ಎಟಿಎಂಗಳಲ್ಲಿ ಮುಂದುವರಿದ “ನೋ ಕ್ಯಾಶ್‌’ ಬೋರ್ಡ್‌

Team Udayavani, Apr 19, 2018, 12:49 PM IST

ಬೆಂಗಳೂರು: ಎಟಿಎಂಗಳಲ್ಲಿ “ನೋ ಕ್ಯಾಶ್‌’, “ಔಟ್‌ ಆಫ್ ಸರ್ವೀಸ್‌’ ಗುಮ್ಮ ಮತ್ತೇ ಎದ್ದಿದೆ. ಹಣ ಡ್ರಾ ಮಾಡಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಎಟಿಎಂಗಳಲ್ಲಿ ಹಣ ಖಾಲಿ ಆಗಿರುವುದಕ್ಕೆ ಚುನಾವಣೆ ಕಾರಣ ಎಂಬ ಪುಕಾರು ಕೇಳಿ ಬರುತ್ತಿದೆ. ಆದರೆ, ಇದರಲ್ಲಿ ಯಾವುದೇ ತರ್ಕವಿಲ್ಲ ಎಂದು ಬ್ಯಾಂಕಿಂಗ್‌ ವಲಯ ಹೇಳುತ್ತಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಎಟಿಎಂಗಳಲ್ಲಿ ಹಣ ಇಲ್ಲದೇ ಗ್ರಾಹಕರು ಪರದಾಡುತ್ತಿರುವುದನ್ನು ಒಪ್ಪಿಕೊಳ್ಳುವ ಬ್ಯಾಂಕಿಂಗ್‌ ವಲಯ, ಇದಕ್ಕೆ ಚುನಾವಣೆ ಕಾರಣ ಅನ್ನುವುದನ್ನು ಒಪ್ಪಲು ಸಿದ್ಧವಿಲ್ಲ. ಏಕೆಂದರೆ, ಎಟಿಎಂಗಳಲ್ಲಿನ ಈ ಹಣದ ಅಭಾವ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಗುಜರಾತ್‌, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದಲ್ಲೂ ಇದೆ. ಅತಿ ಹೆಚ್ಚು ಸಮಸ್ಯೆ ಗುಜರಾತಿನಲ್ಲಿದೆ. ಈ ಯಾವ ರಾಜ್ಯಗಳಲ್ಲೂ ಚುನಾವಣೆ ಇಲ್ಲ. ಕರ್ನಾಟಕದಲ್ಲಿ ಚುನಾವಣೆ ವೇಳೆ ಈ ಸಮಸ್ಯೆ ಎದುರಾಗಿರುವುದು ಕಾಕತಾಳೀಯ ಎಂದು ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಾರೆ. 

ಅಷ್ಟಕ್ಕೂ ಚುನಾವಣೆಗಳಲ್ಲಿ ಹೆಚ್ಚಾಗಿ ಅಕೌಂಟೆಡ್‌ ಹಣವನ್ನು ಯಾರೂ ಖರ್ಚು ಮಾಡುವುದಿಲ್ಲ. ಸಾಧ್ಯವಾದಷ್ಟು ನಗದು ಚಲಾವಣೆ ಜಾಸ್ತಿ. ಒಬ್ಬರೇ ಒಂದೇ ಖಾತೆಯಿಂದ ಮಿತಿಗಿಂತ ಹೆಚ್ಚಾಗಿ ಹಣ ಡ್ರಾ ಮಾಡುವಂತೆಯೂ ಇಲ್ಲ. ಆದರೆ, ರಾಜಕೀಯ ಪಕ್ಷಗಳು ಅಥವಾ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಬೇರೆ ಬೇರೆ ಖಾತೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಡ್ರಾ ಮಾಡಿಸಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. 

ಎಟಿಎಂಗಳಲ್ಲಿ ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೋಟುಗಳನ್ನು ಹಾಕಲಾಗುತ್ತಿದೆ. ಅದೆಲ್ಲ ಖಾಲಿ ಆಗುತ್ತಿದೆ. ಹೀಗಾಗಿ ಎಟಿಎಂಗಳಲ್ಲಿ ಹಣದ ಅಭಾವ ಉಂಟಾಗಿದೆ. ಅಗತ್ಯಕ್ಕಿಂತ ಐದು ಪಟ್ಟು ಹೆಚ್ಚು ನೋಟುಗಳ ಮುದ್ರಣ ಮಾಡಲಾಗುತ್ತಿದೆ ಎಂದು ಸ್ವತಃ ಕೇಂದ್ರ ಹಣಕಾಸು ಸಚಿವರೇ ಹೇಳಿದ್ದಾರೆ. ಹೀಗಾಗಿ, ನೋಟುಗಳ ಅಭಾವಕ್ಕೆ ಇದೇ ಕಾರಣವೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘದ ಪದಾಧಿಕಾರಿಗಳು ಹೇಳುತ್ತಾರೆ.

ಎಫ್ಆರ್‌ಡಿಐ ಬಗೆಗಿನ ಭಯ ಕಾರಣ?: ಕೇಂದ್ರ ಸರ್ಕಾರದ “ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ’ (ಎಫ್ಆರ್‌ಡಿಐ) ಬಗೆಗಿನ ಅಸ್ಪಷ್ಟತೆ ಎಟಿಎಂಗಳಲ್ಲಿ ನೋಟುಗಳ ಅಭಾವಕ್ಕೆ ಕಾರಣವಾಗಿರಲು ಸಾಧ್ಯ. ಏಕೆಂದರೆ, ಎಫ್ಆರ್‌ಡಿಐ ಕುರಿತು ಕೇಂದ್ರ ಸರ್ಕಾರ ಗ್ರಾಹಕರಿಗೆ ಈವರೆಗೆ ಯಾವುದೇ ನಿಖರ ಭರವಸೆ ಕೊಟ್ಟಿಲ್ಲ. ತಮ್ಮ ಖಾತೆಗಳಲ್ಲಿನ ಹಣ ನಮ್ಮ ಕೈಗೆ ಸಿಗದಂತಾದರೆ ಮುಂದೇನು ಎಂಬ ಆತಂಕದಿಂದ ಖಾತೆದಾರರು ಹೆಚ್ಚಿನ ಪ್ರಮಾಣದಲ್ಲಿ ಹಣ ಡ್ರಾ ಮಾಡಿ ಕೊಳ್ಳುತ್ತಿರಬಹುದು. ಅಥವಾ ಈ ರೀತಿ ನೋಟುಗಳ ಅಭಾವ ಸೃಷ್ಟಿಸಿ ಗ್ರಾಹಕರನ್ನು ನಗದು ವಹಿವಾಟಿ ನಿಂದ ಡಿಜಿಟಲ್‌ ವಹಿವಾಟಿನ ಕಡೆಗೆ ತಿರುಗಿಸುವ ಉದ್ದೇಶವೂ ಇರಬಹುದು. ಜೊತೆಗೆ ಎಟಿಎಂಗಳಲ್ಲಿ ನೋಟು ಡಿಪಾಸಿಟ್‌ ಮಾಡುವ “ನಾಣ್ಯ ಎತ್ತುವಳಿ ಗುತ್ತಿಗೆದಾರರು’, ತಾವು ಬ್ಯಾಂಕುಗಳಿಂದ ಎತ್ತುವಳಿ ಮಾಡಿದ ಅಷ್ಟೂ ನೋಟುಗಳನ್ನು ಎಟಿಎಂಗಳಿಗೆ ಹಾಕದೇ ಇರುವ ಕಾರಣಕ್ಕೆ ಎಟಿಎಂಗಳಲ್ಲಿ ನೋ ಕ್ಯಾಷ್‌, ಔಟ್‌ ಆಫ್ ಸರ್ವೀಸ್‌ ಸಮಸ್ಯೆ ಹೆಚ್ಚಾಗಿರಬಹುದು ಎಂದು ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಹಣಕ್ಕಾಗಿ ನಿಲ್ಲದಗ್ರಾಹಕರ ಪರದಾಟ
ಎಟಿಎಂಗಳ ಮುಂದೆ ನೋ ಕ್ಯಾಷ್‌, ಔಟ್‌ ಆಫ್ ಸರ್ವೀಸ್‌ ಫ‌ಲಕ ನೇತು ಹಾಕಿದ್ದರಿಂದ ಬುಧವಾರ ಗ್ರಾಹಕರು ಹಣ ಸಿಗದೇ ಪರದಾಡಿದರು. ತಮ್ಮ ದೈನಂದಿನ ವೈಹಿವಾಟಿಗೆ ಎಟಿಎಂಗಳನ್ನು ನೆಚ್ಚಿಕೊಂಡಿದ್ದ ಸಾರ್ವಜನಿಕರು ಇಡೀ ದಿನ ಎಟಿಎಂಗಳಿಗೆ ಅಲೆಯಬೇಕಾಯಿತು.

ಕೆಲವರು ಹಣ ಡ್ರಾ ಮಾಡಿಕೊಳ್ಳಲು ಐದಾರು ಕಿ.ಮೀ ದೂರ ಹೋದರೂ ಹಣ ಸಿಕ್ಕಿಲ್ಲ. ಕೆಲವು ಕಡೆ ಹಣ ಸಿಗುತ್ತಿದ್ದರೆ, ಅಲ್ಲಿ ದೊಡ್ಡ ಕ್ಯೂ ಇತ್ತು. ಹೀಗಾಗಿ ಮೊದಲ ಕೆಲವರಿಗೆ ಮಾತ್ರ ಹಣ ಸಿಕ್ಕು. ಹಣ ಸಿಗದಿದ್ದಾಗ ಎಟಿಎಂ ಮತ್ತು ಬ್ಯಾಂಕುಗಳಿಗೆ ಗ್ರಾಹಕರು ಹಿಡಿ ಶಾಪ ಹಾಕುವ ದೃಶ್ಯ ಸಾಮಾನ್ಯವಾಗಿತ್ತು. ಎಟಿಎಂ ಭದ್ರತಾ ಸಿಬ್ಬಂದಿ ಮೇಲೆ ಕೆಲವರು ತಮ್ಮ ಸಿಟ್ಟು ಹೊರಹಾಕಿದರು. ಬೇಸತ್ತ ಅನೇಕರು ಎಟಿಎಂ ಸಹವಾಸ ಬೇಡವೆಂದು ಆನ್‌ ಲೈನ್‌ ವಹಿವಾಟಿಗೆ ಮೊರೆ ಹೋದರು

ಟೋಲ್‌ಗ‌ಳಿಗೂ ತಟ್ಟಿದ ಎಟಿಎಂ ನೋ ಕ್ಯಾಶ್‌ ಬಿಸಿ 
ಎಟಿಎಂಗಳಲ್ಲಿ ಉಂಟಾಗಿರುವ ಹಣದ ಕೊರತೆಯ ಬಿಸಿ ಹೊರವಲಯದ ಟೋಲ್‌ ಗೇಟ್‌ಗಳಿಗೂ ತಟ್ಟಿದ್ದು, ಶುಲ್ಕ ಪಾವತಿಯಲ್ಲಿ ಆಗುತ್ತಿರುವ ವಿಳಂಬದಿಂದ ಸಂಚಾರ ದಟ್ಟಣೆ ಉಂಟಾಗಿ ಬುಧವಾರ ವಾಹನ ಸವಾರರು ಪರದಾಡುವಂತಾಯಿತು. ಎಟಿಎಂಗಳಲ್ಲಿ ಹಣ ದೊರೆಯದ ಹಿನ್ನೆಲೆಯಲ್ಲಿ ಟೋಲ್‌ ಶುಲ್ಕ ಪಾವತಿಗೆ ಸವಾರರು ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಸ್ವೈಪಿಂಗ್‌ಗೆ ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಕಾರ್ಡ್‌ ಮೂಲಕ ಶುಲ್ಕ ಪಾವತಿ ಪಾವತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಟೋಲ್‌ ಗೇಟ್‌ಗಳ ಬಳಿ ಸಂಚಾರ ದಟ್ಟಣೆ ಉಂಟಾಗಿ, ಕಿಲೋ ಮೀಟರ್‌ಗಟ್ಟಲೇ ವಾಹನಗಳು ನಿಲ್ಲುವಂತಾಗಿದೆ. ನಗರದ ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ, ಹೊಸಕೋಟೆ, ನೆಲಮಂಗಲ, ತುಮಕೂರು ರಸ್ತೆ ಸೇರಿದಂತೆ ಪ್ರಮುಖ ಟೋಲ್‌ಗೇಟ್‌ಗಳಲ್ಲಿ ಸಮಸ್ಯೆ ಉಂಟಾಗಿದ್ದು, ಆನ್‌ಲೈನ್‌ ಪಾವತಿ ಹಾಗೂ ಚಿಲ್ಲರೆ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ