ಕೃತಕ ಕಾಲಿಗಾಗಿ ಸತ್ಯಜಿತ್‌ ಅಲೆದಾಟ!

Team Udayavani, May 20, 2019, 3:09 AM IST

ಬೆಂಗಳೂರು: ಚಿತ್ರರಂಗದಲ್ಲಿ ಮಿಂಚಿದ ಹಲವು ನಟ, ನಟಿಯರ ಬದುಕಿನ ಬಣ್ಣ, ಮುಪ್ಪಿನ ಸಮಯದಲ್ಲಿ ಮಾಸಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಆ ಸಾಲಿಗೆ ಸೇರುವ ,ಮತ್ತೂಂದು ಹೆಸರು ಸತ್ಯಜಿತ್‌.

2016ರಲ್ಲಿ ಗ್ಯಾಂಗ್ರಿನ್‌ನಿಂದ ಎಡಗಾಲನ್ನು ಕಳೆದುಕೊಂಡ ನಟ ಸತ್ಯಜಿತ್‌, ಕೃತಕ ಕಾಲು ಅಳವಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದಕ್ಕಾಗಿ ಹಣ ಜೋಡಿಸಲು ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇದುವರೆಗೆ 2 ಲಕ್ಷ ರೂ. ಸಂಗ್ರಹಿಸಿದ್ದು, ಅಗತ್ಯವಿರುವ 1.60 ಲಕ್ಷ ರೂ.ಗಾಗಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವ ಕಲಾವೃಂದ, ನಗರದ ಉದಯಭಾನು ಕಲಾಸಂಘದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸತ್ಯಜಿತ್‌, ತಮ್ಮ ಸ್ಥಿತಿಗತಿ ಕುರಿತು “ಉದಯವಾಣಿ’ ಜತೆ ಮಾತನಾಡಿದರು. “ಹಲವು ನಿರ್ಮಾಪಕರು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಆದರೆ, ಸಹಾಯ ಸಿಗಲಿಲ್ಲ.

ಆ ಕಾಲದಲ್ಲಿ ಮರಾಠಿ, ತೆಲುಗು ಚಿತ್ರಗಳಿಂದ ಆಫ‌ರ್‌ ಬಂದರೂ, ಕನ್ನಡದ ಮೇಲಿನ ಪ್ರೀತಿ, ಗೌರವದಿಂದ ಆಫ‌ರ್‌ಗಳನ್ನು ತಿರಸ್ಕರಿಸಿದ್ದೆ. ಆಗ ದುಡ್ಡು ಮಾಡುವ ಆಸೆ ಇರಲಿಲ್ಲ’ ಎಂದರು. “ನಾನು ಚಿಕ್ಕಂದಿನಿಂದಲೂ ಬಡತನದಲ್ಲೇ ಬೆಳೆದವನಾದ್ದರಿಂದ ಈ ಸ್ಥಿತಿ ತಲುಪಿದ ಬಗ್ಗೆ ಬೇಸರವಿಲ್ಲ. ಏನೆಲ್ಲಾ ಕಷ್ಟ ಅನುಭವಿಸಿದರೂ ಎದೆಗುಂದಿಲ್ಲ. ಈಗಲೂ ದುಡಿಯುವ ಛಲವಿದೆ. ಕಡೇ ದಿನಗಳಲ್ಲಿ ಸ್ವಾವಲಂಬಿಯಾಗೇ ಬದುಕಬೇಕೆಂಬ ಛಲವಿದೆ.

ಆದರೆ, ನನಗೆ ನಟನೆ ಬಿಟ್ಟು ಬೇರೆನೂ ಗೊತ್ತಿಲ್ಲ. ಕೃತಕ ಕಾಲು ಬಂದರೆ ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ. ಕೃತಕ ಕಾಲು ಬಂದರೆ ನಿಲ್ಲಲು, ನಡೆದಾಡಲು ಸಾಧ್ಯವಾಗುತ್ತದೆ. ಆಗ, ಅಜ್ಜ, ಅಣ್ಣ ಮತ್ತು ತಂದೆಯಂತಹ ಯಾವುದೇ ಪಾತ್ರ ಬಂದರೂ ನಟಿಸಲು ನಾನು ಸಿದ್ಧನಿದ್ದೇನೆ,’ ಎನ್ನುವಾಗ ಅವರ ಕಣ್ಣಂಚಿನಲ್ಲಿ ಹನಿ ಜಿನುಗಿತು.

ಸಹಾಯ ನಿರೀಕ್ಷಿಸಿದ್ದೆ: “ಕನ್ನಡ ಚಿತ್ರರಂಗದ ಪ್ರಮುಖ ನಟರೊಬ್ಬರ ಜತೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ನಾನು ಈ ಸ್ಥಿತಿ ತಲುಪಿದಾಗ ಅವರು ಸಹಾಯಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಅವರು ನನ್ನತ್ತ ನೋಡಲೂ ಇಲ್ಲ. ತಮ್ಮೊಟ್ಟಿಗೆ ಹಲವು ವರ್ಷ ಕೆಲಸ ಮಾಡಿದವನು ಎನ್ನೋ ಸಿಂಪತಿಯಾದರೂ ಇರುತ್ತದೆ ಎಂಬ ನನ್ನ ನಿರೀಕ್ಷೆ ಹುಸಿಯಾಯಿತು,’ ಎಂದು ನೋವು ತೋಡಿಕೊಂಡರು.

ಸೌಲಭ್ಯದಿಂದಲೂ ವಂಚಿತ: ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಕಲಾವಿದರಿಗೆ 5 ಲಕ್ಷ ರೂ.ಗಳ ವಿಮೆ ಸೌಲಭ್ಯವಿದೆ. ಅದರಿಂದಲೂ ಸತ್ಯಜಿತ್‌ ವಂಚಿತರಾಗಿದ್ದಾರೆ. “ನಾನು ಆಸ್ಪತ್ರೆ ಸೇರುವ ಆರು ದಿನ ಮೊದಲು ಇನ್ಷೊರೆನ್ಸ್‌ ಲ್ಯಾಪ್ಸ್‌ ಆಗಿದೆ. ಇದನ್ನು ಸರಿಪಿಡುವುದಾಗಿ ಇಲ್ಲವೇ ಹಣ ಕೊಡಿಸುವುದಾಗಿ ಕೆಲ ಪ್ರಭಾವಿ ವ್ಯಕ್ತಿಗಳು ಭರವಸೆ ನೀಡಿದರು.

ಆದರೆ ಭರವಸೆ ಈಡೇರಲಿಲ್ಲ. ಈ ನಡುವೆ, ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಮೂಲಕ 4 ಲಕ್ಷ ರೂ. ಮತ್ತು ಡಾ. ರಾಜ್‌ ಕುಟುಂಬದವರು ಒಂದಷ್ಟು ಧನ ಸಹಾಯ ಮಾಡಿದ್ದರಿಂದ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಯಿತು. ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದೆ’ ಎಂದು ಸತ್ಯಜಿತ್‌, ಕೆಲವರ ಸಹಾಯ ಸ್ಮರಿಸಿದರು.

ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸತ್ಯಜಿತ್‌ ಮೂಲತಃ ಹುಬ್ಬಳ್ಳಿಯವರು. 35 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಖಳ ನಟನಾಗೇ ಗುರುತಿಸಿಕೊಂಡಿದ್ದು, ಚಿತ್ರರಂಗಕ್ಕೆ ಬರುವ ಮುನ್ನ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌, ಡಾ.ಅಂಬರೀಶ್‌, ಪ್ರಭಾಕರ್‌, ರವಿಚಂದ್ರನ್‌ ಉಪೇಂದ್ರ, ಸುದೀಪ್‌, ದರ್ಶನ್‌, ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಇತ್ತೀಚಿನ ನಟರ ಚಿತ್ರಗಳಲ್ಲಿ ಸತ್ಯಜಿತ್‌ ನಟಿಸಿದ್ದಾರೆ.

ಭೂಮಿ ತಾಯಾಣೆ, ವರ್ಣಚಕ್ರ, ಅರುಣರಾಗ, ಬಂಧಮುಕ್ತ, ಆಪ್ತಮಿತ್ರ, ಅಭಿ, ದಾಸ, ವೀರಕನ್ನಡಿಗ ಮತ್ತು ಅಪ್ಪು ಸೇರಿ 658 ಚಿತ್ರಗಳಲ್ಲಿ ಸತ್ಯಜಿತ್‌ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ದೊಡ್ಮನೆ ಹುಡುಗ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ “ದಿ ಮಂಜುನಾಥನ ಗೆಳೆಯರು ಸಿನಿಮಾ’ದಲ್ಲಿ ಇಡೀ ಚಿತ್ರದಲ್ಲಿ ಪೊಲೀಸ್‌ ಕಮೀಶನರ್‌ ಆಗಿ ಕುಳಿತೇ ಅಭಿನಯಿಸಿದ್ದಾರೆ.

* ಹಿತೇಶ್‌ ವೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ