ಆಡಳಿತ-ವಿಪಕ್ಷಗಳಿಂದ ರೈತರ ನಿರ್ಲಕ್ಷ್ಯ

•ಬರಮುಕ್ತ ಕರ್ನಾಟಕಕ್ಕೆ ರೈತ ಸಂಘ ಸಂಕಲ್ಪ•ಸಂಘದಿಂದ ರಾಜ್ಯದ ಬರ ಅಧ್ಯಯನ

Team Udayavani, Jun 19, 2019, 9:43 AM IST

ಬಾಗಲಕೋಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಾಗಲಕೋಟೆ: ರಾಜ್ಯದಲ್ಲಿ ಸತತ 5ವರ್ಷದಿಂದ ನಿರಂತರ ಬರಗಾಲ ಬಿದ್ದಿದೆ. ಕಳೆದ ವರ್ಷ 156 ತಾಲೂಕಿನಲ್ಲಿ ಬರ ಬಿದ್ದರೆ, ಈ ಬಾರಿ ಇಡೀ ರಾಜ್ಯದ ಎಲ್ಲ ತಾಲೂಕಿನಲ್ಲಿ ತೀವ್ರ ಬರ ಎದುರಾಗಿದೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದರೂ ಆಡಳಿತ-ವಿರೋಧ ಪಕ್ಷಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರ ಪಾಲಿಗೆ ಸಮ್ಮಿಶ್ರ ಸರ್ಕಾರ ಸತ್ತ ಸ್ಥಿತಿಯಲ್ಲಿದ್ದರೆ, ವಿರೋಧ ಪಕ್ಷ ಕೋಮಾದಲ್ಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆಯಲ್ಲಿ ಸಮ್ಮಿಶ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್‌-ಕಾಂಗ್ರೆಸ್‌ ಎರಡೂ ಪಕ್ಷಗಳು ಹೆಣಗಾಡುತ್ತಿವೆ. ಇತ್ತ ವಿರೋಧ ಪಕ್ಷವಾಗಿರುವ ಬಿಜೆಪಿ, ರೈತರ ಪರವಾಗಿ ಧ್ವನಿ ಎತ್ತದೇ ಕೇವಲ ಸಮ್ಮಿಶ್ರ ಸರ್ಕಾರ ಬಿದ್ದರೆ ಅಧಿಕಾರಕ್ಕೆ ಬರಬೇಕೆಂಬ ಹಠದಲ್ಲಿದೆ. ಹೀಗಾಗಿ ರೈತರ ಪಾಲಿಗೆ ಸರ್ಕಾರ ಸತ್ತಿದೆ. ವಿರೋಧ ಪಕ್ಷ ಕೋಮಾ ಸ್ಥಿತಿಯಲ್ಲಿದೆ ಎಂದು ಟೀಕಿಸಿದರು.

ರಾಜ್ಯಪಾಲರಿಗೆ ಬರ ಅಧ್ಯಯನ ವರದಿ: ರಾಜ್ಯದ ಎಲ್ಲ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಬರ ಅಧ್ಯಯನದ ಜತೆಗೆ ರೈತರ ಸ್ಥಿತಿಗತಿ ಕುರಿತು ತಿಳಿಯಲು ರೈತ ಸಂಘದ 12 ಜನ ಪ್ರಮುಖರನ್ನು ಒಳಗೊಂಡ ತಂಡ ರಚಿಸಲಾಗಿದೆ. ಈಗಾಗಲೇ ರಾಜ್ಯದ ಹಲವು ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ಸಸ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡಲಾಗುತ್ತಿದೆ. ಬರ ಅಧ್ಯಯನ ವರದಿಯನ್ನು ರಾಜ್ಯಪಾಲರಿಗೆ ಭೇಟಿ ಮಾಡಿ ಸಲ್ಲಿಸಲಾಗುವುದು. ಅಲ್ಲದೇ ಸರ್ಕಾರ, ವಿರೋಧ ಪಕ್ಷ ರೈತರಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸಂವಿಧಾನದ ಮುಖ್ಯಸ್ಥರಾಗಿ, ಸರ್ಕಾರ ಸರಿಯಾದ ಸೂಚನೆ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಲಾಗುವುದು ಎಂದರು.

ಬರ ಮುಕ್ತ ಕರ್ನಾಟಕ ಆಂದೋಲನ: ದೇಶದಲ್ಲಿ ಬರ ಎದುರಿಸುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನವಿದೆ. ರಾಜ್ಯದ 1ರ 3ರಷ್ಟು ಭಾಗ ಸಂಪೂರ್ಣ ಮರಭೂಮಿಯಂತಹ ಸ್ಥಿತಿ ತಲುಪಿದೆ. ಮುಂದೆ ಇಡೀ ರಾಜ್ಯವೇ ಸತತ ಬರದಿಂದ ನಲುಗುವ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಹಲವು ಕಾರ್ಯಕ್ರಮಗಳ ಮೂಲಕ ಬರ ಮುಕ್ತ ಕರ್ನಾಟಕ ಮಾಡುವ ಸಂಕಲ್ಪ ತೊಡಲಾಗಿದೆ ಎಂದರು.

ಇದಕ್ಕಾಗಿ ರೈತ ಸಂಘದಿಂದ ಅನುಷ್ಠಾನ ಸಮಿತಿ ರಚಿಸಲಾಗಿದೆ. ಜುಲೈ 21ರಂದು ನರಗುಂದ ಬಂಡಾಯದ 39ನೇ ವಾರ್ಷಿಕೋತ್ಸವ ನಡೆಯಲಿದ್ದು, ಈ ವೇಳೆ ಬೆಳಗಾವಿಯಲ್ಲಿ ಬರಮುಕ್ತ ಕರ್ನಾಟಕ ನಿರ್ಮಾಣ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಈ ಆಂದೋಲನದ ವೇಳೆ ಕೆರೆ ಒತ್ತುವರಿ ತೆರವು, ಸಸಿ ನೆಡುವಿಕೆ, ನೀರು ಬಳಕೆ, ನೀರು ಉಳಿಸುವ ವಿಧಾನ ಹೀಗೆ ಹಲವು ಕಾರ್ಯಕ್ರಮ ನಡೆಸಿ, ರೈತರಿಗೆ ತಿಳಿವಳಿಕೆ ನೀಡಲಾಗುವುದು ಎಂದು ತಿಳಿಸಿದರು.

ಬಿಎಸ್‌ವೈ ಡೋಂಗಿ ಹೋರಾಟ: ಜಿಂದಾಲ್ ಕಂಪನಿಗೆ ಯಾವುದೇ ಕಾರಣಕ್ಕೂ ಭೂಮಿ ಮಾರಾಟ ಮಾಡಬಾರದು. ಕೈಗಾರಿಕೆಗೆ ಭೂಮಿ ಕೊಡಲೇಬೇಕಿದ್ದರೆ, ಲೀಜ್‌ ಆಧಾರದ ಮೇಲೆ ಭೂಮಿ ಕೊಡಬೇಕು. ಈ ವಿಷಯದಲ್ಲಿ ಸಚಿವ ಡಿ.ಕೆ. ಶಿವಕುಮಾರ ಅಪ್ರಭುದ್ಧತೆಯ ಹೇಳಿಕೆ ನೀಡಿದ್ದಾರೆ. ಕಂಪನಿಗೆ ಭೂಮಿ ಕೊಟ್ಟರೆ ತೆರಿಗೆ ಕಟ್ಟುತ್ತಾರೆ, ರೈತರಿಂದ ಏನು ತೆರಿಗೆ ಬರುತ್ತದೆ ಎಂದು ಹೇಳಿರುವುದು ಮೂರ್ಖತನದ್ದು. ರೈತರು, ಬೆಳೆದಾಗ ಇಡೀ ದೇಶ ಅನ್ನ ತಿನ್ನುತ್ತದೆ. ಪರೋಕ್ಷವಾಗಿ ರೈತರು, ಈ ದೇಶಕ್ಕೆ ತೆರಿಗೆ ಕಟ್ಟುತ್ತಾರೆ ಎಂದು ಹೇಳಿದರು.

ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಜಿಂದಾಲ್ ಕಂಪನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಬಿಜೆಪಿ ಒಂದೆಡೆ ಹೋರಾಟ ನಡೆಸಿದ್ದರೆ, ಇನ್ನೊಂದೆಡೆ ಅದೇ ಪಕ್ಷದ ಮಾಜಿ ಸಚಿವ, ಶಾಸಕ ಬಿ. ಶ್ರೀರಾಮುಲು, ಜಿಂದಾಲ್ ಕಂಪನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನೀವು ಭೂಮಿ ಪಡೆಯುವ ವಿಷಯದಲ್ಲಿ ಮುಂದುವರಿಯಿರಿ ಎಂದು ಹೇಳುತ್ತಾರೆ. ಮತ್ತೂಂದೆಡೆ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ನಡೆಸಿದ್ದಾರೆ. ಹೀಗಾಗಿ ಬಿಜೆಪಿಯ ಹೋರಾಟ ಡೋಂಗಿತನದಿಂದ ಕೂಡಿದೆ ಎಂದು ಆರೋಪಿಸಿದರು.

ಅಧಿಸೂಚನೆ ಹೊರಡಿಸಿ: ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧೀಕರಣಗಳ ಅಂತಿಮ ತೀರ್ಪು ಹೊರ ಬಂದರೂ ಈ ವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಅದೇ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿನ ಲಾಬಿಗೆ ಮಣಿದು ಅಧಿಸೂಚನೆ ಹೊರಡಿಸಲಾಗಿದೆ. ಕೃಷ್ಣಾ ಮತ್ತು ಮಹದಾಯಿ ನೀರು ಹಂಚಿಕೆ ತೀರ್ಪಿಗೆ ಅಧಿಸೂಚನೆ ಹೊರಡಿಸಿಲ್ಲ. ಈ ವಿಷಯದಲ್ಲಿ ರಾಜ್ಯದ 28 ಜನ ಸಂಸದರೂ ಕೇಂದ್ರದ ಮೇಲೆ ಒತ್ತಡ ತರಬೇಕು. ಅದರಲ್ಲೂ ಬಿಜೆಪಿಯಿಂದ 25 ಜನ ಸಂಸದರಾಗಿದ್ದು, ಇವರ ಜವಾಬ್ದಾರಿ ಹೆಚ್ಚಿದೆ. ಕೂಡಲೇ ಅಧಿಸೂಚನೆ ಹೊರಡಿಸದಿದ್ದರೆ ರಾಜ್ಯ ಸಂಸದರ ವಿರುದ್ಧ ರೈತ ಸಂಘ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಜಿ. ಶಾಂತಸ್ವಾಮಿಮಠ, ಜೆ.ಪಿ. ರಾಮಸ್ವಾಮಿ, ರವಿಕಿರಣ ಪೂಜಾರ, ಶಿವನಗೌಡ ಪಾಟೀಲ, ಎನ್‌. ರಾಮು, ಶ್ರೀಶೈಲ ನಾಯಿಕ, ಸಿದ್ದಪ್ಪ, ಗೋವಿಂದಪ್ಪ ಮುಂತಾದವರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ