ಅಕ್ರಮ ಸಂಬಂಧ ಪ್ರಶ್ನಿಸಿದ ಪತಿ ಹತ್ಯೆ

Team Udayavani, Apr 19, 2018, 12:41 PM IST

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಕೆಜಿ ಕಾಲೋನಿಯ ಚನ್ನಸಂದ್ರದ ನಾಗಮ್ಮ (34) ಮತ್ತು ಈಕೆಯ ಪ್ರಿಯಕರ ಶ್ರೀನಿವಾಸಪುರದ ಶ್ರೀನಿವಾಸ್‌ (29) ಬಂಧಿತರು. ಆರೋಪಿಗಳು ಏ.17ರಂದು ವೆಂಕಟೇಶ್‌(38) ಎಂಬಾತನನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವೆಂಕಟೇಶ್‌ ಮತ್ತು ನಾಗಮ್ಮ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ದಂಪತಿ ಪತ್ಯೇಕ ಕಂಪನಿಗಳಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಕೆಜಿಎಫ್‌ ಕೆಎಸ್‌ಆರ್‌ ಟಿಸಿ ಡಿಪೋ ಚಾಲಕ ಶ್ರೀನಿವಾಸ್‌ ಮತ್ತು ವೆಂಕಟೇಶ್‌ಗೆ ಪರಿಚಯವಾಗಿದೆ. ಹೀಗಾಗಿ ಶ್ರೀನಿವಾಸ್‌, ಆಗಾಗ ವೆಂಕಟೇಶ್‌ ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ನಾಗಮ್ಮನ ಜತೆ ಸ್ನೇಹ ಬೆಳೆಸಿ ಅಕ್ರಮ ಸಂಬಂಧ ಹೊಂದಿದ್ದಾನೆ. 

6 ತಿಂಗಳ ಹಿಂದೆ ವಿಷಯ ತಿಳಿದ ವೆಂಕಟೇಶ್‌ ಪತ್ನಿ ನಾಗಮ್ಮ ಎಚ್ಚರಿಕೆ ಕೊಟ್ಟಿದ್ದ. ಕುಟುಂಬ ಸದಸ್ಯರು ಕೂಡ ಬುದ್ದಿವಾದ ಹೇಳಿದ್ದರು. ಆದರೂ ನಾಗಮ್ಮ ಪ್ರಿಯಕರನ ಜತೆಗಿನ ಸಂಬಂಧ ಮುಂದುವರಿಸಿದ್ದರು. ಇದೆ ವಿಚಾರಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ನಾಗಮ್ಮ, ತನ್ನ ಪ್ರಿಯಕರನ ಜತೆ ಸೇರಿ ಗಂಡನ ಹತ್ಯೆಗೆ ಸಂಚು ರೂಪಿಸಿದ್ದರು. ಅದರಂತೆ ಏ.17ರಂದು ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬಂದು ಊಟ ಮಾಡಿ ವೆಂಕಟೇಶ್‌ ಮಲಗಿದ್ದ. ಆಗ ಶ್ರೀನಿವಾಸ್‌ನನ್ನು ಕರೆಸಿಕೊಂಡ ನಾಗಮ್ಮ, ವೆಂಕಟೇಶ್‌ ಕೈ ಮತ್ತು ಕಾಲನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ. ಬಳಿಕ ಶ್ರೀನಿವಾಸ್‌ ವೆಂಕಟೇಶ್‌ನ ಕುತ್ತಿಗೆಯನ್ನು ಬಿಗಿದು, ಬಳಿಕ ದಿಮ್ಮಿನಿಂದ ಗಂಡನ ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ನಂತರ ಶ್ರೀನಿವಾಸ್‌ ವಾಪಸ್‌ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಬುಧವಾರ ಬೆಳಗ್ಗೆ ಮಲಗಿದ್ದ ಸ್ಥಳದಲ್ಲಿ ಪತಿ ಸಾವನ್ನಪ್ಪಿದ್ದಾನೆ ಎಂದು ಗೋಳಾಡುತ್ತಿದ್ದಳು. ಕೂಡಲೇ ಸ್ಥಳೀಯರು ವೆಂಕಟೇಶ್‌ ಸಹೋದರನಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ವೆಂಕಟೇಶ್‌ ಸಹೋದರ ಮಂಜುನಾಥ್‌ ತನ್ನ ಅತ್ತಿಗೆಯ ಅಕ್ರಮ ಸಂಬಂಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಶವ ಪರಿಶೀಲನೆ ನಡೆಸಿದಾಗ ಕುತ್ತಿಗೆ ಮೇಲೆ ಉಗುರಿನ ಗುರುತು ಪತ್ತೆಯಾಗಿತ್ತು. ನಾಗಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಳು ಎಂದು ಕಾಡುಗೋಡಿ ಪೊಲೀಸರು ತಿಳಿಸಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ