ಕಾನೂನು ಕೈಗೆತ್ತಿಕೊಂಡರೆ ಜೈಲಿಗೆ ಕಳಿಸುತ್ತೇವೆ

Team Udayavani, Mar 12, 2019, 6:36 AM IST

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಕ್ರಿಯೆ ವೇಳೆ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. 

ಬಿಬಿಎಂಪಿ ಕಚೇರಿಯಲ್ಲಿ ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್‌ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಚುನಾವಣೆ ಸಂದರ್ಭದಲ್ಲಿ ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಂಡರೆ ಅಂತಹವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗುವುದು. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಅವರು ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದು ತಿಳಿಸಿದರು.

ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಈಗಾಗಲೇ 400ಕ್ಕೂ ಹೆಚ್ಚು ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ರೌಡಿಗಳು, ಗೂಂಡಾಗಳ ಬಗ್ಗೆ ಗಮನಹರಿಸಲಾಗಿದೆ ಎಂದು ಹೇಳಿದರು. ಬಂದೂಕುಗಳನ್ನು ಇಟ್ಟುಕೊಂಡಿರುವವರು ಕೂಡಲೇ ಅವುಗಳನ್ನು ಸ್ಥಳೀಯ ಠಾಣೆಗಳಿಗೆ ಒಪ್ಪಿಸಬೇಕು.

ಆಯುಧ ಹೊಂದಲು ಬ್ಯಾಂಕ್‌ನ ಭದ್ರತಾ ಸಿಬ್ಬಂದಿ, ಕೊಡಗು ಮಂದಿ ಮತ್ತು ಮಾಜಿ ಸೈನಿಕರಿಗೆ ವಿನಾಯಿತಿ ನೀಡಲಾಗಿದೆ. ವಿನಾಯಿತಿ ಬಯಸುವವರು ಡಿಸಿಪಿ ನೇತೃತ್ವದಲ್ಲಿ ರಚನೆ ಮಾಡಲಾಗಿರುವ ಸಮಿತಿಗೆ ಮನವಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಮತದಾರರ ಮೇಲೆ ಪ್ರಭಾವ ಬೀರುವುದು, ಚುನಾವಣೆಗೆ ಅಡ್ಡಿಪಡಿಸುವ ಗೂಂಡಾಗಳ ಮೇಲೆ ಹದ್ದಿನ ಕಣ್ಣು ಇಡಲಾಗುವುದು ಎಂದು ಹೇಳಿದ ಪೊಲೀಸ್‌ ಆಯುಕ್ತರು, ಕಳೆದ ಬಾರಿ 300 ಪ್ರಕರಣಗಳನ್ನು ದಾಖಲಿಸಲಾಗಿದ್ದು, 299 ಪ್ರಕರಣಗಳನ್ನು ಇತ್ಯರ್ಥಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗಿದೆ. ತಾಂತ್ರಿಕ ಕಾರಣದಿಂದ ಒಂದು ಪ್ರಕರಣದಲ್ಲಿ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.

ಚುನಾವಣೆ ಶಾಂತಿಯುತವಾಗಿ ನಡೆಸಲು ಕೇಂದ್ರದಿಂದ ಅರೆ ಸೇನಾಪಡೆ ಬೆಂಗಳೂರಿಗೆ ಆಗಮಿಸುತ್ತಿದೆ. ನಗರದ ಸೂಕ್ಷ್ಮಪ್ರದೇಶಗಳಲ್ಲಿ ರೆಸೇನಾ ಪಡೆ ಕವಾಯತು ನಡೆಸುವ ಮೂಲಕ ಮತದಾರರಲ್ಲಿ ಭದ್ರತೆಯ ಭರವಸೆ ಮೂಡಿಸುವ ಕಾರ್ಯ ಮಾಡಲಾಗುವುದು. ಹಾಗೇ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 1,600 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ