ಎಸ್‌ಟಿಪಿ ಗುಣಮಟ್ಟದ ಬಗ್ಗೆ ಶಂಕೆ

Team Udayavani, Jun 19, 2019, 3:08 AM IST

ಬೆಂಗಳೂರು: ಹೆಬ್ಬಾಳದ ಹೊರ ವರ್ತುಲ ರಸ್ತೆ ಬಳಿ ನಿರ್ಮಾಣ ಹಂತದಲ್ಲಿದ್ದ ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಟ್ಯಾಂಕ್‌ ಚಾವಣಿ ಕುಸಿದು ಮೂರು ಮಂದಿ ಸಾವಿಗೀಡಾದ ಬೆನ್ನಲ್ಲೇ ನಗರದ 9 ಕಡೆಗಳಲ್ಲಿ ಜಲಮಂಡಳಿ ನಿರ್ಮಿಸುತ್ತಿರುವ ತ್ಯಾಜ್ಯನೀರು ಸಂಸ್ಕೃರಣಾ ಘಟಕ (ಎಸ್‌ಟಿಪಿ)ಗಳ ಕಾಮಗಾರಿ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ.

ಮೆಗಾ ಸಿಟಿ ಆಪತ್ತು ನಿಧಿ ಹಾಗೂ ಅಮೃತ್‌ ಸಿಟಿ ಯೋಜನೆಯಡಿ ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ನಾಲೆಗಳ ಮೂಲಕ ಹತ್ತಿರದ ಕೆರೆಗಳಿಗೆ ಹರಿಸಲು ನಗರದ 9 ಪ್ರದೇಶಗಳಲ್ಲಿ ಜಲಮಂಡಳಿಯು ತ್ಯಾಜ್ಯನೀರು ಸಂಸ್ಕರಣಾ ಘಟಕಗಳ ನಿರ್ಮಿಸುತ್ತಿದೆ. ಂದು ವರ್ಷದಿಂದ ಆ ಕಾಮಗಾರಿಗಳು ನಡೆಯುತ್ತಿವೆ.

ಈ ಮೆಗಾ ಸಿಟಿ ಆಪತ್ತು ನಿಧಿ ಯೋಜನೆ ಅಡಿಯಲ್ಲಿಯೇ ಹೆಬ್ಬಾಳ ಹೊರ ವರ್ತುಲದ ತ್ಯಾಜ್ಯ ಸಂಸ್ಕರಣಾ ಘಟಕವು ನಿರ್ಮಾಣವಾಗುತ್ತಿತ್ತು. ಆದರೆ, ಸೋಮವಾರ ಅದರ ಮೇಲ್ಛಾವಣಿ ಕುಸಿದು ಮೂರು ಮಂದಿ ಸಾವಿಗೀಡಾಗಿ 20ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಇನ್ನು ಈ ಅವಘಡಕ್ಕೆ ಕಾಮಗಾರಿ ಲೋಪದೋಷ ಕಾರಣವೇ ಎಂದು ತಿಳಿಯಲು ಜಲಮಂಡಳಿಯು ಮೂರನೇ ವ್ಯಕ್ತಿಯಿಂದ ತನಿಖೆಗೆ ಮುಂದಾಗಿದೆ.

ಇದಕ್ಕಾಗಿ ಚೆನ್ನೈನ ಸಿಎಸ್‌ಐಆರ್‌ (ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಸೆಂಟರ್‌)ಗೆ ತನಿಖೆ ಕೋರಿ ಪತ್ರವನ್ನು ಬರೆಯಲಾಗಿದೆ. ಈ ನಡುವೆ ಇದೇ ಯೋಜನೆಗಳಲ್ಲಿ ವೃಷಭಾವತಿ ವ್ಯಾಲಿ, ಕೋರಮಂಗಲ ಹಾಗೂ ಚಲ್ಲಘಟ್ಟ ವ್ಯಾಲಿ, ದೊಡ್ಡಬೆಲೆ, ಸಾರಕಿ ಕೆರೆ, ಚಿಕ್ಕಬೇಗೂರು, ಆಗರ ಕೆರೆ, ಉಳಿಮಾವು, ಕೃಷ್ಣರಾಜಪುರದಲ್ಲಿ ನಿರ್ಮಾಣವಾಗುತ್ತಿರುವ ತ್ಯಾಜ್ಯಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಗುಣಮಟ್ಟದ ಪ್ರಶ್ನೆ ಎದ್ದಿದೆ.

ಈ ಎಲ್ಲಾ ಕಡೆ‌ಗಳಲ್ಲೂ ಏಕಕಾಲಕ್ಕೆ ಕಾಮಗಾರಿ ಆರಂಭವಾಗಿದ್ದು, ಎಲ್ಲಾ ಕಡೆಗಳಲ್ಲೂ ಟ್ಯಾಂಕ್‌ಗಳ ಸೆಂಟ್ರಿಂಗ್‌ ಹಂತದ ಕಾಮಗಾರಿಯೇ ನಡೆಯುತ್ತಿದೆ. ಈಗ ಒಂದು ಕಾಮಗಾರಿ ಹಂತದ ತ್ಯಾಜ್ಯಸಂಸ್ಕರಣಾ ಘಟಕ ಮೆಲ್ಛಾವಣಿ ಕುಸಿದಿರುವುದರಿಂದ ಭವಿಷ್ಯದಲ್ಲಿ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ದೃಷ್ಟಿಯಿಂದ ಈ ಎಲ್ಲಾ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಯನ್ನು ನಡೆಸಬೇಕು ಎನ್ನಲಾಗುತ್ತಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಇನ್ನು ಇತ್ತೀಚೆಗೆ ಜಲಮಂಡಳಿ ಕಾಮಗಾರಿಗಳಲ್ಲಿ ಅವಘಡಗಳ ಹೆಚ್ಚಾಗುತ್ತಿದ್ದು, ಕಳೆದ ವರ್ಷಾಂತ್ಯದಲ್ಲಿ ರಾಜರಾಜೇಶ್ವರಿ ನಗರದ ಬಳಿ ಜಲಮಂಡಳಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಆ ಸಮಯದಲ್ಲೂ ಜಲಮಂಡಳಿ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಆನಂತರ ಜಲಮಂಡಳಿಯು ಕಾಮಗಾರಿ ಲೋಪದ ಹೊಣೆಯನ್ನು ಗುತ್ತಿಗೆದಾರ ಮೇಲೆಯೇ ಹಾಕಿತ್ತು. ಸಾಕಷ್ಟು ತಂತ್ರಜ್ಞಾನ ನಡುವೆಯೂ ಇಂದಿಗೂ ಜಲಮಂಡಳಿಯ ಕಾಮಗಾರಿಗಳಲ್ಲಿ ಇಂತಹ ಅವಘಡಗಳು ಸಂಭವಿಸುತ್ತಲೇ ಇವೆ.

ಮೊದಲು ತನಿಖೆಯಾಗಲಿ: ಹೆಬ್ಬಾಳದಲ್ಲಿ ಎಸ್‌ಟಿಪಿ ಕಾಮಗಾರಿ ವೇಳೆ ನಡೆದ ಅವಘಡದ ಕುರಿತು ಮೊದಲು ತನಿಖೆಯಾಗಿ ವರದಿ ಬರಲಿ. ಒಂದು ವೇಳೆ ವರದಿಯಲ್ಲಿ ಕಾಮಗಾರಿ ಲೋಪದೋಷ ಕಂಡು ಬಂದಿದ್ದರೆ ಉಳಿದವುಗಳ ತನಿಖೆಗೆ ಚಿಂತನೆ ನಡೆಸಲಾಗುವುದು. ಇನ್ನು ಉಳಿದ ಎಲ್ಲಾ ಎಸ್‌ಟಿಪಿ ಕಾಮಗಾರಿ ತನಿಖೆ ನಡೆಸಬೇಕು ಎಂದರೆ ತನಿಖೆಗೆ ಬರುವ ಸಂಸ್ಥೆಯ ತನಿಖಾ ವೆಚ್ಚ ನೋಡಿಕೊಂಡು ಹಿರಿಯ ಅಧಿಕಾರಿಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತ್ಯಾಜ್ಯನೀರು ನಿರ್ವಹಣಾ ವಿಭಾಗದ ಹೆಚ್ಚುವರಿ ಮುಖ್ಯ ಇಂಜಿನಿಯರ್‌ ನಿತ್ಯಾನಂದಕುಮಾರ್‌ “ಉದಯವಾಣಿ’ಗೆ ತಿಳಿಸಿದರು.

ಪರಿಶೀಲನೆ ಕಡ್ಡಾಯವಾಗಲಿ: “ಹೆಬ್ಬಾಳದಲ್ಲಿ ನಿರ್ಮಾಣ ಹಂತದ ತ್ಯಾಜ್ಯ ಸಂಸ್ಕರಣಾ ಘಟಕಗಳ ಮೆಲ್ಛಾವಣಿ ಕುಸಿದಿರುವುದಕ್ಕೆ ಸೆಂಟ್ರಿಂಗ್‌ ಸೂಕ್ತವಾಗಿ ಇಲ್ಲದಿರುವುದು ಕಾರಣವಾಗಿರಬಹುದು. ಜತೆಗೆ ಇಲ್ಲಿ ಒಂದು ಕಂಪನಿಗೆ ನೀಡಿದ ಗುತ್ತಿಗೆಯನ್ನು ಆ ಕಂಪನಿ ಮತ್ತೂಂದು ಕಂಪನಿಗೆ ಮರು ಗುತ್ತಿಗೆ ನೀಡಿದೆ. ಈ ವೇಳೆ ಮರುಗುತ್ತಿಗೆ ಪಡೆದ ಕಂಪನಿಯ ಅನುಭವ ಕಾರ್ಯಕ್ಷಮತೆ ಪರಿಶೀಲನೆ ಅಗತ್ಯವಾಗಿರುತ್ತದೆ. ಕಾಮಗಾರಿ ಗುತ್ತಿಗೆಗಳು ವರ್ಗಾವಣೆಯಾದಾಗ ನಿರ್ದಿಷ್ಟ ವ್ಯಕ್ತಿಗಳಿಂದ ಜವಾಬ್ದಾರಿ ಸಾಧ್ಯವಾಗುವುದಿಲ್ಲ. ಅಲ್ಲದೇ ತ್ಯಾಜ್ಯ ಸಂಸ್ಕರಣಾ ಘಟಕಗಳ ಟ್ಯಾಂಕ್‌ಗಳ ನಿರ್ಮಾಣವು ಸಾಮಾನ್ಯ ಕಟ್ಟಡಗಳ ಕಾಮಗಾರಿಯಂತಲ್ಲ.

ಈ ಕಾಮಗಾರಿಗಳಿಗೆ ಭದ್ರತೆ ಹಾಗೂ ದೀರ್ಘ‌ಕಾಲದ ಬಾಳಿಕೆ ಅಗತ್ಯವಾಗಿರುತ್ತದೆ. ತ್ಯಾಜ್ಯನೀರು ಸಂಗ್ರಹಿಸುವುದು ಶುದ್ಧೀಕರಿಸುವುದರಿಂದ ಅವುಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಲಮಂಡಳಿಯು ನಗರದ ವಿವಿಧೆಡೆ ವಿವಿಧ ಯೋಜನೆಗಳಲ್ಲಿ ನಿರ್ಮಿಸುತ್ತಿರುವ ಎಲ್ಲಾ ತ್ಯಾಜ್ಯಸಂಸ್ಕರಣಾ ಘಟಕಗಳ ಗುಣಮಟ್ಟವು ಪರಿಶೀಲನೆ ಕಡ್ಡಾಯವಾಗಿ ಆಗಬೇಕು. ಇವುಗಳ ಜತೆಗೆ ಜಲಮಂಡಳಿಯಿಂದ ಮೂರ್‍ನಾಲ್ಕು ದಶಕಗಳ ಹಿಂದೆ ನಿರ್ಮಿಸಿರುವ ಎಸ್‌ಟಿಪಿಗಳಿದ್ದು, ಅವುಗಳ ಸ್ಥಿತಿಗತಿ, ಕಾರ್ಯಕ್ಷಮತೆಯನ್ನೂ ಪರಿಶೀಲನೆ ನಡೆಸಬೇಕು ಎಂದು ಜಲಮಂಡಳಿ ನಿವೃತ್ತ ಮುಖ್ಯ ಇಂಜಿನಿಯರ್‌ ಎಂ.ಎನ್‌.ತಿಪ್ಪೇಸ್ವಾಮಿ ಅಭಿಪ್ರಾಯ ವ್ಯಕಪಡಿಸಿದರು.

ಸಿಎಸ್‌ಐಆರ್‌ ತಂಡದಿಂದ ಇಂದು ಪರಿಶೀಲನೆ: ಹೆಬ್ಬಾಳದಲ್ಲಿ ನಿರ್ಮಾಣ ಹಂತದ ಎಸ್‌ಟಿಪಿಯ ಕಾಮಗಾರಿ ಅವಘಡಕ್ಕೆ ಸಂಬಂಧಿಸಿದಂತೆ ಚೆನೈನ ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಸೆಂಟರ್‌ (ಸಿಎಸ್‌ಐಆರ್‌) ಅವಘಡದ ತನಿಖೆ ನಡೆಸಲಿದೆ. ಈ ಕುರಿತು ಮಾಹಿತಿ ನೀಡಿದ ಜಲಮಂಡಳಿ ಅಧ್ಯಕ್ಷ ತುಷಾರ ಗಿರಿನಾಥ್‌, ತನಿಖೆಗೆ ಕೋರಿ ಭಾರತೀನ ವಿಜ್ಞಾನ ಸಂಸ್ಥೆ ಹಾಗೂ ಚೆನೈನ ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಸೆಂಟರ್‌ಗೆ ಪತ್ರಬರೆಯಲಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ತನಿಖಾ ವಿಭಾಗದ ಕಾರ್ಯಭಾರ ಹೆಚ್ಚಿದೆ ಎಂದು ಮಾಹಿತಿ ಬಂದಿತ್ತು. ಇನ್ನೊಂದೆಡೆ ಸಿಎಸ್‌ಐಆರ್‌ ನಮ್ಮ ಪತ್ರಕ್ಕೆ ಪ್ರತಿಕ್ರಿಯಿಸಿದ್ದು, ಬುಧವಾರ ಬೆಳಗ್ಗೆ ತಂಡವನ್ನು ಬೆಂಗಳೂರಿಗೆ ಕಳಿಸುವುದಾಗಿ ತಿಳಿಸಿದ್ದಾರೆ ಎಂದರು.

ಇನ್ನು ಈ ತಂಡವು ಯಾಕೆ ಅವಘಡ ಸಂಭವಿಸಿತು, ಕಾಮಗಾರಿ ಲೋಪವಿದೆಯೇ ಎಂಬ ಎರಡು ಅಂಶ ಕುರಿತು ತನಿಖೆ ನಡೆಸಲಿದೆ. ಉಳಿದಂತೆ ತ್ಯಾಜ್ಯನೀರು ನಿರ್ವಹಣಾ ವಿಭಾಗ ಮುಖ್ಯ ಇಂಜಿನಿಯರ್‌ ನೇತೃತ್ವದಲ್ಲಿ ಆಂತರಿಕ ತಂಡ ಮಾಡಿದ್ದು, ಈ ತಂಡ ತಾಂತ್ರಿಕೇತರ ಲೋಪಗಳನ್ನು ಪತ್ತೆ ಹಚ್ಚಲಿದೆ. ಉಳಿದಂತೆ ಜಲಮಂಡಳಿಯ ಎಲ್ಲಾ ಕಾಮಗಾರಿಗಳ ಬಳಿ ಕಾಮಗಾರಿ ಮಾಡುವವರು ಮಾಡಬೇಕಾದ ಹಾಗೂ ಮಾಡಬಾರದ ಅಂಶಗಳ ಕುರಿತು ಪಟ್ಟಿ ಸಿದ್ಧಪಡೆಸಿ ಹಾಕಲಾಗುವುದು ಎಂದು ತಿಳಿಸಿದರು.

ಎಲ್ಲೆಡೆ ಕಾಮಗಾರಿ ಸ್ಥಗಿತ: ನಗರದಲ್ಲಿ ಎಸ್‌ಟಿಪಿ ಕಾಮಗಾರಿ ನಡೆಯುತ್ತಿರುವ ವಿವಿಧೆಡೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೆಬ್ಬಾಳದ ಅವಘಡದಿಂದ ಕಾರ್ಮಿಕರಲ್ಲಿ ಒಂದಿಷ್ಟು ಆತಂಕ ಇರುತ್ತದೆ ಹೀಗಾಗಿ ಕೆಲಸ ನಿಂತಿದೆ. ಕಾಮಗಾರಿ ಸ್ಥಳದಲ್ಲಿ ಸೂಕ್ತ ಭದ್ರತಾ ಕ್ರಮ ಕೈಗೊಂಡು ಆನಂತರ ಕಾಮಗಾರಿ ಆರಂಭವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದರು.

ವಿವಿಧೆಡೆ ನಡೆಯುತ್ತಿರುವ ಎಸ್‌ಟಿಪಿ ಕಾಮಗಾರಿಗಳು
(ಮೆಗಾ ಸಿಟಿ ಆಪತ್ತು ನಿಧಿ ಯೋಜನೆ)
ಸ್ಥಳ ಸಾಮರ್ಥ್ಯ
-ಕೆ.ಸಿ.ವ್ಯಾಲಿ 150 ದಶ ಲಕ್ಷ ಲೀ.
-ವೃಷಭಾವತಿ 150 ದಶ ಲಕ್ಷ ಲೀ.
-ಹೆಬ್ಬಾಳ 100 ದಶ ಲಕ್ಷ ಲೀ.
-ದೊಡ್ಡಬೆಲೆ 40 ದಶ ಲಕ್ಷ ಲೀ.
(ಅಮೃತ್‌ ಸಿಟಿ ಯೋಜನೆ)
-ಸಾರಕ್ಕಿ ಕೆರೆ 5 ದಶ ಲಕ್ಷ ಲೀ.
-ಚಿಕ್ಕಬೇಗೂರು 5 ದಶ ಲಕ್ಷ ಲೀ.
-ಉಳಿಮಾವು 10 ದಶ ಲಕ್ಷ ಲೀ.
-ಅಗರ ಕರೆ 35 ದಶ ಲಕ್ಷ ಲೀ.
-ಕೃಷ್ಣರಾಜಪುರ 20 ದಶ ಲಕ್ಷ ಲೀ.

* ಜಯಪ್ರಕಾಶ್‌ ಬಿರಾದಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನಗರದಲ್ಲಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪರ್ಯಾಯವಾಗಿ ಬಿಬಿಎಂಪಿ ನೀಡಿರುವ "ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು'...

  • ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನದ ಮೂಲಕ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಿಸಲು ಇಶಾ ಫೌಂಡೇಷನ್‌ "ಕಾವೇರಿ ಕೂಗು' ಯೋಜನೆಯನ್ನು ಹಮ್ಮಿಕೊಂಡಿದೆ...

  • ಬೆಂಗಳೂರು: "ಸುಧೀರ್‌ ಅವರ ಕನಸಿನ ಕಲಾ ಸಂಘವನ್ನು ಉಳಿಸಿಕೊಳ್ಳಲು ಸಲುವಾಗಿಯೇ ನಾನು ನನ್ನ ಮನೆ, ಸೈಟು ಹಾಗೂ ಕೈಯಲ್ಲಿದ್ದ ಒಂದಿಷ್ಟು ಹಣ ಕಳೆದುಕೊಂಡೆ. ಆದರೂ...

  • ಬೆಂಗಳೂರು: ಶ್ರೇಷ್ಠರೆಲ್ಲಾ ಜನಪ್ರಿಯರಲ್ಲ, ಜನಪ್ರಿಯರೆಲ್ಲಾ ಶ್ರೇಷ್ಠರಾಗಿರುವುದಿಲ್ಲ. ಜನಪ್ರಿಯತೆ ಅಗ್ಗದ ಪ್ರಚಾರದಿಂದಲೂ ಬರಬಹುದು. ಆದರೆ, ಶ್ರೇಷ್ಠತೆ ಬರುವುದಿಲ್ಲ...

  • ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ, ಕಸ ವಿಂಗಡಣೆ, ಪಿಒಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದು, ನೀರು ಮಿತಬಳಕೆ ಹಾಗೂ...

ಹೊಸ ಸೇರ್ಪಡೆ