ಪಟಾಲಮ್ಮ ದೇವಿ ಉತ್ಸವಕ್ಕೆ ಚಾಲನೆ

Team Udayavani, May 16, 2019, 3:05 AM IST

ಬೆಂಗಳೂರು: ನಗರದ ಸೌಂತ್‌ಎಂಡ್‌ ವೃತ್ತದ ಬಳಿ ಪಟಾಲಮ್ಮ ದೇವಿ ಉತ್ಸವಕ್ಕೆ ಬುಧವಾರ ಮುಖ್ಯಮಂತ್ರಿ ಚಾಲನೆ ನೀಡಿದರು. ನಂತರ ಜಯನಗರದ 3ನೇ ಬಡಾವಣೆಯ ಆನೆ ಬಂಡೆ ರಸ್ತೆ, ಕನಕನಪಾಳ್ಯ, ಸಿದ್ದಾಪುರ, ಯಡಿಯೂರು, ಬೈರಸಂದ್ರ ಹಾಗೂ ನಾಗಸಂದ್ರ ಮೂಲಕ ಪಟಾಲಮ್ಮ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ಕೋಲಾಟ, ಲಂಬಾಣಿ ನೃತ್ಯ, ಕೀಲು ಕುದುರೆ ಸೇರಿದಂತೆ ಸಾಂಸ್ಕೃತಿಕ ತಂಡಗಳ ಕಲಾಪ್ರದರ್ಶನದೊಂದಿಗೆ ದೇವಿ ಉತ್ಸವ ನಡೆಯಿತು. ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಒಂಬತ್ತು ನಗರಗಳ ಮಧ್ಯ ಭಾಗದಲ್ಲಿರುವ ಶ್ರೀ ಪಟಾಲಮ್ಮ ದೇವಿ ದೇವಸ್ಥಾನ ಕೆಂಪೇಗೌಡರಿಂದ ಸ್ಥಾಪನೆಯಾಗಿದ್ದು, ನೂರಾರು ವರ್ಷಗಳಿಂದ ಕನಕನಪಾಳ್ಯ, ಬೈರಸಂದ್ರ, ಸಿದ್ದಾಪುರ, ಯಡಿಯೂರು, ನಾಗಸಂದ್ರ ಗ್ರಾಮಗಳ ಜನರು 3 ವರ್ಷಕ್ಕೊಮ್ಮೆ ದೇವಿಯ ಉತ್ಸವ ಆಚರಿಸುತ್ತಿದ್ದಾರೆ.

ಮಾರೇನಹಳ್ಳಿ, ಸಾರಕ್ಕಿ, ತಾಯಪ್ಪನಹಳ್ಳಿ ಹಾಗೂ ಅಗ್ರಹಾರ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಆಯಾ ಗ್ರಾಮಗಳಲ್ಲಿ ಉತ್ಸವ ಆಚರಿಸುತ್ತಿದ್ದಾರೆ ಎಂದು ಶ್ರೀ ಪಟಾಲಮ್ಮ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ನಾಗರಾಜ್‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್‌.ವಿ.ದೇವರಾಜ್‌ ಹಾಗೂ ಮಾಜಿ ಶಾಸಕ ಡಾ.ಡಿ.ಹೇಮಚಂದ್ರ ಸಾಗರ್‌ ಮತ್ತಿತರರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ