ರೈಸ್‌ಪುಲ್ಲಿಂಗ್‌ ಚೆಂಬು ಕೊಟ್ಟವರ ಸೆರೆ

Team Udayavani, Nov 19, 2019, 10:06 AM IST

ಬೆಂಗಳೂರು: ತಾಮ್ರದ ತಂಬಿಗೆ, ಜರತಾರಿ ಬಟ್ಟೆ, ರಾಸಾಯನಿಕ ವಸ್ತುಗಳು, ಬಾಹ್ಯಕಾಶ ವಿಜ್ಞಾನಿಯ ಧಿರಿಸು ಇಷ್ಟನ್ನೇ ಬಳಸಿ “ರೈಸ್‌ ಪುಲ್ಲಿಂಗ್‌’ ಹೆಸರಲ್ಲಿ ಕೋಟ್ಯಂತರ ರೂ. ಸುಲಿಗೆ ಮಾಡುತ್ತಿದ್ದ ಅಂತಾರಾಜ್ಯ ವಂಚಕರ ತಂಡ ತಿಲಕ್‌ನಗರ ಪೊಲೀಸರ ಬಲೆಗೆ ಬಿದ್ದಿದೆ.

ಆಂಧ್ರಪ್ರದೇಶದ ನಕಲಿ ಬಾಹ್ಯಕಾಶ ವಿಜ್ಞಾನಿ ಆರ್ಯ ಪ್ರಧಾನ್‌ (45),ರಾಜೇಂದ್ರ ರೆಡ್ಡಿ, ಬೆಂಗಳೂರಿನ ಅಕ್ರಮ್‌ ಬಂಧಿತರು. ವಂಚಕರ ತಂಡ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಲಾಂಛನ, ನಾಸಾ ಹೆಸರು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡುತ್ತಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ರೈಸ್‌ಫ‌ುಲ್ಲಿಂಗ್‌ ಹೆಸರಿನಲ್ಲಿ ಆರೋಪಿಗಳ ತಂಡ 3 ಕೋಟಿ ರೂ.ಗಳಿಗೂ ಅಧಿಕ ಹಣ ಪಡೆದು ವಂಚಿಸಿದೆ ಎಂದು ಗುರಪ್ಪನ ಪಾಳ್ಯದ ಉದ್ಯಮಿ ಸೈಯದ್‌ ಸಲೀಮ್‌ ಎಂಬವರು ದೂರು ದಾಖಲಿಸಿದ್ದರು. ತನಿಖೆ ಚುರುಕುಗೊಳಿಸಿದ ಮೈಕೋಲೇಔಟ್‌ ಉಪವಿಭಾಗದ ಎಸಿಪಿ ಸುಧೀರ್‌ ಎಂ ಹೆಗಡೆ, ಇನ್ಸ್  ಪೆಕ್ಟರ್‌ ಜಿ.ಎಸ್‌.ಅನಿಲ್‌ ಕುಮಾರ್‌ ನೇತೃತ್ವದ ತಂಡ, ಇದೀಗ ಮೂವರು ಆರೋಪಿಗಳನ್ನು ಬಂಧಿಸಿದೆ.

ವಂಚನೆಯಲ್ಲಿ 20ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ದೆಹಲಿ, ತಮಿಳುನಾಡು, ಆಂಧ್ರಪ್ರದೇಶ ಸೇರಿ ಹೊರ ರಾಜ್ಯಗಳಲ್ಲೂ ತಂಡ ಸಕ್ರಿಯವಾಗಿದ್ದು, ಹಲವು ಕಡೆ ವಂಚಿಸಿರುವ ಶಂಕೆಯಿದ್ದು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜೇಂದ್ರ ಹಾಗೂ ಇತರ ಆರೋಪಿಗಳು ಕೆಲ ಉದ್ಯಮಿಗಳನ್ನು ಭೇಟಿ ಮಾಡಿ, “ರೈಸ್‌ ಪುಲ್ಲಿಂಗ್‌ ತಾಮ್ರದ ತಂಬಿಗೆ ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ’ ಎಂದು ಅವರನ್ನು ನಂಬಿಸುತ್ತಿದ್ದರು. ಜತೆಗೆ, ನಾಸಾ ಕೂಡ ಇದನ್ನು ಖರೀದಿಸಲು ಮುಂದಾಗಿದೆ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದರು.

ಮೂವರು ಆರೋಪಿಗಳು ಇಂಗ್ಲಿಷ್‌ ಹಾಗೂ ಹಿಂದಿಯನ್ನು ಸರಾಗವಾಗಿ ಮಾತನಾಡಿ ಜನರನ್ನು ನಂಬಿಸುತ್ತಿದ್ದರು. ಎಂಜಿನಿಯರಿಂಗ್‌ ಪದವೀಧರ ಆರ್ಯ ಪ್ರಧಾನ್‌, ತಂಡವನ್ನು ಮುನ್ನಡೆಸುತ್ತಿದ್ದ. ಇತರ ಆರೊಪಿಗಳಿಗೆ ಸಲಹೆ ನೀಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿ ಹೇಳಿದರು.

ವಂಚನೆಗೊಳಗಾದವರು  ದೂರು ನೀಡಿ: ಸದ್ಯ, ಆರೋಪಿಗಳ ವಿರುದ್ಧ ಒಂದು ಪ್ರಕರಣ ಮಾತ್ರ ದಾಖಲಾಗಿದೆ. ಬೆಂಗಳೂರು ಸೇರಿದಂತೆ ಇತರೆಡೆ ಇನ್ನೂ ವಂಚಿಸಿರುವ ಶಂಕೆಯಿದೆ. ವಂಚನೆಗೊಳಗಾದವರು ಇದ್ದರೆ ದೂರು ನೀಡಿದರೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ಹೇಳಿದರು.

ನಾನೇ ಗಗನಯಾತ್ರಿ ಎಂದ ಭೂಪ!:  ರೈಸ್‌ಪುಲ್ಲಿಂಗ್‌ ತಂಬಿಗೆ ಖರೀದಿಸಲು ನಂಬಿಕೆ ಬರಬೇಕು ಎಂದರೆ ಡಿಆರ್‌ ಡಿಒ ವಿಜ್ಞಾನಿಗಳಿಂದ ಪರೀಕ್ಷೆ ಮಾಡಿಸಬಹುದು ಎಂದು ಕೊಳ್ಳಲು ಆಸಕ್ತಿ ಹೊಂದಿರುವ ಉದ್ಯಮಿಗಳಿಗೆ ಹೇಳುತ್ತಿದ್ದರು. ಬಳಿಕ ನಗರದ ಹೊರವಲಯದ ಮನೆಯೊಂದಕ್ಕೆ ಕರೆದೊಯ್ದು ಪರೀಕ್ಷೆ ಮಾಡೋಣ ಎನ್ನುತ್ತಿದ್ದರು. ಈ ವೇಳೆ ಆಗಮಿಸುತ್ತಿದ್ದ ಆರೋಪಿ ಆರ್ಯ ಪ್ರಧಾನ್‌, ನಾನು ಬಾಹ್ಯಕಾಶ ವಿಜ್ಞಾನಿ, ಗಗನಯಾತ್ರಿ ಕೂಡ ಹೌದು ಎಂದು ನಂಬಿಸುತ್ತಿದ್ದ. ಬಳಿಕ ಗಗನಯಾತ್ರಿಯ ಧಿರಿಸು ತೊಟ್ಟು ರಸಾಯನಿಕಗಳನ್ನು ಹಚ್ಚಿದ ತಂಬಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಅಕ್ಕಿ ಕಾಳುಗಳನ್ನು ತಂಬಿಗೆ ಆಕರ್ಷಿಸುವಂತೆ ಮಾಡುತ್ತಿದ್ದ. ಇದನ್ನು ಕಣ್ಣಾರೆ ಕಂಡ ಸೈಯದ್‌ ನಿಜವಾಗಿಯೂ ತಂಬಿಗೆಯಲ್ಲಿ ದೈವಶಕ್ತಿ ಇದೆ ಎಂದು ನಂಬಿದ್ದರು ಎಂದು ಹಿರಿಯ ಅಧಿಕಾರಿ ವಿವರಿಸಿದರು.

ರೈಸ್‌ ಪುಲ್ಲಿಂಗ್‌ ಹೆಸರಲ್ಲಿ ಅಮಾಯಕರಿಗೆ ವಂಚಿಸುತ್ತಿದ್ದ ಮೂವರನ್ನು ಬಂಧಿಸಿದ್ದು, ವಂಚನೆಗೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಇಂತಹ ವಂಚಕರ ಬಗ್ಗೆ ಎಚ್ಚರದಿಂದ ಇರಬೇಕು.  -ಇಶಾ ಪಂಥ್‌, ಆಗ್ನೇಯ ವಿಭಾಗದ ಡಿಸಿಪಿ

 

-ಮಂಜುನಾಥ ಲಘುಮೇನಹಳ್ಳಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ