ಅಪರಿಚಿತ ವ್ಯಕ್ತಿಯನ್ನು ಕೊಂದಿದ್ದ ನಾಲ್ವರ ಸೆರೆ

Team Udayavani, Dec 23, 2017, 11:09 AM IST

ಬೆಂಗಳೂರು: ಇತ್ತೀಚೆಗೆ ವೈಯಾಲಿಕಾವಲ್‌ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಪರಿಚಿತ ವ್ಯಕ್ತಿಯನ್ನು ಸುಟ್ಟು ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ವೈಯಾಲಿಕಾವಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈಯಾಲಿಕಾವಲ್‌ ಮತ್ತು ಆರ್‌.ಟಿ.ನಗರ ನಿವಾಸಿಗಳಾದ ಲಕ್ಷ್ಮಣ್‌ ಅಲಿಯಾಸ್‌ ಪಿಂಟು, ಹಂಸ, ಶಾರೂಕ್‌ ಖಾನ್‌ ಮತ್ತು ಮೊಹಮ್ಮದ್‌ ಖಾಲಿ ಬಂಧಿತರು. ಮತ್ತೂಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳು ಗಾಂಜಾ ಮತ್ತಿನಲ್ಲಿ ಸ್ನೇಹಿತನ್ನು ಉಸಿರುಗಟ್ಟಿಸಿ ಕೊಂದು, ನಂತರ ನಿತ್ಯ ಸೌದೆಗಳನ್ನು ಹಾಕಿ ಸತತ ಮೂರು ದಿನಗಳ ಕಾಲ ಸುಟ್ಟು ಹಾಕಿದ್ದಾರೆ. ಆದರೆ, ಇದುವರೆಗೂ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅಷ್ಟೇ ಅಲ್ಲದೇ, ಬಂಧಿತ ಆರೋಪಿಗಳು ಕೂಡ ಕೊಲೆಯಾದ ವ್ಯಕ್ತಿಯ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಹಾಗೂ ಕೊಲೆಯಾದ ಸದಾಶಿವನಗರ, ಆರ್‌.ಟಿ.ನಗರ ಹಾಗೂ ಇತರೆಡೆ ದೇವಸ್ಥಾನ, ನಿರ್ಜನ ಪ್ರದೇಶಗಳಲ್ಲಿ ಗಾಂಜಾ ಸೇದುತ್ತಾರೆ. ಸದ್ಯದ ಮಾಹಿತಿ ಪ್ರಕಾರ ಕೊಲೆಯಾದ ವ್ಯಕ್ತಿ ಚಿಂದಿ ಆಯುತ್ತಿದ್ದ ಎನ್ನಲಾಗಿದೆ. ಗಾಂಜಾ ಮತ್ತಿನಲ್ಲಿ ಆತನ ಜತೆಗೆ ಜಗಳ ಮಾಡಿಕೊಂಡಿದ್ದು, ನಂತರ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ನಂತರ ಶವವನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ನಾಲ್ಕನೇ ಮಹಡಿಗೆ ಎಳೆದೊಯ್ದು ಪೆಟ್ರೋಲ್‌ ಹಾಗೂ ಸೌದೆ ಹಾಕಿ ಸುಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಸನಿಗಳನ್ನು ವಿಚಾರಣೆ ನಡೆಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ