ಜಿಲ್ಲೆಯಲ್ಲಿ ಬದಲಾಗ್ತಿದ್ದಾರಾ ಅಧಿಕಾರಿಗಳು

Team Udayavani, Sep 10, 2019, 11:01 AM IST

ಬಾಗಲಕೋಟೆ ಜಿಲ್ಲಾಡಳಿತ ಭವನ.

ಬಾಗಲಕೋಟೆ: ಸಮ್ಮಿಶ್ರ ಸರ್ಕಾರ ಹೋಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಪ್ರಮುಖ ಸರ್ಕಾರಿ ಹುದ್ದೆಗಳಿಗೆ ತಮ್ಮ ಖಾಸಾ ಇರುವ ಅಧಿಕಾರಿಗಳನ್ನೇ ತರಲು ಮುಂದಾಗಿದ್ದಾರೆ. ಈಗಾಗಲೇ ಮಹತ್ವದ ಹುದ್ದೆಗಳಿಗೆ ವರ್ಗಾವಣೆ ಪ್ರಕ್ರಿಯೆ ಕೂಡ ಶುರುವಾಗಿದೆ.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳ ವರ್ಗ ಮಾಡಲಾಗಿತ್ತು. ಕಾಂಗ್ರೆಸ್‌ ಸರ್ಕಾರದಲ್ಲಿ ಮನೋಜ್‌ ಜೈನ್‌, ಪಿ.ಎ. ಮೇಘಣ್ಣವರ ಕಾರ್ಯ ನಿರ್ವಹಿಸಿದ್ದರೆ, ಸಮ್ಮಿಶ್ರ ಸರ್ಕಾರದಲ್ಲಿ ಕೆ.ಜಿ. ಶಾಂತಾರಾಮ್‌ ಜಿಲ್ಲಾಧಿಕಾರಿಯಾಗಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಜಿಲ್ಲೆಗೆ ಆಗಮಿಸಿರುವ ಹಾಲಿ ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌ ಜಿಲ್ಲೆಯ ದಂಡಾಧಿಕಾರಿಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಜನಸಾಮಾನ್ಯರೊಂದಿಗೆ ತಕ್ಷಣ ಬೆರೆಯುತ್ತಿದ್ದ ಅವರನ್ನು ವರ್ಗಾವಣೆ ಮಾಡಲಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಇನ್ನು ಜಿಪಂನಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಎಸ್‌.ಎಸ್‌. ನಕುಲ, ಎಂ.ಜಿ. ಹಿರೇಮಠ, ವಿಕಾಸ ಕಿಶೋರ ಸುರಳ್ಕರ ಕೆಲಸ ಮಾಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಕೆಲ ತಿಂಗಳು ಸುರಳ್ಕರ ಅವರು ಕೆಲಸ ಮಾಡಿದ್ದರೆ, ಬಳಿಕ ಆ ಹುದ್ದೆಗೆ ಗಂಗೂಬಾಯಿ ಮಾನಕರ ನೇಮಕಗೊಂಡಿದ್ದರು. ಇವರನ್ನು ಈಗ ವರ್ಗಾವಣೆ ಮಾಡಿದ್ದು, ಆ ಹುದ್ದೆಗೆ ಜಮಖಂಡಿ ಎಸಿ ಆಗಿದ್ದ 2016ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ಮೊಹ್ಮದ ಇಕ್ರಮಮುಲ್ಲಾ ಶರೀಫ್‌ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹುದ್ದೆಗೆ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಎಂ.ಎನ್‌. ನಾಗರಾಜ, ಸಿ.ಬಿ. ರಿಷ್ಯಂತ ಅವರು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೆಲಸ ಮಾಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಿ.ಬಿ. ರಿಷ್ಯಂತ ಕೆಲ ತಿಂಗಳು ಮುಂದುವರಿದಿದ್ದರು. ಬಳಿಕ ಅಭಿನವ ಖರೆ ಕೆಲ ತಿಂಗಳು ಕೆಲಸ ಮಾಡಿ ವರ್ಗಗೊಂಡರು. ಇದೀಗ ಯುವ ಐಪಿಎಸ್‌ ಅಧಿಕಾರಿ ಲೋಕೇಶ ಜಗಲಾಸರ ಎಸ್ಪಿ ಹುದ್ದೆಗೆ ಬಂದಿದ್ದಾರೆ.

ಒಂದು ಜಿಲ್ಲೆಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್ಪಿ ಹುದ್ದೆಗಳು ಪ್ರಮುಖವಾಗಿದ್ದು, ಸರ್ಕಾರ ಬದಲಾದಾಗ ಈ ಮಹತ್ವದ ಹುದ್ದೆಗಳಿಗೆ ಅಧಿಕಾರಸ್ಥ ಜನಪ್ರತಿನಿಧಿಗಳು ತಮಗೆ ಖಾಸಾ ಇರುವ ಅಧಿಕಾರಿಗಳನ್ನೇ ತರುತ್ತಾರೆ. ಇದು ಹಲವು ವರ್ಷಗಳಿಂದ ಮುಂದುವರಿದಿದೆ.

ಹೊಸಬರ ನೇಮಕ: ಸದ್ಯ ಜಿಪಂ ಸಿಇಒ ಹುದ್ದೆಗೆ ಮೊಹ್ಮದ ಇಕ್ರಮಮುಲ್ಲಾ ಶರೀಫ್‌, ಬಾಗಲಕೋಟೆ ಉಪ ವಿಭಾಗಾಧಿಕಾರಿಯಾಗಿ ಕಿರಿಯ ಶ್ರೇಣಿಯ ಪರೀಕ್ಷಾರ್ಥಿ ಕೆಎಎಸ್‌ ಅಧಿಕಾರಿ ಎಂ.ಗಂಗಪ್ಪ ಅವರ ನೇಮಕವಾಗಿದೆ. ಮಹತ್ವದ ಇಲಾಖೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರ ಹುದ್ದೆ ಎರಡೂ ಸ್ಥಾನಗಳಿಗೆ 1997ರ ಬ್ಯಾಚ್‌ನ ಹಿರಿಯ ಐಎಎಸ್‌ ಅಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ನೇಮಕಗೊಂಡಿದ್ದಾರೆ.

ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್‌ ನಿರ್ಮಾಣದ ಆಯುಕ್ತರಾಗಿದ್ದಾರೆ. ಹೀಗಾಗಿ ಅವರ ಅವಧಿಯಲ್ಲಿ ಬಾಕಿ ಉಳಿದ ಸಂತ್ರಸ್ತರ ಸಮಸ್ಯೆ, ಕಾರ್ಯಗಳು ವೇಗವಾಗಿ ನಡೆಯುತ್ತವೆ ಎಂಬ ನಿರೀಕ್ಷೆಯನ್ನು ಇಲ್ಲಿನ ಸಂತ್ರಸ್ತರು ಇಟ್ಟುಕೊಂಡಿದ್ದಾರೆ.

ಯಕೆಪಿಯಡಿ ಇದೇ ಮೊದಲ ಬಾರಿಗೆ ಅಪರ ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿಸಲಾಗಿದ್ದು, ಈ ಹುದ್ದೆಗೆ ಡಾ| ಸಿದ್ದು ಹುಲ್ಲೋಳ್ಳಿ (ಪುನರವಸತಿ)ನೇಮಕಗೊಂಡಿದ್ದಾರೆ. ಯುಕೆಪಿ ವಿಶೇಷ ಜಿಲ್ಲಾಧಿಕಾರಿಯಾಗಿ ಕೆಎಎಸ್‌ ಅಧಿಕಾರಿ ಮಹಾದೇವ ಮುರಗಿ (ಈ ಹಿಂದೆ ಬಾಗಲಕೋಟೆ ಎಸಿ ಮತ್ತು ಬಿಟಿಡಿಎ ಆರ್‌ಒ ಆಗಿದ್ದರು) ನೇಮಕಗೊಂಡಿದ್ದು, ಇದರೊಂದಿಗೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ವಿಶೇಷಾಧಿಕಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಯುಕೆಪಿಯ ಮಹಾ ವ್ಯವಸ್ಥಾಪಕ ಹುದ್ದೆಗೆ ಮತ್ತೋರ್ವ ಕೆಎಎಸ್‌ ಅಧಿಕಾರಿ ಡಾ| ಔದ್ರಾಮ (ಈ ಹಿಂದೆ ನಗರಸಭೆ ಆಯುಕ್ತ, ಬಿಟಿಡಿಎ ಆರ್‌ಒ ಮತ್ತು ಡಿಸಿ ಕಚೇರಿಯ ಯೋಜನಾ ನಿರ್ದೇಶಕರಾಗಿದ್ದರು) ಅವರನ್ನು ವರ್ಗಾವಣೆ ಮಾಡಲಾಗಿದೆ. ಸದ್ಯ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾಗಿರುವ ಡಾ| ಔದ್ರಾಮ ಯುಕೆಪಿ ಮಹಾ ವ್ಯವಸ್ಥಾಪಕರ ಹುದ್ದೆಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

•ಶ್ರೀಶೈಲ ಕೆ. ಬಿರಾದಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ