ನಗರಾದ್ಯಂತ ಉಚಿತ ಕ್ಯಾನ್ಸರ್‌ ಪತ್ತೆ ಶಿಬಿರ

ಬಿಬಿಎಂಪಿ ಜತೆ ಒಪ್ಪಂದಕ್ಕೆ ಕಿದ್ವಾಯಿ ಸಂಸ್ಥೆ ಚಿಂತನೆ

Team Udayavani, Oct 9, 2019, 11:06 AM IST

ಬೆಂಗಳೂರು: ಬದಲಾದ ಜೀವನ ಶೈಲಿಯಿಂದ ರಾಜಧಾನಿ ಬೆಂಗಳೂರಿನಲ್ಲಿ ಕ್ಯಾನ್ಸರ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಹಯೋಗದೊಂದಿಗೆ ಪ್ರತಿ ವಾರ್ಡ್‌ಗಳಲ್ಲೂ ಉಚಿತವಾಗಿ ಕ್ಯಾನ್ಸರ್‌ ಪತ್ತೆ ಶಿಬಿರ ಹಮ್ಮಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.

ಕ್ಯಾನ್ಸರ್‌ ರೋಗವನ್ನು ಶೀಘ್ರ ಪತ್ತೆ ಮಾಡಿ ನಗರವಾಸಿಗಳನ್ನು ರಕ್ಷಿಸುವಲ್ಲಿ ವಾರಕ್ಕೊಂದು ವಾರ್ಡ್‌ ನಂತೆ ಎಲ್ಲಾ ವಾರ್ಡ್‌ಗಳಲ್ಲಿಯೂ ಉಚಿತವಾಗಿ ಕ್ಯಾನ್ಸರ್‌ ಪತ್ತೆಗೆ ತಪಾಸಣಾ ಶಿಬಿರಗಳನ್ನು ನಡೆಸುವ ಕುರಿತು ಕಿದ್ವಾಯಿ ಸ್ಮಾರಕ ಗ್ರಂಥಿ ಹಾಗೂ ಬಿಬಿಎಂಪಿ ಚರ್ಚಿಸಿದ್ದು, ಈ ತಿಂಗಳಲ್ಲಿಯೇ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಅದಾದ ನಂತರ ಪ್ರತಿ ವಾರ್ಡ್‌ನಲ್ಲೂ ಮುಂದಿನ ತಿಂಗಳಿಂದ ತಪಾಸಣಾ ಹಾಗೂ ಪತ್ತೆ ಶಿಬಿರಗಳು ಆರಂಭಗೊಳ್ಳಲಿವೆ. ಇದಕ್ಕಾಗಿ ಸಂಚಾರಿ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ದೇಶದ ಇತರೆ ಮಹಾನಗರಗಳು, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿರುವ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವಿರುವ ಬೆಂಗಳೂರಿನಲ್ಲಿಯೇ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಅಧ್ಯಯನಗಳಿಂದ ದೃಢಪಟ್ಟಿದೆ. ಆರಂಭಿಕ ಹಂತದಲ್ಲಿಯೇ ಈ ಕ್ಯಾನ್ಸರ್‌ ಪತ್ತೆಯಾದರೆ ಶೇ. 80ಕ್ಕಿಂತ ಹೆಚ್ಚು ರೋಗಿಗಳು ಗುಣಮುಖರಾಗಬಹುದು. ಹೀಗಾಗಿ, ಬಿಬಿಎಂಪಿ ಹಾಗೂ ಕಿದ್ವಾಯಿ ಸಂಸ್ಥೆ ಜತೆಗೂಡಿ ಒಪ್ಪಂದಕ್ಕೆ ತೀರ್ಮಾನಿಸಿದೆ.

ಈ ಕುರಿತು ಮಾಹಿತಿ ನೀಡಿದ ಕಿದ್ವಾಯಿ ಸ್ಮಾರಕ ಗ್ರಂಥಿ ನಿರ್ದೇಶಕ ಡಾ.ರಾಮಚಂದ್ರ, “ಸದ್ಯ ಕಿದ್ವಾಯಿ ಸ್ಮಾರಕ ಗ್ರಂಥಿಯಲ್ಲಿ ಕ್ಯಾನ್ಸರ್‌ ಪತ್ತೆ ಸೌಲಭ್ಯ ಒಳಗೊಂಡ ಎರಡು ಬಸ್‌ಗಳಿವೆ. ಬಸ್‌ನಲ್ಲಿ ಕ್ಯಾನ್ಸರ್‌ ಪತ್ತೆ ಅವಶ್ಯಕವಾದ ಎಕ್ಸ್‌ ರೇ, ಅಲ್ಟ್ರಾಸೌಂಡ್‌, ರಕ್ತ ಪರೀಕ್ಷೆ, ಮ್ಯಾಮೋಗ್ರಫಿ, ಕಾಸ್ಮಿಯರ್‌, ಕಾಪೋಸ್ಕೋಪ್‌ ಪರೀಕ್ಷೆ ಸೌಲಭ್ಯಗಳಿದ್ದು, ಬಾಯಿ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌, ರಕ್ತದ ಕ್ಯಾನ್ಸರ್‌, ಶ್ವಾಸಕೋಶ ಕ್ಯಾನ್ಸರ್‌, ಗರ್ಭಕೋಶ ಕಂಠ ಕ್ಯಾನ್ಸರ್‌ ಪರೀಕ್ಷೆ ಮಾಡಲಾಗುತ್ತದೆ’ ಎಂದು ಹೇಳಿದರು.

ಯಾರ್ಯಾರು ಪರೀಕ್ಷೆಗೆ ಅರ್ಹರು: “ಈ ಶಿಬಿರವು ದಿನ ಪೂರ್ತಿ ನಡೆಯಲಿದ್ದು, ಕ್ಯಾನ್ಸರ್‌ ಲಕ್ಷಣಗಳು ಕಂಡು ಬಂದವರು ಅಥವಾ 40 ವರ್ಷ ಮೇಲ್ಪಟ್ಟವರು ಬಂದು ಚಿತ ತಪಾಸಣೆ ಮಾಡಿಸಿಕೊಳ್ಳಬಹುದು. ಪ್ರಮುಖವಾಗಿ ದೀರ್ಘ‌ಕಾಲದ ಹೊಟ್ಟೆ ನೋವು, ಗರ್ಭಕೋಶ ಸಮಸ್ಯೆ ಇರುವವರು, ಸನ¤ನಗಳಲ್ಲಿ ಗಂಟು, ಬಾವು ಕಂಡು ಬಂದವರು, ಶ್ವಾಸಕೋಶ ಸಮಸ್ಯೆ ಇರುವವರು ಜತೆಗೆ ಕ್ಯಾನ್ಸರ್‌ ಕುರಿತು ಡಿಡಿ  ಯಾವುದೇ ಅನುಮಾನ ಇದ್ದವರೂ ಕೂಡಾ ಶಿಬಿರಕ್ಕೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಕ್ಯಾನ್ಸರ್‌ ಪತ್ತೆಯಾದರೆ, ಲಕ್ಷಣಗಳು ಕಂಡು ಬಂದರೆ ಹೆಚ್ಚುವರಿ ಚಿಕಿತ್ಸೆಯನ್ನು ಕಿದ್ವಾಯಿ ಆಸ್ಪತ್ರೆಯಲ್ಲಿ ನೀಡಲಾಗುವುದು’ ಎಂದು ತಿಳಿಸಿದರು.

ಜೀವನ ಶೈಲಿ ಬದಲಾವಣೆಯಿಂದ ಕ್ಯಾನ್ಸರ್‌: ಮಹಾನಗರಗಳ ಜೀವನ ಶೈಲಿ ಹಳ್ಳಿಗಿಂತಲೂ ಸಾಕಷ್ಟು ಭಿನ್ನವಾಗಿದೆ. ಇಲ್ಲಿನ ಆಹಾರ, ಗಾಳಿ, ನೀರು, ಪ್ಲಾಸ್ಟಿಕ್‌ ಬಳಕೆ, ಒತ್ತಡದ ಜೀವನವು ಪ್ರಮುಖ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತವೆ. ಜತೆಗೆ ಮದ್ಯ ಹಾಗೂ ಧೂಮಪಾನ, ಚಟುವಟಿಕೆ ಇಲ್ಲದ ಜೀವನದಿಂದ ಬೊಜ್ಜು, ವಿಳಂಬವಾಗಿ ಮದುವೆ, ತಡವಾಗಿ ಮಕ್ಕಳನ್ನು ಮಾಡಿಕೊಳ್ಳುವುದೂ ನಗರವಾಸಿಗಳಲ್ಲಿ ಸಾಮಾನ್ಯವಾಗಿದ್ದು, ಇವುಗಳಿಂದ ನಗರದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚುತ್ತಿದೆ. ಹೊರಗಿನ ಆಹಾರ ಸೇವನೆ, ಫಾಸ್ಟ್‌ಫ‌ುಡ್‌, ಜಂಗ್‌ಫ‌ುಡ್‌ನಿಂದ ಹೊಟ್ಟೆ (ಗ್ಯಾಸ್ಟ್ರಿಕ್‌) ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಾರೆ.

 

ಕೊನೆ ಹಂತದ ಪತ್ತೆ: ಹೆಚ್ಚಾಗುತ್ತಿರುವ ಮೃತರ ಪ್ರಮಾಣ; ನಗರದಲ್ಲಿ ಸುಶಿಕ್ಷಿತರಲ್ಲೇ ಹೆಚ್ಚಾಗಿ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದ್ದು ಆರಂಭಿಕ ಹಂತದಲ್ಲೇ ಪತ್ತೆಯಾಗದಿರುವ ಕಾರಣ ಮೃತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್‌ ಪತ್ತೆಯಾದರೆ ಶೇ. 80ಕ್ಕಿಂತ ಹೆಚ್ಚು ರೋಗಿಗಳು ಗುಣಮುಖರಾಗಬಹುದು. ಮೊದಲನೇ ಮತ್ತು ಎರಡನೇ ಹಂತದಲ್ಲಿದ್ದಾಗ ಶೇ.20 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಮೂರನೇ ಹಂತ ತಲುಪಿದಾಗ ಶೇ.65ರಷ್ಟು ಮಂದಿ ಚಿಕಿತ್ಸೆಗೆ ಧಾವಿಸುತ್ತಾರೆ. ಇನ್ನು ಕೊನೆಯ ಹಂತ ಅಂದರೆ ರೋಗವು ದೇಹ ಪೂರ್ತಿ ವ್ಯಾಪಿಸಿದ ಬಳಿಕ ಹಂತದಲ್ಲಿ ಶೇ.15 ರಷ್ಟು ಮಂದಿ ಚಿಕಿತ್ಸೆಗೆ ಬರುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಸ್ತನ ಕ್ಯಾನ್ಸರ್‌; ಕಿದ್ವಾಯಿಯಲ್ಲಿ ಉಚಿತ ಪರೀಕ್ಷೆ :  ಅಧ್ಯಯನದ ಪ್ರಕಾರ ರಾಜ್ಯದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಮಂದಿಯಲ್ಲಿ 24 ರಿಂದ 26 ಮಂದಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿರುವುದು ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮಂದಿಯಲ್ಲಿ 34 ಮಂದಿಯಲ್ಲಿ ಸ್ತನ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ವಾರ್ಷಿಕವಾಗಿ ದಾಖಲಾಗುತ್ತಿರುವ 19 ಸಾವಿರ ಹೊಸ ಕ್ಯಾನ್ಸರ್‌ ರೋಗಿಗಳ ಪೈಕಿ ಶೇ.15 ಮಂದಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸದ್ಯ ವಿಶ್ವ ಸ್ತನ ಕ್ಯಾನ್ಸರ್‌ ಜಾಗೃತಿ ಮಾಸ ನಡೆಯುತ್ತಿದ್ದು, ಕಿದ್ವಾಯಿ ಗ್ರಂಥಿ ಸಂಸ್ಥೆಯಲ್ಲಿ ಒಂದು ತಿಂಗಳು ಉಚಿತವಾಗಿ ಸ್ತನ ಕ್ಯಾನ್ಸರ್‌ ಪತ್ತೆಗೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ವ್ಯಕ್ತಿಯಲ್ಲಿ ಕ್ಯಾನ್ಸರ್‌ ಶೀಘ್ರ ಪತ್ತೆಯಾದರೆ ಸಂಪೂರ್ಣ ಗುಣಮುಖರಾಗಬಹುದು. ಕ್ಯಾನ್ಸರ್‌ ಪತ್ತೆ ವಿಧಾನಗಳು ಸುಲಭವಾಗಿವೆ. ಆ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಹಕಾರದೊಂದಿಗೆ ವಾರ್ಡ್‌ಗಳಲ್ಲಿ ಕ್ಯಾನ್ಸರ್‌ ಪತ್ತೆ ಶಿಬಿರವನ್ನು ಹಮ್ಮಿಕೊಳ್ಳಲು ಬಿಬಿಎಂಪಿ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

 

-ಜಯಪ್ರಕಾಶ್‌ ಬಿರಾದಾರ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ