ಗಾಳಿ ಸಹಿತ ಮಳೆಗೆ ಧರೆಗುರುಳಿದ ಮರಗಳು

Team Udayavani, May 16, 2019, 3:04 AM IST

ಬೆಂಗಳೂರು: ನಗರದಲ್ಲಿ ಬುಧವಾರ ಮಧ್ಯಾಹ್ನದಿಂದ ಸುರಿದ ಧಾರಾಕಾರ ಮಳೆಗೆ ಐದಾರು ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಬಹುತೇಕ ರಸ್ತೆಗಳು ನೀರು ಹರಿದ ಪರಿಣಾಮ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಮಧ್ಯಾಹ್ನದ ಸುಮಾರಿಗೆ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಕೇಂದ್ರ ಭಾಗದ ಬಹುತೇಕ ರಸ್ತೆಗಳು, ಜಂಕ್ಷನ್‌ಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿದ್ದರಿಂದ ವಾಹನಗಳು ಸರಾಗವಾಗಿ ಸಂಚರಿಸಲಾಗದೆ, ಸಂಚಾರ ದಟ್ಟಣೆ ಉಂಟಾಗಿತ್ತು. ಇದರೊಂದಿಗೆ ನಗರದ ಕೆಲವೊಂದು ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಲಿಕೆಯ ಕೇಂದ್ರ, ದಕ್ಷಿಣ ಹಾಗೂ ಪೂರ್ವ ವಲಯದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ನಗರದಲ್ಲಿನ ಟೆಂಡರ್‌ಶ್ಯೂರ್‌ ರಸ್ತೆಗಳು, ಅಂಡರ್‌ಪಾಸ್‌ ಹಾಗೂ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿತ್ತು. ಜಯಮಹಲ್‌ ರಸ್ತೆ, ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿಯ ಅಂಡರ್‌ಪಾಸ್‌, ಕೆ.ಆರ್‌.ವೃತ್ತದ ಅಂಡರ್‌ಪಾಸ್‌, ಹೆಣ್ಣೂರು ಮುಖ್ಯ ರಸ್ತೆ, ಹಳೆ ಮದ್ರಾಸ್‌ ರಸ್ತೆ ಸೇರಿದಂತೆ ಹಲವು ರಸ್ತೆಗಳ ಜಲಾವೃತಗೊಂಡಿದ್ದವು.

ಜೋರಾದ ಗಾಳಿಯೊಂದಿಗೆ ಸುರಿದ ಮಳೆಯಗೆ ಹಲಸೂರು, ವಿವೇಕನಗರ, ಬ್ಯಾಟರಾಯನಗರಗಳಲ್ಲಿ ಮರಗಳು ಧರೆಗುರುಳಿದ್ದು, ಕೆಲವೆಡೆಗಳಲ್ಲಿ ರೆಂಬೆ-ಕೊಂಬೆಗಳು ಉರುಳಿವೆ. ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿದ್ದು, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ