ಯಂತ್ರಗಳ ಸಂತೆಯಲ್ಲಿ ಟೆಕ್‌ ಮಾತು

Team Udayavani, Nov 19, 2019, 9:51 AM IST

ಬೆಂಗಳೂರು: ಅಲ್ಲಿ ತಂತ್ರಜ್ಞಾನಗಳು ಮಾತನಾಡುತ್ತಿದ್ದವು. ಬಂದ ಅತಿಥಿಗಳಿಗೆ ಯಂತ್ರಗಳೇ ಆತಿಥ್ಯ ನೀಡುತ್ತಿದ್ದವು. ಅದೇ ಯಂತ್ರಗಳು ಕೆಲ ಮಳಿಗೆಗಳಲ್ಲಿ ವ್ಯವಹಾರವನ್ನೂ ನಡೆಸುತ್ತಿದ್ದವು!

ಹೌದು, ಹೆಸರೇ ಸೂಚಿಸುವಂತೆ ಅದು ತಂತ್ರಜ್ಞಾನಗಳ ಸಂತೆ. ಕಣ್ಣು ಹಾಯಿಸಿದ ಕಡೆಯೆಲ್ಲಾ ತಂತ್ರಜ್ಞಾನ ಕುರಿತ ಫ‌ಲಕಗಳು, ಸಹಾಯ ಬೇಕೆ ಕೇಳುತ್ತಾ ಓಡಾಡುವ ರೋಬೋಗಳು, ಮಾಹಿತಿ ವಿನಿಮಯ ಸಭೆಗಳು, ಚರ್ಚಾಗೋಷ್ಠಿಗಳು, ನೂತನ ತಂತ್ರಜ್ಞಾನಗಳ ಪ್ರದರ್ಶನ.- ಇದು ಮೊದಲ ದಿನದ ಸಮ್ಮಿಟ್‌ನ ಚಿತ್ರಣ.ಈ ಮೂಲಕ ಬೆಂಗಳೂರು ಅರಮನೆ ಸಂಪೂರ್ಣ ತಾಂತ್ರಿಕ ಮಾಹಿತಿ ಕಣಜವಾಗಿತ್ತು. ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎಸ್‌ ಅಶ್ವತ್ಥ ನಾರಾಯಣ ಅವರನ್ನು ಮಿತ್ರಾ-ಮಿತ್ರಿ ಎಂಬ ರೊಬೋಟ್‌ಗಳು “ವೆಲ್‌ ಕಮ್‌” ಎಂದು ಹೇಳುವ ಮೂಲಕ ಸಮ್ಮಿಟ್‌ಗೆ ಸ್ವಾಗತ ಕೋರಿದವು. ಆನಂತರ ವೇದಿಕೆಯಲ್ಲಿ ಕೆಲ ನಿಮಿಷಗಳ ಲೇಜರ್‌ ಶೋನಲ್ಲಿ ಬೆಂಗಳೂರು ನಡೆದು ಬಂದ ಹಾದಿ ಸಂಪೂರ್ಣ ಚಿತ್ರಣ ಕಟ್ಟಿಕೊಡಲಾಯಿತು. ಈ ಶೋನಲ್ಲಿ ಕೆಂಪೇಗೌಡರಿಂದ ನಿರ್ಮಿಸಿದ ಬೆಂಗಳೂರು ಇಂದು ಐಟಿ ಬಿಟಿ ಹಬ್‌ ಆಗಿ ನಿಲ್ಲುತ್ತದೆ. ಉದ್ಘಾಟನಾ ಸಮಾರಂಭ ಮುಗಿಯುತ್ತಿದ್ದಂತೆ ವಿವಿಧ ಕೊಠಡಿಗಳಲ್ಲಿ ಚರ್ಚಾಗೋಷ್ಠಿಗಳು ಆರಂಭವಾದವು. ಇಲ್ಲಿ ವಿವಿಧ ಕ್ಷೇತ್ರಗಳ ತಂತ್ರಜ್ಞಾನಕ್ಕೆ ಸಂಬಂಧಿಸಿದ ನೂರಾರು ವಿಚಾರಗಳಿಗೆ ವಿಜ್ಞಾನಿಗಳು, ತಾಂತ್ರಿಕ ಪರಿಣಿತರು ದನಿಯಾದರು.

ಮೊದಲ ದಿನ ಮುವತ್ತಕ್ಕೂ ಹೆಚ್ಚು ಗೋಷ್ಠಿಗಳು, ಹತ್ತಾರು ತಾಂತ್ರಿಕ ಒಪ್ಪಂದಗಳು ನಡೆದವು. ಈ ಬಾರಿ ಸಮ್ಮಿಟ್‌ನಲ್ಲಿ ನೂತನವಾಗಿ ಪರಿಚಯಿಸಿರುವ ಮಿತ್ರಾ-ಮಿತ್ರಿ ರೋಬೋಗಳು ಎಲ್ಲೆಡೆ ಸಂಚರಿಸಿ ಸಹಾಯ ಬೇಕೆ? ಎಂದು ಕೇಳುತ್ತಿದ್ದವು. ಕಸ ಬುಟ್ಟಿ ಹಿಡಿದು, ಪ್ರಶ್ನೋತ್ತರ ಆಯ್ಕೆ ಇರುವ ಟ್ಯಾಬ್‌ಲೈಡ್‌ಗಳನ್ನು ಹಿಡಿದು ಸಮ್ಮಿಟ್‌ನ ಆವರಣದಲ್ಲಿ ಓಡಾಗುತ್ತಿದ್ದವು. ಇವುಗಳನ್ನು ಆಚ್ಚರಿಯಿಂದ ನೋಡುತ್ತಿದ್ದ ವೀಕ್ಷಕರು ಮಾತನಾಡಿಸಿ, ಫೋಟೊ ತೆಗೆಸಿಕೊಂಡು ಖುಷಿ ಪಟ್ಟರು.

ಸಮ್ಮಿಟ್‌ನಲ್ಲಿ ನೂತನ ಆವಿಷ್ಕಾರಗಳಿಗೆ ವೇದಿಕೆಯಾಗಿ ಇನ್ನೂರಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಇಲ್ಲಿಗೆ ವಿವಿಧೆಡೆಯಿಂದ ಬಂದಿದ್ದ ಯುವ ವಿಜ್ಞಾನಿಗಳು, ಉದ್ಯಮಿಗಳು, ತಾಂತ್ರಿಕ ವಿದ್ಯಾರ್ಥಿಗಳು, ತಂತ್ರಜ್ಞಾನ ಆಸಕ್ತರು ಸೇರಿದಂತೆ ಸಾವಿರಾರು ಮಂದಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಜಲಮಂಡಳಿಯು ಮಳೆನೀರಿ ಕೋಯ್ಲು, ಎಸ್‌ಟಿಪಿ ಬಳಕೆ ಸೇರಿದಂತೆ ಜಲಜಾಗೃತಿ ಮಳಿಗೆ ಹಾಕಿತ್ತು. ಉಳಿದಂತೆ ಸರ್ಕಾರದ ವಿವಿಧ ಇಲಾಖೆಗಳು ಯೋಜನೆಗಳ ಕುರಿತು ಮಾಹಿತಿ ಮಳಿಗೆಗಳನ್ನು ಹಾಕಿದ್ದವು. ಇನ್ನು ಸಮ್ಮಿಟ್‌ನ ಹೊರ ಭಾಗದಲ್ಲಿ ಐ ಲವ್‌ ಬೆಂಗಳೂರು, ಐ ಲವ್‌ ಟೆಕ್‌ ಸಮ್ಮಿಟ್‌ ಎಂಬ ಆಕರ್ಷಕ ಫ‌ಲಕಗಳನ್ನು ಹಾಕಿದ್ದು, ಸಮ್ಮಿಟ್‌ಗೆ ಭೇಟಿಕೊಟ್ಟ ಬಹುತೇಕರು ಫ‌ಲಕಗಳ ಮುಂದೆ ಒಂದು ಫೋಟೊ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ಧ ದೃಶ್ಯ ಸಾಮಾನ್ಯವಾಗಿತ್ತು.

 

-ಜಯಪ್ರಕಾಶ್‌ ಬಿರಾದಾರ್‌


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ವರ್ತೂರು ಹೋಬಳಿಯ ಮುಳ್ಳೂರು ಗ್ರಾಮದ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಲು ಸಹಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ...

  • ಬೆಂಗಳೂರು: ನಗರದ ಮೇಲ್ಸೇತುವೆ ಮತ್ತು ಎತ್ತರಿಸಿದ ಪಾದಚಾರಿ ಮಾರ್ಗಗಳು ವಾಹನ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ. ಇದು ಸಂಚಾರದಟ್ಟಣೆಗೆ ಎಡೆಮಾಡಿಕೊಡುತ್ತಿದ್ದು,...

  • ಬೆಂಗಳೂರು: ಬೌರಿಂಗ್‌ ಇನ್ಸ್‌ಟಿಟ್ಯೂಟ್‌ ಕ್ಲಬ್‌ "ಝಡ್‌' ವಲಯದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ...

  • ಬೆಂಗಳೂರು: ಉದ್ಯಾನಗಳಲ್ಲಿ ಕ್ರಿಸ್‌ಮಸ್‌, ಹೊಸವರ್ಷ ಆಚರಿಸುವುದನ್ನು ಬಿಬಿಎಂಪಿ ನಿಷೇಧಿಸಿದೆ. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಹುಟ್ಟಿದ ದಿನ, ಕ್ರಿಸ್‌...

  • ಬೆಂಗಳೂರು: ಭವಿಷ್ಯದಲ್ಲಿ ಐಪಿಎಸ್‌ ಕನಸು ಕಂಡವಳು ಪ್ರೇಮಿಯ ಜತೆ ಸೇರಿ ಸರಗಳ್ಳತನ ಮಾಡಿ ಜೈಲು ಸೇರಿದ್ದಾಳೆ!  ಈ ಮೊದಲು ಹೆಲ್ಮೆಟ್‌ ಧರಿಸಿ ಗಂಡಸರಷ್ಟೇ ಸರ ಅಪಹರಣ...

ಹೊಸ ಸೇರ್ಪಡೆ