜ ಸಾವಲ್ಲ, ಅದೊಂದು ಕೊಲೆ ಎಂಬ ಆರೋಪ ಈಗಲೂ ಹರಿದಾಡುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ