ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

Team Udayavani, Aug 13, 2019, 3:10 AM IST

ಬೆಂಗಳೂರು: ಪರಸ್ತ್ರೀ ಸಹವಾಸ ಮಾಡಿದ ಪತಿಯ ವಿರುದ್ಧ ತಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಬರೆದುಕೊಂಡ ಮಹಿಳೆಯೊಬ್ಬರು ತನ್ನಿಬ್ಬರು ಹೆಣ್ಣು ಮಕ್ಕಳ ಜತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶ್ರೀನಗರದ ಕೇಂಬ್ರಿಡ್ಜ್ ಶಾಲೆ ಸಮೀಪ ಸೋಮವಾರ ಬೆಳಗ್ಗೆ ನಡೆದಿದೆ.

ರಾಜೇಶ್ವರಿ (42) ಮತ್ತು ಅವರ ಮಕ್ಕಳಾದ ಮಾನಸ (17) ಹಾಗೂ ಭೂಮಿಕಾ (15) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ರಾಜೇಶ್ವರಿ ಅವರ ಸಹೋದರ ಮನೆಗೆ ಬಂದಾಗ ದುರ್ಘ‌ಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ರಾಜೇಶ್ವರಿ ಪತಿ ಸಿದ್ದಯ್ಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹನುಮಂತನಗರ ಪೊಲೀಸರು ಹೇಳಿದರು.

ಬೆಸ್ಕಾಂನಲ್ಲಿ ಡಿ ಗ್ರೂಪ್‌ ನೌಕರನಾಗಿರುವ ಸಿದ್ದಯ್ಯ, 19 ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ಮೂಲದ ರಾಜೇಶ್ವರಿ ಅವರನ್ನು ವಿವಾಹವಾಗಿದ್ದು, ಶ್ರೀನಗರದ ಕಾಳಪ್ಪ ಬ್ಲಾಕ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು. ರಾಜೇಶ್ವರಿ ಮನೆಯಲ್ಲೇ ಇರುತ್ತಿದ್ದು, ಮೊದಲ ಪುತ್ರಿ ಮಾನಸ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಎರಡನೇ ಪುತ್ರಿ ಭೂಮಿಕಾ ಎಸ್‌ಎಸ್‌ಎಲ್‌ಸಿ ಓದುತ್ತಿದ್ದರು.

ಈ ಮಧ್ಯೆ ಆರೋಪಿ ಸಿದ್ದಯ್ಯ ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದು, ನಾಲ್ಕೈದು ವರ್ಷಗಳಿಂದ ಪರಸ್ತ್ರೀಯರ ಜತೆ ಅನೈತಿಕ ಸಂಬಂಧ ಹೊಂದಿದ್ದ. ಮನೆಯ ನಿರ್ವಹಣೆ ಮಾಡದೆ, ಪತ್ನಿ ಮತ್ತು ಮಕ್ಕಳ ಬಗ್ಗೆಯೂ ನಿರ್ಲಕ್ಷ್ಯ ತೋರಿದ್ದರು. ಅದರಿಂದ ಬೇಸತ್ತ ರಾಜೇಶ್ವರಿ, ಪರಸ್ತ್ರೀ ಸಂಗ ಬಿಡುವಂತೆ ಮತ್ತು ಮನೆ ಜವಾಬ್ದಾರಿ ನಿರ್ವಹಿಸುವಂತೆ ಪತಿ ಸಿದ್ದಯ್ಯ ಬಳಿ ಹಲವಾರು ಬಾರಿ ಅಂಗಲಾಚಿದ್ದರು. ಆದರೂ ಸುಧಾರಿಸದ ಸಿದ್ದಯ್ಯ, ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಇದೇ ವಿಚಾರಕ್ಕೆ ದಂಪತಿ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದರು.

ಸಹೋದರ ಬಂದಾಗ ಘಟನೆ ಬೆಳಕಿಗೆ: ಶನಿವಾರ ರಾತ್ರಿ ಸಹ ದಂಪತಿ ನಡುವೆ ವಾಗ್ವಾದ ನಡೆದಿದ್ದು, ಒಂದು ಹಂತದಲ್ಲಿ ಸಿದಯ್ಯ, ಪತ್ನಿ ರಾಜೇಶ್ವರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಆತ ಮನೆ ಬಿಟ್ಟು ಹೋಗಿದ್ದಾನೆ. ಭಾನುವಾರ ರಾತ್ರಿ ಸಿದ್ದಯ್ಯ ಹತ್ತಾರು ಬಾರಿ ಫೋನ್‌ ಮಾಡಿದರೂ ಪತ್ನಿ ಕರೆ ಸ್ವೀಕರಿಸಿಲ್ಲ. ನಂತರ ಸೋಮವಾರ ಬೆಳಗ್ಗೆ ಮತ್ತೂಮ್ಮೆ ಫೋನ್‌ ಮಾಡಿದರೂ ಪ್ರತಿಕ್ರಿಯೆ ಬಂದಿಲ್ಲ.

ಇದರಿಂದ ಅನುಮಾನಗೊಂಡ ಸಿದ್ದಯ್ಯ, ಕೂಡಲೇ ಶ್ರೀನಗರದಲ್ಲೇ ಇರುವ ತನ್ನ ಸಂಬಂಧಿಕರು ಹಾಗೂ ಭಾಮೈದುನ ಪುರುಷೋತ್ತಮ್‌ಗೆ ಕರೆ ಮಾಡಿ, ಮನೆ ಬಳಿ ಹೋಗಿ ವಿಚಾರಿಸುವಂತೆ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 9.30ರ ಸುಮಾರಿಗೆ ಪುರುಷೋತ್ತಮ್‌ ಮನೆ ಬಳಿ ಬಂದು ಬಾಗಿಲು ಬಡಿದಿದ್ದಾರೆ. ಆದರೆ, ಒಳಗಿನಿಂದ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಕಿಟಕಿ ತೆರೆದು ನೋಡಿದಾಗ ಒಂದೇ ಕೋಣೆಯಲ್ಲಿ ತಾಯಿ ಮತ್ತು ಮಕ್ಕಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಗಾಬರಿಗೊಂಡ ಪುರುಷೋತ್ತಮ್‌ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಹನುಮಂತನಗರ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಿದ್ದಾರೆ. ಭಾನುವಾರ ತಡರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದರು.

ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಆರೋಪ: ಪತಿಯ ವರ್ತನೆಯಿಂದ ಬೇಸತ್ತ ರಾಜೇಶ್ವರಿ ಭಾನುವಾರ ತಡರಾತ್ರಿ ತಮ್ಮ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಪತಿಯ ವಿರುದ್ಧ ಆರೋಪಿಸಿದ್ದಾರೆ. “ಜೀವನದಲ್ಲಿ ತುಂಬಾ ನೋವಾಗಿ, ಈ ತರ ಮಾಡ್ಕೊತ್ತಿದ್ದೇವೆ. ನಮ್ಮ ಸಾವಿಗೆ ಸಿದ್ದ ಮತ್ತು ಅವನ… ಎಲ್ಲರೂ ಕಾರಣ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಪುತ್ರಿಯರು ಸಹ, “ಎಲ್ಲರಿಗೂ ಒಳ್ಳೆ ತಂದೆ ಸಿಗಬೇಕು. ನಮ್ಮ ಲೈಫ್ ಹಾಳು ಮಾಡುಬಿಟ್ಟ.

ನಮ್ಮ ಸಾವಿಗೆ ಸಿದ್ದನೇ ಕಾರಣ’ ಎಂದು ಆರೋಪಿಸಿದ್ದಾರೆ. ಈ ಸಂಬಂಧ ರಾಜೇಶ್ವರಿ ಅವರ ಸಹೋದರ ಪುರುಷೋತ್ತಮ್‌, ಸಿದ್ದಯ್ಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ತಮಿಳುನಾಡಿನ ಕನ್ಯಾಕುಮಾರಿಗೆ ಹೋಗಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಆತುರದ ನಿರ್ಧಾರದಿಂದ ಘಟನೆ – ಮನೋವೈದ್ಯರು: ಮಹಿಳೆಯರು ಆತ್ಮಹತ್ಯೆಯಂತಹ ಆತುರದ ನಿರ್ಧಾರ ಕೈಗೊಳ್ಳುವ ಮೊದಲು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆ ಸ್ವಾವಲಂಬಿಯಾಗಿ ಬದುಕಲು ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಮನೋವೈದ್ಯ ಡಾ.ಹರೀಶ್‌ ದೇಲಂತಬೆಟ್ಟು ಸಲಹೆ ನೀಡಿದರು.

ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಆತ್ಮಹತ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆ ಮಹಿಳೆ ಇಡೀ ಮನೆಯ ಆರ್ಥಿಕ ಸಮಸ್ಯೆ ಮತ್ತು ಮಕ್ಕಳ ಶಿಕ್ಷಣ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಗಾಢವಾಗಿ ಆಲೋಚಿಸಿ, ಧೈರ್ಯ ಕಳೆದುಕೊಂಡು ಆತ್ಮಹತ್ಯೆ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಯಿದೆ.

ಖಿನ್ನತೆಗೊಳಗಾದ ಮಹಿಳೆಯರು ಸಲಹೆ ಮತ್ತು ಸಹಾಯ ಪಡೆಯಲು ಪ್ರತಿ ಜಿಲ್ಲೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. ಈ ಮೂಲಕ ಮಹಿಳೆಯರು ಎಲ್ಲ ರೀತಿಯ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬಹುದು. ಸಮಾಜದಲ್ಲಿ ಪತಿ ಇಲ್ಲದೆ ಲಕ್ಷಾಂತರ ಮಹಿಳೆಯರು ಜೀವನ ನಡೆಸುತ್ತಿದ್ದಾರೆ. ಅವರನ್ನು ಸ್ಫೂರ್ತಿಯಾಗಿ ಪಡೆದು ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಹಾಯವಾಣಿ; 104ಕ್ಕೆ ಕರೆ ಮಾಡಿ: ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮತ್ತು ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆ ಸಿದ್ದಯ್ಯ ಮತ್ತು ಸಂಬಂಧಿಕರ ಮೇಲೆ ನಂಬಿಕೆ ಕಳೆದುಕೊಂಡು ಈ ನಿರ್ಧಾರಕ್ಕೆ ಬಂದಿರಬಹುದು. ಆದರೆ, ಅದೇ ಕೊನೆ ಅಲ್ಲ. ಆ ತಾಯಿ, ಮಕ್ಕಳಿಗೆ ಧೈರ್ಯ ತುಂಬಿದ್ದರೆ ಹೊಸ ಬದುಕು ಕಟ್ಟಿಕೊಳ್ಳಬಹುದಿತ್ತು. ಒಂದು ವೇಳೆ ಮಹಿಳೆಯರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಆಲೋಚನೆ ಬಂದರೆ, ಕೂಡಲೇ ಆರೋಗ್ಯ ಇಲಾಖೆಯ 104 ಸಹಾಯವಾಣಿಗೆ ಕರೆ ಮಾಡಿ ಆಪ್ತ ಸಹಾಯಕರ ಜತೆ ಮಾತನಾಡಿ ಸಲಹೆ ಪಡೆಯಬಹುದು ಎಂದು ನಿಮ್ಹಾನ್ಸ್‌ ಸಹಾಯಕ ಪ್ರಾಧ್ಯಾಪಕಿ ಡಾ ಕೆ.ಎಸ್‌.ಮೀನಾ ತಿಳಿಸಿದ್ದಾರೆ.

ಸಿದ್ದಯ್ಯಗೆ ಪರಸ್ತ್ರೀ ಜತೆ ಅನೈತಿಕ ಸಂಬಂಧ ಇತ್ತು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ಎರಡು ದಿನಗಳ ಹಿಂದೆ ಆರೋಪಿ ಪ್ರವಾಸ ಹೋಗಿದ್ದಾನೆ. ಇದರಿಂದ ಬೇಸತ್ತು ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ತಮಿಳುನಾಡಿನ ಕನ್ಯಾಕುಮಾರಿಯ ಕಡೆ ತಲೆಮರೆಸಿಕೊಂಡಿದ್ದಾನೆ. ಹುಡುಕಾಟ ನಡೆಯುತ್ತಿದೆ.
-ಡಾ.ರೋಹಿಣಿ ಕಟೋಚ್‌ ಸೆಪಟ್‌, ದಕ್ಷಿಣ ವಿಭಾಗ ಡಿಸಿಪಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜಾಗತಿಕ ಮಟ್ಟದಲ್ಲಿ ಜನ ಸಾರಿಗೆ ಸೇವೆಗೆ ಮಾಡುವ ವೆಚ್ಚಕ್ಕೆ ಹೋಲಿಸಿದರೆ ಬೆಂಗಳೂರಿಗರು ದುಪ್ಪಟ್ಟು ಹಣ ತೆರುತ್ತಿದ್ದಾರೆ ಎಂದು ಸೆಂಟರ್‌ ಫಾರ್‌ ಸೈನ್ಸ್‌ ಆಂಡ್‌...

  • ಬೆಂಗಳೂರು: ಕಪ್‌ ಗಳಿಸಿ, ಕಸ ಅಳಿಸಿ!, ಕಸದ ಪ್ರಮಾಣ ಕಡಿಮೆ ಮಾಡಿ, ರನ್‌ ರೇಟ್‌ ಅಲ್ಲ, ಕಸ ಇಲ್ಲದಿರುವ ಸಿಟಿ ಸೂಪರ್‌ ಸಿಟಿ! ಇವು ಭಾನುವಾರ ಬಿಬಿಎಂಪಿಯ ವೆಬ್‌ಸೈಟ್‌...

  • ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ನಡೆದ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 58,10,493 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಶೇ. 91.16 ರಷ್ಟು ಗುರಿ ಸಾಧನೆಯಾಗಿದೆ....

  • ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜಾಗೃತಿ ಅಭಿಯಾನದಡಿ ಈವರೆಗೆ 70 ಲಕ್ಷಕ್ಕೂ ಹೆಚ್ಚು ಮಂದಿಯನ್ನು ರಾಜ್ಯದಲ್ಲಿ ನೇರವಾಗಿ ಭೇಟಿಯಾಗಿ ಮಾಹಿತಿ ನೀಡಲಾಗಿದ್ದು,...

  • ಬೆಂಗಳೂರು: ಅಂತರಂಗ ಒಂದು ದೊಡ್ಡ ವಿಶ್ವವಿದ್ಯಾಲಯ, ಜಾತಿಯನ್ನು ಮೀರಿದರೆ ವಿಶ್ವಮಾನವನಾಗಲು ಅವಕಾಶವಿದೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ...

ಹೊಸ ಸೇರ್ಪಡೆ