ಯೋಗೋತ್ಸವಕ್ಕೆ ಉದ್ಯಾನನಗರಿ ಸಜ್ಜು

Team Udayavani, Jun 20, 2019, 3:09 AM IST

ಬೆಂಗಳೂರು: ನಾಳೆ ಅಂತಾರಾಷ್ಟ್ರೀಯ ಯೋಗ ದಿನ. ಧರ್ಮ, ಜಾತಿ, ವಯಸ್ಸಿನ ಭೇದವಿಲ್ಲದೆ ನಗರದ ಜನ “ಯೋಗ ಹಬ್ಬ’ ಆಚರಿಸಲು ಸಜ್ಜಾಗಿದ್ದಾರೆ. ರಾಜ್ಯ ಸರ್ಕಾರದ ಆಯುಷ್‌ ಇಲಾಖೆಯು ಸೇರಿದಂತೆ ನಾನಾ ಸಂಸ್ಥೆಗಳು, ಶಾಲಾ-ಕಾಲೇಜುಗಳು ನಗರದ ವಿವಿಧೆಡೆ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಿವೆ.

ಹಲವು ಯೋಗ ಸಂಸ್ಥೆಗಳು ಯೋಗ ದಿನ ಮತ್ತು ಯೋಗದ ಮಹತ್ವ ಕುರಿತು ಮನೆ ಮನೆಗೆ ಕರಪತ್ರಗಳನ್ನು ವಿತರಿಸುವ ಕಾರ್ಯವನ್ನು ಒಂದೆರಡು ವಾರಗಳಿಂದ ನಡೆಸುತ್ತಿವೆ. ಯುವ ಜನಾಂಗಕ್ಕೆ ಯೋಗದ ಸಂಪೂರ್ಣ ಮಾಹಿತಿ ನೀಡುತ್ತಿವೆ. ಹೊಸಬರನ್ನು ಯೋಗಕ್ಕೆ ಆಹ್ವಾನಿಸುತ್ತಿವೆ. ಯೋಗದಿನ ಕಾರ್ಯಕ್ರಮ ನಡೆಯುವ ಸ್ಥಳ ಇತ್ಯಾದಿ ವಿವರ ಒಳಗೊಂಡ ಕರ ಪತ್ರ ವಿತರಿಸುತ್ತಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಯೋಗದಿನದ ಆಹ್ವಾನ ಜೋರಿದೆ.

ಕಂಠೀರವ ಕ್ರೀಡಾಂಗಣ. ಜೂ.21 ಬೆಳಗ್ಗೆ 5.55 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್‌ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಒಲಿಂಪಿಕ್‌ ಅಸೊಸಿಯೇಷನ್‌ “ಹೃದಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಬೆಳಗ್ಗೆ 6ರಿಂದ 8.30ರವರೆಗೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಯೋಗ ದಿನವನ್ನು ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್‌.ಪಾಟೀಲ್‌ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ನಿರ್ಮಲಾ ಸೀತಾರಾಮನ್‌ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಲ್ಲಿ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ರಕ್ಷಾ ಯೋಗ ಟ್ರಸ್ಟ್‌, ಯೋಗ ಗಂಗೋತ್ರಿ ಟ್ರಸ್ಟ್‌, ಗಂಗಾ ಯೋಗಾ ಟ್ರಸ್ಟ್‌, ಕುವೆಂಪು ಯೋಗ, ಶ್ವಾಸ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಶಾಲಾ ಮಕ್ಕಳು ಸೇರಿದಂತೆ ಎಲ್ಲಾ ವರ್ಗದವರು ಭಾಗವಹಿಸಲಿದ್ದು, 10 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.

ಕಾರ್ಯಕ್ರಮ ಬೆಳಗ್ಗೆ 5.55 ಗಂಟೆಗೆ ಪ್ರಾರಂಭವಾಗಲಿದ್ದು, 6.05ಕ್ಕೆ ಯೋಗ ಚಟುವಟಿಕೆಗಳು ಆರಂಭ. 6.10 ಯೋಗ ಗಂಗೋತ್ರಿ ಟ್ರಸ್ಟ್‌ ವತಿಯಿಂದ ಯೋಗ ಗುತ್ಛ ಮತ್ತು ಪೇರ್‌ ಯೋಗ ನಡೆಯಲಿದೆ. 6.320ಕ್ಕೆ ಪ್ರಕಾಶ್‌ ಗುರೂಜಿಯವರಿಂದ ಷಟ್‌ಕರ್ಮ ವಿಧಿ, 6.43ಕ್ಕೆ ಶ್ವಾಸ ಸಂಸ್ಥೆಯ ಸ್ವಾಮಿ ವಚನಾನಂದರಿಂದ ಲಾಫಿಂಗ್‌ ಯೋಗ ನಡೆಯಲಿದೆ.ಆನಂತರ 7ರಿಂದ 7.36 ರವರೆಗೆ ಸರ್ಕಾರದ ಯೋಗ ಶಿಷ್ಟಾಚಾರದಂತೆ ಯೋಗಾಭ್ಯಾಸವಿದೆ. 7.36ಕ್ಕೆ ಶ್ರೀ ಪ್ರಕಾಶ್‌ ಗುರೂಜಿಯಿಂದ ಶಾಂತಿ ಮಂತ್ರ ಮತ್ತು ಸಂಕಲ್ಪ. 7.45ಕ್ಕೆ ಶ್ರೀ ಯೋಗರವರಿಂದ ಪ್ರಜ್ಞಾ ಯೋಗ. 8ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.

ಯೋಗ ವಸ್ತು ಪ್ರದರ್ಶನ – ಜೂ.21 ಬೆಳಗ್ಗೆ 10: ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದ ಸಂಯುಕ್ತಾಶ್ರಯದಲ್ಲಿ ಎರಡೂ ಕಡೆಗಳಲ್ಲಿ ಯೋಗ ಕುರಿತು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಯೋಗದ ಕುರಿತು ನಡೆಯುತ್ತಿರುವ ವೈಜ್ಞಾನಿಕ ಸಂಶೋಧನಾ ವರದಿಗಳ ಪ್ರದರ್ಶನವಿರುತ್ತದೆ. ಜೂ.21ರಂದು ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ವಸ್ತುಸಂಗ್ರಹಾಲಯಕ್ಕೆ ಬರುವವರಿಗೆ ಉಚಿತ ಪ್ರವೇಶವಿರುತ್ತದೆ.

ಶ್ವಾಸ ಸಂಸ್ಥೆ – ಜೂ.20 ಸಂಜೆ 5: ನಗರದ ಬಿಜಿಎಸ್‌ ಹೆಲ್ತ್‌ ಅಂಡ್‌ ಎಜುಕೇಷನ್‌ ಸಿಟಿಯಲ್ಲಿ ಶ್ವಾಸ ಸಂಸ್ಥೆ ಯೋಗ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಜು.20 (ಗುರುವಾರ)ರಂದು ಒಟ್ಟು 5 ಮಂದಿ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಜ್ಞಾನಭಾರತಿ ಆವರಣ – ಜೂ.21 ಬೆಳಗ್ಗೆ 7: ಬೆಂಗಳೂರು ವಿಶ್ವವಿದ್ಯಾಲಯವು ಜೂ.21ರಂದು ಬೆಳಗ್ಗೆ 7 ಗಂಟೆಗೆ ಜ್ಞಾನಭಾರತಿ ಆವರಣದ ದೈಹಿಕ ಶಿಕ್ಷಣ ಕಾಲೇಜು ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ರಾಜ್ಯಪಾಲ ವಜುಭಾಯಿ ವಾಲ ಉದ್ಘಾಟಿಸುವರು. ಭಾರತರತ್ನ ಪ್ರೊ. ಸಿ.ಎನ್‌.ಆರ್‌. ರಾವ್‌, ಇಸ್ರೊ ಮುಖ್ಯಸ್ಥ ಕೆ. ಶಿವನ್‌ ಸೇರಿದಂತೆ ಹಲವು ಗಣ್ಯರು ಭಾಗಹಿಸುವರು. ಇಲ್ಲಿ 2 ಸಾವಿರ ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ.

ಕಬ್ಬನ್‌ ಉದ್ಯಾನ – ಜೂ.20 ಬೆಳಗ್ಗೆ 6: ಪ್ರೀತೀಸ್‌ ವೆಲ್‌ನೆಸ್‌ ಯೋಗ ಸಂಸ್ಥೆಯು ಕಬ್ಬನ್‌ಪಾರ್ಕ್‌ನ ಬ್ಯಾಂಡ್‌ ಸ್ಟ್ಯಾಂಡ್‌ ಬಳಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂ.20ರಂದು ಬೆಳಗ್ಗೆ 6 ರಿಂದ 7.30ರವರೆಗೆ ಒಂದು ಸಾವಿರ ಜನರಿಂದ ಯೋಗ ಪ್ರದರ್ಶನ ಆಯೋಜಿಸಿದೆ. ಇಲ್ಲಿ ಚಿಕ್ಕ ಮಕ್ಕಳಿಂದ 80 ವರ್ಷದ ವೃದ್ಧರವರೆಗೆ ನಾನಾ ವಯಸ್ಸಿನವರು ಯೋಗದಲ್ಲಿ ಪಾಲ್ಗೊಂಡು, ನಾನಾ ಭಂಗಿಗಳನ್ನು ಪ್ರದರ್ಶಿಸಲಿದ್ದಾರೆ.

ವಿಜಯ ಭಾರತಿ ವಿದ್ಯಾಲಯ – ಜೂ.21 ಬೆಳಗ್ಗೆ 9.30: ಗಿರಿನಗರ 1ನೇ ಹಂತದಲ್ಲಿರುವ ವಿಜಯ ಭಾರತಿ ವಿದ್ಯಾಲಯವು ಜೂ.21ರಂದು ಬೆಳಗ್ಗೆ 9.30ಕ್ಕೆ ಯೋಗ ಪ್ರದರ್ಶನ ಏರ್ಪಡಿಸಿದೆ. ಇಲ್ಲಿ ಕವಿ ಡಾ. ಎಚ್‌.ಎಸ್‌. ವೆಂಕಟೇಶಮೂರ್ತಿ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಪ್ರೌಢಶಾಲೆ ವಿದ್ಯಾರ್ಥಿಗಳು ನೃತ್ಯ ಮತ್ತು ಯೋಗ ಪ್ರದರ್ಶನ ನೀಡಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ