ಕೆರೆ ಅಭಿವೃದ್ಧಿಗೆ 10 ಕೋಟಿ ರೂ.

Team Udayavani, Jun 20, 2019, 3:08 AM IST

ಬೆಂಗಳೂರು: ಕೆಂಪಾಂಬುದಿ ಕೆರೆ ಮತ್ತು ಉದ್ಯಾನವನದ ಅಭಿವೃದ್ಧಿಗಾಗಿ 10 ಕೋಟಿ ರೂ. ವೆಚ್ಚದ ಕಾಮಗಾರಿಗೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಬುಧವಾರ ಕಾರ್ಯಾದೇಶ ನೀಡಿದರು.

ಗವಿಗಂಗಾಧರೇಶ್ವರ ದೇವಸ್ಥಾನ ಮತ್ತು ಕೆಂಪಾಂಬುದಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಲ್ಯಾಣಿ, ಕಾರಂಜಿ, ಸಂಗೀತ ಕಾರಂಜಿ, ಪೊಲೀಸ್‌ ಚೌಕಿ, ಮಾಹಿತಿ ಕೇಂದ್ರ, ದೋಣಿ ವಿಹಾರ, ಕೆರೆ ಉದ್ಯಾನವನದೊಳಗೆ ಮಕ್ಕಳ ಆಟಿಕೆಗಳ ಅಳವಡಿಕೆ, ತೆರೆದ ವ್ಯಾಯಾಮ ಶಾಲೆ, ತೆರೆದ ಯೋಗ ಕೇಂದ್ರ, ಕೆರೆ ಬಳಿ ಇರುವ ಕೆಂಪೇಗೌಡರ ಕಾಲದ 2 ಗೋಪುರಗಳ ಅಭಿವೃದ್ಧಿ, ಶೌಚಾಲಯ ಹಾಗೂ ಮಳೆ ಮತ್ತು ಬಿಸಿಲು ಕಾಲದಲ್ಲಿ ವಾಯು ವಿಹಾರಿಗಳಿಗೆ ಅನುಕೂಲವಾಗಲು ಮೇಲ್ಛಾವಣಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 10 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದರು.

ರಾಜಕಾಲುವೆಯ ನೀರು ಅಥವಾ ಕಲುಷಿತಗೊಂಡ ನೀರು ಕೆರೆಗೆ ಸೇರುತ್ತಿಲ್ಲ. ರಾಜಕಾಲುವೆಯ ನೀರು ಅಥವಾ ಕಲುಷಿತಗೊಂಡ ನೀರು ಹೊರ ಹೋಗಲು ಕೆರೆಯ ಒಳಗೆ ಪ್ರತ್ಯೇಕ ಕೊಳವೆ ಮಾರ್ಗ ಅಳವಡಿಸಲಾಗಿದೆ ಎಂದರು.

ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಕ್ರಾಂತಿ ಮತ್ತು ಶಿವರಾತ್ರಿ ಹಬ್ಬಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ದೇವಾಲಯಕ್ಕೆ ಭಕ್ತರು ಭೇಟಿ ನೀಡುತ್ತಾರೆ. ಇದನ್ನು ಪ್ರವಾಸಿ ತಾಣವನ್ನಾಗಿಸಲು ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ದೇವಾಲಯದ ಸುತ್ತಮುತ್ತ ಬೀದಿ ದೀಪಗಳ ಅಳವಡಿಕೆ, ಪಾದಚಾರಿ ಮಾರ್ಗ ನಿರ್ಮಾಣ ಸೇರಿ 5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಾಗಾರಿ ನಡೆಸುವುದಾಗಿ ಹೇಳಿದರು.

ಸ್ಥಳೀಯರ ಆಕ್ರೋಶ: ಕೆಂಪಾಂಬುದಿ ಕೆರೆಗೆ ಮೇಯರ್‌ ಭೇಟಿ ನೀಡಿದ ವೇಳೆ ಸ್ಥಳಿಯರು ಅಲ್ಲಿನ ಸಮಸ್ಯೆಗಳ ಕುರಿತು ಅಕ್ರೋಶ ವ್ಯಕ್ತಪಡಿಸಿದರು. ಭದ್ರತಾ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲ. ಕಸ ವಿಲೇವಾರಿ ವಾಹನಗಳು ಮೂರು ದಿನಕ್ಕೊಮ್ಮೆ ಬರುತ್ತವೆ ಎಂದು ದೂರಿದರು.

3 ತಿಂಗಳಿಂದ ವೇತನವಿಲ್ಲ: ಮೂರು ತಿಂಗಳಿಂದ ನಮಗೆ ವೇತನ ನೀಡಿಲ್ಲ. ಅಲ್ಲದೆ ಕೊಳೆಗೇರಿ ನಿವಾಸಿಗಳು ಕಲ್ಲಿನಿಂದ ಹೊಡೆಯುತ್ತಾರೆ. ಉದ್ಯಾನವನದೊಳಗೆ ಗಂಜಾ ಸೇವನೆ ಮಾಡುತ್ತಾರೆ. ಕಸ ಬೀಸಾಡುತ್ತಾರೆ. ಶೌಚಾಲಯದಲ್ಲಿರುವ ಮೋಟಾರು ಕಳವು ಮಾಡಿದ್ದಾರೆ.

ಅವರ ಉಪಟಳ ತಡೆಯುವುದು ಅಸಾಧ್ಯವಾಗಿದೆ ಎಂದು ಕೆಂಪಾಂಬುದಿ ಕೆರೆಯ ಭದ್ರತಾ ಸಿಬ್ಬಂದಿ ಜಿ.ರಾಮಗೋಪಾಲ್‌ ದೂರಿದರು. ಇದಕ್ಕೆ ಸ್ಪಂದಿಸಿದ ಮೇಯರ್‌, ಇನ್ನೊಂದು ವಾರದೊಳಗೆ ಭದ್ರತಾ ಸಿಬ್ಬಂದಿಗೆ ವೇತನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಕೆಂಪೇಗೌಡ ನಗರದಲ್ಲಿರುವ ಗುರು ಶನೈಶ್ಚರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೇಯರ್‌ ಗಂಗಾಂಬಿಕೆ, ಭದ್ರತೆ ದೃಷ್ಟಿಯಿಂದ ದೇವಾಲಯದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲು ಹಾಗೂ ತೆಪ್ಪೋತ್ಸವ ನಡೆಸುವ ಬಗ್ಗೆ ಅಧಿಕಾರಿಗಳೊಂದಿಗೆ ಮತ್ತು ದೇವಾಲಯದ ಸಿಬ್ಬಂದಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಉಪ ಮಹಾಪೌರ ಭದ್ರೇಗೌಡ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಮತ್ತಿತರರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ